Phalguna Amavasya 2022: ಫಾಲ್ಗುಣ ಅಮಾವಾಸ್ಯೆ, ನೀವು ಮಾಡಬೇಕಾದ್ದೇನು?

By Suvarna News  |  First Published Mar 2, 2022, 11:14 AM IST

ಇಂದು ಫಾಲ್ಗುಣ ಅಮಾವಾಸ್ಯೆ. ಇದರ ಮಹತ್ವವೇನು, ವ್ರತಕತೆಗಳೇನು ಗೊತ್ತಾ?


ಪ್ರತಿ ತಿಂಗಳಲ್ಲಿ ಒಂದು ಹುಣ್ಣಿಮೆ, ಒಂದು ಅಮಾವಾಸ್ಯೆ ಇದ್ದೇ ಇರುತ್ತದೆ. ಇವಕ್ಕೆ ಇವುಗಳದೇ ಆದ ಪ್ರಾಶಸ್ತ್ಯವೂ ಇದೆ. ಆದರೂ, ಆಯಾ ಮಾಸಕ್ಕನುಗುಣವಾಗಿ ಈ ಅಮಾವಾಸ್ಯೆ, ಹುಣ್ಣಿಮೆಯ ಪ್ರಾಶಸ್ತ್ಯ ಬದಲಾಗುತ್ತಿರುತ್ತದೆ. ಇಂದು ಫಾಲ್ಗುಣ ಮಾಸದ ಅಮಾವಾಸ್ಯೆ. ಫಾಲ್ಗುಣವು ಹೊಸ ಚಿಗುರಿನ ಕಾಲ. ಅಲ್ಲದೆ, ನಿನ್ನೆಯಷ್ಟೇ ಮಹಾಶಿವರಾತ್ರಿ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಬಂದ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ. ಪಂಚಾಂಗದ ಪ್ರಕಾರ, ಇಂದು ಅಂದರೆ ಮಾರ್ಚ್ 2ರ ಮಧ್ಯಾಹ್ನ  1.30 ರಿಂದ ಅಮಾವಾಸ್ಯೆ ಆರಂಭವಾಗುತ್ತದೆ. ಅಲ್ಲಿಗೆ ಮಹಾಶಿವರಾತ್ರಿ ಕೊನೆಯಾಗಲಿದೆ. ಫಾಲ್ಗುಣ ಅಮಾವಾಸ್ಯೆಯು ಇಂದು ರಾತ್ರಿ 11.04 ನಿಮಿಷದವರೆಗೆ ಇರಲಿದೆ. 

ಫಾಲ್ಗುಣ ಅಮಾವಾಸ್ಯೆಯ ದಿನ ದೇವಾನುದೇವತೆಗಳು ನದಿಗಳಲ್ಲಿ ವಾಸಿಸುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ, ಈ ದಿನ ಪವಿತ್ರವಾದ ನದಿಗಳಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ದೊರೆಯಲಿದೆ, ಜೊತೆಗೆ ಸಾಕಷ್ಟು ಪುಣ್ಯ ಪ್ರಾಪ್ತಿಯಾಗಲಿದೆ. ಅಮಾವಾಸ್ಯೆ ಎಂದರೆ ಸೂರ್ಯ ಚಂದ್ರ ಸಂಯೋಗವಾಗುವ ದಿನ. ಅಂದರೆ, ಅಮಾವಾಸ್ಯೆಯಂದು ಸೂರ್ಯ ಚಂದ್ರ ಇಬ್ಬರೂ ಒಂದೇ ರಾಶಿಯಲ್ಲಿರುತ್ತಾರೆ. ಆದ್ದರಿಂದ ಈ ದಿನ ಪಿತೃಗಳಿಗೆ ಪಿಂಡ ಪ್ರದಾನ ಮಾಡುವುದರಿಂದ, ಶ್ರಾದ್ಧ ನಡೆಸುವುದರಿಂದ ಪಿತೃದೋಷ ನಿವಾರಣೆ ಮಾಡಿಕೊಳ್ಳಬಹುದು. ಬಡಜನರಿಗೆ ಸಾಧ್ಯವಾದದ್ದನ್ನು ದಾನ ಮಾಡುವ ಮೂಲಕವೂ ಪಿತೃಗಳ ಸಂತೋಷಕ್ಕೆ ಕಾರಣರಾಗಬಹುದು. ಅಲ್ಲದೇ, ಅಮಾವಾಸ್ಯೆಯಂದು ಉಪವಾಸ ವ್ರತ ಆಚರಿಸುವುದರಿಂದ ಜೀವನದಲ್ಲಿ ನಲಿವು, ಸಮೃದ್ಧಿ ಹೆಚ್ಚುತ್ತದೆ. 

Tap to resize

Latest Videos

undefined

ಫಾಲ್ಗುಣ ಅಮವಾಸ್ಯೆ ವ್ರತಕತೆ(Phalguna Amavasya Vrat Katha)
ಒಮ್ಮೆ ದೂರ್ವಾಸ ಮಹರ್ಷಿಗಳು(Sage Durvasa) ಇಂದ್ರ ಹಾಗೂ ಇತರೆ ದೇವತೆಗಳಿಗೆ ಅವರೆಲ್ಲ ಅಧಿಕಾರ ನಶಿಸಿಹೋಗಲಿ ಎಂದು ಶಾಪ ನೀಡಿದರು. ವಿಷಯ ತಿಳಿದ ರಾಕ್ಷಸರು ಈ ಸಂದರ್ಭದ ಲಾಭ ಪಡೆದುಕೊಳ್ಳಲು ದೇವತೆಗಳ ಮೇಲೆ ಯುದ್ಧ ಸಾರಿಕೊಂಡು ಬಂದು ಅವರನ್ನು ಸೋಲಿಸಿದರು. ಆಗ ದೇವತೆಗಳು ವಿಷ್ಣುವಿನ ಸಹಾಯ ಕೋರಿದರು. ಆಗ ವಿಷ್ಣುವು ದೇವತೆಗಳಿಗೆ ರಾಕ್ಷಸರನ್ನು ಸಮುದ್ರ ಮಂಥನ(Samudra Manthan)ಕ್ಕೆ ಒಪ್ಪಿಸುವಂತೆ ಹೇಳಿದನು. 

Personality Traits And Zodiacs: ಈ ನಾಲ್ಕು ರಾಶಿಯವರದು ಬಹಳ ಸೌಮ್ಯ ಸ್ವಭಾವ

ಆಗ ಅಸುರರು ಇದಕ್ಕೊಪ್ಪಿ ಸಮುದ್ರ ಮಂಥನದಲ್ಲಿ ತೊಡಗಿಕೊಂಡರು. ಬಹಳ ದಿನದ ಮಂಥನದ ಬಳಿಕ ಧನ್ವಂತರಿಯು ಅಮೃತದ ಪಾತ್ರೆ ಹಿಡಿದು ಪ್ರತ್ಯಕ್ಷವಾದರು. ಅದು ಅಸುರರ ಕೈಗೆ ಸಿಗಕೂಡದು ಎಂದು ಇಂದ್ರನ ಪುತ್ರ ಜಯಂತನು ಪಾತ್ರೆ ಕಸಿದು ಓಡತೊಡಗಿದ. ಆಗ ದೇವತೆಗಳು ಹಾಗೂ ರಾಕ್ಷಸರು ಪಾತ್ರೆಯನ್ನು ತಮಗೆ ಬೇಕೆಂದು ಹಿಡಿದೆಳೆಯುವಾಗ ಕೆಲ ಅಮೃತ ಬಿಂದುಗಳು ಭೂಮಿಯ ನಾಲ್ಕು ವಿಭಿನ್ನ ಪ್ರದೇಶಗಳಲ್ಲಿ ಬಿದ್ದವು. ಒಂದು ಪ್ರಯಾಗರಾಜ(Prayagraj)ದಲ್ಲಿರುವ ಸಂಗಮ್ ಘಾಟ್. ಇಲ್ಲಿಯೇ ಗಂಗಾ, ಯಮುನಾ ಹಾಗೂ ಸರಸ್ವತಿ ಸೇರುವುದು. ಮತ್ತೊಂದು ಹನಿ ಉಜ್ಜೈನಿ(Ujjain)ಯ ಶಿಪ್ರದಲ್ಲಿ ಬಿದ್ದಿತು. ಹರಿದ್ವಾರದ ಗಂಗಾ ಹಾಗೂ ನಾಸಿಕ್‌ನ ಗೋದಾವರಿ. ಹಾಗಾಗಿ, ಜನರು ಅಮಾವಾಸ್ಯೆ ತಿಥಿಯಲ್ಲಿ ಈ ನದಿಗಳಲ್ಲಿ ಸ್ನಾನ ಮಾಡುತ್ತಾರೆ. ಇದರಿಂದ ಕಾಯಿಲೆಗಳಿಂದ ಮುಕ್ತರಾಗುವ ನಂಬಿಕೆ ಇದೆ. 

ಅಮಾವಾಸ್ಯೆಯ ದಿನ ನೀವು ನೆನಪಿಡಬೇಕಾದ ವಿಷಯಗಳಿವು

  • ಈ ದಿನ ಗಂಗೆ, ಯಮುನೆ, ಕಾವೇರಿ, ಗೋಧಾವರಿ ಸೇರಿದಂತೆ ಯಾವುದೇ ಪವಿತ್ರ ನದಿಗಳಲ್ಲಿ ಸ್ನಾನ ಮಾಡಬೇಕು. ಸಾಧ್ಯವಾಗದಿದ್ದಲ್ಲಿ ಮನೆಯ ಬಾತ್‌ರೂಂ‌ನಲ್ಲಿ ಬಂದ ನೀರಿಗೇ ಒಂದೆರಡು ಹನಿ ಗಂಗಾಜಲ ಹಾಕಿಕೊಂಡು ದೇವರ ಸ್ಮರಣೆ ಮಾಡುತ್ತಾ ಸ್ನಾನ ಮಾಡಬೇಕು. ತಣ್ಣೀರಿನ ಸ್ನಾನ ಉತ್ತಮ.
  • ಉಪವಾಸ ಆಚರಿಸುವವರು ಫಲಾಹಾರ ಸೇವಿಸಬಹುದು. ಅಂದರೆ ಹಣ್ಣುಗಳು, ತರಕಾರಿಗಳನ್ನು ಸೇವಿಸಬಹುದು. ಒಂದು ವೇಳೆ ಉಪವಾಸ ಆಚರಿಸಲಿಲ್ಲವೆಂದರೂ ಅಮಾವಾಸ್ಯೆಯ ದಿನ ಮಾಂಸಾಹಾರ ಸೇವನೆ ಮಾಡಕೂಡದು. ಈರುಳ್ಳಿ, ಬೆಳ್ಳುಳ್ಳಿ( onion and garlic) ಹಾಕಿದ ಅಡುಗೆ ಸೇವಿಸಬಾರದು. ಮದ್ಯ ಸೇವನೆ ಇಂದು ನಿಷಿದ್ಧವಾಗಿದೆ. ಗೋಧಿ, ಅಕ್ಕಿ ಹಾಗೂ ಬೇಳೆಗಳನ್ನು ಇಂದು ಅಡುಗೆಗೆ ಬಳಸಬಾರದು. ಉಪ್ಪಿಲ್ಲದ ಆಹಾರ ಸೇವನೆ ಮಾಡಬೇಕು. 

    Mount Kailash: ಶಿವನ ಮನೆ ಕೈಲಾಸವೇ ಜಗತ್ತಿನ ಕೇಂದ್ರಬಿಂದು!
     
  • ಈ ತಿಂಗಳಲ್ಲಿ ಶ್ರೀಕೃಷ್ಣನನ್ನು ಪೂಜಿಸುವುದು ಶ್ರೇಷ್ಠವೆನಿಸಿದೆ. 
  • ಈ ದಿನ ಶ್ರಾದ್ಧ ನಡೆಸುವವರು ಪಿತೃಗಳ ಸ್ಮರಣೆ ಮಾಡುತ್ತಾ ಪುರೋಹಿತರ ಸಹಾಯ ಪಡೆದು ಪಿಂಡ ಪ್ರದಾನ ಮಾಡಬೇಕು. ಪಿಂಡನೈವೇದ್ಯ ಮಾಡಿದ ಬಳಿಕ ಹಸುವಿಗೆ ಆಹಾರ ನೀಡಿ ನಂತರವೇ ಕುಟುಂಬ ಸದಸ್ಯರು ಊಟ ಮಾಡಬೇಕು. ಪಿತೃಗಳ ಹೆಸರಿನಲ್ಲಿ ಅಸಹಾಯಕರು, ಬಡಬಗ್ಗರಿಗೆ ಸಾಧ್ಯವಾದ ದಾನ ಮಾಡಬೇಕು. ಗೊತ್ತೋ ಗೊತ್ತಿಲ್ಲದೆಯೋ ಮಾಡಿರುವ ಅಪಚಾರದ ಬಗ್ಗೆ ಪಿತೃಗಳಲ್ಲಿ ಕ್ಷಮೆ ಯಾಚಿಸಬೇಕು.
  • ಆರೋಗ್ಯದಿಂದಿರುವವರು ಈ ದಿನ ಹಗಲು ಹೊತ್ತಿನಲ್ಲಿ ಯಾವುದೇ ಕಾರಣಕ್ಕೂ ಮಲಗಬಾರದು. ಜೊತೆಗೆ, ಬ್ರಹ್ಮಚರ್ಯ ಅನುಸರಣೆ ಅಗತ್ಯವಾಗಿದೆ. 
  • ಈ ದಿನ ಮನೆಗೆ ಯಾರಾದರೂ ಅಚಾನಕ್ ಭೇಟಿ ನೀಡಿದರೆ ಅವರನ್ನು ಬರಿಗೈಲಿ ವಾಪಸ್ ಕಳುಹಿಸಬಾರದು. 
     
click me!