ಸಂಸ್ಕೃತ ಪಂಡಿತೆಯಾದ ಡಾ. ನೂರಿಮಾ ಯಾಸ್ಮಿನ್ ಶಾಸ್ತ್ರಿ: ಕುರಾನ್ ಜತೆ ವೇದ ಅಧ್ಯಯನ ಮಾಡಿರೋ ಮುಸ್ಲಿಂ ಮಹಿಳೆ

By BK Ashwin  |  First Published Apr 5, 2023, 5:32 PM IST

ಸಂಸ್ಕೃತದ ಬಗ್ಗೆ ತಿಳಿದುಕೊಳ್ಳಲು ಅನೇಕ ವಿಷಯಗಳಿರುವುದರಿಂದ ಪ್ರತಿಯೊಬ್ಬರೂ ಸಂಸ್ಕೃತವನ್ನು ಅಧ್ಯಯನ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ನಾನು ಪ್ರಸ್ತುತ ಕೆಲಸ ಮಾಡುತ್ತಿರುವ ವಿಶ್ವವಿದ್ಯಾಲಯದಲ್ಲಿ ಅನೇಕ ಮುಸ್ಲಿಂ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಮತ್ತು ಸಂಸ್ಕೃತ ಕಲಿಯುತ್ತಿದ್ದಾರೆ ಎಂದು ಡಾ. ನೂರಿಮಾ ಯಾಸ್ಮಿನ್ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.


ಗುವಾಹಟಿ (ಏಪ್ರಿಲ್‌ 5, 2023): ಅಸ್ಸಾಂನ ಮುಸ್ಲಿಂ ಮಹಿಳೆಯೊಬ್ಬರು ಸಂಸ್ಕೃತ ಪಂಡಿತೆಯಾಗಿದ್ದಾರೆ. ಅರೇಬಿಕ್, ಪರ್ಷಿಯನ್ ಮತ್ತು ಉರ್ದು ಕಲಿಯುವ ಬದಲು ಡಾ. ನೂರಿಮಾ ಯಾಸ್ಮಿನ್ ತನ್ನ ಶಾಲೆಯಲ್ಲಿ ಮತ್ತು ವಿಶ್ವವಿದ್ಯಾಲಯದ ಹಂತದವರೆಗೆ ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡಿದ್ದಾರೆ. ಅಧ್ಯಯನ ಮಾತ್ರವಲ್ಲದೆ ಅವರು ಕುಮಾರ್ ಭಾಸ್ಕರ್ ಬರ್ಮಾ ಸಂಸ್ಕೃತ ಮತ್ತು ಪ್ರಾಚೀನ ಅಧ್ಯಯನಗಳ ವಿಶ್ವವಿದ್ಯಾಲಯ, ನಲ್ಬರಿಯಲ್ಲಿ ಸಂಸ್ಕೃತದ ಸಹ ಪ್ರಾಧ್ಯಾಪಕರಾಗಿ ಭಾ‍ಷೆಯನ್ನು ಕಲಿಸುತ್ತಿದ್ದಾರೆ.

ಸಂಸ್ಕೃತವು ಹಿಂದೂ ಧರ್ಮ ಮತ್ತು ಬೌದ್ಧ ಧರ್ಮದ ಪವಿತ್ರ ಭಾಷೆಯಾಗಿದೆ. ಆದರೂ, ಸಂಸ್ಕೃತದ ಪೂರ್ವ-ಶಾಸ್ತ್ರೀಯ ರೂಪವನ್ನು ವೈದಿಕ ಸಂಸ್ಕೃತ ಎಂದು ಕರೆಯಲಾಗುತ್ತದೆ. ಇದು ಹಿಂದೂ ಧರ್ಮದ ಅತ್ಯಂತ ಹಳೆಯ ಧಾರ್ಮಿಕ ಗ್ರಂಥವಾದ ಋಗ್ವೇದದಲ್ಲಿ ಬಳಸಲಾದ ಪ್ರಾಚೀನ ಭಾಷೆಯಾಗಿದೆ. ಹಿಂದೂ ಧರ್ಮದ ಎಲ್ಲಾ ಪವಿತ್ರ ಗ್ರಂಥಗಳು ಮತ್ತು ಮಂತ್ರಗಳನ್ನು ಸಂಸ್ಕೃತದಲ್ಲಿ ಬರೆಯಲಾಗಿದೆ.

Tap to resize

Latest Videos

ಇದನ್ನು ಓದಿ: ಮದ್ರಸಾಗೆ ಹೋಗ್ದೆ ಹಠ ಹಿಡಿದು ಶಾಲೆ, ಕಾಲೇಜಲ್ಲಿ ಓದಿ ಈ ಗ್ರಾಮದ ಮೊದಲ ಡಾಕ್ಟರ್‌ ಎನಿಸಿಕೊಂಡ ಶೇಖ್‌ ಯೂನುಸ್‌

ಡಾ. ನೂರಿಮಾ ಯಾಸ್ಮಿನ್ ಪಶ್ಚಿಮ ಅಸ್ಸಾಂನ ರಂಗಿಯಾದ ದಿವಂಗತ ಅಲಿ ಬರ್ದಿ ಖಾನ್ ಮತ್ತು ಶಮೀನಾ ಖಾತುನ್ ಅವರ ಕಿರಿಯ ಪುತ್ರಿ ಎಂದು ತಿಳಿದುಬಂದಿದೆ. ಅವರ ತಂದೆ ರಂಗಿಯಾ ಹೈಯರ್ ಸೆಕೆಂಡರಿ ಶಾಲೆಯ ಇಂಗ್ಲಿಷ್ ವಿಭಾಗದಲ್ಲಿ ವಿಷಯ ಶಿಕ್ಷಕರಾಗಿದ್ದರಂತೆ. 

ನೂರಿಮಾ ತನ್ನ ಶಾಲಾ ಶಿಕ್ಷಣವನ್ನು ರಂಗಿಯಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪೂರ್ಣಗೊಳಿಸಿ, ನಂತರ ಕಾಟನ್ ಕಾಲೇಜಿಗೆ (ಈಗ ಕಾಟನ್ ವಿಶ್ವವಿದ್ಯಾಲಯ) ಸೇರಿಕೊಂಡರು. ಅಲ್ಲಿ, ಅವರು ಸಂಸ್ಕೃತದಲ್ಲಿ ಹಾನರ್ಸ್‌ನೊಂದಿಗೆ ಪದವಿ ಪಡೆದರು ಮತ್ತು ಗುವಾಹಟಿ ವಿಶ್ವವಿದ್ಯಾನಿಲಯದಿಂದ ಎಂಎ ಮತ್ತು ಎಂಫಿಲ್ ಪದವಿಗಳನ್ನು ಪಡೆದಿದ್ದಾರೆ. ನಂತರ ಸಂಸ್ಕೃತದಲ್ಲಿ ಶಾಸ್ತ್ರಿ ಪದವಿಯನ್ನು 2008 ರಲ್ಲಿ ಪಡೆದರು ಮತ್ತು 2015 ರಲ್ಲಿ ಪಿಎಚ್.ಡಿ. ಗಳಿಸಿದ್ದಾರೆ. ಅವರು 2008 ರಿಂದಲೇ ಕುಮಾರ್ ಭಾಸ್ಕರ್ ಬರ್ಮಾ ಸಂಸ್ಕೃತ ಮತ್ತು ಪ್ರಾಚೀನ ಅಧ್ಯಯನಗಳ ವಿಶ್ವವಿದ್ಯಾಲಯ, ನಲ್ಬರಿಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಗಂಡನ ಮನೆಯವ್ರಿಂದ ಬಹಿಷ್ಕಾರಕ್ಕೊಳಗಾಗಿದ್ದ ಮುಸ್ಲಿಂ ಮಹಿಳೆಯಿಂದ ಈಗ ಲಕ್ಷ ಲಕ್ಷ ದುಡಿಮೆ..!

ಸಂಸ್ಕೃತದ ಬಗ್ಗೆ ಮಾತನಾಡುವ ಅವರು, "ಸಂಸ್ಕೃತವು ಆಳವಾದ ಮತ್ತು ಗಂಭೀರವಾದ ವಿಷಯವಾಗಿದೆ. ಇದು ಕೇವಲ ಧರ್ಮವಲ್ಲ. ದೈವಿಕ ಭಾಷೆ ಮತ್ತು ಎಲ್ಲಾ ಭಾಷೆಗಳ ಮೂಲವಾಗಿದೆ. ಸಂಸ್ಕೃತವನ್ನು ಅಧ್ಯಯನ ಮಾಡುವುದರಿಂದ ಇತರ ಭಾಷೆಗಳನ್ನು ಸುಲಭವಾಗಿ ಮತ್ತು ಪರಿಪೂರ್ಣವಾಗಿ ಕಲಿಯಲು ನಮಗೆ ಸಹಾಯ ಮಾಡುತ್ತದೆ. ನಾವೆಲ್ಲರೂ ಸಂಸ್ಕೃತವನ್ನು ಅಧ್ಯಯನ ಮಾಡಬೇಕಾಗಿದೆ." ಎಂದು ಹೇಳಿದ್ದಾರೆ.

ಡಾ. ನೂರಿಮಾ ಯಾಸ್ಮಿನ್ ಅವರು  ತಮ್ಮ ಬಾಲ್ಯದಿಂದಲೂ ಪ್ರಾಚೀನ ಭಾಷೆಯಲ್ಲಿ ಆಳವಾಗಿ ಆಸಕ್ತಿ ಹೊಂದಿದ್ದಾಗಿ ಹೇಳಿಕೊಂಡಿದ್ದಾರೆ. ಇದಕ್ಕೆ ತಕ್ಕಂತೆ ತಮ್ಮ ಹೆಸರಿಗೆ ಶಾಸ್ತ್ರಿ (ಅವರು ಆಳವಾದ ಅಧ್ಯಯನ ಮತ್ತು ಸಂಸ್ಕೃತದ ಮೇಲಿನ ಹಿಡಿತಕ್ಕಾಗಿ ಪಡೆದ ಪದವಿ) ಪೂರ್ವಪ್ರತ್ಯಯವನ್ನು ಹೊಂದಿದ್ದಾರೆ. 

ಇದನ್ನೂ ಓದಿ: Village Library: ಕಾಶ್ಮೀರದ ಗ್ರಾಮದಲ್ಲಿ ಪ್ರತಿ ಮನೆಲೂ ಗ್ರಂಥಾಲಯ ಸ್ಥಾಪಿಸ್ತಿರೋ ಮಾದರಿ ಯುವಕ

“ನಾನು 8ನೇ ತರಗತಿಯಿಂದ ಸಂಸ್ಕೃತ ಓದುತ್ತಿದ್ದೇನೆ. ಶಾಲೆಯಲ್ಲಿ ಈ ವಿಷಯ ತೆಗೆದುಕೊಳ್ಳುವುದನ್ನು ಯಾರೂ ತಡೆಯಲಿಲ್ಲ. ನನ್ನ ತರಗತಿಯಲ್ಲಿ ನಾನೊಬ್ಬನೇ ಮುಸ್ಲಿಂ ವಿದ್ಯಾರ್ಥಿಯಾಗಿದ್ದೆ. ಸಂಸ್ಕೃತದಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪದವಿಯನ್ನು ಪೂರ್ಣಗೊಳಿಸಿದೆ ಮತ್ತು ನಂತರ 2008 ರಲ್ಲಿ ಅದೇ ವಿಷಯದಲ್ಲಿ ಎಮ್‌ಎ ಮತ್ತು ಎಂ.ಫಿಲ್ ಪದವಿಗಳನ್ನು ಮತ್ತು ಶಾಸ್ತ್ರಿ ಪದವಿಗಳನ್ನು ಪಡೆದಿದ್ದೇನೆ’’ ಎಂದೂ ಸಂಸ್ಕೃತ ಪ್ರೇಮದ ಬಗ್ಗೆ ಹೇಳಿಕೊಂಡಿದ್ದಾರೆ.

"ಸಂಸ್ಕೃತದ ಬಗ್ಗೆ ತಿಳಿದುಕೊಳ್ಳಲು ಅನೇಕ ವಿಷಯಗಳಿರುವುದರಿಂದ ಪ್ರತಿಯೊಬ್ಬರೂ ಸಂಸ್ಕೃತವನ್ನು ಅಧ್ಯಯನ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ನಾನು ಪ್ರಸ್ತುತ ಕೆಲಸ ಮಾಡುತ್ತಿರುವ ವಿಶ್ವವಿದ್ಯಾಲಯದಲ್ಲಿ ಅನೇಕ ಮುಸ್ಲಿಂ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಮತ್ತು ಸಂಸ್ಕೃತ ಕಲಿಯುತ್ತಿದ್ದಾರೆ" ಎಂದೂ ತಿಳಿಸಿದ್ದಾರೆ. "ಇತ್ತೀಚಿನ ದಿನಗಳಲ್ಲಿ ನಾವು ಧರ್ಮದ ಹೆಸರಿನಲ್ಲಿ ನಮ್ಮ ಸುತ್ತಲೂ ವಿಭಿನ್ನ ಅಭಿಪ್ರಾಯಗಳನ್ನು ಕೇಳುತ್ತೇವೆ. ಆದರೆ ಪವಿತ್ರ ಕುರಾನ್ ಮತ್ತು ವೇದ ಇತರ ಧರ್ಮಗಳನ್ನು ದ್ವೇಷಿಸಲು ಹೇಳಿಲ್ಲ. ನಾನು ಕುರಾನ್ ಹಾಗೂ ವೇದ ಎರಡನ್ನೂ ಓದಿದ್ದೇನೆ’’ ಎಂದು ಡಾ. ನೂರಿಮಾ ಹೇಳಿದ್ದಾರೆ.

click me!