ಶಾಸ್ತ್ರಗಳೆಂದರೆ ಸುಮ್ಮನೆ ಅಲ್ಲ, ಅದಕ್ಕೆ ಧಾರ್ಮಿಕ ಕಾರಣಗಳ ಜೊತೆ ವೈಜ್ಞಾನಿಕ ಕಾರಣಗಳೂ ಇರುತ್ತವೆ. ದೇವಸ್ಥಾನಕ್ಕೆ ಹೋದವರು ಸಾಮಾನ್ಯವಾಗಿ ದೇವರ ದರ್ಶನ ಪಡೆಯುವುದರ ಜೊತೆಗೆ ಪ್ರದಕ್ಷಿಣೆ ಹಾಕಲಾಗುವುದು. ಇದರಿಂದ ಜಯ, ಸಮೃದ್ಧಿ ಸಂತೋಷ ಪ್ರಾಪ್ತಿಯಾಗುವುದಲ್ಲದೆ, ಬಲದಿಂದ ಎಡಕ್ಕೆ ಪ್ರದಕ್ಷಿಣೆ ಹಾಕಿದರೆ ಮನಸ್ಸು ಪ್ರಫುಲ್ಲತೆಯಿಂದ ಶಾಂತಿ ಲಭಿಸುತ್ತದೆ ಎನ್ನುತ್ತದೆ ವಿಜ್ಞಾನ. ಹೀಗೆ ಪ್ರದಕ್ಷಿಣೆಯಿಂದ ಏನೆಲ್ಲ ಉಪಯೋಗಗಳಿವೆ? ಎಷ್ಟು ಪ್ರದರ್ಶನಗಳನ್ನು ಹಾಕಬೇಕು ಎಂಬ ಬಗ್ಗೆ ನೋಡೋಣ ಬನ್ನಿ.
ದೇವರಿಗೆ ಪ್ರದಕ್ಷಿಣೆ ಹಾಕುವುದೆಂದರೆ ಕೇವಲ ಸುತ್ತು ಹೊಡೆಯುವುದಲ್ಲ, ಇಲ್ಲಿ ಶ್ರದ್ಧಾ-ಭಕ್ತಿ ಇದ್ದರೆ ದೇವರ ಕೃಪೆ ಜೊತೆ ಮಾನಸಿಕ ನೆಮ್ಮದಿಯೂ ದೊರೆಯುತ್ತದೆ. ಅಲ್ಲದೆ, ಎಷ್ಟು ಬಾರಿ ಪ್ರದಕ್ಷಿಣೆ ಹಾಕಿದರೆ ಏನು ಲಾಭ, ಏತಕ್ಕೆ ಪ್ರದಕ್ಷಿಣೆ ಹಾಕಬೇಕು ಎಂಬ ಬಗ್ಗೆ ಅನೇಕ ಕಾರಣಗಳೂ ಇವೆ.
ದೇವರ ದರ್ಶನಕ್ಕೆಂದು ದೇವಾಲಯಗಳಿಗೆ ಹೋದಾಗ ಪ್ರದಕ್ಷಿಣೆ ಹಾಕಿದರೆ ಪಾಪವೆಲ್ಲ ನಾಶವಾಗಿ, ಪುಣ್ಯ ಫಲ ಸಿಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಿದೆ. ಅಷ್ಟೇ ಅಲ್ಲದೆ ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ದೇವಾಲಯದಲ್ಲಿ ಪ್ರದಕ್ಷಿಣೆ ಹಾಕುವಾಗ ಬಲಭಾಗದಿಂದ ಪ್ರದಕ್ಷಿಣಾಕಾರವಾಗಿ ಶುರು ಮಾಡಬೇಕು. ಗರ್ಭಗುಡಿಯಲ್ಲಿರುವ ಮೂರ್ತಿಯ ಸಕಾರಾತ್ಮಕ ಶಕ್ತಿಯು ಉತ್ತರದಿಂದ ದಕ್ಷಿಣ ದಿಕ್ಕಿಗೆ ಪ್ರವಹಿಸುತ್ತದೆ. ಇದರಿಂದ ಪ್ರದಕ್ಷಿಣೆ ಮಾಡುವಾಗ ಸಕಾರಾತ್ಮಕ ಅಂಶಗಳು ದೇಹದೊಳಗೆ ಪ್ರವಹಿಸುವುದರಿಂದ ಅಶಾಂತಿಯಂತ ಅನೇಕ ಮಾನಸಿಕ ಬಾಧೆಗಳು ದೂರಾಗುತ್ತವೆ. ಹಾಗಾದರೆ ಪ್ರದಕ್ಷಿಣೆಯಿಂದಾಗುವ ಲಾಭಗಳೇನು ಅನ್ನೋದರ ಬಗ್ಗೆ ನೋಡೋಣ.
ಇದನ್ನು ಓದಿ: ಶನಿ ನಿಮ್ಮ ಜಾತಕದಲ್ಲಿ ಈ ರಾಶಿಯಲ್ಲಿದ್ದಾಗ ನಿಮಗ್ಯಾವ ಫಲ!...
ಮನೆಯಲ್ಲಿ ಸುಖ-ಶಾಂತಿ
ಹಿಂದೂ ಧರ್ಮದಲ್ಲಿ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆಯುವುದು ಪುಣ್ಯಕಾರ್ಯವೆಂದು ನಂಬಲಾಗಿದೆ. ಅದರಂತೆಯೇ ಪ್ರದಕ್ಷಿಣೆಯು ಅದರ ಒಂದು ಭಾಗವಾಗಿದೆ. ದೇವಾಲಯಗಳಿಗೆ ಹೋಗಿ ಅಲ್ಲಿ ಸಿಗುವ ಶಾಂತಿ, ಸಕಾರಾತ್ಮಕ ಅಂಶಗಳ ಜೊತೆ ಮನೆಗೆ ಬಂದಾಗ, ಮನೆಯಲ್ಲಿರುವ ನಕಾರಾತ್ಮಕ ಅಂಶಗಳು ನಾಶವಾಗುತ್ತವೆ. ಸಕಾರಾತ್ಮಕ ಶಕ್ತಿಯು ಮನೆಯ ಸುಖ-ಶಾಂತಿಗೆ ಕಾರಣವಾಗುತ್ತದೆ.
ಜೀವನದಲ್ಲಿ ಸಂತೋಷ
ಪೌರಾಣಿಕ ಕಥೆಯಲ್ಲಿ ಹೇಳಿರುವಂತೆ ಶಿವ-ಪಾರ್ವತಿಯರ ಮಕ್ಕಳಾದ ಗಣೇಶ ಮತ್ತು ಕಾರ್ತಿಕೇಯರ ನಡುವೆ ಇಡೀ ಜಗತ್ತನ್ನು ಯಾರು ಮೊದಲು ಸುತ್ತಿ ಬರುತ್ತಾರೆ ಎಂಬ ಸ್ಪರ್ಧೆ ನಡೆಯುತ್ತದೆ. ಆಗ ಗಣೇಶನು ತನ್ನ ಮಾತಾ-ಪಿತರಾದ ಶಿವ-ಪಾರ್ವತಿಯರೇ ಮೂಲ ಸೃಷ್ಟಿ ಎಂದು ಅವರನ್ನೇ ಪ್ರದಕ್ಷಿಣೆ ಮಾಡಿ, ಸ್ಪರ್ಧೆಯಲ್ಲಿ ಜಯಗಳಿಸುತ್ತಾನೆ. ಆದ್ದರಿಂದ ಪೂಜೆಯ ನಂತರ ದೇವರನ್ನು ಸಂಪೂರ್ಣ ಸೃಷ್ಟಿ ಎಂದು ಭಾವಿಸಿ ಪ್ರದಕ್ಷಿಣೆ ಮಾಡುತ್ತಾರೆ. ಇದರಿಂದ ಮನೆಯಲ್ಲಿ ಧನ ಸಮೃದ್ಧಿ ಉಂಟಾಗುತ್ತದೆ ಮತ್ತು ಜೀವನದಲ್ಲಿ ಸಂತೋಷ, ನೆಮ್ಮದಿ ಸದಾ ನೆಲೆಸಿರುತ್ತದೆ.
undefined
ಇದನ್ನು ಓದಿ: ಜಾತಕ ಹೇಳುತ್ತೆ ನಿಮ್ಮ ಲವ್ ಮ್ಯಾರೇಜ್ ಭವಿಷ್ಯ!...
ಪ್ರದಕ್ಷಿಣೆ ಮಂತ್ರ
ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಾತ್ ಪದೇ ಪದೇ…
ಎಂಬ ಈ ಮಂತ್ರವನ್ನು ಪಠಿಸುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ.
ಎಷ್ಟು ಪ್ರದಕ್ಷಿಣೆ..? ಏನು ಲಾಭ..?
ದೇವಸ್ಥಾನದಲ್ಲಿ ಎಷ್ಟು ಬಾರಿ ಪ್ರದಕ್ಷಿಣೆ ಮಾಡುತ್ತೇವೆಯೋ ಅದಕ್ಕೆ ಅದರದ್ದೇ ಆದ ಫಲವಿದೆ. ಜಯಪ್ರಾಪ್ತಿಗೆ 5 ಬಾರಿ ಪ್ರದಕ್ಷಿಣೆ. ಶತ್ರುಗಳನ್ನು ಸೋಲಿಸಲು 7 ಬಾರಿ ಪ್ರದಕ್ಷಿಣೆ ಹಾಕಬೇಕು. ಸಂತಾನ ಪ್ರಾಪ್ತಿಗೆ 9 ಬಾರಿ ಪ್ರದಕ್ಷಿಣೆ ಮಾಡಬೇಕು. ಆಯುಷ್ಯ ವೃದ್ಧಿಗೆ 11 ಬಾರಿ ಪ್ರದಕ್ಷಿಣೆ ಮಾಡುವುದು. ಮನೋಕಾಮನೆ ಈಡೇರಲು 13 ಬಾರಿ ಪ್ರದಕ್ಷಿಣೆ ಹಾಕಬೇಕು. ಧನ ಪ್ರಾಪ್ತಿಗೆ 15 ಬಾರಿ, ಧನ ವೃದ್ಧಿಗೆ 17 ಬಾರಿ ಹಾಗೂ ರೋಗ ನಿವಾರಣೆಗೆ 19 ಬಾರಿ ಪ್ರದಕ್ಷಿಣೆ ಹಾಕಬೇಕು.
ಇದನ್ನು ಓದಿ: ಲಲಿತಾ ಸಹಸ್ರನಾಮ ಪಠಿಸಿ, ದೇವಿ ಕೃಪೆಗೆ ಪಾತ್ರರಾಗಿ, ಇಲ್ಲಿವೆ ಸಹಸ್ರ ಲಾಭ...
ಇನ್ನು ಬೇರೆ ಬೇರೆ ದೇವರಿಗೂ ಪ್ರದಕ್ಷಿಣೆ ಸಂಖ್ಯೆಯೂ ಬೇರೆಯಾಗಿರುತ್ತದೆ. ಸೂರ್ಯನಿಗೆ ಏಳು, ಗಣೇಶನಿಗೆ ನಾಲ್ಕು, ವಿಷ್ಣು ಮತ್ತು ವಿಷ್ಣುವಿನ ಅವತಾರಗಳಿಗೆ ಐದು, ದುರ್ಗಾದೇವಿಗೆ ಒಂದು, ಹನುಮಂತನಿಗೆ ಮೂರು, ಶಿವನಿಗೆ ಅರ್ಧ ಪ್ರದಕ್ಷಿಣೆ ಹಾಕಬೇಕೆಂದು ಹೇಳಲಾಗಿದೆ. ಹೀಗೆ ಪ್ರದಕ್ಷಿಣೆಗೆ ಅದರದ್ದೇ ಆದ ಪ್ರಾಶಸ್ತ್ಯವಿದೆ. ಈ ನಿಟ್ಟಿನಲ್ಲಿ ಅಳವಡಿಸಿಕೊಂಡರೆ ಒಳ್ಳೆಯದಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.