ಹಾವುಗಳಿಗೆ ಸೀಳು ನಾಲಿಗೆ ಇರುವುದು ಗೊತ್ತೇ ಇದೆ. ಅದು ಏಕಿದೆ ಎಂಬುದಕ್ಕೆ ಹಿಂದೂ ಪುರಾಣಗಳಲ್ಲಿ ಆಸಕ್ತಿಕರ ಕತೆಯೊಂದಿದೆ.
ಹಾವು ಅದರಲ್ಲೂ ಸರ್ಪ ಹೆಡೆಯೆತ್ತಿ ನಾಲಿಗೆ ಹೊರ ಚಾಚಿ ಹೆದರಿಸುವುದನ್ನು ನೋಡಿಯೇ ಇರುತ್ತೀರಿ. ಹಾವುಗಳನ್ನು ವಿಲನ್ ಆಗಿಸುವಲ್ಲಿ ಅದರ ಅದರ ಸೀಳು ನಾಲಿಗೆಯ ಪಾತ್ರವೂ ಇದೆ. ಆದರೆ, ಹಾವುಗಳಿಗೆ ಹೀಗೆ ಎರಡು ನಾಲಿಗೆ ಇರಲು ಕಾರಣವೇನು ಎಂದು ಎಂದಾದರೂ ಯೋಚಿಸಿದ್ದೀರಾ? ಇದಕ್ಕೆ ಹಿಂದೂ ಪುರಾಣ(Hindu mythology)ಗಳಲ್ಲಿ ಕತೆಯೊಂದಿದೆ. ಈ ಕತೆಯು ಸರ್ಪ ಹಾಗೂ ಗರುಡದ ನಡುವಿನ ವೈರತ್ವಕ್ಕೆ ಸಂಬಂಧಿಸಿದೆ.
ಸರ್ಪ ಹಾಗೂ ಗರುಡ
ಬಹಳ ಹಿಂದೆ ಕಶ್ಯಪ(Kashyapa) ಮುನಿಗಳಿಗೆ ಇಬ್ಬರು ಹೆಂಡತಿಯರಿದ್ದರು. ಕದ್ರು(Kadru) ಹಾಗೂ ವಿನುತ(Vinuta) ಅವರ ಹೆಸರು. ಇದರಲ್ಲಿ ಕದ್ರುವಿನ ಮಕ್ಕಳು ಸರ್ಪಗಳು. ವಿನುತನಿಗೆ ಅರುಣ ಮತ್ತು ಗರುಡ ಎಂಬ ಇಬ್ಬರು ಮಕ್ಕಳು.
ಒಮ್ಮೆ ಕದ್ರು ಹಾಗೂ ವಿನುತ ಇಬ್ಬರೂ ಸಮುದ್ರ ಮಂಥನ ನಡೆಯುವುದನ್ನು ನೋಡುತ್ತಾರೆ. ಈ ಸಂದರ್ಭದಲ್ಲಿ ಅಲ್ಲೊಂದು ಬಿಳಿ ಬಣ್ಣದ ಕುದುರೆ(horse) ಹುಟ್ಟುವುದನ್ನು ಅವರು ನೋಡುತ್ತಾರೆ. ಆಗ ವಿನುತ ಆ ಕುದುರೆ ಪೂರ್ತಿ ಬಿಳಿಯಾಗಿದೆ ಎನ್ನುತ್ತಾಳೆ. ಆದರೆ ಕದ್ರು ಅದರ ಬಾಲ ಮಾತ್ರ ಕಪ್ಪಗಾಗಿದೆ ಎನ್ನುತ್ತಾಳೆ. ಕಡೆಗೆ ಇದೇ ಮಾತುಗಳು ವಾಗ್ವಾದಕ್ಕೆ ತಿರುಗುತ್ತವೆ. ಇಬ್ಬರೂ ತಮ್ಮ ವಾದ ಮುಂದುವರಿಸುತ್ತಾರೆ. ಇದೊಂದು ಪಂಥವೇ ಆಗಿ ಹೋಗುತ್ತದೆ. ಯಾರು ಹೇಳಿದ್ದು ಸತ್ಯವಾಗಿರುತ್ತದೋ ಅವರು ಗೆದ್ದಂತೆ. ಸೋತವರು ಗೆದ್ದವರ ದಾಸಿಯಾಗಿ ಬದುಕಬೇಕು ಎಂಬ ಮಾತಾಗುತ್ತದೆ.
Temple Special: ಈ ಶ್ರೀಮಂತ ದೇವಸ್ಥಾನಗಳ ಆಸ್ತಿ ಎಷ್ಟು ಬಲ್ಲಿರಾ?
ಕದ್ರುವಿನ ಮೋಸ
ಕದ್ರುವಿಗೆ ತನ್ನ ಮಾತು ಸುಳ್ಳಿರಬಹುದು ಎನಿಸಿದ್ದೇ ಮಕ್ಕಳಾದ ಹಾವು(snakes)ಗಳನ್ನು ಕರೆದು ಕುದುರೆಯ ಬಾಲದಲ್ಲಿ ಸೇರಿಕೊಳ್ಳುವಂತೆ ಸೂಚಿಸುತ್ತಾಳೆ. ಹಾವುಗಳು ಸೇರಿಕೊಂಡ ಕೂಡಲೇ ಕುದುರೆಯ ಬಾಲ ಕಪ್ಪಾಗಿ ಕಾಣಿಸತೊಡಗುತ್ತದೆ. ಇದರಿಂದ ವಿನುತ ಸೋಲನ್ನು ಒಪ್ಪಿಕೊಂಡು ಕದ್ರುವಿನ ದಾಸಿಯಾಗಬೇಕಾಗುತ್ತದೆ. ಕದ್ರು ದಾಸಿಯಾದ ವಿನುತಳನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಾಳೆ. ತಾಯಿಯನ್ನು ಕದ್ರು ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ಗರುಡನಿಗೆ ಸಹಿಸಲಾಗುವುದಿಲ್ಲ. ಆತ ಸರ್ಪಗಳ ಬಳಿ ಬಂದು ತನ್ನ ತಾಯಿಯ ಬಂಧ ಮುಕ್ತಿಯ ಬಗ್ಗೆ ಮಾತಾಡುತ್ತಾನೆ.
Wedding Superstitions: ಮದುವೆ ದಿನ ವಧು ಅತ್ರೆ ಒಳ್ಳೇದಾ ಕೆಟ್ಟದ್ದಾ?
ಸರ್ಪಗಳ ಶರತ್ತು
ಗರುಡನ ಬೇಡಿಕೆ ಕೇಳಿದ ಸರ್ಪಗಳು ತಮಗೆ ಸ್ವರ್ಗದಿಂದ ಅಮೃತ ತಂದು ಕೊಟ್ಟರೆ ಬಂಧ ಮುಕ್ತಿ ಮಾಡುವುದಾಗಿ ತಿಳಿಸುತ್ತವೆ. ಇದಕ್ಕಾಗಿ ಗರುಡ ಸ್ವರ್ಗಕ್ಕೆ ಹಾರಿ ಇಂದ್ರ(Indra)ನನ್ನು ಭೇಟಿಯಾಗುತ್ತಾನೆ. ಇಂದ್ರನು ಸರ್ಪಗಳಿಗೆ ಅಮೃತ ನೀಡುವುದರಿಂದ ತೊಂದರೆಯಾಗಬಹುದು ಎಂದು ಅದನ್ನು ನೀಡಲು ಹಿಂದೇಟು ಹಾಕುತ್ತಾನೆ. ಆಗ ಗರುಡನು ತನ್ನ ತಾಯಿಯ ಬಂಧಮುಕ್ತಿಯಾದ ಕೂಡಲೇ ಅಮೃತ ವಾಪಸ್ ತಂದು ಕೊಡುವುದಾಗಿ ಹೇಳುತ್ತಾನೆ. ಈ ಮಾತಿಗೆ ಒಪ್ಪಿ ಇಂದ್ರ ಅಮೃತ ನೀಡುತ್ತಾನೆ.
ನಾಲಿಗೆ ಸೀಳುತ್ತದೆ
ಅಮೃತವನ್ನು ಕಂಡ ಸರ್ಪಗಳು ಸಂತೋಷಗೊಂಡು ವಿನುತಾಳನ್ನು ಬಂಧ ಮುಕ್ತಿಗೊಳಿಸುತ್ತವೆ. ಆಗ ಗರುಡ ಅಮೃತದ ಪಾತ್ರೆಯನ್ನು ಹುಲ್ಲಿನ ಮೇಲಿಟ್ಟು, ಅದನ್ನು ಸೇವಿಸುವ ಮುಂಚೆ ಶುದ್ಧರಾಗಿ ಬರುವಂತೆ ಹಾವುಗಳಿಗೆ ಹೇಳುತ್ತಾನೆ. ಹಾವುಗಳು ಸ್ನಾನಕ್ಕೆ ಹೋದಾಗ ಗರುಡ ಅಮೃತ(Amrit)ವನ್ನು ಅಲ್ಲಿಂದ ವಾಪಸ್ ಸ್ವರ್ಗಕ್ಕೆ ಕೊಂಡೊಯುತ್ತಾನೆ. ಸರ್ಪಗಳು ನಿರಾಸೆಯಿಂದ ಆ ಅಮೃತ ಇಟ್ಟಿದ್ದ ದರ್ಬೆಯ ಮೇಲೆ ಹೊರಳಾಡುತ್ತವೆ. ಆಗ ಅಮೃತ ಇಟ್ಟ ಜಾಗದ ಕಾರಣದಿಂದ ಅವುಗಳ ಮೇಲಿನ ಹಳೆ ಚರ್ಮ ಹೋಗಿ ಹೊಸ ಚರ್ಮ ಬರುತ್ತದೆ. ಇದಕ್ಕೇ ಹಾವುಗಳೂ ಇಂದಿಗೂ ಪೊರೆ ಬಿಡುವುದು. ನಂತರ ಆ ದರ್ಬೆಯನ್ನೇ ನೆಕ್ಕುತ್ತವೆ. ಹಾಗೆ ನೆಕ್ಕಿ ನೆಕ್ಕಿ ಅವುಗಳ ನಾಲಿಗೆ ಎರಡಾಗಿ ಸೀಳಿ ಹೋಗುತ್ತದೆ. ಗರುಡ ಮೋಸ ಮಾಡಿದನೆಂದು ಆಮೇಲಿಂದ ಗರುಡನಿಗೂ, ಸರ್ಪಗಳಿಗೂ ವೈರತ್ವ ಉಂಟಾಗುತ್ತದೆ.
ವಿಜ್ಞಾನ
ಹಾವುಗಳು ತಮ್ಮ ನಾಲಿಗೆಯಿಂದ ವಾಸನೆ ಗ್ರಹಿಸುತ್ತವೆ. ಅವುಗಳ ಸೀಳು ನಾಲಿಗೆ ವಾಸನೆಯನ್ನು ಹೆಚ್ಚು ಚೆನ್ನಾಗಿ ಗ್ರಹಿಸಲು ಸಹಾಯ ಮಾಡುತ್ತದೆ.