Chanakya Niti: ಇಂಥವರನ್ನು ನಿಮ್ಮ ಮನೆಯ ಹತ್ತಿರಕ್ಕೂ ಬಿಟ್ಟುಕೊಳ್ಳಬೇಡಿ ಅಂತಾನೆ ಚಾಣಕ್ಯ

By Bhavani BhatFirst Published Sep 23, 2024, 8:51 PM IST
Highlights

ಚಾಣಕ್ಯನ ನೀತಿಸೂತ್ರಗಳು ಜೀವನದ ಹಲವು ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡುತ್ತವೆ. ಎಂಥ ವ್ಯಕ್ತಿಗಳನ್ನು ಮನೆಗೆ ಕರೆಯಲೇಬಾರದು? ಅದನ್ನು ಚಾಣಕ್ಯ ವಿವರಿಸಿದ್ದಾನೆ. 

ಚಾಣಕ್ಯನ ನೀತಿಸೂತ್ರದಲ್ಲಿ ಏನೆಲ್ಲ ಇದೆ ಎಂದು ಹೇಳುವುದಕ್ಕಿಂತಲೂ, ಏನೆಲ್ಲಾ ಇಲ್ಲ ಎಂದು ಹುಡುಕುವುದೇ ಉತ್ತಮ. ಯಾಕೆಂದರೆ, ಚಾಣಕ್ಯ ಹೇಳದೇ ಬಿಟ್ಟ ವಿಷಯಗಳೇ ಇಲ್ಲ ಎನ್ನಬಹುದು. ಹಾಗಂತ ಚಾಣಕ್ಯನ ಅರ್ಥಶಾಸ್ತ್ರ ತುಂಬಾ ದೊಡ್ಡ ಗ್ರಂಥವೇನೂ ಅಲ್ಲ. ಆದರೆ ಚಾಣಕ್ಯ ಈ ಸಣ್ಣ ಗ್ರಂಥದಲ್ಲಿಯೇ ಸಾಕಷ್ಟು ವಿಷಯಗಳನ್ನು ಹುದುಗಿಸಿ ಇಟ್ಟಿದ್ದಾನೆ. ಆತನ ಒಂದೊಂದು ಶ್ಲೋಕದಲ್ಲಿಯೂ ಒಂದೊಂದು ಲೋಕವೇ ಇದೆ.

 ʼಅತಿಥಿ ದೇವೋಭವʼ ಎಂಬುದು ನಮ್ಮ ಸಂಸ್ಕೃತಿ, ನಿಜ. ಆದರೆ ಕೆಲವರು ಮನೆಗೆ ಬರುವುದು ಸುರಕ್ಷಿತವಲ್ಲ! ಕೆಲವು ಥರದವರನ್ನು ಮನೆಗೆ ಕರೆಯಬಾರದು ಎನ್ನುತ್ತಾನೆ ಚಾಣಕ್ಯ. ಈಗ ನಾವು ಮನೆಗೆ ಯಾರನ್ನು ಕರೆಯಬಾರದು ಎಂದು ಚಾಣಕ್ಯ ಹೇಳಿದ್ದಾನೆ ಎಂಬುದನ್ನು ನೋಡೋಣ. ಕೆಲವು ವ್ಯಕ್ತಿಗಳನ್ನು ಮನೆಗೆ ಕರೆಯಲೇಬಾರದು. ಅಂಥವರು ಮನೆಗೆ ಬಂದರೆ ನಿಮ್ಮ ನೆಮ್ಮದಿಯನ್ನು ಕೆಡಿಸುತ್ತಾರೆ. ಕೆಲವರು ಅಪಾಯವನ್ನೂ ತಂದೊಡ್ಡಬಹುದು. ಅಂಥವರ್ಯಾರು? ನೋಡೋಣ. 

Latest Videos

ವೇದಗಳನ್ನು ತಿಳಿಯದವರು: ಇದು ಚಾಣಕ್ಯನ ಕಾಲದ ಮಾತು. ವೇದ ಎಂದರೆ ಜ್ಞಾನ ಎಂದರ್ಥ. ಇಂದು ʼವೇದʼವನ್ನು ನಾವು ʼಜ್ಞಾನʼ ಎಂದು ಓದಿಕೊಳ್ಳಬೇಕು. ಜ್ಞಾನಿಗಳನ್ನು ಮನೆಗೆ ಸ್ವಾಗತಿಸಿ. ಆದರೆ ಅಜ್ಞಾನಿಗಳನ್ನು, ಮೂರ್ಖರನ್ನು, ನಿಮಗೆ ಏನೂ ಗೊತ್ತಿಲ್ಲ ಎಂದು ವಾದಿಸುವವರನ್ನು, ತಪ್ಪು ತಿಳಿವಳಿಕೆಯನ್ನು ನಿಮ್ಮಲ್ಲಿ ಬಿತ್ತುವವರನ್ನು ಕರೆಯದಿರಿ. 

ನೋಯಿಸುವವರು: ಮಾತಿನಿಂದ, ಕೃತಿಯಿಂದ, ನಡತೆಯಿಂದ ನಿಮ್ಮನ್ನೂ ಇತರರನ್ನೂ ನೋಯಿಸುವವರನ್ನು ಕರೆಯಬೇಡಿ. ಇವರು ದುಃಖ ತಂದಿಡುತ್ತಾರೆ. ಕಠಿಣವಾದ ಮಾತುಗಳನ್ನಾಡುವವರು, ಮಾತಿಗಿಂತ ರಟ್ಟೆಬಲದ ಮೇಲೆ ಹೆಚ್ಚು ನಂಬಿಕೆಯಿಟ್ಟವರು ಇವರು. 

ಅವಕಾಶವಾದಿಗಳು: ಇವರು ನಿಮ್ಮಿಂದ ಏನಾದರೂ ಕೆಲಸ ಆಗಬೇಕಾದಾಗ ಮಾತ್ರ ನಿಮ್ಮ ಬಳಿ ಬರುವವರು. ನಿಮ್ಮ ಅಗತ್ಯಕ್ಕೆ ಒದಗದವರು. ನೀವು ನೆರವು ಕೇಳುವಾಗ ಇವರು ಪರಾರಿಯಾಗಿಬಿಡುತ್ತಾರೆ. ಇಂಥ ಅವಕಾಶವಾದಿಗಳನ್ನು ನಿಮ್ಮ ಹತ್ತಿರಕ್ಕೂ ಬಿಟ್ಟುಕೊಳ್ಳಬೇಡಿ.

ನಯವಂಚಕರು: ಮಾತಿನಿಂದಲೇ ಮರುಳು ಮಾಡುವವರು, ನೆಪ ಹೇಳಿ ನಿಮ್ಮಿಂದ ಹಣ ಒಯ್ದು ಮರಳಿ ಕೊಡದವರು, ಮಾಯಾಜಾಲ ಬೀಸಿ ನಿಮ್ಮ ಮನೆಯ ಆಭರಣಗಳನ್ನು ಕಸಿಯುವವರು, ನಿಮ್ಮ ಜೇಬಿನ ಹಣವನ್ನು ನಿಮಗೇ ಗೊತ್ತಿಲ್ಲದಂತೆ ಎಗರಿಸುವವರು, ಇವರೆಲ್ಲ ನಯವಂಚಕರು. ಇವರನ್ನು ಏಡ್ಸ್‌ನಂತೆಯೇ ದೂರವಿಡಬೇಕು.

ಋಣಾತ್ಮಕತೆಯುಳ್ಳವರು: ಕೆಲವರು ಮಾತನ್ನೆತ್ತಿದರೆ ಸಾಕು ʼಅಯ್ಯೋ, ಅದೆಲ್ಲ ಆಗಲ್ಲ ಬಿಡುʼ ಎನ್ನುತ್ತಿರುತ್ತಾರೆ. ನೀವು ಆಸೆ ಆಸಕ್ತಿಯಿಂದ ಯಾವುದಾದರೂ ವಿಷಯದ ಬಗ್ಗೆ ಹೇಳಿದರೆ ಅದರಲ್ಲಿ ಕೊಂಕು ಹುಡುಕುತ್ತಾರೆ. ಇವರು ನಿಮ್ಮಲ್ಲಿ ಋಣಾತ್ಮಕತೆ ಬಿತ್ತುವವರು. ಇವರಿಂದಾಗಿ ನಿಮ್ಮಲ್ಲಿರುವ ಆಸಕ್ತಿಯೂ ಸತ್ತುಹೋಗುತ್ತದೆ.   

ತಿರುಪತಿಯ 'ನಾನ್‌ವೆಜ್‌..' ಪ್ರಸಾದ ತಿಂದ ಪಾಪ ಕಾಡ್ತಿದ್ಯಾ? ದೈವಜ್ಞ ಸೋಮಯಾಜಿ ಪರಿಹಾರ ಹೇಳಿದ್ದಾರೆ ನೋಡಿ..

ಸಾಲ ಕೇಳುವವರು: ತೀರಾ ಅಗತ್ಯವಿದ್ದು ಸಾಲ ಕೇಳುವವರು ಬೇರೆ. ಆದರೆ ಸದಾ ಸಾಲ ಕೇಳುವವರು, ಅದನ್ನು ಮರಳಿಸುವ ಬಗ್ಗೆ ಯೋಚನೆಯೇ ಮಾಡದವರು, ನಿಮ್ಮಿಂದ ಸಾಲ ತೆಗೆದುಕೊಂಡ ಬಳಿಕ ತಲೆ ತಪ್ಪಿಸಿಕೊಂಡು ತಿರುಗುವವರು, ಇಂಥವರು ನಿಮ್ಮ ಮನೆಯಿಂದ ದೂರವಿರಲಿ.

ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡುವವರು: ಇವರ ಬಗ್ಗೆ ವಿವರಿಸಬೇಕಾಗಿಲ್ಲ ಅಲ್ಲವೇ? ಇಂಥವರು ದೂರವಿದ್ದಷ್ಟು ಕ್ಷೇಮ. ಹತ್ತಿರ ಬಂದಷ್ಟೂ ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಅಪಾಯ ಹೆಚ್ಚು. ಮನೆಯ ಗಂಡಸರಿಗೆ ಇಂಥವರ ಬಗ್ಗೆ ಪಕ್ಕನೇ ಗೊತ್ತಾಗದೇ ಹೋಗಬಹುದು. ಆದರೆ ನಿಮ್ಮ ಮನೆಯವರು ಇವರ ಬಗ್ಗೆ ಅಪಾಯದ ಸೂಚನೆ ಕೊಡುತ್ತಿದ್ದಾರೆ ಎಂದರೆ ಕೂಡಲೇ ಎಚ್ಚೆತ್ತುಕೊಳ್ಳಿ. 

ಕುಡುಕರು: ನಿಮ್ಮ ಸ್ನೇಹಿತರು ಯಾರಾದರೂ ಕುಡುಕರಾಗಿದ್ದರೆ ಅವರ ಬಗ್ಗೆ ಸ್ವಲ್ಪ ಜಾಗೃತೆ ವಹಿಸಿ. ಅಲ್ಪಸ್ವಲ್ಪ ಆಗೀಗ ಮದ್ಯಪಾನ ಮಾಡಿದರೂ, ಆಗಲೂ ಸಭ್ಯ ನಡತೆ ಹೊಂದಿರುವವರಾಗಿದ್ದರೆ ತೊಂದರೆಯಿಲ್ಲ. ಆದರೆ ಕುಡಿದು ಅಸಭ್ಯವಾಗಿ ವರ್ತಿಸುವವರು ಸಾರ್ವಜನಿಕವಾಗಿ ಅವರ ಮಾನವನ್ನೂ, ನಿಮ್ಮ ಮರ್ಯಾದೆಯನ್ನೂ ಕಳೆದುಬಿಡುತ್ತಾರೆ. 

ತಿರುಪತಿಗೆ ಹೋದಾಗ 'ಮುಡಿ' ಕೊಡೋದು ಏಕೆ? ಕೂದಲು ಮಾರಾಟದಿಂದಲೇ ಕೋಟಿ ಕೋಟಿ ಗಳಿಸುವ ಟಿಟಿಡಿ!
 

click me!