Dharmasthala Laksha Deepotsava:ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು

By Gowthami KFirst Published Nov 21, 2022, 5:10 PM IST
Highlights

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ  ವಸ್ತುಪ್ರದರ್ಶನ ಮಂಟಪದಲ್ಲಿ  ನಡೆದ ಸಂಗೀತ ಕಾರ್ಯಕ್ರಮ  ನೆರೆದ ಪ್ರೇಕ್ಷಕರನ್ನು ಮನಸೂರೆಗೊಳಿಸಿತು. ಸಂಗೀತಕ್ಕೆ ನೆರೆದಿದ್ದವರು ತಲೆದೂಗಿದರು.

ಧರ್ಮಸ್ಥಳ (ನ.21): ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ವಸ್ತು ಪ್ರದರ್ಶನ ಮಂಟಪದಲ್ಲಿ ಸಂಜೆ ಆಯೋಜನೆಗೊಂಡ ಕುಮಾರಿ ಸುಪ್ರೀತಾ ಅವರ ಸಂಗೀತ ಕಾರ್ಯಕ್ರಮ ನೆರೆದ ಪ್ರೇಕ್ಷಕರ ಮನಸೂರೆಗೊಳಿಸಿತು. ಲಕ್ಷದೀಪೋತ್ಸವದ ಮೊದಲ ದಿನದ ಪ್ರಪ್ರಥಮ ಸಾಂಸ್ಕೃತಿಕ ಕಾರ್ಯಕ್ರಮವಾಗಿತ್ತು. ಇದರ ಮೂಲಕ ವೈವಿಧ್ಯಮಯ ಲಕ್ಷದೀಪೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮವು ಚಾಲನೆ ಕಂಡಿತು. ಅಟಾನಾ ರಾಗದ ಶ್ರೀ ಮಹಾಗಣಪತಿಮ್ ಭಜೆ ಹಾಡಿನ ಮೂಲಕ ವಿಘ್ನವಿನಾಶಕನನ್ನು ಸ್ಮರಿಸಿದರು. ಕಮಲ ಮನೋಹರಿ ರಾಗದ ‘ಕಂಜದಳಾಯತಾಕ್ಷಿ ಕಾಮಾಕ್ಷಿ’, ಹಂಸನಾದ ರಾಗದ ‘ಬಂಟುರೀತಿ ಕೋಲು’, ಹಿಂಧೋಳ ರಾಗದ ‘ಸಾಮಜವರಗಮನ ಹಾಡು’, ಭೈರವಿ ರಾಗದ ‘ಓಡಿ ಬಾ ರಂಗಯ್ಯ’ ಹಾಗೂ ಬೃಂದಾವನಿ ಸಾರಂಗ ರಾಗದ ‘ತಿಲ್ಲಾನ ತನದಿಂ’ ಹಾಡು ಗಮನ ಸೆಳೆದವು. ‘ಎಲ್ಯಾಡಿ ಬಂದೆ ಮುದ್ದು ರಂಗಯ್ಯ’ ಎಂದು ಜಗದೋದ್ಧಾರ ಶ್ರೀಕೃಷ್ಣನ ತಾಯಿ ಪ್ರೀತಿಯಿಂದ ಕೇಳುವ ಪರಿಯನ್ನು ಚಾರುಕೇಶಿ ರಾಗದೊಂದಿಗೆ ಬಹಳ ಸೊಗಸಾಗಿ ಹಾಡಿದರು. ನಿರಂತರ ಒಂದು ಗಂಟೆಯವರೆಗೆಸAಗೀತ ಪ್ರಸ್ತುತಿಯ ಮೂಲಕ ಪ್ರೇಕ್ಷಕರ ಮನಗೆದ್ದರು.

ಈ ಸಂಗೀತ ರಸದೌತಣ ಕಾರ್ಯಕ್ರಮದಲ್ಲಿ ಸುಪ್ರೀತಾಳ ಗುರು ವಿದುಷಿ ಶ್ರೀಮತಿ ಅನಸೂಯ ಉಜಿರೆ ತಂಬೂರಿಯಲ್ಲಿ ಸಹಕರಿಸಿದರು. ಕುಮಾರಿ ಧನಶ್ರೀ ಶಬರಾಯ ವಯೋಲಿನ್ ನುಡಿಸುವುದರ ಮೂಲಕ ಸಂಗೀತ ಸಂಜೆಯಲ್ಲಿ ಪಾಲ್ಗೊಂಡರು. ಮೃದಂಗ ವಾದಕರಾಗಿ ಶ್ರೀಯುತ ಪವನ್ ಪುತ್ತೂರು ಸಾಥ್ ನೀಡುವುದರೊಂದಿಗೆ, ಆರನೇ ತರಗತಿಯ ಶ್ರೀ ವರ್ಚಸ್ ಖಂಜೀರವನ್ನು ನುಡಿಸಿದರು.

Latest Videos

ಸುಪ್ರೀತಾಳ ಸುಮಧುರ ಕಂಠದ ಗಾಯನಕ್ಕೆ ಮನಸೋತ ಕೆಲ ಕಲಾವಿದರು ಆಕೆಯ ಹಾಡಿನೊಂದಿಗೆ ತಾವೂ ತಲ್ಲೀನರಾಗಿ ದನಿಗೂಡಿಸುತ್ತಿದ್ದರು. ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದಿಂದ ಕೊಡಲ್ಪಡುವ ಶಿಷ್ಯ ವೇತನಕ್ಕೆ ಭಾಜನರಾಗಿರುವ ಸುಪ್ರೀತಾ ಧರ್ಮಸ್ಥಳ ಎಸ್.ಡಿ.ಎಂ ಪದವಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ. ಬೇರೆ ಬೇರೆ ವೃತ್ತಿರಂಗದಲ್ಲಿ ನಿರತರಾಗಿರುವ ಕಲಾವಿದರ ತಂಡವೊಂದು ಸಂಗೀತದ ಅಭಿರುಚಿಯೊಂದಿಗೆ ವೇದಿಕೆಯಲ್ಲಿ ಒಂದಾಗಿರುವುದು ವಿಶೇಷವಾಗಿತ್ತು. 

Dharmasthala Laksha Deepotsava: ಸ್ಪಷ್ಟ ಉದ್ದೇಶವಿದ್ದಾಗ ಮಾತ್ರ ಭಗವಂತನ ಅನುಗ್ರಹ: ಡಾ. ವೀರೇಂದ್ರ ಹೆಗ್ಗಡೆ

ಇಹಪರದ ದೈವಿಕ ಸಂಗೀತ ಸಮೀಕರಣ: 
ಸಾಮಾನ್ಯರ ತಿಳಿವಿಗೆಟುಕದ ಆಧ್ಯಾತ್ಮದ ತತ್ವಗಳು ಶಾಸ್ತ್ರೀಯ ರಾಗದ ಆಲಾಪದೊಂದಿಗೆ ಸಂಗೀತಸ್ವರಗಳ ಮೂಲಕ ಪ್ರಸ್ತುತಪಡಿಸಲ್ಪಟ್ಟರೆ ಹೇಗಿರುತ್ತದೆ? ಹಾಗಾದರೆ ಕಠಿಣ ಆಧ್ಯಾತ್ಮ ಸರಳವಾಗುತ್ತದೆ. ಕೇಳುವವರೊಳಗೆ ಆತ್ಮ-ಪರಮಾತ್ಮದ ಕುರಿತು ತಿಳಿದುಕೊಳ್ಳುವ ಕುತೂಹಲವನ್ನು ಹುಟ್ಟಿಸುತ್ತದೆ. ಧರ್ಮಸ್ಥಳದ ವಸ್ತುಪ್ರದರ್ಶನ ಮಂಟಪದಲ್ಲಿ ಲಕ್ಷದೀಪೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಇಂಥದ್ದೊಂದು ಪ್ರಭಾವ ಹುಟ್ಟಿಸುವಲ್ಲಿ ಯಶಸ್ವಿಯಾಯಿತು. ಕನಕದಾಸ ವಿರಚಿತ ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ’ ಎಂಬ ಪ್ರಶ್ನಾರ್ಥಕ ಸಾಲುಗಳೊಂದಿಗಿನ ಕಾವ್ಯದ ಮಾಧುರ್ಯಪೂರ್ಣ ಪ್ರಸ್ತುತಿಯ ಮೂಲಕ ವಿದುಷಿ ಅನುರಾಧ ಅಡ್ಕಸ್ಥಳ ಆಧ್ಯಾತ್ಮ ಚಿಂತನೆಯ ಸೊಗಡನ್ನು ಹರಡಿದರು.
ಇಹಪರದೊಂದಿಗಿನ ದೈವಿಕ ಸಂಯೋಗದ ಶ್ರೇಷ್ಠತೆಯನ್ನು ಸಾರುವ ಕನಕದಾಸರ ಈ ಪದವನ್ನು ತಮ್ಮ ಶಾಸ್ತ್ರೀಯ ಧ್ವನಿಮಾಧುರ್ಯದ ಮೂಲಕ ಹಾಡಿ ವಿದುಷಿ ಅನುರಾಧ ಅಲ್ಲಿದ್ದವರನ್ನು ಸೆಳೆದರು. 

Dharmasthala Laksha Deepotsava: ಚಿತ್ರಗಳಲ್ಲಿ ನೋಡಿ, ಶಾಸ್ತ್ರೋಕ್ತವಾಗಿ ನಡೆದ ಕೆರೆಕಟ್ಟೆ ಉತ್ಸವ 

ಇಂತಹ ಪ್ರತಿಯೊಂದು ಅಸ್ತಿತ್ವದೊಂದಿಗೆ ದೈವಿಕತೆಯು ಸಮೀಕರಣಗೊಂಡ ಸೌಂದರ್ಯವನ್ನು ತಮ್ಮ ಧ್ವನಿಯ ಮೂಲಕ ಅವರು ಅನಾವರಣಗೊಳಿಸಿದರು. ಸತತ ಒಂದು ಗಂಟೆಗಳ ಕಾಲ ಜರುಗಿದ ಸಂಗೀತ ರಸದೌತಣ ಕಲಾ ಆರಾಧಕರ ಗಮನ ಸೆಳೆಯಿತು.  ಈ ಸಂಗೀತ ಕಾರ್ಯಕ್ರಮದಲ್ಲಿ ಬಾಲಕೃಷ್ಣ ಪುತ್ತೂರು(ಮೃದಂಗ), ಬಾಲರಾಜ್ ಕಾಸರಗೋಡು (ವಯೋಲಿನ್) ಅಮೃತ ನಾರಾಯಣ ಹೊಸಮನೆ (ಮೋರ್ಸಿಂಗ್) ಹಾಗೂ ಶರಧಿ ಅಡ್ಕಸ್ಥಳ (ವೀಣೆ) ಸಾತ್ ನೀಡಿದರು. ಕರ್ನಾಟಕ ಶಾಸ್ತ್ರೀಯ ಸಂಗೀತದ ವಿವಿಧ ರಾಗ ತಾಳಗಳಾದ ಬಹುದಾರಿ ರಾಗ, ಆದಿತಾಳ ಶ್ರೀ ಗುರು ರಮಣ . ರಾಗ ದ್ವಿಜಾವಂತಿ, ಆದಿತಾಳ, ರಾಗ ಅಭೇರಿ, ಆದಿತಾಳ ಹೀಗೆ ವಿವಿಧ ರಾಗ ತಾಳಗಳಿಂದ ಕಲಾರಸಿಕರ ಮನಸೆಳೆಯಿತು.

ವರದಿ: ರಕ್ಷಾ ಕೋಟ್ಯಾನ್ ಮತ್ತು ಐಶ್ವರ್ಯ ಕೋಣನ, ಎಸ್‌ಡಿಎಂ ಉಜಿರೆ
ಚಿತ್ರ ಕೃಪೆ: ಭಾರತಿ ಹೆಗಡೆ ಮತ್ತು ಶಶಿಧರ ನಾಯ್ಕ, ಎಸ್‌ಡಿಎಂ ಉಜಿರೆ

click me!