ಮೈಸೂರು, ಕೊಲ್ಲೂರು, ಶೃಂಗೇರಿ, ಮಂಗಳೂರು, ಮಡಿಕೇರಿ, ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಕಳೆದ 10 ದಿನಗಳಿಂದ ನಡೆಯುತ್ತಿದ್ದ ದಸರಾ ಆಚರಣೆಗೆ ಬುಧವಾರ ತೆರೆ ಬಿದ್ದಿದೆ.
ಬೆಂಗಳೂರು (ಅ.06): ಮೈಸೂರು, ಕೊಲ್ಲೂರು, ಶೃಂಗೇರಿ, ಮಂಗಳೂರು, ಮಡಿಕೇರಿ, ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಕಳೆದ 10 ದಿನಗಳಿಂದ ನಡೆಯುತ್ತಿದ್ದ ದಸರಾ ಆಚರಣೆಗೆ ಬುಧವಾರ ತೆರೆ ಬಿದ್ದಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದ್ದ ದಸರಾ ಹಬ್ಬವನ್ನು ಈ ಬಾರಿ ಎಲ್ಲೆಡೆ ಅದ್ದೂರಿಯಾಗಿ ಆಚರಿಸಲಾಯಿತು. ಶಕ್ತಿದೇವತೆಯ ಆರಾಧನಾ ಕೇಂದ್ರ ಶೃಂಗೇರಿಯಲ್ಲಿ ಬುಧವಾರ ಶಾರದೆಗೆ ಗಜಲಕ್ಷ್ಮೇ ಅಲಂಕಾರ ಮಾಡಲಾಗಿತ್ತು. ವಿಜಯದಶಮಿ ಪ್ರಯುಕ್ತ ಬೆಳಗ್ಗೆ ವಿಜಯೋತ್ಸವ ಹಾಗೂ ಶಮಿಪೂಜೆ ನಡೆಯಿತು.
ಸಂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಉತ್ಸವಕ್ಕೆ ತೆರೆ ಬಿತ್ತು. ವಿಜಯದಶಮಿ ಪ್ರಯುಕ್ತ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಸರಸ್ವತಿ ಗುಡಿಯ ಮುಂದೆ ಬುಧವಾರ ಚಿಕ್ಕ ಕಂದಮ್ಮಗಳಿಗೆ ಅಕ್ಷರಭ್ಯಾಸ ಮಾಡಿಸಲಾಯಿತು. ಅಲ್ಲದೆ, ನವಜಾತ ಶಿಶುಗಳಿಗೆ ನವಾನ್ನ ಪ್ರಾಶನ ಮಾಡಿಸಲಾಯಿತು. ದೇವಿಗೆ ಹರಕೆಯ ರೂಪದಲ್ಲಿ ಬಂದ ಸೀರೆಗಳ ಹರಾಜು ಕೂಡ ನಡೆಸಲಾಯಿತು. ಇದೇ ವೇಳೆ, ಮಂಗಳೂರು ದಸರಾ ಪ್ರಯುಕ್ತ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಈ ಮಧ್ಯೆ, ಬನ್ನಿ ಮುಡಿಯುವ ಮೂಲಕ ಬುಧವಾರ ಧಾರವಾಡ ದಸರಾಕ್ಕೂ ತೆರೆ ಬಿತ್ತು.
ಕೊಡಚಾದ್ರಿ ಸೇರಿ ದೇಶದ 18 ಕಡೆ ಶೀಘ್ರ ರೋಪ್‌ವೇ: ಕೇಂದ್ರದಿಂದ ಟೆಂಡರ್
ಈ ಮಧ್ಯೆ, ವಿಜಯದಶಮಿ ಮತ್ತು ಶಮೀ ಪೂಜೆಯೊಂದಿಗೆ ಆದಿಚುಂಚನಗಿರಿ ಮಹಾಸಂಸ್ಥಾನಮಠದಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಬುಧವಾರ ಸಂಜೆ ತೆರೆ ಬಿತ್ತು. ಈ ಧಾರ್ಮಿಕ ಕೈಂಕರ್ಯಕ್ಕೆ ಸಹಸ್ರಾರು ಮಂದಿ ಭಕ್ತರು ಸಾಕ್ಷಿಯಾದರು. ಸಂಜೆ ಮಠದ ಆವರಣದಲ್ಲಿ ನಡೆದ ಶಮೀ ಪೂಜೆಗೂ ಮುನ್ನ ಚಿನ್ನದ ಕಿರೀಟ, ಕಂಠಿ ಹಾರ ಧರಿಸಿ ಸರ್ವಾಲಂಕೃತರಾಗಿದ್ದ ನಿರ್ಮಲಾನಂದನಾಥ ಶ್ರೀಗಳನ್ನು ಭಕ್ತರು ಪಲ್ಲಕ್ಕಿಯಲ್ಲಿ ಹೊತ್ತೊಯ್ದು ಬನ್ನಿಮರದವರೆಗೆ ಕರೆ ತಂದರು. ಬಳಿಕ, ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ಶ್ರೀಗಳು ಬಾಳೆಕಂಬವನ್ನು ಕತ್ತರಿಸುವ ಮೂಲಕ ಶಮೀ ಪೂಜೆ ನೆರವೇರಿಸಿದರು. ದಸರಾ ಪ್ರಯುಕ್ತ ಬಾಗಲಕೋಟೆಯ ಅಂಬಾಭವಾನಿ ದೇವಸ್ಥಾನದಲ್ಲಿ ದೇವಿಗೆ ಭಕ್ತರು 56 ಬಗೆಯ ನೈವೇದ್ಯ ಅರ್ಪಿಸಿದ್ದು ಗಮನ ಸೆಳೆಯಿತು. ಶಿವಮೊಗ್ಗ ದಸರಾ ಮಹೋತ್ಸವ ನಿಮಿತ್ತ ನಡೆದ ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಸಕ್ರೇಬೈಲಿನ ಸಾಗರ್ ಆನೆ ನೆರೆದಿದ್ದ ಜನರ ಮನಸೂರೆಗೊಂಡಿತು.
ವಿಜಯದಶಮಿ ನಿಮಿತ್ತ ಪಲ್ಲಕ್ಕಿ ಉತ್ಸವ: ದಸರಾ ಹಬ್ಬದ ವಿಜಯದಶಮಿ ಪ್ರಯುಕ್ತ ಇಲ್ಲಿನ ಅರವಿಂದ ನಗರದ ಹುಲಿಗೆಮ್ಮ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ಮಹಾಭಿಷೇಕ ಮಾಡಿ, ವಿವಿಧ ಹೂಗಳಿಂದ ದೇವಿಯನ್ನು ಅಲಂಕರಿಸಿ 108 ತುಪ್ಪದ ಬತ್ತಿಯಿಂದ ಉದಯಪೂಜೆ ನೆರವೇರಿಸಲಾಯಿತು. ಹುಲಿಗೆಮ್ಮದೇವಿಯವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಕೆ.ಎಚ್.ಬಿ. ಕಾಲನಿಯಲ್ಲಿರುವ ಮನ್ನಿಮಹಾಂಕಾಳಿ ದೇವಸ್ಥಾನಕ್ಕೆ ಹೋಗಿ ಬನ್ನಿ ಮುಡಿಸಲಾಯಿತು. ಬಳಿಕ ಶ್ರೀದೇವಿಗೆ ಮಹಾಮಂಗಳಾರತಿ ನೆರವೇರಿಸಲಾಯತು.
ರಾಹುಲ್ ಯಾತ್ರೆಗೆ ಇಂದು ಸೋನಿಯಾ: ಪಾಂಡವಪುರದಲ್ಲಿ ಕಾಂಗ್ರೆಸ್ ನಾಯಕಿ ನಡಿಗೆ
ಸಂಜೆ 7.30ಕ್ಕೆ ಮಹಾಪೂಜೆ ನೆರವೇರಿಸುವುದರೊಂದಿಗೆ ಶರನ್ನವರಾತ್ರಿ ಉತ್ಸವ ಸಮಾರೋಪಗೊಂಡಿತು. ಕಾರ್ಯಕ್ರಮದ ಸಾನ್ನಿಧ್ಯವನ್ನು ಮಾತೋಶ್ರೀ ಅಮ್ಮನವರು ವಹಿಸಿದ್ದರು. ಎಂ.ವೈ. ತಿಮ್ಮಣ್ಣವರ, ವಿರೂಪಾಕ್ಷಿ ಚಲವಾದಿ, ಎ.ಎಫ್. ಹೆಬ್ಬಳ್ಳಿ, ಪರಶುರಾಮ ಸುಳ್ಳದ, ಯಲ್ಲಪ್ಪ ಕೊಸಗಿ, ವಿಜಯ ಆಲೂರ, ಶ್ರೀನಿವಾಸ ಬಾರಕೇರ, ಪ್ರವೀಣ ರಾಯಬಾಗಿ, ಆನಂದ ಬಾರಕೇರ, ರವೀಂದ್ರ ದಾಗಿನದಾರ, ಮಲ್ಲು ಅನಂತಪುರ, ಪ್ರವೀಣ ಶೇಠ, ಸುಮಾ ಮೆಡ್ಲೇರಿ, ಶಾರದಮ್ಮ ಕಸ್ತೂರಿ, ಗುರಮ್ಮಾ ಹೆಳವರ, ಶಾಂತಾ ಗಡಾದ, ಯೋಗಿಣಿ ಶೆಲ್ಲಿಕೇರಿ, ಲತಾ ಹಳ್ಳಿಕೇರಿ, ರತ್ನಾ ಹೆಬ್ಬಳ್ಳಿ, ರೇಖಾ ಸುಳ್ಳದ, ವಿದ್ಯಾ ದಾಗಿನದಾರ ಸೇರಿ ನೂರಾರು ಸದ್ಭಕ್ತರು ಆಗಮಿಸಿದ್ದರು.