ಕಾಸರಗೋಡು ಜಿಲ್ಲೆಯ ಪ್ರಸಿದ್ಧ ದೇವಾಲಯ ಶ್ರೀ ಅನಂತಪುರ ದೇವಾಲಯದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ಮರಿ ಮೊಸಳೆ ಮೊದಲ ಬಾರಿಗೆ ದೇವಾಲಯದ ಪ್ರಾಂಗಣವೇರಿ ಗರ್ಭಗುಡಿಯ ಹತ್ತಿರವೇ ವಿಶ್ರಾಂತಿ ಪಡೆದಿದೆ.
ಇತಿಹಾಸ ಪ್ರಸಿದ್ಧ ಸರೋವರ ಕ್ಷೇತ್ರ ಎಂದೇ ಹೆಸರುವಾಸಿಯಾಗಿರುವ ಕಾಸರಗೋಡು ಜಿಲ್ಲೆಯ ಪ್ರಸಿದ್ಧ ದೇವಾಲಯ ಶ್ರೀ ಅನಂತಪುರ ದೇವಾಲಯದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ಮರಿ ಮೊಸಳೆ ಮೊದಲ ಬಾರಿಗೆ ಸಂಜೆ ದೇವಾಲಯದ ಪ್ರಾಂಗಣವೇರಿ ಗರ್ಭಗುಡಿಯ ಹತ್ತಿರವೇ ವಿಶ್ರಾಂತಿ ಪಡೆದಿದೆ. ಈ ಸಮಯದಲ್ಲಿ ಕ್ಷೇತ್ರದ ನಡೆ (ದಾರಿ) ಮುಚ್ಚಿತ್ತು. ಸಂಜೆ ಬಂದು ಕ್ಷೇತ್ರದ ನಡೆ ತೆರೆದ ದೇವಾಲಯದ ಅರ್ಚಕರಿಗೆ ಈ ಪುಣ್ಯ ದೃಶ್ಯ ಗೋಚರವಾಗಿದ್ದು, ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಭಕ್ತಿ, ಭಾವುಕತೆಯಿಂದ ಹಂಚಿದ್ದಾರೆ.
ಈ ಹಿಂದೆ 2022ರ ಅಕ್ಟೋಬರ್ 9ರಂದು ಬಬಿಯಾ ಮೊಸಳೆ ನಿಧನವಾಗಿತ್ತು. ಬಬಿಯಾ ಹರಿ ಪಾದ ಸೇರಿದ ನಂತರ ಕಾರಣಿಕ ಎಂಬಂತೆ ಮರಿ ಮೊಸಳೆ ಪ್ರತ್ಯಕ್ಷವಾಗಿತ್ತು. ಆದರೆ ಈಗ ಸ್ಪಷ್ಟವಾಗಿ ದೇವಾಲಯದ ಗರ್ಭಗುಡಿ ಸಮೀಪವೇ ಪ್ರತ್ಯಕ್ಷವಾಗಿ ತನ್ನ ಇರುವಿಕೆಯನ್ನು ಸ್ಪಷ್ಟಪಡಿಸಿದೆ.
ವಿಜಯಪುರ: ಬ್ರಿಟಿಷರ ವಿರುದ್ಧ ಹೋರಾಡಿದ ಸೇನಾನಿಗೆ ಬೃಹತ್ ದೇಗುಲ, ನನಸಾದ ಭಕ್ತರ ಕನಸು..!
ಮರಿ ಮೊಸಳೆ ಪತ್ಯಕ್ಷವಾಗಿದ್ದು ಹೇಗೆ?
ಕಾಞಂಗಾಡಿನಿಂದ ಬಂದ ಭಕ್ತ ಕುಟುಂಬಕ್ಕೆ ಈ ಮರಿ ಮೊಸಳೆ ಕಾಣಿಸಿಕೊಂಡಿತ್ತು. ಅವರು ನ. 07 , 2023ರಲ್ಲಿ ಅನಂತ ಪದ್ಮನಾಭನ ಸನ್ನಿಧಾನಕ್ಕೆ ಬಂದಿದ್ದರು. ಆಗ ಅವರ ಜೊತೆಗಿದ್ದ ಮಗು, ಮೊಸಳೆ ನೋಡಬೇಕೆಂದು ಹಠ ಹಿಡಿಯಿತು. ಮೊಸಳೆ ಇಲ್ಲ, ಈ ಹಿಂದೆ ಇದ್ದ ಬಬಿಯಾ ಮೊಸಳೆ ದೇವರ ಪಾದ ಎಂದು ತಾಯಿ ಸಮಾಧಾನಪಡಿಸಿದರೂ ಮಗು ಹಠ ಬಿಡಲಿಲ್ಲ. ಇದೇ ಸಂದರ್ಭದಲ್ಲಿ ಪವಾಡ ಎಂಬಂತೆ ಗುಹೆಯಿಂದ ಮೊಸಳೆ ಹೊರ ಬಂದು ದರ್ಶನ ನೀಡಿತು. ಕುಟುಂಬ ಸದಸ್ಯರು ಆ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ದೇವಸ್ಥಾನದ ಆಡಳಿತ ಮಂಡಳಿಗೆ ತೋರಿಸಿದರು. ಕೂಡಲೇ ಸರೋವರದ ಬಳಿ ಬಂದರೆ ಅದಾಗಲೇ ಮೊಸಳೆ ಮಾಯವಾಗಿತ್ತು. ಮೊಸಳೆಯನ್ನು ಮೊದಲ ಬಾರಿ ಕಂಡ ಕುಟುಂಬ ಮತ್ತೆ ಬಂದಾಗ ಅವರಿಗೆ ಮತ್ತೆ ಮೊಸಳೆಯ ದರ್ಶನವಾಯಿತು. ಆ ಮೂಲಕ ನೆರೆದಿದ್ದ ಎಲ್ಲಾ ಭಕ್ತರಿಗೂ ಮೊಸಳೆ ದರ್ಶನ ಭಾಗ್ಯ ನೀಡಿತು. ಅರ್ಚಕರು, ಆಡಳಿತ ಮಂಡಳಿ, ಭಕ್ತಾದಿಗಳು, ಸಾರ್ವಜನಿಕರು ಅಚ್ಚರಿಗೊಂಡರು. ಅಲ್ಲಿಂದ ಈ ಸರೋವರದಲ್ಲಿ ದೇವರ ರೂಪದಲ್ಲಿ ಮೊಸಳೆ ಇರುವುದು ದೃಢವಾಯ್ತು.
ದೇಗುಲಗಳನ್ನು ಆರ್‌ಟಿಐನಿಂದ ಹೊರಗಿಡಲಾಗದು: ಹೈಕೋರ್ಟ್
ಬಬಿಯಾ ಹಿನ್ನೆಲೆ: ಮಂಗಳೂರು(Mangaluru) ಗಡಿಭಾಗದ ಕಾಸರಗೋಡು(Kasaragodu) ಜಿಲ್ಲೆಯ ಕುಂಬಳೆ(Kumbale)ಯ ಅನಂತ ಪದ್ಮನಾಭ ದೇವಸ್ಥಾನ(Anantha Padmanabha Swamy Temple)ದಲ್ಲಿ ಸಸ್ಯಹಾರಿ ಮೊಸಳೆ ಎಂದೇ ಬಬಿಯಾ(Babiya) ಪ್ರಖ್ಯಾತಿ ಪಡೆದಿತ್ತು.ಕಳೆದ 70 ವರ್ಷಗಳಿಂದ ಈ ಮೊಸಳೆ(Babiya crocodile) ದೇವಸ್ಥಾನದ ಕೆರೆಯಲ್ಲಿದೆ ಎಂಬ ನಂಬಿಕೆಯಿತ್ತು. ತಿರುವನಂತಪುರಂ(Tiruvananthapuram)ನಲ್ಲಿರುವ ಅನಂತಪದ್ಮನಾಭ ಸ್ವಾಮಿಯ ಮೂಲ ಕ್ಷೇತ್ರ ಎನ್ನಲಾದ ಕುಂಬಳೆ ಅನಂತ ಪದ್ಮನಾಭ ದೇವಸ್ಥಾನದ ಕಲ್ಯಾಣಿಯಲ್ಲಿ ಬಬಿಯಾ ವಾಸವಾಗಿತ್ತು. ನಿತ್ಯ ಎರಡು ಬಾರಿ ಪೂಜೆ ಬಳಿಕ ನೈವೇದ್ಯ ಸ್ವೀಕರಿಸುತ್ತಿದ್ದ ಮೊಸಳೆ, ದೇವರ ಮೊಸಳೆ ಎಂದೇ ಪ್ರಖ್ಯಾತಿ ಪಡೆದಿತ್ತು.
ಅನಂತಪುರ ಎನ್ನುವ ವಿಶಾಲವಾದ ಪ್ರದೇಶದಲ್ಲಿ ಕೆರೆ ಮಧ್ಯೆ ಇರುವ ದೇವಸ್ಥಾನ ತುಳುನಾಡಿನ(Tulunadu) ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದು. ಇದನ್ನು ಜನರು ಸರೋವರ ಕ್ಷೇತ್ರ ಅನಂತಪುರ(Anantapura) ಎಂದೂ ಕರೆಯುತ್ತಾರೆ. ಇಲ್ಲಿ 5 ಹೆಡೆ ಸರ್ಪದ ಮೇಲೆ ಕುಳಿತ ಅನಂತಪದ್ಮನಾಭ ಸ್ವಾಮಿ ಮೂರ್ತಿ ಇದೆ.
ಹಿಂದೆ ಬ್ರಿಟಿಷರು ಈ ಜಾಗದಲ್ಲಿ ಟೆಂಟ್ ಹಾಕಿದ್ದಾಗ ಕೆರೆಯಲ್ಲಿ ಮೊಸಳೆಯನ್ನು ಕೊಲ್ಲಲು ಸಂಚು ರೂಪಿಸಿದ್ದರು. ಬಬಿಯಾ ಎಂದು ಕರೆದಾಗ ಮೊಸಳೆ ಹೊರ ಬಂದಿತ್ತು. ಆಗ ಗುಂಡು ಹಾರಿಸಿ, ಮೊಸಳೆಯನ್ನು ಕೊಂದಿದ್ದರು. ಆ ಮೊಸಳೆ ಕೊಂದ ಬ್ರಿಟಿಷ್ ಅಧಿಕಾರಿ ಸ್ವಲ್ಪ ದಿವಸಗಳಲ್ಲಿಯೇ ವಿಷ ಹಾವು ಕಚ್ಚಿ ಅಸುನೀಗಿದ್ದ ಎಂಬ ಐತಿಹ್ಯವಿದೆ.
ಅಚ್ಚರಿ ಎಂಬಂತೆ ಈ ಘಟನೆ ಬಳಿಕ ಕೆರೆಯಲ್ಲಿ ಮತ್ತೊಂದು ಮೊಸಳೆ ಕಾಣಿಸಿಕೊಂಡಿತು. ಅದಕ್ಕೆ ಅಲ್ಲಿಯ ಪೂಜಾರಿ ಬಬಿಯಾ ಎಂಬ ಹೆಸರಿನಿಂದ ಕರೆಯಲಾರಂಭಿಸಿದರು. ಮಹಾಪೂಜೆ ಆದ್ಮೇಲೆ ನೈವೇದ್ಯ ಕೊಡುವ ಸಮಯಕ್ಕೆ ಬಬಿಯಾ ಎಂದು ಕರೆದರೆ ಸುರಂಗದಿಂದ ಬಂದು ದೇವರ ಪ್ರಸಾದ ಸ್ವೀಕರಿಸುತ್ತಿತ್ತು. ಸಂಪೂರ್ಣ ಬಬಿಯಾ ಸಸ್ಯಹಾರಿಯಾಗಿತ್ತು.