ಜಿಲ್ಲೆಯ ಸಿದ್ಧಾಪುರದ ಗೋಸ್ವರ್ಗವೆಂದೇ ಖ್ಯಾತಿ ಪಡೆದಿರುವ ಭಾನ್ಕುಳಿ ಮಠದಲ್ಲಿ ಇಂದು ವಿಶೇಷ ಗೋದಿನ ಹಾಗೂ ಗೋವಿಗಾಗಿ ಆಲೆಮನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರ ಕನ್ನಡ (ಜ.13): ಜಿಲ್ಲೆಯ ಸಿದ್ಧಾಪುರದ ಗೋಸ್ವರ್ಗವೆಂದೇ ಖ್ಯಾತಿ ಪಡೆದಿರುವ ಭಾನ್ಕುಳಿ ಮಠದಲ್ಲಿ ಇಂದು ವಿಶೇಷ ಗೋದಿನ ಹಾಗೂ ಗೋವಿಗಾಗಿ ಆಲೆಮನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗೋ ಸೇವಾ ಕ್ಷೇತ್ರದಲ್ಲಿ ಮಹತ್ ಸಾಧನೆ ಮಾಡಿದವರಿಗೆ ಗೋಪಾಲ ಗೌರವ ಪ್ರಶಸ್ತಿ, ಗೋವಿಗಾಗಿ ಆಲೆಮನೆ, ಪುಸ್ತಕ ಲೋಕಾರ್ಪಣೆ ಗೋವುಗಳಿಗೆ ಪೂಜೆ, ಗೋ ಗಂಗಾರತಿಯಂತಹ ವಿಭಿನ್ನ ಕಾರ್ಯಕ್ರಮಗಳು ಗೋಸ್ವರ್ಗದಲ್ಲಿ ನಡೆದಿದ್ದು, ಸಾವಿರಾರು ಭಕ್ತರು ಭಾಗವಹಿಸಿ ಪುನೀತರಾದರು. ಈ ಕುರಿತ ಒಂದು ಸ್ಟೋರಿ ಇಲ್ಲಿದೆ. ಹೌದು! ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದ ಶ್ರೀರಾಮಚಂದ್ರಾಪುರ ಮಠ ಅಥವಾ ಬಾನ್ಕುಳಿ ಮಠವೆಂದೇ ಗುರುತಿಸಿಕೊಂಡಿರುವ ಗೋಸ್ವರ್ಗದಲ್ಲಿ ಇಂದು ಸಂಭ್ರಮದ ವಾತಾರವರಣ ನಿರ್ಮಾಣವಾಗಿತ್ತು.
undefined
ಶ್ರೀರಾಮಚಂದ್ರನಿಗೆ ಪೂಜೆ ಸಲ್ಲಿಕೆಯಾದ ಬಳಿಕ ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀರಾಮಚಂದ್ರಾಪುರ ಮಠ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಗೋ ಆಧಾರಿತ ಕೃಷಿಯಲ್ಲಿ ಸಾಧನೆ ಮಾಡಿದ ಕೆ.ಜಿ.ಅನಂತ ರಾವ್, ನಿವೃತ್ತ ಪಶುವೈದ್ಯ ಗೋಪಾಲ ಕೃಷ್ಣರಾಜ ಅರಸ್, ಗೋ ರಕ್ಷಣೆ ಮಾಡಿದ ಮಧು, ಸಿ.ವಿ.ರಮಾದೇವಿ, ದೇಸಿ ತುಪ್ಪದ ಉತ್ಪಾದಕ ಗುರುಪಾದಪ್ಪ ಶಿವಲಿಂಗಪ್ಪ ನಿಡೋಣಿ ಅವರಿಗೆ ಗೋಪಾಲ ಗೌರವ ಪ್ರಶಸ್ತಿ ನೀಡಿ ಗೌರವಿಸಿದರು. ಈ ವೇಳೆ ದಿನೇಶ್ ಸಹಾರ ಅವರಿಂದ ರಚಿಸಲ್ಪಟ್ಟ ಸನಾತನ ವಿಸಿಡಂ ಪುಸ್ತಕ ಲೋಕಾರ್ಪಣೆಗೊಂಡಿತು. ಕಾರ್ಯಕ್ರಮದ ಭಾಗವಾಗಿ ಎತ್ತುಗಳಿಂದ ಸಾಂಪ್ರದಾಯಿಕ ಶೈಲಿಯಲ್ಲಿ ಕಬ್ಬಿನ ರಸ ಸಂಗ್ರಹಿಸುವ ಆಲೆಮನೆ ವ್ಯವಸ್ಥೆಯನ್ನು ಕೂಡಾ ಇಲ್ಲಿ ಮಾಡಲಾಗಿತ್ತು.
ಮಂಡ್ಯ ಜಿಲ್ಲೆಯ 449 ಅಪಘಾತಗಳಲ್ಲಿ 456 ಮಂದಿ ಸಾವು: 2034 ಮಂದಿಗೆ ಸಣ್ಣಪುಟ್ಟ ಗಾಯ
ಬಳಿಕ ಮಾತನಾಡಿದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ, ಯಾರ್ಯಾರು ಗೋವುಗಳಿಗೋಸ್ಕರ ತಮ್ಮ ಸಮಯ, ಶ್ರಮ, ಧನ ಸಮರ್ಪಣೆ ಮಾಡ್ತಾರೋ ಅವರಂತಹ ಧನ್ಯಾತ್ಮರು ಈ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲ. ಗೋಸೇವೆ ಮಾಡಿದವರು, ಅಶ್ವಮೇಧ ಯಾಗ ಮಾಡಿದ್ದಕ್ಕಿಂತ ಹೆಚ್ಚು ಪುಣ್ಯ ಪಡೆಯುತ್ತಾರೆ. ಎಲ್ಲಿಯವರೆಗೆ ಗೋವಿನ ರಕ್ತ ಭೂಮಿಯನ್ನು ಸ್ಪರ್ಶಿಸುತ್ತದೆಯೋ ದೇಶದಲ್ಲಿ ನಡೆಯುವ ಸತ್ಕರ್ಮಗಳಿಗೆ ಪೂರ್ಣ ಫಲವಿಲ್ಲ. ಗೋವಿನ ರಕ್ತ ಭಾರತದ ಭೂಮಿಯನ್ನು ಸೋಕಬಾರದು. ಭೂಮಿ ಅಪವಿತ್ರವಾಗುತ್ತದೆ. ಗೋ ರಕ್ತ ಬೀಳುವುದು ನಿಂತಾಗ ಸತ್ಕರ್ಮದ ಫಲ ದೊರಕುತ್ತದೆ. ಪ್ರಪಂಚದಲ್ಲಿ ಎಲ್ಲದಕ್ಕೂ ಒಂದೊಂದು ದಿನಗಳಿವೆ. ದೇಶಿ ಗೋವುಗಳಿಗಾಗಿ ಒಂದು ದಿನ ಮೀಸಲಿಡಲು ಸಂಕ್ರಾಂತಿಯನ್ನೇ ಗೋ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.
ಗೋ ಸೇವೆಯೇ ದಾನ, ಧರ್ಮ, ರಾಜಸೂಯ ಯಾಗ, ವಾಜಪೇಯ ಯಾಗ. ಗೋ ಸೇವಕರು ಇಂದು ಸನ್ಮಾನ ಸ್ವೀಕರಿಸಿದ್ದಾರೆ. ಗೋ ಸೇವಕರ ಬಲ ಇಮ್ಮಡಿಗೊಂಡು ಇನ್ನಷ್ಟು ಸೇವೆ ಮಾಡುವಂತಾಗಲಿ ಎಂದು ಸ್ವಾಮೀಜಿ ಹೇಳಿದರು. ಇನ್ನು ಭಾನ್ಕುಳಿ ಮಠದ ಗೋಸ್ವರ್ಗ ಏಳು ಅದ್ಭುತಗಳಲ್ಲಿ ಒಂದು ಎಂದು ಹೇಳಿದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ, ಕಾರ್ಯಕರ್ತರ ಶ್ರಮದಾನ, ಸೇವೆಗಳಿಂದಲೇ ಇದು ನಿರ್ಮಾಣಗೊಂಡಿದೆ. ಗೋವುಗಳಿಗೆ ಸ್ವಚ್ಛಂದವಾಗಿ ಓಡಾಡಲು, ಅವುಗಳ ಕರುಗಳಿಗೆ ಸ್ವತಂತ್ರವಾಗಿ ಹಾಲುಣಿಸಲು ಇಲ್ಲಿ ವ್ಯವಸ್ಥೆಗಳಿವೆ.ಗೋ ಸ್ವರ್ಗದಲ್ಲಿ ಗೋವುಗಳನ್ನು ಖುಷಿಖುಷಿಯಾಗಿ ಇರಿಸಲಾಗುತ್ತದೆ. ಇಲ್ಲಿ ಸಾವಿರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯವಿರೋದ್ರಿಂದ ಇದು ಅದ್ಭುತ ಹೌದು. ಗೋಶಾಲೆಗಳಲ್ಲಿ ಗೋವುಗಳನ್ನು ಸಾಕಲಾಗದಾಗ ಅದಕ್ಕೆ ಸರಕಾರ ಪರ್ಯಾಯ ವ್ಯವಸ್ಥೆ ಮಾಡಬೇಕು.
ಸರಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಿದಲ್ಲಿ ಗೋ ಹತ್ಯೆಗಳು ತನ್ನಷ್ಟಕ್ಕೇ ನಿಲ್ಲುತ್ತವೆ. ಈ ಕಾರಣದಿಂದ ಗೋಶಾಲೆಗಳಿಗೆ ಸರಕಾರ ದೊಡ್ಡ ಮೊತ್ತದ ಅನುದಾನ ನೀಡಬೇಕು. ಸರಕಾರಿ ಗೋಶಾಲೆಗಳು ಕೂಡಾ ಗೋಸ್ವರ್ಗದಂತೆ ಆಗಬೇಕು ಎಂದು ಸ್ವಾಮೀಜಿ ಹೇಳಿದರು. ಈ ಸಂದರ್ಭದಲ್ಲಿ ಕಾಂತಾರ ಚಿತ್ರದ ಕಮಲಕ್ಕ ಖ್ಯಾತಿಯ ವಿದೂಷಿ ಮಾನಸಿ ಸುಧೀರ್ ತಂಡದಿಂದ ಗೋಸ್ವರ್ಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು, ತಂಡದ ನೃತ್ಯವನ್ನು ಕಂಡ ಸ್ವಾಮೀಜಿ ಸಂತೋಷದಿಂದ ಮನಸಾರೆ ಹಾರೈಸಿದರು. ನಂತರ 7 ದೇವತೆಗಳನ್ನು ಆಹ್ವಾನೆ ಮಾಡಿದ ಸಪ್ತಸನ್ನಿಧಿಯಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಗೋ ಗಂಗಾರತಿ ಪೂಜೆ ನಡೆಯಿತು. ಸಾವಿರಾರು ಭಕ್ತಾಧಿಗಳು ಈ ಗಂಗಾರತಿಯಲ್ಲಿ ಪಾಲ್ಗೊಂಡು ಪುನೀತರಾದರು.
ಅಂದಹಾಗೆ, ಭಾನ್ಕುಳಿ ಮಠದ ಗೋಸ್ವರ್ಗದಲ್ಲಿ ಗೋವುಗಳಿಗಾಗಿ ಒಂದು ಪ್ರಪಂಚವೇ ನಿರ್ಮಾಣವಾಗಿದೆ. ಇಲ್ಲಿ ಗಿರ್, ಹಳ್ಳಿಕಾರು, ಬರ್ಗೂರು, ಓಂಗೋಲ್, ಮಲೆನಾಡು ಗಿಡ್ಡ, ದೇವಣಿ, ಅಮೃತ್ ಮಹಲ್, ಕಾಂಕ್ರೇಜ್ ನಾಗೋರಿ, ಕಾರ್‌ಪಾರ್ಕರ್, ಕೃಷ್ಣವ್ಯಾಲಿ, ಆಮ್ಲಚೇರಿ ಮುಂತಾದ ಹಲವಾರು ತಳಿಯ 650-700ಗೋವುಗಳನ್ನು ಇಲ್ಲಿ ಕಾಣಬಹುದು. ಅನಾರೋಗ್ಯ ಪೀಡಿತ ಗೋವುಗಳಿಗೆ ಪ್ರತೀಕ್ಷಾ ಶಾಲೆ, ಓಡಾಡಲು ಗೋವಿರಾಮ, ನಂದಿಶಾಲೆ, ಗರ್ಭಧಾರಣೆ ಮಾಡಿದ ಗೋವುಗಳಿಗೆ ಪ್ರಸವಶಾಲೆ ಮುಂತಾದವುಗಳನ್ನು ಇಲ್ಲಿ ವಿಶೇಷವಾಗಿ ನಿರ್ಮಿಸಲಾಗಿದೆ. ಹಿಂಡಿಗಳ ಮೂಲಕ ಗೋವುಗಳಿಗೆ ತುಲಾಭಾರ, ವಿಶೇಷ ದಿನಗಳಲ್ಲಿ ಬೆಳ್ಳಿಯ ಅಲಂಕೃತಗೊಂಡ ಗೋವುಗಳಿಗೆ ಪೂಜೆ, ರಾಮಭದ್ರ ಹಾಗೂ ಕಲ್ಯಾಣಿ ದನಗಳಿಗೆ ತೀರ್ಥ ಮಹಾಸ್ನಾನ ಸೇರಿದಂತೆ ಹಲವು ಸೇವೆಗಳು ಗೋ ಸ್ವರ್ಗದಲ್ಲಿ ನಡೆಯುತ್ತವೆ.
ಕೌಶಲ್ಯ ರಹಿತ ಶಿಕ್ಷಣ ಲಾಭದಾಯಕವಲ್ಲ: ಸಚಿವ ಅಶ್ವತ್ಥ ನಾರಾಯಣ್
ಒಟ್ಟಿನಲ್ಲಿ ಸಿದ್ಧಾಪುರ ಬಾನ್ಕುಳಿ ಮಠದ ಗೋಸ್ವರ್ಗದಲ್ಲಿ ಗೋವುಗಳಿಗಾಗಿಯೇ ಆಯೋಜಿಸಿದ ಗೋ ದಿನ ಹಾಗೂ ಗೋವುಗಳಿಗಾಗಿ ಆಲೆಮನೆ ಕಾರ್ಯಕ್ರಮ ಅತೀ ವಿಶಿಷ್ಠವಾಗಿದ್ದು, ಅಕ್ಷರಶಃ ದೇಶದಲ್ಲಿ ಮಾದರಿಯಾಗಿದೆ. ಗೋಮೂತ್ರ, ಗೋಮಯ ಹಾಗೂ ಗೋವಿನ ತುಪ್ಪದಿಂದ ಮಾಡಲ್ಪಟ್ಟ ಶುದ್ಧ ಉತ್ಪನ್ನಗಳು ಕೂಡಾ ಸಾಕಷ್ಟು ಜನರು, ರೈತರಿಗೆ ಸಹಾಯ ಮಾಡುತ್ತದೆ. ಮನಸ್ಸಿಗೆ ಹಿತ ನೀಡುವ ಸ್ವಾಮೀಜಿಯ ಆಶೀರ್ವಚನದ ಜತೆ ಇಲ್ಲಿನ ವಿವಿಧ ತಳಿಯ ಗೋ ಪ್ರಪಂಚ, ವೈವಿಧ್ಯ ಗೋಸೇವೆಗಳು, ಗೋ ಗಂಗಾರತಿ ಭಕ್ತರನ್ನು ಬೇರೆಯದ್ದೇ ಲೋಕಕ್ಕೆ ಕೊಂಡೊಯ್ಯುದರಲ್ಲಿ ಎರಡು ಮಾತಿಲ್ಲ.