Latest Videos

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಕ್ಷಣಗಣನೆ: ಇಂದು 10.15ಕ್ಕೆ ಹಂಸಲೇಖರಿಂದ ಚಾಲನೆ!

By Kannadaprabha NewsFirst Published Oct 15, 2023, 4:00 AM IST
Highlights

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಲವಕ್ಕೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಬರ, ಕಾವೇರಿ ಸಮಸ್ಯೆಯ ನಡುವೆಯೂ ನಾಡಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದ್ದು, ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿವೆ. 
 

ಅಂಶಿ ಪ್ರಸನ್ನಕುಮಾರ್

ಮೈಸೂರು (ಅ.15): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಲವಕ್ಕೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಬರ, ಕಾವೇರಿ ಸಮಸ್ಯೆಯ ನಡುವೆಯೂ ನಾಡಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದ್ದು, ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿವೆ. ಮೈಸೂರು ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಿಎಂ ಆಗಿ ಆರನೇ ದಸರಾ. ಉಸ್ತುವಾರಿ ಸಚಿವರಾಗಿ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಮೂರನೇ ದಸರಾ. ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಜಗತ್ಫಸಿದ್ಧ ನಾಡಹಬ್ಬ ಉತ್ತಮವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಸಿದ್ದರಾಮಯ್ಯ ಅವರು ಬರದ ನಡುವೆಯೂ ಸಾಕಷ್ಟು ಅನುದಾನ ನೀಡಿದ್ದಾರೆ. 

ಭಾನುವಾರ [ಅ.15] ಬೆಳಗ್ಗೆ 10.15 ರಿಂದ 10.36 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಈ ಬಾರಿಯ ದಸರೆಗೆ ಚಾಲನೆ ನೀಡುವರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಫ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ ಜೋಶಿ, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಭಗವಂತ ಖುಬಾ, ರಾಜ್ಯದ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಶಿವರಾಜ್ ತಂಗಡಗಿ, ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಮೇಯರ್ ಶಿವಕುಮಾರ್ ಭಾಗವಹಿಸುವರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸುವರು.

ನಾಯಕನಿಲ್ಲದ ಬಿಜೆಪಿ ಶಿಥಿಲವಾಗುತ್ತಿದೆ: ಆಯನೂರು ಮಂಜುನಾಥ್‌ ವ್ಯಂಗ್ಯ

ಅದೇ ದಿನ ಸಂಜೆ 7ಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ಡಾ.ಪದ್ಮಾ ಮೂರ್ತಿ ಅವರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡುವರು. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಭಾಗವಹಿಸುವರು. ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅಧ್ಯಕ್ಷತೆ ವಹಿಸುವರು.

ಮೊದಲ ದಿನದ ಕಾರ್ಯಕ್ರಮಗಳು: ಬೆಳಗ್ಗೆ 11.30ಕ್ಕೆ ಕಲಾಮಂದಿರದಲ್ಲಿ ಚಲನಚಿತ್ರೋತ್ಸವ, ಮಧ್ಯಾಹ್ನ 12.30ಕ್ಕೆ ಕುಪ್ಪಣ್ಣ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನವನ್ನು ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಮಧ್ಯಾಹ್ನ 1ಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಹಾರ ಮೇಳವನ್ನು ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಸಂಜೆ

4ಕ್ಕೆ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿ, ಸಂಜೆ 5ಕ್ಕೆ ದೊಡ್ಡಕೆರೆ ಮೈದಾನದಲ್ಲಿ ವಸ್ತು ಪ್ರದರ್ಶನವನ್ನು ಸಿಎಂ ಸಿದ್ದರಾಮಯ್ಯ, ಸಂಜೆ 5ಕ್ಕೆ ಮೈವಿವಿ ಓವೆಲ್ ಮೈದಾನದಲ್ಲಿ ಕನ್ನಡ ಪುಸ್ತಕ ಮೇಳಕ್ಕೆ, 5.30ಕ್ಕೆ ಕಲಾಮಂದಿರದಲ್ಲಿ ರಾಜ್ಯಮಟ್ಟದ ಶಿಲ್ಪ, ಚಿತ್ರಕಲಾ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಸಂಜೆ 6.30ಕ್ಕೆ ಸಯ್ಯಾಜಿರಾವ್ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರವನ್ನು ಇಂಧನ ಸಚಿವ ಕೆ.ಜೆ. ಜಾರ್ಜ್ ಉದ್ಘಾಟಿಸುವರು.

ಅ.17 ರಂದು ಬೆಳಗ್ಗೆ 11.30ಕ್ಕೆ ಕಲಾಮಂದಿರದಲ್ಲಿ ಕಾವ್ಯ ಸಂಭ್ರಮ- ಹಾಸ್ಯ, ಚುಟುಕು, ಜಾನಪದವನ್ನು ಕವಿ ಜಯಂತ್ ಕಾಯ್ಕಿಣಿ, 18 ರಂದು ಬೆಳಗ್ಗೆ 11ಕ್ಕೆ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಚಿಗುರು, ಮಹಿಳಾ ಕವಿಗೋಷ್ಠಿಯನ್ನು ಕವಯತ್ರಿ ಸವಿತಾ ನಾಗಭೂಷಣ ಉದ್ಘಾಟಿಸುವರು. 19 ರಂದು ಸಂಜೆ 7ಕ್ಕೆ ಬೆಂಗಳೂರು ರಸ್ತೆ,ಯ ಕ್ಲಾಸಿಕ್ ಸಭಾಂಗಣದಲ್ಲಿ ಉರ್ದು ಕವಿಗೋಷ್ಠಿ ನಡೆಯಯಲಿದೆ. 21 ರಂದು ಬೆಳಗ್ಗೆ 11ಕ್ಕೆ ಕಲಾಮಂದಿರದಲ್ಲಿ ನಡೆಯುವ ಪ್ರಧಾನ ಕವಿಗೋಷ್ಠಿಯನ್ನು ಕವಯತ್ರಿ ಶಶಿಕಲಾ ವಸ್ತ್ರದ ಉದ್ಘಾಟಿಸುವರು.

ಇತರೆ ಕಾರ್ಯಕ್ರಮಗಳು: ಇದಲ್ಲದೇ ಗ್ರಾಮೀಣ ಯೋಗ, ರಂಗೋಲಿ ಚಿತ್ತಾರ, ಮಹಿಳಾ ದಸರಾ, ಪಾರಂಪರಿಕ ಸೈಕಲ್ ಸವಾರಿ, ಕರಕುಶಲ ಪ್ರದರ್ಶನ, ಯುವ ದಸರಾ, ಪಾರಂಪರಿಕ ಟಾಂಗಾ ಸವಾರಿ, ಜೈಲು ಹಕ್ಕಿಗಳಿಗೆ ಯೋಗಾಭ್ಯಾಸ, ರೈತ ದಸರಾ, ರಾಜ್ಯ ಮಟ್ಟದ ಹಸುಗಳ ಹಾಲು ಕರೆಯುವ ಸ್ಪರ್ಧೆ, ಪಾರಂಪರಿಕ ನಡಿಗೆ, ದಸರಾ ಕ್ರೀಡಾಕೂಟ, ಯೋಗ ಚಾರಣ, ಸಾಕು ಪ್ರಾಣಿಗಳ ಪ್ರದರ್ಶನ ನಡೆಯಲಿದೆ.

24 ರಂದು ಜಂಬೂಸವಾರಿ- ಪಂಜಿನ ಕವಾಯತು: ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯು ಅ.24 ರಂದು ನಡೆಯಲಿದೆ. ಅಂದು ಮಧ್ಯಾಹ್ನ 1.46 ರಿಂದ 2.08 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದೀಧ್ವಜಕ್ಕೆ ಪೂಜೆ ಸಲ್ಲಿಸುವರು. ಸಂಜೆ 4.40 ರಿಂದ 5 ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ಸಾಗುವ ನಾಡಿನ ಅಧಿದೇವತೆ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವರು. ಡಿಸಿಎಂ ಡಿ.ಕೆ. ಶಿವಕುಮಾರ್, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸುವರು. ಅದೇ ದಿನ ಸಂಜೆ 7.30ಕ್ಕೆ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು ನಡೆಯಲಿದ್ದು. ರಾಜ್ಯಪಾಲ ಥಾವರ್ಚಂದ್ ಗೆಹ್ಲೋತ್ ಗೌರವ ವಂದನೆ ಸ್ವೀಕರಿಸುವರು. ಸಿಎಂ, ಡಿಸಿಎಂ ಮತ್ತಿತರರು ಭಾಗವಹಿಸುವರು. ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸುವರು.

ಪ್ರಧಾನಿಯೊಂದಿಗೆ ಮಾತನಾಡುವ ಶಕ್ತಿ ಕುಮಾರಸ್ವಾಮಿಗೆ ಮಾತ್ರ ಇರೋದು: ಜಿ.ಟಿ.ದೇವೆಗೌಡ

ತಾಲೀಮು: ಈಗಾಗಲೇ ಅಭಿಮನ್ಯು ನೇತೃತ್ವದ ಗಜತಂಡೆ ಅರಮನೆ ಅಂಗಳದಲ್ಲಿ ಬೀಡು ಬಿಟ್ಟಿದ್ದು, ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ರಾಜಬೀದಿಗಳಲ್ಲಿ ಗಾಂಭಿರ್ಯದಿಂದ ಹೆಜ್ಜೆ ಹಾಕುತ್ತಾ ತಾಲೀಮು ನಡೆಸುತ್ತಿವೆ. ನಗರದ ಪ್ರಮುಖ ರಸ್ತೆ, ವೃತ್ತಗಳು ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿವೆ. ಈಗಾಗಲೇ ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗುವ ಯುವ ಸಂಭ್ರಮ ಮಾನಸ ಗಂಗೋತ್ರಿಯ ಬಯಲು ರಂಗಮಂದಿರಲ್ಲಿ ಎಂಟು ದಿನಗಳ ಕಾಲ ನಡೆದು, ಮುಕ್ತಾಯವಾಗಿದೆ. ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ನಡೆಯುತ್ತಿದೆ. ರಾಜವಂಶಸ್ಥರು ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಸುವರು. ಫಲ ಪುಷ್ಪ ಪ್ರದರ್ಶನಕ್ಕೆ ಕುಪ್ಪಣ್ಣ ಉದ್ಯಾನ, ಕುಸ್ತಿ ಪಂದ್ಯಾವಳಿಗೆ ಡಿ. ದೇವರಾಜ ಅರಸು ವಿವಿಧೋದ್ದೇಸ ಕ್ರೀಡಾಂಗಣ, ವಸ್ತು ಪ್ರದರ್ಶನಕ್ಕೆ ದೊಡ್ಡಕೆರೆ ಮೈದಾನ, ಯುವದಸರಾಗೆ ಮಹಾರಾಜ ಕಾಲೇಜು ಮೈದಾನ, ಪುಸ್ತಕ ಪ್ರದರ್ಶನಕ್ಕೆ ಓವೆಲ್ ಮೈದಾನ, ಆಹಾರ ಮೇಳಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಸಜ್ಜಾಗುತ್ತಿವೆ.

click me!