Karwar Maruti Galli Jatra: ಕಾರವಾರದಲ್ಲಿ ರಂಗು ರಂಗಿನ ರಂಗೋಲಿ ಜಾತ್ರೆ

By Suvarna News  |  First Published Dec 22, 2022, 11:47 PM IST

ಕಾರವಾರದಲ್ಲಿ ವರ್ಷಂಪ್ರತಿ ನಡೆಯುವ ಮಾರುತಿ ದೇವರ ಜಾತ್ರೆ ತನ್ನ ಬಣ್ಣ, ಬಣ್ಣದ ಚಿತ್ತಾರಗಳಿಂದ ರಂಗೋಲಿ ಜಾತ್ರೆಯೆಂದೇ ಪ್ರಸಿದ್ಧಿ ಪಡೆದಿದೆ. ವರ್ಷವಿಡೀ ನಡೆಯುವಂತಹ ಬೆಳವಣಿಗೆಗಳೇ ಇಲ್ಲಿ ಚಿತ್ತಾರ ರೂಪದಲ್ಲಿ ಪ್ರಸ್ತುತವಾಗುತ್ತದೆ.


ವರದಿ: ಭರತ್‌ರಾಜ್ ಕಲ್ಲಡ್ಕ , ಏಷ್ಯಾನೆಟ್ ಸುವರ್ಣನ್ಯೂಸ್

ಉತ್ತರ ಕನ್ನಡ (ಡಿ.22): ಕಾರವಾರದಲ್ಲಿ ವರ್ಷಂಪ್ರತಿ ನಡೆಯುವ ಮಾರುತಿ ದೇವರ ಜಾತ್ರೆ ತನ್ನ ಬಣ್ಣ, ಬಣ್ಣದ ಚಿತ್ತಾರಗಳಿಂದ ರಂಗೋಲಿ ಜಾತ್ರೆಯೆಂದೇ ಪ್ರಸಿದ್ಧಿ ಪಡೆದಿದೆ. ವರ್ಷವಿಡೀ ನಡೆಯುವಂತಹ ಬೆಳವಣಿಗೆಗಳೇ ಇಲ್ಲಿ ಚಿತ್ತಾರ ರೂಪದಲ್ಲಿ ಪ್ರಸ್ತುತವಾಗುತ್ತಿದ್ದು, ಇವುಗಳನ್ನು ನೋಡಲೆಂದೇ ರಾಜ್ಯದ ವಿವಿಧ ಮೂಲೆಗಳಿಂದ ಜನರು ಇಲ್ಲಿಗೆ ಕುಟುಂಬ ಸಮೇತ ಆಗಮಿಸುತ್ತಾರೆ. ಅಲ್ಲದೇ, ಇಲ್ಲಿನ ಪ್ರತೀ ಗಲ್ಲಿ ಗಲ್ಲಿಗಳಲ್ಲಿ ಹಾಕುವ ರಂಗೋಲಿಗಳ ಜತೆ ಫೋಟೊ ತೆಗೆದುಕೊಂಡು ಸಂತೋಷ ಪಡುತ್ತಾರೆ.  

Latest Videos

undefined

ಒಂದೆಡೆ ನಟ ಪುನೀತ್‌ರಾಜ್ ಕುಮಾರ್ ಕೊನೆಯದಾಗಿ ಅಭಿನಯಿಸಿರುವ ಗಂಧದಗುಡಿ ಡಾಕ್ಯುಮೆಂಟರಿ ಚಿತ್ರದ ಪೋಸ್ಟರ್, ರಾಷ್ಟ್ರಪತಿ ದ್ರೌಪದಿ ಮುರ್ಮು, ಇನ್ನೊಂದೆಡೆ ಕಾಂತಾರ ಚಿತ್ರದ ಪಂಜುರ್ಲಿ ದೈವ, ರಿಷಬ್ ಶೆಟ್ಟಿ, ಮತ್ತೊಂದೆಡೆ ಈ ಹಿಂದೆ ಕ್ರೇಜ್ ಹುಟ್ಟಿಸಿರುವ ಕೆಜಿಎಫ್- 2 ಚಿತ್ರದ ರಾಖಿ ಭಾಯ್, ವಿಕ್ರಮ್ ಚಿತ್ರದ ರೋಲೆಕ್ಸ್ ಸೂರ್ಯ, ಪುಷ್ಪಾ ಸಿನಿಮಾದ ಅಲ್ಲು ಅರ್ಜುನ್, ಶಿವಾಜಿ ಮಹಾರಾಜರು. ಒಂದೋ..ಎರಡೋ... ನೂರಾರು ಬಣ್ಣಬಣ್ಣದ ಅದ್ಭುತ ಚಿತ್ತಾರಗಳನ್ನು ನೋಡಿದಾಗ ಇವುಗಳು ರಂಗೋಲಿಗಳೇ ಅಥವಾ ಪ್ರಿಂಟೆಡ್ ಪೋಸ್ಟರ್‌ಗಳೇ ಎಂದು ನೀವು ಕೂಡಾ ಒಮ್ಮೆಗೆ ಕನ್‌ಫ್ಯೂಸ್ ಆಗದೆ ಇರಲಾರಿರಿ. ಇವುಗಳೆಲ್ಲವೂ ಅಸಲಿಗೆ ಕಲಾವಿದರ ಕೈಯಲ್ಲಿ ಮೂಡಿಬಂದಿರುವ ರಂಗೋಲಿ ಅಂದ್ರೆ ನೀವು ನಂಬ್ಲೇಬೇಕು. ಅಷ್ಟಕ್ಕೂ ಈ ಅದ್ಭುತ ರಂಗೋಲಿಗಳು ಕಂಡುಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರದ ಮಾರುತಿಗಲ್ಲಿಯಲ್ಲಿರುವ ಮಾರುತಿ ದೇವಸ್ಥಾನದಲ್ಲಿ . ವರ್ಷಂಪ್ರತಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ.‌ 

ಎರಡು ದಿನಗಳ ಕಾಲ‌ ನಡೆಯುವ ಜಾತ್ರೆಯ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷ ಕೂಡಾ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅಪ್ಪು ಅಭಿನಯದ ಗಂಧದಗುಡಿ ಡಾಕ್ಯುಮೆಂಟರಿ ಚಿತ್ರ, ನಗುತ್ತಿರುವ ಪುನೀತ್‌ರಾಜ್ ಕುಮಾರ್, ರಾಷ್ಟ್ರಪತಿ ದ್ರೌಪದಿ ಮುರ್ಮು, ಕಾಂತಾರ ಚಿತ್ರದ ಪಂಜುರ್ಲಿ ದೈವ, ರಿಷಬ್ ಶೆಟ್ಟಿ, ಕೆಜಿಎಫ್- 2 ಚಿತ್ರದ ರಾಖಿ ಭಾಯ್, ವಿಕ್ರಮ್ ಚಿತ್ರದ ರೋಲೆಕ್ಸ್ ಸೂರ್ಯ, ಶ್ರೀರಾಮ, ಹನುಮಾನ್, ಗಣಪತಿ, ಬಾಲಕೃಷ್ಣ, ತೆಂಗಿನ ಕಾಯಿಯಲ್ಲಿ ಮೂಡಿದ ಕಲಾಕೃತಿ, ಹಾಗಲಕಾಯಿ ಹಾಗೂ ಟೊಮೊಟಾದಿಂದ ನಿರ್ಮಿಸಿದ ಓತಿಕ್ಯಾತ ಸೇರಿದಂತೆ ರಂಗೋಲಿಯಲ್ಲಿ ಮೂಡಿದ ಹಲವು ಭಾವಚಿತ್ರಗಳು, ರಂಗೋಲಿಗಳು ನೋಡುಗರ ಕಣ್ಮನ ಸೆಳೆದವು. 

Davanagere : ಕರಿಬಸವೇಶ್ವರ ಸ್ವಾಮಿಗೆ ನಾರಿಮಣಿಯರಿಂದಲೇ ರಥೋತ್ಸವ

 

ಈ ರಂಗೋಲಿ ಜಾತ್ರೆಯಲ್ಲಿ ಕೇವಲ ಖ್ಯಾತ ವ್ಯಕ್ತಿಗಳ ಭಾವಚಿತ್ರ, ವಿವಿಧ ಡಿಸೈನ್‌ಗಳು ಮಾತ್ರವಲ್ಲದೇ, ಚುಕ್ಕಿ ರಂಗೋಲಿ, ಹೂವಿನಿಂದ ಹಾಕಿದ ರಂಗೋಲಿ, ವಿವಿಧ ಧಾನ್ಯಗಳ ರಂಗೋಲಿಗಳನ್ನು ಕೂಡಾ ಪ್ರದರ್ಶಿಸಲಾಯಿತು. ಈ ಹಿಂದೆ ಮಾರುತಿ ದೇವಾಲಯದ ಜಾತ್ರೆ ವೇಳೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಮುಂದೆ ರಂಗೋಲಿ ಹಾಕಿ ದೇವರನ್ನು ಸ್ವಾಗತಿಸುತ್ತಿದ್ದರು. ಇದು ವರ್ಷದಿಂದ ವರ್ಷಕ್ಕೆ ರಂಗೋಲಿ ಸ್ಪರ್ಧೆಯಾಗಿ ಮಾರ್ಪಟ್ಟಿದ್ದು, ಪ್ರೇಕ್ಷಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸ್ಪರ್ಧೆಯ ರೀತಿ ವಿಭಿನ್ನ ಮಾದರಿಯಲ್ಲಿ ರಂಗೋಲಿಗಳನ್ನು ಹಾಕುವುದು ರೂಢಿಯಾಗಿದೆ. ಇನ್ನು ಮಾರುತಿ ಜಾತ್ರೆಯಲ್ಲಿ ರಂಗೋಲಿಗಳೇ ಆಕರ್ಷಣೆಯಾಗಿದ್ದು, ಜನರು ರಂಗೋಲಿಗಳ ವೀಕ್ಷಣೆಗೆ ಅಂತಲೇ ಹುಬ್ಬಳ್ಳಿ, ಮಂಗಳೂರು, ಧಾರವಾಡ, ಬೆಂಗಳೂರು ಮುಂತಾದೆಡೆಯಿಂದ ಆಗಮಿಸುತ್ತಾರೆ. ಅನೇಕರು ತಮ್ಮ ಮೊಬೈಲ್‌ಗಳಲ್ಲಿ ರಂಗೋಲಿಗಳ ಫೊಟೋಗಳನ್ನು ಸೆರೆಹಿಡಿಯುವ ಮೂಲಕ ಹಾಗೂ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಸಂತಸಪಟ್ಟರು. 

ಬೆಳಗಾವಿ: ಕೊಕಟನೂರ ಯಲ್ಲಮ್ಮದೇವಿ ಜಾತ್ರೆ, ಹರಕೆ ತೀರಿಸಿದ ಭಕ್ತರು

ಕಳೆದ ಬಾರಿ ಕೊರೊನಾ ಕಾರಣದಿಂದಾಗಿ ರಂಗೋಲಿ ವೀಕ್ಷಣೆಗೆ ಜನರ ಆಗಮನ ಕೊಂಚ ಕಡಿಮೆಯಾಗಿತ್ತು. ಆದರೆ, ಈ ಬಾರಿಯಂತೂ ಸಾವಿರಾರು ಮಂದಿ ಜಾತ್ರೆಯಲ್ಲಿ ಪಾಲ್ಗೊಂಡು ರಂಗೋಲಿಗಳನ್ನು ವೀಕ್ಷಿಸಿ ಖುಷಿಪಟ್ಟಿದ್ದಾರೆ. ಒಟ್ಟಿನಲ್ಲಿ ಫ್ಲಕ್ಸ್, ಪೈಂಟಿಂಗ್‌ಗಳ ದರ್ಬಾರಿನ ಮಧ್ಯೆಯೂ ನಶಿಸಿಹೋಗುತ್ತಿರುವ ರಂಗೋಲಿ ಬಿಡಿಸುವ ಕಲೆಯನ್ನು ಜಾತ್ರೆಯ ಮೂಲಕ ಉಳಿಸಿಕೊಂಡು ಬರುತ್ತಿರುವುದು ಕಾರವಾರದ ಮಾರುತಿ ಜಾತ್ರೆಯ ವಿಶೇಷತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

click me!