ವಿಶ್ವವಿಖ್ಯಾತ ಮೈಸೂರು ದಸರಾ 2022ಕ್ಕೆ ಮುಹೂರ್ತ ಫಿಕ್ಸ್, ಅದ್ಧೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದಸರಾ ಬಗ್ಗೆ ಹಲವು ಮಹತ್ವದ ನಿರ್ಣಯಗಳನ್ನ ಕೈಗೊಳ್ಳಲಾಗಿದೆ.
ಬೆಂಗಳೂರು, (ಜುಲೈ.19): ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಮೈಸೂರು ದಸರಾವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು (ಮಂಗಳವಾರ) ಸಂಜೆ ಸಭೆ ನಡೆಸಿದ್ದು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022 ಈ ಬಾರಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 26ರಿಂದ ನವರಾತ್ರಿ ಉತ್ಸವ ಆರಂಭವಾಗಲಿದೆ. ಅಕ್ಟೋಬರ್ 5ರಂದು ವಿಜಯದಶಮಿಯಂದು ಜಂಬೂಸವಾರಿ ಮೆರವಣಿಗೆ ನಡೆಯಲಿದೆ.
undefined
ದಸರಾ ಮುನ್ನ ದಶಪಥ ಯೋಜನೆ ಪೂರ್ಣ: ಸಂಸದ ಪ್ರತಾಪ್ ಸಿಂಹ
ನಾಡಹಬ್ಬ ದಸರಾ ಆಚರಣೆ ಸಂಬಂಧ ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೈಸೂರು, ಮಂಡ್ಯ ಭಾಗದ ಜನಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ಜಿಟಿ ದೇವೇಗೌಡ, ಪ್ರತಾಪ್ ಸಿಂಹ, ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ತನ್ವೀರ್ ಸೇಠ್, ಸಾರಾ ಮಹೇಶ್, ಹರ್ಷವರ್ಧನ್, ರಾಮ್ ದಾಸ್, ಪರಿಷತ್ ಸದಸ್ಯ ವಿಶ್ವನಾಥ್, ಮೈಸೂರು ಜಿಲ್ಲಾಧಿಕಾರಿ ಗೌತಮ್ ಬಗಾದಿ, ಮೈಸೂರು ಪೊಲೀಸ್ ಕಮಿಷನರ್, ಮಂಡ್ಯ ಜಿಲ್ಲಾಧಿಕಾರಿ, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ರು.
ಸಭೆ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022 ಈ ಬಾರಿ ಅದ್ದೂರಿಯಾಗಿ ಆಚರಣೆಗೆ ನಿರ್ಧರಿಸಿದ್ದೇವೆ. ಈ ಬಾರಿ ದಸರಾ ಬಗ್ಗೆ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡುತ್ತೇವೆ. ದಸರಾ ಬ್ರ್ಯಾಂಡ್ ನೇಮ್ ಆಗಬೇಕು, ವಿಶ್ವದಾದ್ಯಂತ ಪ್ರಚಾರ ಮಾಡಲಾಗುತ್ತೆ. ಸೆಪ್ಟೆಂಬರ್ 26ರಿಂದ ನವರಾತ್ರಿ ಉತ್ಸವ ಆರಂಭವಾಗಲಿದೆ. ಅಕ್ಟೋಬರ್ 5ರಂದು ವಿಜಯದಶಮಿ ಜಂಬೂಸವಾರಿ ಮೆರವಣಿಗೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಮೂಲೆ ಮೂಲೆಗಳಿಂದ ಜನರು ಆಗಮಿಸಲು ವ್ಯವಸ್ಥೆ ಮಾಡಬೇಕಿದೆ. ಗಜಪಯಣ ಮಾವುತರಿಗೆ ಗೌರವ ಕಾಣಿಕೆ ಕೊಟ್ಟು ಕಾರ್ಯಕ್ರಮ ಮಾಡಬೇಕು. ವಸ್ತು ಪ್ರದರ್ಶನ 15 ದಿನ ಮೊದಲೇ ಪ್ರಾರಂಭಕ್ಕೆ ಸೂಚಿಸಲಾಗಿದೆ. ಸ್ಥಳೀಯ ಕಲಾಕಾರರಿಗೆ ಹೆಚ್ಚಿನ ಒತ್ತು ಕೊಡಬೇಕು. ದಿವಸಕ್ಕೆ ಒಬ್ಬರಾದರೂ ಕೂಡ ರಾಷ್ಟ್ರೀಯ ಕಲಾಕಾರರನ್ನು ಮುಖ್ಯ ಆಕರ್ಷಣೆಯಾಗಿ ಕರೆಯುವ ಉದ್ದೇಶವಿದೆ. ಶ್ರೀರಂಗಪಟ್ಟಣ ಚಾಮರಾಜನಗರದಲ್ಲೂ ವೈಭವದ ದಸರಾ ಆಯೋಜಿಸಲಾಗುತ್ತೆ ಎಂದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ
ಈ ಬಾರಿ ವೈಭವದಿಂದ ದಸರಾ ಮಾಡಬೇಕು ಅಂತ ಜನಪ್ರತಿನಿಧಿಗಳು ಹೇಳಿದ್ದಾರೆ. ಮೈಸೂರು ದಸರಾ ಆಕರ್ಷಕವಾಗಿ, ಸಾಂಪ್ರದಾಯಿಕವಾಗಿ ಮಾಡುವುದಕ್ಕೆ ಹೇಳಿದ್ದಾರೆ. ಮಳೆ, ಬೆಳೆ ಚೆನ್ನಾಗಿ ಆಗಿರುವುದರಿಂದ ವೈಭವದ ದಸರಾ ಮಾಡಲಾಗುತ್ತೆ ಎಂದು ತಿಳಿಸಿದರು.
ದಸರಾ ನೆಪದಲ್ಲಿ ಅಧಿಕಾರಿಗಳು ಸಾರ್ವಜನಕರಿಂದ ದೂರ ಆಗಬಾರದು. ದಿನನಿತ್ಯದ ಜನರ ಕೆಲಸಗಳಿಗೆ ತೊಂದರೆ ಆಗದಂತೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಪ್ರತಿವರ್ಷ ಲೈಟಿಂಗ್ ಅರೇಂಜಮೆಂಟ್ ಆಯಾ ಇಲಾಖೆಗೆ ನೀಡಲಾಗಿದೆ. ಮೂಡಾದಿಂದ(MUDA) 10 ಕೋಟಿ ನೀಡಲಾಗುತ್ತಿದ್ದು ಉಳಿದ ವೆಚ್ಚಕ್ಕೆ ಸರ್ಕಾರ ಹಣ ನೀಡುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.