ಮೈಸೂರಿನಲ್ಲಿ ಚಾತುರ್ಮಾಸ ವೃತ ನಡೆಸುತ್ತಿರುವ ಪೇಜಾವರ ಮಠದ ಶ್ರೀ ವಿಶ್ವ ತೀರ್ಥ ಸ್ವಾಮೀಜಿ ಅವರು ಇಂದು ಎನ್.ಆರ್.ಕ್ಷೇತ್ರ ವ್ಯಾಪ್ತಿಯ ಕುರಿಮಂಡಿ ಗ್ರಾಮದ ದಲಿತರ ಕೇರಿಯಲ್ಲಿ ಸಂಚಾರ ಕೈಗೊಂಡು ನಿವಾಸಿಗಳಲ್ಲಿ ಪುಳಕ ಉಂಟು ಮಾಡಿದರು.
ಮೈಸೂರು (ಸೆ.26): ಮೈಸೂರಿನಲ್ಲಿ ಚಾತುರ್ಮಾಸ ವೃತ ನಡೆಸುತ್ತಿರುವ ಪೇಜಾವರ ಮಠದ ಶ್ರೀ ವಿಶ್ವ ತೀರ್ಥ ಸ್ವಾಮೀಜಿ ಅವರು ಇಂದು ಎನ್.ಆರ್.ಕ್ಷೇತ್ರ ವ್ಯಾಪ್ತಿಯ ಕುರಿಮಂಡಿ ಗ್ರಾಮದ ದಲಿತರ ಕೇರಿಯಲ್ಲಿ ಸಂಚಾರ ಕೈಗೊಂಡು ನಿವಾಸಿಗಳಲ್ಲಿ ಪುಳಕ ಉಂಟು ಮಾಡಿದರು.
ಶ್ರೀಗಳು ದಲಿತಕೇರಿಗೆ ಬರುತ್ತಿದ್ದಂತೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಈ ಬಡಾವಣೆಯಲ್ಲಿ ಮನೆ, ಓಣಿ ರಸ್ತೆಗಳುದ್ದಕ್ಕೂ ರಂಗೋಲಿ, ಭಗವಾಧ್ವಜ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಶ್ರೀಗಳು ಆಗಮಿಸುತ್ತಿದ್ದಂತೆ ಬಾಲಕರು ಬ್ಯಾಂಡ್ ವಾದನ, ಮಹಿಳೆಯರು ಪೂರ್ಣಕುಂಭ ಕಲಶಗಳಿಂದ ಸ್ವಾಗತಿಸಿದರು.
ಕೆಲವು ಮನೆಗಳಿಗೆ ತೆರಳಿದ ಶ್ರೀಗಳಿಗೆ ಅಲ್ಲಿನ ಸಂಪ್ರದಾಯದಂತೆ ಮನೆ ಮಂದಿ ಶ್ರೀಗಳ ಕಾಲಿಗೆ ನೀರೆರೆದು, ಅರಶಿನ ಕುಂಕುಮ, ಓಕುಳಿಯ ಆರತಿಗಳನ್ನು ಬೆಳಗಿ ಭಕ್ತಿಯಿಂದ ಬರಮಾಡಿಕೊಂಡು, ಫಲವಸ್ತುಗಳನ್ಬು ಅರ್ಪಿಸಿದರು. ನಂತರ ಶ್ರೀಗಳು ಮಠದಿಂದ ವತಿಯಿಂದ ಎಲ್ಲಾ ಮನೆಗಳಿಗೂ ಹಿತ್ತಾಳೆಯ ದೀಪಗಳನ್ನು ನೀಡಿ, ಅದನ್ನು ದೇವರ ಭಾವಚಿತ್ರಗಳ ಮುಂದೆ ಬೆಳಗಿ ಮಂಗಳಾರತಿ ನಡೆಸಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರಗಳನ್ನು ನೀಡುವಂತೆ ಸೂಚಿಸಿದ ಶ್ರೀಗಳು, ಹಿಂದು ಸಮಾಜದ ಅವಿಭಾಜ್ಯ ಅಂಗವಾಗಿರುವ ನಾವೆಲ್ಲ ಒಗ್ಗಟ್ಟಿನಿಂದಿರಬೇಕು, ಇದೇ ಹಿಂದು ಸಮಾಜದ ಶಕ್ತಿಯಾಗಿದೆ ಎಂದರು.