ಗುರುವಿನ ಪಾದದಲ್ಲೇ ತೀರ್ಥ ಕ್ಷೇತ್ರ ದರ್ಶನ, ಭಾರತ ಪ್ರದಕ್ಷಿಣೆ ಇದು!

By Suvarna News  |  First Published Jul 8, 2023, 4:03 PM IST

ಶೃಂಗೇರಿಯಲ್ಲಿಯೇ ಮಠ ಸ್ಥಾಪಿಸಲು ಶಂಕರಾಚಾರ್ಯರಿಗೆ ಸ್ಪ್ಱೂತಿ ನೀಡಿದ ಘಟನೆ ಏನು? ಕಿಗ್ಗದಲ್ಲಿ ನೆಲೆಯಾಗಿರೋ ಋಷ್ಯಶೃಂಗ್ಯರ ಕಥೆ ಗೊತ್ತಾ? ಚಾರ್‌ಧಾಮ್‌ನಲ್ಲಿ ಒಂದಾದ ರಾಮೇಶ್ವರಂ ವಿಶೇಷತೆ ಏನು? 


- ಸೌಮ್ಯಾ ಹೇಮಂತ್, ಏಷ್ಯಾನೆಟ್ ಸುವರ್ಣ ನ್ಯೂಸ್

ಗುರುವಿನ ಪಾದದಲ್ಲೆ ಎಲ್ಲ ಕ್ಷೇತ್ರಗಳ ತೀರ್ಥ ನೋಡುವ ಮನಸ್ಥಿತಿಯಲ್ಲಿದ್ದವಳು ನಾನು.  ಎಲ್ಲ ದೇವರನ್ನು ಏಕ ಗುರುವಿನಲ್ಲೆ ನೋಡುತ್ತಿದ್ದ ನನ್ನನ್ನು  ದೇವಸ್ಥಾನಗಳು, ತೀರ್ಥ ಕ್ಷೇತ್ರಗಳೇ ಸೆಳೆದಿದ್ದೇ ಇಲ್ಲ. ಧ್ಯಾನಕ್ಕೆ ಗುರುವಿನ ಮೂರ್ತಿ, ಪೂಜೆಗೆ ಗುರುವಿನ ಪಾದ, ಗುರುವಿನ ವಾಕ್ಯವೇ ಪರಿಪಾಲನೆ ಮಂತ್ರ, ಅಂತಿಮ ಗುರಿಯಾದ ಮೋಕ್ಷಕ್ಕೆ ಗುರುವಿನ ಕೃಪೆ ಬೇಕು. ಹೀಗೆ ಜೀವನದ ಗುರಿ ಒಂದೆ ಆಗಿತ್ತು. ಒಟ್ಟಾರೆ ಗುರುವೇ ಪ್ರಪಂಚವಾಗಿದ್ದ ದಿನಗಳವು. 

Tap to resize

Latest Videos

undefined

ಒಂದಿನ ಬಸವನಗುಡಿಯಲ್ಲಿ ಪುಸ್ತಕ ಖರೀದಿಸಲು ಹೋದಾಗ ಕಣ್ಣಿಗೆ ಬಿದ್ದಿದ್ದು ಆದಿ ಗುರು ಶಂಕರಚಾರ್ಯರ ಜೀವನ ಚರಿತ್ರೆಯನ್ನೊಳಗೊಂಡ ಚಲುವಪತಿ ಸಂಪತ್ ಕುಮಾರ್ ರಾಮಾನುಜಂ ಅವರ ಶ್ರೀಶಂಕರ ದರ್ಶನ  ಪುಸ್ತಕ. ಮನೆಗೆ ತಂದಿದ್ದಷ್ಟೆ ಗೊತ್ತು. ನಂತರದ ಎರಡು ದಿನಗಳು ಸಂಪೂರ್ಣ ಶಂಕರಮಯ. ಕೆಲವು ಪುಸ್ತಕಗಳು, ಸಿನಿಮಾಗಳು, ಸ್ಥಳಗಳು ನಮ್ಮನ್ನು ತುಂಬ ದಿನಗಳವರೆಗೂ ಕಾಡುತ್ವೆ. ಅಂತಹದ್ದೇ ಸ್ಥಿತಿ ನನಗೆ ಶಂಕರಾಚಾರ್ಯರ ಪುಸ್ತಕ ಓದಿದಾಗ ಆಯ್ತು. ಅವರ ಜೀವನ ಚರಿತ್ರೆ ತಿಳಿದ ನಂತರ ನನಗೆ, ಭಾರತ ಕೇವಲ ದೇಶವಾಗಿ ಕಾಣಲಿಲ್ಲ, ಸನಾತನದ, ಭಕ್ತಿ, ಪ್ರೇಮ ಸಂಗಮದ ತಾಯಿಯಾಗಿ ಕಂಡಳು. ಅವಳನ್ನು ಸಂಪೂರ್ಣವಾಗಿ ತಿಳಿಯಬೇಕು, ದೇಶದಾದ್ಯಂತ ಹರಡಿರುವ ನನ್ನ ಅಕ್ಕ-ತಂಗಿ, ಅಣ್ಣ ತಮ್ಮ ಬಂಧು ಬಳಗದ ಭಾರತೀಯರನ್ನು ಭೇಟಿ ಮಾಡಬೇಕು. ನನ್ನ ಶಂಕರ ಹೆಜ್ಜೆ ಇಟ್ಟ ಊರಿನ ದರ್ಶನ ಪಡೆದು ಅಲ್ಲಿ ಶಂಕರಚಾರ್ಯರ ಅಸ್ತಿತ್ವ, ನೆನಪನ್ನು ಅನುಭವಿಸಬೇಕು ಎಂಬ ಉತ್ಕಟ ಬಯಕೆಯಾಯ್ತು. 

ಭಾರತೀಯರನ್ನು ಒಗ್ಗೂಡಿಸಲು, ಸನಾತನ ಹಿಂದೂ ಧರ್ಮ ರಕ್ಷಣೆಗೆ ಮತ್ತು ಪ್ರಚಾರಕ್ಕೆ ಶಂಕರರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ರು. ಯಾವುದೇ ವ್ಯವಸ್ಥೆ ಇಲ್ಲದಿರುವಾಗಲೂ ಭಾರತವನ್ನು ಕಾಲು ನಡಿಗೆಯಲ್ಲಿ ಮೂರು ಬಾರಿ ಸುತ್ತಿ ತಮ್ಮ ಅಸ್ತಿತ್ವದ ಬೇರನ್ನು ಭದ್ರಪಡಿಸಿದ್ದದವರು ಅವರು. ಶಿಷ್ಯರನ್ನು ಒಟ್ಟು ಮಾಡಿ ದೇಶದ ನಾಲ್ಕೂ ಮೂಲೆಯಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದ್ದರು. ಭಾರತದ ಪೂರ್ವ ಭಾಗದಲ್ಲಿ ಪುರಿ ಜಗನ್ನಾಥ, ಪಶ್ಚಿಮದ ದ್ವಾರಕ ಉತ್ತರದ ಬದರಿನಾಥ್ ಮತ್ತು ದಕ್ಷಿಣದ ರಾಮೇಶ್ವರಂ ದೇವಾಲಯಗಳನ್ನು ಅಧಾರವಾಗಿಟ್ಟುಕೊಂಡು ‘ನಾಲ್ಕು ಧಾಮ’ ಅದ್ವೈತ ಬೋಧಿಸುವ ‘ನಾಲ್ಕು ಮಠ’ವನ್ನು ಸ್ಥಾಪಿಸಿದರು. ಅಲ್ಲಿಗೆ ನನ್ನ ಗುರಿ ನಿಶ್ಚಯವಾಯ್ತು. ಅವರು ಸ್ಥಾಪಿಸಿದ ನಾಲ್ಕು ಮೂಲೆಗಳ ಚಾರ್ ಧಾಮ್ ಎಂದು ಕರೆಯಲ್ಪಡುವ ದೇವಸ್ಥಾನಗಳ ಭೇಟಿಗೆ ಮನಸ್ಸು ಹತೊರೆಯತೊಡಗಿತು. 

Puri Jagannath Ratha Yatra: ಚಿಕ್ಕಮ್ಮನ ಮನೆಗೆ ಅಣ್ಣ, ತಂಗಿಯೊಡನೆ ಹೊರಡೋ ಕೃಷ್ಣ!

ಚಾರ್ ಧಾಮ್ ಪರಿಕಲ್ಪನೆಯ ಹರಿಕಾರ ಶ್ರಿ ಶಂಕರರು. 4 ಯುಗಗಳ ಪ್ರತೀಕ ಈ ಚಾರ್(4) ಧಾಮಗಳು (ಕ್ಷೇತ್ರ). ಬದರಿನಾಥ್ ಚಾರ್ ಧಾಮ್ ಮೊದಲ ಧಾಮ. ಸತ್ಯಯುಗದಲ್ಲಿ ವಿಷ್ಣು ಪಾದವನಿಟ್ಟ, ನರ- ನಾರಾಯಣರು ತಪ್ಪಸ್ಸು ಮಾಡಿದ ಸ್ಥಳವೇ ‘ಬದರಿನಾಥ’. ತ್ರೇತಾಯುಗದಲ್ಲಿ ರಾಮನಿಂದ ಪ್ರತಿಷ್ಠಾಪಿಸಲ್ಪಟ್ಟ ‘ರಾಮೇಶ್ವರಂ’ ಎರಡನೇ ಧಾಮ. ಮಥುರೆಯಲ್ಲಿ ಹುಟ್ಟಿ ಬೃಂದಾವನದಲ್ಲಿ ಬೆಳೆದು ಕಂಸನನ್ನು ಸಂಹರಿಸಿ ತಾತ ಉಗ್ರಸೇನನಿಗೆ ಮತ್ತೆ ಮಥುರೆಯ ರಾಜ್ಯಭಾರವಹಿಸಿ ದ್ವಾರಕದಲ್ಲಿ ನೆಲೆಸಿದ ಕೃಷ್ಣನ ಆಡಳಿತ ಕ್ಷೇತ್ರ ‘ದ್ವಾರಕ’ ಮೂರನೇ ಧಾಮ. ಕಲಿಯುಗದಲ್ಲಿ ಸ್ಥಾಪಿಸಲ್ಪಟ್ಟ ಧಾಮ ‘ಪುರಿ ಜಗನ್ನಾಥ’.

ಆರಂಭಿಸಿದ್ದು ಕರ್ನಾಟಕದಿಂದಲೇ:
 ಗುರಿಯೇನೋ ಗೊತ್ತಾಯ್ತು ಪ್ರಾರಂಭ ಮಾಡೋದು ಎಲ್ಲಿಂದ ಎಂಬ ಗೊಂದಲ. ಕರ್ನಾಟಕದಲ್ಲೆ ಇರುವ ದಕ್ಷಿಣಾಮ್ನಾಯಾ ಪೀಠದಿಂದ ಪ್ರಾರಂಭ ಮಾಡೋಣ ಅಂತ ನಿರ್ಧಾರ ಮಾಡ್ಡೆ. ಶಂಕರಾಚಾರ್ಯರು ತಮ್ಮ ಪೀಠವನ್ನು ಶೃಂಗೇರಿಯಲ್ಲೆ ಯಾಕೆ ಸ್ಥಾಪಿಸಿದ್ರು? ಇದರ ಹಿಂದಿನ ಮಹತ್ವ ಏನು?  ಶಂಕರರು ತಮ್ಮ ಜನ್ಮಸ್ಥಾನ ಕೇರಳದ ಕಾಲಡಿ ಬಿಟ್ಟು ತಮ್ಮ ಮುಂದಿನ ಗುರು ಗೋವಿಂದ ಭಗವತ್ಪಾದರನ್ನು ಹುಡುಕಿ ಉತ್ತರದ ನರ್ಮದಾ ನದಿ ತೀರಕ್ಕೆ ಹೊರಡ್ತಾರೆ. ಸರಿ ಸುಮಾರು 2 ಸಾವಿರ ಕಿಲೋ ಮೀಟರ್. ಮಾರ್ಗಮದ್ಯ ವಿಶ್ರಾಂತಿಗೆ ಶೃಂಗೇರಿಯಲ್ಲಿ ಉಳಿದುಕೊಳ್ಳುತ್ತಾರೆ.. ಹಾಗೆ ವಿಶ್ರಾಂತಿ ಪಡೆಯುವ ಒಂದು ದಿನ ಅವರ ಕಣ್ಣಿಗೆ ಪ್ರಸವ ವೇದನೆಯಿಂದ ಬಳಲುತ್ತಿದ್ದ ಕಪ್ಪೆಗೆ ಹಾವು ನೆರಳು ನೀಡುವುದನ್ನು ನೋಡ್ತಾರೆ. ಪ್ರಕೃತಿ ಸಹಜ ದ್ವೇಷವನ್ನು ಮರೆತು ಅನೂನ್ಯವಾಗಿರುವ ಈ  ಕ್ಷೇತ್ರ ಮಹತ್ವ ತಪೊಭೂಮಿ ಎನ್ನುವುದು ಅವರಿಗೆ ಅರಿವಾಯಿತು. ಆ ಮಹಾಮುನಿಯೇ ವಿಭಂಡಕ ಮಹರ್ಷಿಗಳು. ವಿಭಂಡಕರ ಮಗ ಋಷ್ಯಶೃಂಗ. ಹುಟ್ಟಿದಾಗ ತಲೆಯಲ್ಲಿ ಕೊಂಬು (ಶೃಂಗ) ಇದ್ದ ಕಾರಣ ಇವರಿಗೆ ಋಷ್ಯಶೃಂಗ ಎಂಬ ಹೆಸರು. ಕಟ್ಟುನಿಟ್ಟಿನ ಬ್ರಹ್ಮಚಾರಿಯಾಗಿದ್ದ ಋಷ್ಯಶೃಂಗರು ತಮ್ಮ ತಪೋಬಲದಿಂದ ರೋಮಪಾದನ ರಾಜ್ಯದಲ್ಲಿ ಉಂಟಾಗಿದ್ದ ಬರಗಾಲವನ್ನು ಮಳೆ ಬರಿಸುವ ಮೂಲಕ ನೀಗಿಸುತ್ತಾರೆ. ಮುಂದೆ ರೋಮಪಾದನ ದತ್ತು ಮಗಳು (ದಶರಥ ಮಹಾರಾಜನ ಮಗಳು) ಶಾಂತರನ್ನು ವಿವಾಹವಾಗುವ ಮೂಲಕ ಸಂಸಾರಸ್ಥರಾಗುತ್ತಾರೆ. ದಶರಥ ಮಹಾರಾಜನಿಗೆ ಪುತ್ರಕಾಮಿಷ್ಠಾ ಯಾಗ ಮಾಡಿಸಿದ್ದು ಇದೇ ಋಷ್ಯ ಶೃಂಗರು. ನಂತರ ತಮ್ಮ ಅಂತಿಮ ದಿನಗಳನ್ನು ಅವರು ಕಳೆಯುವುದು ಇದೇ ಶೃಂಗೇರಿಯ ಕಿಗ್ಗ ಅರಣ್ಯ ಪ್ರದೇಶದಲ್ಲಿ. ಅಲ್ಲಿಯೆ ಅವರು ಶಿವನನ್ನು ಕುರಿತು ತಪಸ್ಸು ಮಾಡ್ತಾರೆ. ಅತಿ ಬೇಗ ಪ್ರಸನ್ನನಾಗೋ ಬೋಲೆನಾಥನನ್ನು ನೋಡಿ ಅವಸರದಲ್ಲಿ ನಾನು ನಿನ್ನಲ್ಲಿ ಒಂದಾಗಬೇಕು ಎಂದು ಕೇಳುವ ಬದಲು ನನ್ನಲ್ಲಿ ನೀನು ಒಂದಾಗು ಎಂದು ಕೇಳ್ತಾರೆ. ಮಾತಿನ ಕಗ್ಗ (ಅರ್ಥದಿಂದ) ಅಪಾರ್ಥವಾದ ಕಾರಣ ಆ ಊರಿಗೆ ಕಗ್ಗ ಎಂಬ ಹೆಸರು ಬಂತು, ನಂತರ ಜನರ ಬಾಯಲ್ಲಿ ಕಿಗ್ಗವಾಯಿತು. ಶಿವನೇ ಇಲ್ಲಿ ಋಷ್ಯಶೃಂಗರಲ್ಲಿ ವಿಲೀನಗೊಂಡ ಎಂದು ಪುರಾಣ ಹೇಳುತ್ತೆ. ಇಂದಿಗೂ ಸಂತಾನಕ್ಕಾಗಿ, ಮಳೆಗಾಗಿ ಋಷ್ಯಶೃಂಗರನ್ನು ಪ್ರಾರ್ಥಿಸಲಾಗುತ್ತೆ. ಸುಂದರ ಪ್ರಕೃತಿ ನಡುವೆ ಇರುವ ಕಿಗ್ಗ ಶೃಂಗೇರಿಯಿಂದ ಕೇವಲ 7 ಕಿಲೋಮೀಟರ್. ಆಟೋ ವ್ಯವಸ್ಥೆ ಇದೆ. ಇನ್ನು ತುಂಗಾನದಿಯ ತೀರದಲ್ಲಿರುವ ಶೃಂಗೇರಿಗೆ ನಾವೆಲ್ಲ ಹೋಗಿರ್ತೀವಿ. ಆದ್ರೆ ಶೃಂಗೇರಿ ದಕ್ಷಿಣಾಮ್ನಾಯ ಪೀಠದ ಮೊದಲ ಗುರು ಎಲ್ಲಿಯವರು ಗೊತ್ತಾ? ಅವರು ಮಧ್ಯಭಾರತದ ಮಹಿಷ್ಮತಿಯ (ಇಂದಿನ ಮದ್ಯಪ್ರದೇಶ) ಮಂಡಾನ ಮಿಶ್ರ. ಮುಂದೆ ಇವರೇ ಸುರೇಶ್ವಾಚಾರ್ಯರಾಗಿ ದಕ್ಷಿಣ ಭಾರತದ ಪೀಠಕ್ಕೆ ಮೊದಲ ಪೀಠಾಧಿಪತಿಗಳಾಗುತ್ತಾರೆ. ಮಂಡನ ಮಿಶ್ರರ ಹೆಂಡತಿ ಉಭಯಭಾರತಿ ಶಾರದೆಯ ಅವತಾರ ಎನ್ನಲಾಗುತ್ತದೆ. ಶಂಕರಚಾರ್ಯ ಮತ್ತು ಮಂಡನಮಿಶ್ರರ ವಾದಕ್ಕೆ ಜಡ್ದ್ ಆಗಿದ್ದು ಇದೇ ಉಭಯಭಾರತಿ. ಮುಂದೆ ಅವರೇ ಶೃಂಗೇರಿ ಶಾರದೆಯಾಗಿ ನೆಲೆನಿಲ್ತಾರೆ.

ಶೃಂಗೇರಿ ಭೇಟಿಯಾಯ್ತು ಅಲ್ಲಿಂದ ನನ್ನ ಪ್ರಯಾಣ ಹೊರಟ್ಟಿದ್ದು ತ್ರೇತಯುಗದ ಮರ್ಯಾದ ಪುರುಷೋತ್ತಮ ಶ್ರೀ ರಾಮ ಸ್ಥಾಪಿಸಿದ ಲಿಂಗವಿರುವ ರಾಮೇಶ್ವರಕ್ಕೆ. 12 ಜ್ಯೋತಿರ್ಲಿಂಗಗಳಲ್ಲಿ ಒಂದಿದು. ಕರ್ನಾಟಕದ ಪಕ್ಕದ ರಾಜ್ಯ ತಮಿಳುನಾಡಿನಲ್ಲಿದೆ ರಾಮೇಶ್ವರ. ಚಾರ್ ದಾಮ್‌ಗಳಲ್ಲಿ ರಾಮೇಶ್ವರ ಪ್ರಮುಖ ಕ್ಷೇತ್ರ. ನಮ್ಮ ನೆಚ್ಚಿನ ಮಾಜಿ ದಿವಂಗತ ರಾಷ್ಟ್ರಪತಿ ಅಬ್ದುಲ್ ಕಲಾಂ ಹುಟ್ಟೂರು. ಚಾರ್ ದಾಮ್‌ಗಳಲ್ಿ ಒಂದಾದ ಕಾರಣ ದೇಶಾದಾದ್ಯಂತ ಜನರು ಇಲ್ಲಿಗೆ ವರ್ಷವಿಡಿ ಭೇಟಿ ನೀಡ್ತಾರೆ. ಇನ್ನು ಕಾಶಿಗೆ ಭೇಟಿ ನೀಡಿದವರು ರಾಮೇಶ್ವರಕ್ಕೆ ಹೋಗಬೇಕು ಎಂಬ ಪದ್ದತಿ ಇದೆ. ಕಾಶಿಯಿಂದ ಗಂಗೆ ತಂದು ರಾಮೇಶ್ವರದ ಲಿಂಗಕ್ಕೆ ಅಭಿಷೇಕ ಮಾಡಿಸುವುದರಿಂದ ಮುಕ್ತಿ ಸಿಗುತ್ತದೆ ಎಂದು ನಂಬಿಕೆ ಇದೆ. ಹಲವು ಅಚ್ಚರಿ ಒಳಗೊಂಡಿರುವ ಕ್ಷೇತ್ರ ರಾಮೇಶ್ವರಂ. ತ್ರೇತಯುಗದ ರಾಮನೊಂದಿಗೆ ತಳುಕು ಹಾಕಿಕೊಂಡಿದೆ. ಸೀತಾನ್ವೇಷಣೆಗೆ ವಾನರ ಸೇನೆಯೊಂದಿಗೆ ಹೊರಟ ರಾಮ ಲಂಕೆಗೆ ಸೇತುವೆ ಕಟ್ಟುವುದು ಇದೇ ರಾಮೇಶ್ವರಂನ ಧನುಷ್ಕೋಟಿಯಿಂದ. ಬಂಗಾಳಕೊಲ್ಲಿ ಮತ್ತು ಹಿಂದೂ ಮಹಸಾಗರದ ಸಂಗಮವಿದು. ಧನುಷ್ಕೋಟಿಗೆ ಹೋಗುವ ಮಾರ್ಗ ಮದ್ಯದಲ್ಲಿದೆ ರಾವಣನ ತಮ್ಮ ವಿಭೀಷಣ ರಾಮನನ್ನು ಭೇಟಿ ಮಾಡಿದ ಜಾಗ. ಯುದ್ಧಕ್ಕೂ ಮೊದಲು ಇದೇ ಸ್ಥಳದಲ್ಲಿ ವಿಭೀಷಣನಿಗೆ ರಾಮ ಲಂಕೆಯ ರಾಜನನ್ನಾಗಿ ಘೋಷಿಸಿ ಪಟ್ಟಾಭಿಷೇಕ ಮಾಡ್ತಾರೆ. ಈ ಸಮುದ್ರ ದಡದಲ್ಲೇ ಅಗಸ್ತ್ಯ ಮಹರ್ಷಿಗಳು ಶತೃನಾಶಕ್ಕಾಗಿ, ಶ್ರೀರಾಮನಿಗೆ ಆದಿತ್ಯ ಹೃದಯಂ ಬೋಧಿಸುತ್ತಾರೆ. ಇಲ್ಲಿಂದ ಲಂಕಾಗೆ ಸಮುದ್ರ ಮಾರ್ಗ ಕೇವಲ 24 ಕಿಲೋ ಮೀಟರ್ಗಳಷ್ಟೆ.

ಚಾರ್ ಧಾಮ್ ಯಾತ್ರೆಯಿಂದ ಪಾಪ ನಾಶ; ಹಿಂದೂಗಳಿಗೆ ಇದು ಏಕೆ ಮಹತ್ವ?

ರಾಮೇಶ್ವರಂನಲ್ಲಿ ರಾಮನಿಂದ ಸ್ಥಾಪಿಸಲ್ಪಟ್ಟ ರಾಮೇಶ್ವರಂ ಲಿಂಗದ ಜೊತೆಗೆ ಶಂಕರಾಚಾರ್ಯರು ನೀಡಿರುವ ಸ್ಪಟಿಕ ಲಿಂಗವೂ ಇದೆ. ಅದ್ರ ದರ್ಶನ ಬೆಳಗ್ಗೆ 5 ರಿಂದ 6 ಗಂಟೆವರೆಗೂ ಮಾತ್ರ ಲಭ್ಯ. ರಾಮೇಶ್ವರಂ ದೇವಸ್ಥಾನದ ಹಿಂದಿರುವ  24 ಬಾವಿಗಳ ತೀರ್ಥಸ್ನಾನ ಕೂಡ ಅಷ್ಟೇ ಮಹತ್ವದ್ದು. ಪವಿತ್ರ ಬಾವಿಗಳ ಈ ನೀರನ್ನು ಭಕ್ತರ ಮೇಲೆ ಹಾಕಲಾಗುತ್ತೆ. ಇನ್ನು ರಾಮೇಶ್ವರಂನಲ್ಲಿ ನೋಡಲೇ ಬೇಕಾದುದ್ದು ಪಂಬನ್ ಬ್ರಿಡ್ಜ್, ಅಬ್ದುಲ್ ಕಲಾಂ ಹುಟ್ಟಿದ ಮನೆ ಮತ್ತು ಮ್ಯೂಸಿಯಂ, ಅಗ್ನಿತೀರ್ಥ, ಹನುಮಾನ್ ಮಂದಿರ, ಲಕ್ಷ್ಮಣ, ರಾಮ ಮತ್ತು ಸೀತಾ ಕುಂಡ. ಇನ್ನು ಇಲ್ಲಿ ಎಲ್ಲ ಸಮುದಾಯಗಳಿಗೆ ಸೇರಿದ ಮಠಗಳಿವೆ. ನಮ್ಮ ಅದಿಚುಂಚನಗಿರಿ ಮಠ ಕೂಡ ದೇವಸ್ಥಾನದ ಮುಖ್ಯ ರಸ್ತೆ, ಅಗ್ನಿತೀರ್ಥಕ್ಕೆ ಹೋಗುವ ದಾರಿಯಲ್ಲಿದೆ. ಇಲ್ಲಿ ಉಳಿದುಕೊಳ್ಳಲು ರೂಮ್ ಮತ್ತು ಉಪಹಾರದ ವ್ಯವಸ್ಥೆ ಇದೆ. 

ಸಮುದ್ರ ತಟದಲ್ಲಿರುವ ಕಾರಣ ರಾಮೇಶ್ವರಂನಲ್ಲಿ ಚಳಿಯ ಅನುಭವ ಕಡಿಮೆ. ಸುಂದರವಾದ ದೇವಸ್ಥಾನದ ಪ್ರಾಂಗಣ ಮನಸೂರೆಗೊಳ್ಳುತ್ತೆ. ಇಲ್ಲಿ ಸಿಗುವ ಸಮುದ್ರದ ವಸ್ತುಗಳು ಅಪರೂಪದಲ್ಲಿ ಅಪರೂಪದ್ದು. ಹೊರಗಡೆ ತಗೊಂಡ್ರೆ ಚೌಕಾಸಿ ಮಾಡಬೇಕು. ಆದ್ರೆ ಅಬ್ದುಲ್ ಕಲಾಂ ಮನೆಯ ಒಂದು ಭಾಗಕ್ಕಿರುವ ಎಂಪೊರಿಯಂನಲ್ಲಿ ಸರಿಯಾದ ಬೆಲೆಗೆ ಶಂಖ, ಮಣಿ, ಮುತ್ತು, ಹವಳಗಳು ಸಿಗುತ್ವೆ. ಇಲ್ಲಿಗೆ ಉತ್ತರ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಬರ್ತಾರೆ. ಅದ್ದರಿಂದ ಉತ್ತರ ಮತ್ತು ದಕ್ಷಿಣ ಭಾರತದ ತಿಂಡಿ ಹೋಟೆಲ್‌ಗಳಿವೆ. 6 ವರ್ಷದ ಕೆಳಗೆ ಮೊದಲ ಭೇಟಿಯಲ್ಲಿ ತಿಂದ ಆಲೂ ಪರೋಟಾ ರುಚಿ ಇಂದಿಗೂ ಮರೆತಿಲ್ಲ. ಅದು ಎಷ್ಟರ ಮಟ್ಟಿಗೆ ಪ್ರಭಾವ ಬೀರಿತ್ತು ಅಂದ್ರೆ ಇಂದು ನಾನು ರುಚಿಯಾದ ಆಲೂ ಪರೋಟಾ ಮಾಡುವ ಎಕ್ಸ್ಪರ್ಟ್ ಆಗಿದ್ದೀನಿ. ರಾಮೇಶ್ವರಂಗೆ ಹೋಗಿ ಬಂದು 5 ವರ್ಷ ಕಳೆದರೂ ನೆನಪು ಮಾತ್ರ ಹಚ್ಚ ಹಸಿರಾಗಿದೆ. ಈ ಅಂಕಣ ಬರೆಯುವ ಮೂಲಕ ಮತ್ತೊಮ್ಮೆ ರಾಮೇಶ್ವರಂಗೆ ಹೋಗಿ ಬಂದ ಅನುಭವವಾಯ್ತು.

IRCTCಯಿಂದ ಚಾರ್‌ಧಾಮ್ ಯಾತ್ರೆ ಪ್ಯಾಕೇಜ್ ಘೋಷಣೆ; ದರ ಎಷ್ಟು ಗೊತ್ತಾ?

 (ಮುಂದಿನ ಯಾತ್ರೆ ಕಾಶಿಗೆ.....ಮುಂದುವರೆಯುವುದು)
 

 

click me!