ಮಂಡ್ಯ: 20 ವರ್ಷಗಳ ಬಳಿಕ ದರ್ಶನ ನೀಡಿದ ಚಾಮುಂಡಿ ತಾಯಿ

By Girish GoudarFirst Published Jul 7, 2022, 11:00 PM IST
Highlights

*   ಮಂಡ್ಯ ಜಿಲ್ಲೆಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಜಕ್ಕನಹಳ್ಳಿ ಗ್ರಾಮದ ಚಾಮುಂಡೇಶ್ವರಿ ದೇವಾಲಯದ 
*   ಎರಡು ಸಮುದಾಯಗಳ ವೈಷಮ್ಯಕ್ಕೆ ತೆರೆ 
*  ಶಾಸಕರ ಕಾಳಜಿಯಿಂದ ಗ್ರಾಮಸ್ಥರ ಸಮ್ಮುಖದಲ್ಲೇ ನಡೆದ ಗ್ರಾಮಸಭೆ 

ವರದಿ: ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ

ಮಂಡ್ಯ(ಜು.07): ಗ್ರಾಮದ ಎರಡು ಸಮುದಾಯಗಳ ವೈಷಮ್ಯಕ್ಕೆ ಸುಮಾರು 20 ವರ್ಷಗಳಿಂದ ಬಾಗಿಲು ಮುಚ್ಚಿದ ಶ್ರೀ ಚಾಮುಂಡೇಶ್ವರಿ ದೇವಾಲಯದ ಬಾಗಿಲು ತೆಗೆದು ಪೂಜೆಗೆ ಅನುವು ಮಾಡಿಕೊಡಲಾಗಿದೆ. ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಜಕ್ಕನಹಳ್ಳಿ ಗ್ರಾಮದ ಸುಮಾರು 150ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಚೋಳರಸರ ಆಳ್ವಿಕೆಯಲ್ಲಿ ನಿರ್ಮಾಣವಾಗಿದ್ದ ಈಶ್ವರ ಹಾಗೂ ಚಾಮುಂಡೇಶ್ವರಿ ದೇವಾಲಯವು 2004ರಲ್ಲಿ ಕ್ಷುಲ್ಲಕ ಕಾರಣದಿಂದ ಬಾಗಿಲು ಮುಚ್ಚಿ ಹಾಳು ಕೊಂಪೆಯಂತಾಗಿತ್ತು. 

Latest Videos

ಗ್ರಾಮದಲ್ಲಿ ಒಕ್ಕಲಿಗ, ದಲಿತ, ಲಿಂಗಾಯಿತ, ವಿಶ್ವಕರ್ಮ, ಮಡಿವಾಳ ಹಾಗೂ ಕುಂಬಾರ ಸಮುದಾಯ ಸೇರಿದಂತೆ ಸಾವಿರಾರು ಸಂಖ್ಯೆಯ ಜನವಸತಿ ಪ್ರದೇಶವಾಗಿದ್ದು, ಬೃಹತ್ ಕೆರೆಯ ಸನಿಹದಲ್ಲೇ ನಿರ್ಮಾಣಗೊಂಡಿರುವ ಚಾಮುಂಡೇಶ್ವರಿ ದೇವಿಯನ್ನು ಗ್ರಾಮಸ್ಥರು ಯುಗಾದಿ ಹಬ್ಬದ ಹಿಂದಿನ ವಾರ ಸಂಭ್ರಮ ಸಡಗರದಿಂದ ಪೂಜಾ ಕೈಂಕರ್ಯ ನೆರವೇರಿಸಿ ಕೊಂಡ-ಬಂಡಿ ಉತ್ಸವವನ್ನು ನಡೆಸಿಕೊಂಡು ಬರುತ್ತಿದ್ದರು.

Nag Panchami: ಇಷ್ಟಾರ್ಥ ಈಡೇರ್ಬೇಕಂದ್ರೆ ನಾಗರ ಪಂಚಮಿ ಹೀಗ್ ಆಚರಿಸಿ

ಸುಮಾರು ಎರಡು ದಶಕಗಳ ಹಿಂದೆ ಗ್ರಾಮದ ದಲಿತ ಕೇರಿಗೆ ದೇವರ ಉತ್ಸವದ ಮೆರವಣಿಗೆ ಕಳುಹಿಸದೆ ಸಾಮೂಹಿಕ ಭೋಜನಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಂಘರ್ಷ ಏರ್ಪಟ್ಟು ಗ್ರಾಮದಲ್ಲಿ ಆಶಾಂತಿ ಉಂಟಾದಾಗ ಕಂದಾಯ, ಪೊಲೀಸ್ ಹಾಗೂ ಮುಜರಾಯಿ ಇಲಾಖೆ ಅಧಿಕಾರಿಗಳು ಅಂದಿನಿಂದ ಇಲ್ಲಿಯವರೆವಿಗೂ 144 ಸೆಕ್ಷನ್ ಜಾರಿಗೊಳಿಸಿ ದೇವಾಲಯದ ಬಾಗಿಲು ಮುಚ್ಚಿದ್ದರು.

ಈ ವಿಚಾರವಾಗಿ ಈ ಹಿಂದೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಶಾಂತಿ ಸಭೆ ನಡೆದರೂ ಗ್ರಾಮಸ್ಥರ ಒಗ್ಗೂಡುವಿಕೆ ಸಾಧ್ಯವಾಗದೆ ದೇವಾಲಯದ ವಿವಾದ ಮುಂದುವರೆದಿತ್ತು. ಈಗ ಈ ವಿಚಾರವಾಗಿ ಗ್ರಾಮದ ಮುಖಂಡರು ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರನ್ನು ಭೇಟಿ ಮಾಡಿ ದೇವಾಲಯದ ದುಸ್ಥಿತಿಯನ್ನು ಮನವರಿಕೆ ಮಾಡಿ ಗ್ರಾಮದ ಉಭಯ ಸಮುದಾಯಗಳನ್ನು ಒಂದೂಗೂಡಿಸಿ ದೇವಾಲಯದ ಬಾಗಿಲು ತೆರೆಸುವಂತೆ ಮಾಡಿದ ಮನವಿಗೆ ಇದೀಗ ತಾರ್ಕಿಕ ಅಂತ್ಯ ಸಿಕ್ಕಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಮುಖದಲ್ಲಿ ಶಾಂತಿ ಸಭೆ ನಡೆಸಿ ದೇವಾಲಯವನ್ನು ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.

ದೇವಾಲಯ ಪ್ರವೇಶಿಸಿದ ಭಕ್ತ ಸಮೂಹ ಚಾಮುಂಡೇಶ್ವರಿ ದೇವಿಗೆ ತೊಡಿಸಿದ್ದ ಸೀರೆ ಇಂದಿಗೂ ಕಂಗೊಳಿಸುತ್ತಿದ್ದ ವೈಭವವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು. ಕೆಲವರ ಚಿತಾವಣೆಯಿಂದ ಹತ್ತಾರು ವರ್ಷಗಳ ಕಾಲ ಗ್ರಾಮ ದೇವರಿಗೆ ಪೂಜೆ ಇಲ್ಲದೆ ಪರಿತಪಿಸಿದ ದಿನಗಳನ್ನು ಗ್ರಾಮಸ್ಥರು ನೆನೆದು ಅಸಹನೆ ವ್ಯಕ್ತಪಡಿಸಿದರು.

ಗ್ರಾಮದ ಎರಡು ಸಮುದಾಯಗಳ ನಡುವಿನ ಬಿಗುವಿನ ವಾತಾವರಣ ತಿಳಿಯಾಗಿ ಸಾಮರಸ್ಯದ ಬಾಳ್ವೆಯ ಸಂಕೇತವಾಗಿ ಹತ್ತಾರು ವರ್ಷಗಳ ಕಾಲ ಬಾಗಿಲು ಮುಚ್ಚಿದ್ದ ದೇವಾಲಯವನ್ನು ಭಕ್ತರಿಗಾಗಿ ಮುಕ್ತ ಮಾಡಲಾಗಿದೆ. ಇದು ಕಾರ್ಯಾಂಗ ಹಾಗೂ ಶಾಸಕಾಂಗದ ತೀರ್ಮಾನವಾಗಿದ್ದು, ಇದನ್ನು ಗ್ರಾಮಸ್ಥರು ಪಾಲಿಸಲು ಮುಂದಾಗಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಮನವಿ ಮಾಡಿದರು.

ಇದಕ್ಕೂ ಮುನ್ನ ಜಕ್ಕನಹಳ್ಳಿ ಗ್ರಾಮದಲ್ಲಿ ಆಯೋಜನೆಗೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಶಾಸಕರು, ಗ್ರಾಮದ ಪ್ರತಿ ಸಮುದಾಯದ ಯಜಮಾನರನ್ನು ಪ್ರತಿನಿಧಿಗಳನ್ನಾಗಿಸಿ ದೇವಾಲಯದ ಆಡಳಿತ ಮಂಡಳಿ ರಚಿಸಲಾಗುವುದು. ಇಂದು ಗ್ರಾಮ ದೇವತೆ ದೇವಾಲಯದ ಬಾಗಿಲು ತೆರೆಯಲಾಗಿದೆ. ಈ ಮೂಲಕ ಗ್ರಾಮಕ್ಕೆ ಬೆಳಕು ಮೂಡಿದೆ. ಹಳೇ ಘಟನೆಗಳನ್ನು ಮರೆತು ದೇವಾಲಯ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು. ದೇವಾಲಯದ ಪ್ರವೇಶ ಎಲ್ಲ ಸಮುದಾಯಕ್ಕೂ ಮುಕ್ತವಾಗಿರುತ್ತದೆ. ಇದರ ಹೊಣೆಗಾರಿಕೆಯನ್ನು ಸರ್ಕಾರವೇ ನಿಬಾಯಿಸುತ್ತದೆ ಎಂದರು.

ಗ್ರಾಮದ ಕೆಲವರಲ್ಲಿ ಇದ್ದ ಆತಂಕ, ತುಮುಲ ಹಾಗೂ ಸಂಶಯಗಳು ನಿವಾರಣೆಯಾಗಿವೆ. ಪೂರ್ವಜರ ಕಾಲದ ಸಂಭ್ರಮವನ್ನು ನೆನಪಿಸುವ ಪೂಜಾ ಕಾರ್ಯಗಳು ನೆರವೇರಲಿ ಎಂದು ಆಶಿಸಿದರು.

Astro Tips: ಈ ಜನ್ಮರಾಶಿಯವರನ್ನು ಅಪ್ಪಿತಪ್ಪಿಯೂ ವೈರಿಗಳಾಗಿ ಮಾಡಿಕೊಳ್ಳಬೇಡಿ!

ಬಡ ಜನರನ್ನು ಜಾತಿಯ ಹೆಸರಿನಲ್ಲಿ ಅವಮಾನಿಸುವುದು ಬೇಡ. ನಾವೆಲ್ಲರೂ ಸಮಾನತೆಯಿಂದ ಬಾಳ್ವೆ ನಡೆಸಿ ಸೋದರತ್ವದ ಭಾವನೆಯಿಂದ  ಬದುಕು ಸವೆಸೋಣ. ದೇವಾಲಯದ ಅಭಿವೃದ್ಧಿಗೆ ಇಂದೇ ಶಾಸಕರ ನಿಧಿಯಿಂದ 5 ಲಕ್ಷ ರು. ಅನುದಾನ ನೀಡುತ್ತಿದ್ದೇನೆ, ಅಗತ್ಯ ಬಿದ್ದಲ್ಲಿ ಮುಜರಾಯಿ ಇಲಾಖೆ ವತಿಯಿಂದ ಸಹ ಹಣ ಬಿಡುಗಡೆ ಮಾಡಿಸಿಕೊಡುವುದಾಗಿ ಅವರು ಇದೇ ವೇಳೆ ಭರವಸೆ ನೀಡಿದರು.

ತಹಶೀಲ್ದಾರ್ ಶ್ವೇತಾ ರವೀಂದ್ರ ಮಾತನಾಡಿ, ಶಾಸಕರ ಕಾಳಜಿಯಿಂದ ಗ್ರಾಮಸ್ಥರ ಸಮ್ಮುಖದಲ್ಲೇ ಗ್ರಾಮಸಭೆ ನಡೆದಿದೆ. ಕೆಲವರ ವಿರೋಧದಿಂದ ಸಹ ಭೋಜನ ಮತ್ತು ದೇವರ ಮೆರವಣಿಗೆ ವಿಚಾರವಾಗಿ ಸಂಘರ್ಷ ಏರ್ಪಟ್ಟು ಪುರಾತನ ದೇವಾಲಯ ಬಾಗಿಲು ಮುಚ್ಚಿತ್ತು. ಎಲ್ಲರ ಸಹಕಾರದಿಂದ ದೇವಾಲಯ ಮುಕ್ತವಾಗಿದ್ದು, ದೇವಾಲಯದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಕರೆ ನೀಡಿದರು.
 

click me!