
ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಮೇ.11): ಅದೊಂದು ವಿಶಿಷ್ಟ ಹಬ್ಬ. ಮೈ ಮೇಲೆ ಹರಿತವಾದ ಕತ್ತಿಗಳಿಂದ ಹೊಡೆದುಕೊಂಡು ರಕ್ತತರ್ಪಣೆ ಮಾಡುವ ಆ ಹಬ್ಬದಲ್ಲಿನ ಆಚರಣೆ ನೋಡಿದರೆ ಮೈ ಜುಂ ಎನ್ನುತ್ತದೆ. ಅಷ್ಟಕ್ಕೂ ಅದು ಯಾವ ಹಬ್ಬ? ಎಲ್ಲಿ ನಡೀತು? ಈ ಸ್ಟೋರಿ ನೋಡಿ. ಚಾಮರಾಜನಗರದ ರಾಮಸಮುದ್ರದಲ್ಲಿ 28 ವರ್ಷಗಳ ಬಳಿಕ ಮೊದಲ ಬಾರಿಗೆ ಚೌಡೇಶ್ವರಿ ದೇವಿಯ 47 ನೇ ವರ್ಷದ ವರ್ದಂತೋತ್ಸವ ಹಾಗು ವಿಶಿಷ್ಟ ರೀತಿಯ ಕತ್ತಿ ಹಬ್ಬ ಆಚರಿಸಲಾಯ್ತು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆಯಿಂದಲೇ ಶ್ರೀ ರಾಮಲಿಂಗೇಶ್ವರ ಹಾಗು ಚೌಡೇಶ್ಚರಿ ಅಮ್ಮನವರಿಗೆ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯಿತು. ರಾಕ್ಷಸರನ್ನು ಸಂಹಾರ ಮಾಡಿದ ಉಗ್ರ ಸ್ವರೂಪಿ ಚೌಡೇಶ್ವರಿ ದೇವಿಗೆ ರಕ್ತತರ್ಪಣೆ ಮಾಡಿ ಶಾಂತಗೊಳಿಸುವ ದ್ಯೋತಕವಾಗಿ ದೇವಾಂಗ ಸಮುದಾಯ ಈ ಹಬ್ಬ ಆಚರಿಸಿಕೊಂಡು ಬರುತ್ತಿದೆ. ನಾಲ್ಕು ದಿನಗಳ ಕಾಲ ಚೌಡೇಶ್ವರಿ ದೇವಿಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜಾ ಕೈಂಕರ್ಯಗಳೊಂದಿಗೆ ನಡೆದ ಹಬ್ಬದಲ್ಲಿ ಅಲಗು ಸೇವೆ ಪ್ರಮುಖವಾಗಿದೆ.
ಕತ್ತಿಹಬ್ಬದ ದಿನದಂದು ಬಿಳಿ ಕುದುರೆ ಮೇಲೆ ದೇವಿಯ ಕಳಶ ಇಟ್ಟು ಮೆರವಣಿಗೆ ಮಾಡಿ ನೂರಾರು ಮಂದಿ ಹರಿತವಾದ ಕತ್ತಿಗಳಿಂದ ತಮ್ಮ ಮೈಮೇಲೆ ಹೊಡೆದುಕೊಳ್ಳುತ್ತಾ ರಕ್ತ ಬರುವಂತೆ ತಮ್ಮ ದೇಹವನ್ನು ದಂಡಿಸಿಕೊಳ್ಳುತ್ತಾರೆ. ಕೆಲವರು ಖಡ್ಗಗಳ ಮೇಲೆ ಕುತ್ತಿಗೆ ಇಟ್ಟು ಅವರ ದೇಹದ ಮೇಲೆ ಇನ್ನಿತರರು ನಿಂತು ಕತ್ತಿಗಳಿಂದ ಹೊಡೆದುಕೊಳ್ಳುತ್ತಾರೆ. ಈ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.
ಕತ್ತಿ ಹಬ್ಬ ಆಚರಣೆಗೆ ಪೌರಾಣಿಕ ಹಿನ್ನಲೆಯು ಇದೆ. ದೇವಾನುದೇವತೆಗಳಿಗೆ ವಸ್ತ್ರ ತಯಾರು ಮಾಡುತ್ತಿದ್ದ ದೇವಾಂಗ ದೇವಲ ಮಹರ್ಷಿಯನ್ನು ಕೊಲ್ಲಲು ದೈತ್ಯ ರಾಕ್ಷಸರು ಮುಂದಾಗಿದ್ದಾಗ ಪಾರ್ವತಿ ದೇವಿ ಚೌಡೇಶ್ವರಿಯ ಅವತಾರವೆತ್ತಿ ರಾಕ್ಷಸರನ್ನು ಸಂಹಾರ ಮಾಡಿದಳು, ಬಳಿಕ ಉಗ್ರಸ್ವರೂಪಿಯಾಗಿದ್ದ ಚೌಡೇಶ್ವರಿಯ ಮುಂದೆ ದೇವಲ ಮಹರ್ಷಿ ಖಡ್ಗದಿಂದ ತನ್ನ ಮೈಲೆ ಮೇಲೆ ಹೊಡೆದುಕೊಂಡು ರಕ್ತ ತರ್ಪಣೆ ಮಾಡಿ ದೇವಿಯನ್ನು ಶಾಂತಗೊಳಿಸಿದರು ಎಂಬ ನಂಬಿಕೆ ಇದೆ. ಇದರ ದ್ಯೋತಕವಾಗಿ ಇಂದಿಗು ಕತ್ತಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ ಎನ್ನಲಾಗಿದೆ.
ತೀರ ಅಪರೂಪ ಎನಿಸಿದ ಈ ಕತ್ತಿ ಹಬ್ಬದಲ್ಲಿ ರಾಜ್ಯವಷ್ಟೇ ಅಲ್ಲ ನೆರೆಯ ತಮಿಳುನಾಡು, ಆಂಧ್ರ ಪ್ರದೇಶಗಳಿಂದ ಭಕ್ತರು ಪಾಲ್ಗೊಂಡು ತಮ್ಮ ಕುಲದೇವತೆ ಚೌಡೇಶ್ವರಿ ದೇವಿಗೆ ಅಲಗುಸೇವೆ ಸಲ್ಲಿಸಿದರು. ಅಲಗುಸೇವೆ ಮೇಲ್ನೋಟಕ್ಕೆ ಹಿಂಸೆಯ ಆಚರಣೆಯಂತೆ ಕಂಡರೂ ಇದು ಹಿಂಸೆಯ ಪ್ರತೀಕವಲ್ಲ, ಬದಲಿಗೆ ಅರ್ಪಣಾ ಮನೋಭಾವದಿಂದ ದೇವಿಗೆ ಸಲ್ಲಿಸುವ ಸೇವೆ ಎಂಬುದು ಇಲ್ಲಿನ ಭಕ್ತರ ಪ್ರತಿಪಾದನೆಯಾಗಿದೆ. ಹಬ್ಬದ ಪ್ರಯುಕ್ತ ದೇವಾಂಗ ಕುಲಬಾಂಧವರ ಕತ್ತಿ ಹಬ್ಬ ( ಅಲಗು ಸೇವೆ) ಮೆರೆವಣಿಗೆಯನ್ನು ರಾಮಸಮುದ್ರದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಸಲಾಯಿತು.