ವಿಶ್ವವಿಖ್ಯಾತ ದಸರಾ ಜಂಬೂಸವಾರಿಯಲ್ಲಿ ಸತತ ಮೂರು ಬಾರಿ 750 ಕೆ.ಜಿ. ಚಿನ್ನದ ಅಂಬಾರಿಯನ್ನು ಹೊತ್ತು ಹ್ಯಾಟ್ರಿಕ್ ಸಾಧಿಸಿರುವ ಅಭಿಮನ್ಯು ಆನೆಯು ಈಗ 4ನೇ ಬಾರಿಗೆ ಅಂಬಾರಿ ಹೊರಲು ಸರ್ವ ಸನ್ನದ್ಧವಾಗಿದೆ.
ಬಿ. ಶೇಖರ್ ಗೋಪಿನಾಥಂ
ಮೈಸೂರು (ಅ.23): ವಿಶ್ವವಿಖ್ಯಾತ ದಸರಾ ಜಂಬೂಸವಾರಿಯಲ್ಲಿ ಸತತ ಮೂರು ಬಾರಿ 750 ಕೆ.ಜಿ. ಚಿನ್ನದ ಅಂಬಾರಿಯನ್ನು ಹೊತ್ತು ಹ್ಯಾಟ್ರಿಕ್ ಸಾಧಿಸಿರುವ ಅಭಿಮನ್ಯು ಆನೆಯು ಈಗ 4ನೇ ಬಾರಿಗೆ ಅಂಬಾರಿ ಹೊರಲು ಸರ್ವ ಸನ್ನದ್ಧವಾಗಿದೆ. ಕೊರೋನಾ ಕಾರಣಕ್ಕಾಗಿ 2020, 2021ನೇ ಸಾಲಿನ ದಸರಾ ಜಂಬೂಸವಾರಿ ಮೈಸೂರು ಅರಮನೆ ಆವರಣಕ್ಕೆ ಸೀಮಿತವಾಗಿತ್ತು. ಹೀಗಾಗಿ, ಅಭಿಮನ್ಯು ಆನೆಯು ಅಂಬಾರಿಯನ್ನು ಹೊರುವುದು ಕೂಡ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿತ್ತು. ಕಳೆದ ವರ್ಷದ ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ ದೂರವನ್ನು ರಾಜಮಾರ್ಗದಲ್ಲಿ ಯಶಸ್ವಿಯಾಗಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿತ್ತು.
ಅಭಿಮನ್ಯು ಆನೆಯು ದಸರೆಗೆ ಆಗಮಿಸಿದ ಆರಂಭದ ಕಾಲದಲ್ಲಿ ಜಂಬೂಸವಾರಿಯಲ್ಲಿ ಕರ್ನಾಟಕ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿಯನ್ನು ಎಳೆಯುವ ಕಾರ್ಯ ನಿರ್ವಹಿಸಿ, ನಂತರ ನೌಫತ್ ಆನೆಯಾಗಿ ಮೆರವಣಿಗೆಯಲ್ಲಿ ಸಾಗುತ್ತಿತ್ತು. ಅಲ್ಲದೆ, ಶ್ರೀರಂಗಪಟ್ಟಣ ದಸರೆಯಲ್ಲಿ ಮರದ ಅಂಬಾರಿಯನ್ನು 7- 8 ವರ್ಷ ಹೊತ್ತಿರುವ ಅನುಭವ ಸಹ ಹೊಂದಿದೆ.
10 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸಿಂಹ ಸ್ವಪ್ನವಾಗಿದ್ದ ಶ್ವಾನ ಟಿಪ್ಪುವಿಗೆ ಭಾವನಾತ್ಮಕ ಬೀಳ್ಕೊಡುಗೆ!
ಕ್ಯಾಪ್ಟನ್ ಅಭಿಮನ್ಯು: ಅಭಿಮನ್ಯು ಆನೆಯನ್ನು 1977ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಕಾಡಾನೆಗಳನ್ನು ಹಿಡಿದು ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಸಾಮರ್ಥ್ಯ ಹೊಂದಿದೆ. ಈ ಆನೆಯು ಸುಮಾರು 24 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಿದ್ದು, 2015ರವರೆಗೆ ಕರ್ನಾಟಕ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿಯನ್ನು ಎಳೆಯುವ ಜವಾಬ್ದಾರಿ ನಿರ್ವಹಿಸಿತ್ತು. ಸುಮಾರು 150 ಕಾಡಾನೆಗಳನ್ನು, ಸುಮಾರು 50 ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ಅಭಿಮನ್ಯು, ಕಳೆದ 3 ವರ್ಷಗಳಿಂದ ಚಿನ್ನದ ಅಂಬಾರಿಯನ್ನು ಹೊರುವ ಕಾರ್ಯವನ್ನು ಅಚ್ಚಕಟ್ಟಾಗಿ ನಿರ್ವಹಿಸಿಕೊಂಡು ಬರುತ್ತಿದೆ. ಮತ್ತಿಗೋಡು ಆನೆ ಶಿಬಿರದಿಂದ ಬಂದಿರುವ 58 ವರ್ಷದ ಅಭಿಮನ್ಯು ಆನೆಯನ್ನು ಮಾವುತ ವಸಂತ, ಕಾವಾಡಿ ರಾಜು ಮುನ್ನಡೆಸುತ್ತಿದ್ದಾರೆ.
ಅಂಬಾರಿ ಆನೆಗಳು: ದಸರಾ ವಿಜಯದಶಮಿ ಮೆರವಣಿಗೆಯಲ್ಲಿ ಮೊದಲು ದ್ರೋಣ ಆನೆ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸುತ್ತಿತ್ತು. ದ್ರೋಣನ ನಂತರ ಬಲರಾಮ ಆನೆಯು ಸತತ 14 ವರ್ಷ ಅಂಬಾರಿ ಹೊತ್ತು ಸಾಧನೆ ಮಾಡಿತ್ತು. 2012ರಲ್ಲಿ ಬಲರಾಮ ಆನೆಗೆ ನಿಶ್ಯಕ್ತಿ ಕಾಡಿದ್ದರಿಂದ ಅರ್ಜುನ ಆನೆಗೆ ಅಂಬಾರಿ ಹೊರಿಸಲಾಯಿತು. ಒಮ್ಮೆ ವಾಪಸ್ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸತತ 8 ಬಾರಿ ಅಂಬಾರಿ ಹೊರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿತು. ಅರ್ಜುನ ಆನೆಗೆ 60 ವರ್ಷ ತುಂಬಿದ ಕಾರಣ ಅಂಬಾರಿ ಹೊರುವ ಜವಾಬ್ದಾರಿ ಅಭಿಮನ್ಯು ಆನೆ ಹೆಗಲಿದೆ ಬಂದಿದೆ. ಅಭಿಮನ್ಯು ಆನೆ ಕಳೆದ 3 ವರ್ಷದಿಂದ ಅಂಬಾರಿ ಹೊತ್ತಿದ್ದು, ಈಗ ಸತತ 4ನೇ ಬಾರಿಗೆ ಅಂಬಾರಿ ಹೊರಲು ಸಿದ್ಧವಾಗಿದೆ.
14 ಆನೆಗಳಿರುವ ಗಜಪಡೆ: ಈ ಬಾರಿ 14 ಆನೆಗಳನ್ನು ಕಾಡಿನಿಂದ ನಾಡಿಗೆ ಕರೆ ತರಲಾಗಿದ್ದು, ಗಜಪಡೆಗೆ ಎಲ್ಲಾ ರೀತಿಯ ತಾಲೀಮು ನಡೆಸಿ ಅಂತಿಮ ಹಂತದ ಜಂಬೂಸವಾರಿಗೆ ಸಿದ್ಧಗೊಳಿಸಲಾಗಿದೆ. ಅಭಿಮನ್ಯು, ಅರ್ಜುನ, ಧನಂಜಯ, ಮಹೇಂದ್ರ, ಭೀಮ, ಗೋಪಿ, ಕಂಜನ್, ಪ್ರಶಾಂತ, ಸುಗ್ರೀವ, ರೋಹಿತ್, ವರಲಕ್ಷ್ಮಿ, ವಿಜಯ, ಹಿರಣ್ಯಾ ಮತ್ತು ಲಕ್ಷ್ಮೀ ಆನೆಗಳು ಗಜಪಡೆಯಲ್ಲಿದೆ. ಈ 14 ಆನೆಗಳಲ್ಲಿ ಕೆಲವು 4- 5 ಆನೆಗಳು ಜಂಬೂಸವಾರಿಯಿಂದ ದೂರ ಉಳಿಯುವ ಸಾಧ್ಯತೆ ಇದೆ.
ಸಿಂಹವಾಹನಾಲಂಕಾರದಲ್ಲಿ ಶೃಂಗೇರಿ ಶಾರದೆ: ಸಿಂಹಾರೂಢಾ ಸಿದ್ದದಾತ್ರೀ ಅಲಂಕಾರದಲ್ಲಿ ಹೊರನಾಡಿನ ಅನ್ನಪೂಣೇಶ್ವರಿ!
ದಸರಾ ಜಂಬೂಸವಾರಿಗೆ ಗಜಪಡೆ ಎಲ್ಲಾ ರೀತಿಯ ತಾಲೀಮು ನಡೆಸಿ ಸಜ್ಜುಗೊಳಿಸಲಾಗಿದ್ದು, ಎಲ್ಲಾ ಆನೆಗಳ ಆರೋಗ್ಯವಾಗಿವೆ. ಅಭಿಮನ್ಯು ಆನೆಯು ಅಂಬಾರಿ ಹೊರಲಿದ್ದು, ಅದರ ಅಕ್ಕಪಕ್ಕದಲ್ಲಿ ಕುಮ್ಕಿಗಳಾಗಿ ವಿಜಯ ಮತ್ತು ವರಲಕ್ಷ್ಮೀ ಸಾಗಲಿವೆ. ನಿಶಾನೆ ಆನೆಯಾಗಿ ಅರ್ಜುನ ಸಾಗಲಿದ್ದು, ನೌಫತ್ ಮತ್ತು ಸಾಲಾನೆಗಳನ್ನು ಇನ್ನಷ್ಟೇ ನಿರ್ಧರಿಸಬೇಕಿದೆ. 14 ಆನೆಗಳು ಜಂಬೂಸವಾರಿಯಲ್ಲಿ ಹೋಗುವುದಿಲ್ಲ, ಕೆಲವು ಆನೆಗಳು ಬಿಡಾರದಲ್ಲಿ ಉಳಿಯಲಿವೆ.
- ಸೌರಭಕುಮಾರ್, ಡಿಸಿಎಫ್, ಮೈಸೂರು ವನ್ಯಜೀವಿ ವಿಭಾಗ