ಜಿಲ್ಲೆಯ ಶೃಂಗೇರಿ, ಹೊರನಾಡಿನ ಧಾರ್ಮಿಕ ಕ್ಷೇತ್ರಗಳಲ್ಲಿ ನವರಾತ್ರಿ ಸಂಭ್ರಮ ಮನೆಮಾಡಿದೆ. ಶೃಂಗೇರಿ, ಹೊರನಾಡಿನ ದೇವಿ ದರ್ಶನ ಪಡೆಯಲು ಭಕ್ತ ಸಾಗರವೇ ಹರಿದುಬಂದಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಅ.23): ಜಿಲ್ಲೆಯ ಶೃಂಗೇರಿ, ಹೊರನಾಡಿನ ಧಾರ್ಮಿಕ ಕ್ಷೇತ್ರಗಳಲ್ಲಿ ನವರಾತ್ರಿ ಸಂಭ್ರಮ ಮನೆಮಾಡಿದೆ. ಶೃಂಗೇರಿ, ಹೊರನಾಡಿನ ದೇವಿ ದರ್ಶನ ಪಡೆಯಲು ಭಕ್ತ ಸಾಗರವೇ ಹರಿದುಬಂದಿದೆ. ಇಂದು ಶೃಂಗೇರಿ ಶಾರದೆ ಸಿಂಹವಾಹನಾಲಂಕಾರ ಅಲಂಕಾರದಲ್ಲಿ ದರ್ಶನ ನೀಡಿದ್ರೆ , ಸಿಂಹಾರೂಢಾ ಸಿದ್ದದಾತ್ರೀ ಅಲಂಕಾರದಲ್ಲಿ ಹೊರನಾಡಿನ ಅನ್ನಪೂಣೇಶ್ವರಿ ಭಕ್ತರಿಗೆ ದರ್ಶನದ ಭಾಗ್ಯ ನೀಡಿದ್ದಳು.
ಶೃಂಗೇರಿಯಲ್ಲಿ ಭಕ್ತ ದಂಡು: ವಿದ್ಯಾಧಿದೇವತೆ ಶೃಂಗೇರಿ ಶಾರದಾಂಭೆ ನವರಾತ್ರಿ 9ನೇ ದಿನವಾದ ಇಂದು ಸಿಂಹವಾಹನವನ್ನೇರಿ ಕೈಯಲ್ಲಿ ತ್ರಿಶೂಲವನ್ನು ಧರಿಸಿ ಚಂಡ ಮುಂಡಾದಿ ದುಷ್ಟದೈತ್ಯರನ್ನು ಸಂಹರಿಸಿ , ಶಿಷ್ಟರಕ್ಷಣೆಗಾಗಿ ಆ ಜಗನ್ಮಾತೆ ಧರಿಸಿದ ಅವತಾರದಲ್ಲಿ ಭಕ್ತರನ್ನು ಅನುಗ್ರಹಿಸಿದಳು. ನವರಾತ್ರಿ ಹಬ್ಬ ಹಿನ್ನೆಲೆ ಜಿಲ್ಲೆಯ ದೇವಾಲಯಗಳು ತುಂಬಿ ತುಳುಕುತ್ತಿವೆ. ಶೃಂಗೇರಿ ಶಾರದಾಂಬೆ ದೇವಲಾಯಕ್ಕೆ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಹರಿದು ಬರುತ್ತಿದ್ದಾರೆ. ಭಕ್ತರ ಹೆಚ್ಚಿದ ಹಿನ್ನೆಲೆ ಸಾರಿಗೆ ಬಸ್‌ಗಳು ತುಂಬಿ ತುಳುಕುತ್ತಿವೆ. ಇನ್ನು ಬಸ್ಸಿನ ಕಿಟಕಿಯಲ್ಲಿ ಮಕ್ಕಳನ್ನು ಟವೆಲ್‌ನಂತೆ ಪೋಷಕರು ಹತ್ತಿಸುತ್ತಿದ್ದಾರೆ. ಬಸ್‌ನ ಕಿಟಕಿಯಿಂದ ಮಕ್ಕಳನ್ನು ಹತ್ತಿಸಿ ರಿಸರ್ವೇಶನ್ ಮಾಡುತ್ತಿದ್ದಾರೆ ಕೆಲ ಪ್ರಯಾಣಿಕರು. ಒಂದೇ ಸಾರಿಗೆ ಬಸ್‌ಗೆ ನೂರಾರು ಜನ ಮುಗಿಬಿದ್ದಿದ್ದಾರೆ.
ನವರಾತ್ರಿ ಸಂಭ್ರಮ: ಶಾರದೆಗೆ ಬ್ರಾಹ್ಮಿ ಅಲಂಕಾರ, ಅನ್ನಪೂಣೇಶ್ವರಿಗೆ ಗಜಾರೂಢಾ ಬ್ರಹ್ಮಚಾರಿಣೀ ರೂಪ
ಸಿಂಹಾರೂಢಾ ಸಿದ್ದದಾತ್ರೀ ಅಲಂಕಾರದಲ್ಲಿ ಅನ್ನಪೂಣೇಶ್ವರಿ: ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಹೊರನಾಡಿನ ಮಾತೆ ಅನ್ನಪೂರ್ಣೇಶ್ವರಿ ಸಿಂಹಾರೂಢಾ ಸಿದ್ದದಾತ್ರೀ ಅಲಂಕಾರದಲ್ಲಿ ಕಂಗೊಳಿಸಿದಳು.ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಪ್ತಶತಿ ಪಾರಾಯಣ,ವೇದ ಪಾರಾಯಣ,ಸುಂದರಕಾಂಡ ಪಾರಾಯಣ,ಕುಂಕುಮಾರ್ಚನೆ ,ಶ್ರೀ ಚಂಡಿಕಾ ಮೂಲಮಂತ್ರಹೋಮ ಹಾಗೂ ಆಯುಧ ಪೂಜೆ ಅಂಗವಾಗಿ ಶ್ರೀ ಮಠದಲ್ಲಿರುವ ಆಯುಧಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಬೆಳಿಗ್ಗೆ 8.30ಕ್ಕೆ ನಡೆದ ಪೂರ್ಣಾಹುತಿಯಲ್ಲಿ ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಪಾಲ್ಗೊಂಡರು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಮೃದಂಗ ವಿದ್ವಾನ್ ಹೆಚ್.ಎಲ್.ಶಿವಶಂಕರ ಸ್ವಾಮಿ ಮತ್ತು ತಂಡ ಮೈಸೂರು ಇವರಿಂದ ಶಾಸ್ತ್ರೀಯ ಸಂಗೀತ ಸಂಜೆ ನಾಟ್ಯಶ್ರೀ ಕಲಾ ತಂಡ ಶಿವಮೊಗ್ಗ ಇವರಿಂದ ಯಕ್ಷಗಾನ ನಡೆಯಿತು.ನಾಳೆ ವಿಜಯದಶಮಿ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ವಿಜಯೋತ್ಸವ ನಡೆಯುಲಿದ್ದು ಪೌಜಿನ ಮೆರವಣಿಗೆಯನ್ನು ನಡೆಸಲಾಗುತ್ತದೆ.