ʼಹಿಮಾಲಯದ ಮಹಾತ್ಮರ ಸನ್ನಿಧಿʼಯಿಂದ ʼಹಿಮಾಲಯ ಋಷಿಗಳ ದಿವ್ಯ ಸಂದೇಶʼದವರೆಗೆ...

By Bhavani Bhat  |  First Published Sep 21, 2024, 7:37 AM IST

ಸ್ವಾಮಿ ರಾಮ ಅವರ ಶಿಷ್ಯೆ ಗುರು ಸಕಲಮಾ ಅವರು ಬರೆದ ʼಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಕೃತಿ ಅಲೌಕಿಕ ಅನುಭವಗಳನ್ನು ಒಳಗೊಂಡಿದೆ. ಭಾನುವಾರ (ಸೆ.22) ಬಿಡುಗಡೆ ಆಗಲಿರುವ ಈ ಕೃತಿ ಎಲ್ಲರಿಗೂ ನೆಮ್ಮದಿಯ ಬದುಕಿನ ಒಳನೋಟಗಳನ್ನೂ ನೀಡುತ್ತದೆ. 


ಹಿಮಾಲಯದ ಯೋಗಿ ಸ್ವಾಮಿ ರಾಮ ಅವರ ʼಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿʼ ಕೃತಿ ಮೂರು ದಶಕಗಳ ಹಿಂದೆ ಕನ್ನಡದಲ್ಲಿ ಅನುವಾದವಾಗಿ ಪ್ರಕಟಗೊಂಡು ಕನ್ನಡ ಓದುಗರ ನಡುವೆ ಒಂದು ಬಗೆಯ ಸಂಚಲನ ಮೂಡಿಸಿತು. ಹಿಮಾಲಯದ ಯೋಗಿಗಳ ಅಪೂರ್ವ ಅನುಭವಗಳನ್ನು ಹೊಂದಿದ್ದ ಆ ಕೃತಿ ದಾಖಲೆ ಸಂಖ್ಯೆಯಲ್ಲಿ ಮಾರಾಟವಾಯಿತು. ಇಂದು ಮೂರು ದಶಕ ಬಳಿಕ ಮತ್ತೆ ಅದೇ ಬಗೆಯ ಸಂಚಲನ ಮೂಡಿಸಲು ಬರುತ್ತಿದೆ ʼಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ. ಇದನ್ನು ಬರೆದವರು ಬೇರೆ ಯಾರೂ ಅಲ್ಲ, ಅದೇ ಸ್ವಾಮಿ ರಾಮ ಅವರ ಶಿಷ್ಯೆ- ಗುರು ಸಕಲಮಾ. 

ʼಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿʼ ಕೃತಿಯನ್ನು ಓದಿದವರಿಗೆ ಯಾವ ಬಗೆಯ ರೋಮಾಂಚನ ಆಗಿತ್ತೋ, ಅಂಥದೇ ರೋಮಾಂಚನ ಈ ಕೃತಿಯನ್ನು ಓದಿದಾಗಲೂ ಆಗುತ್ತದೆ. ಹಲವು ಆಧ್ಯಾತ್ಮಿಕ, ಅಲೌಕಿಕ ಅನುಭವಗಳು ಈ ಕೃತಿಯನ್ನು ಶ್ರೀಮಂತಗೊಳಿಸಿವೆ. ಸ್ವಾಮಿ ರಾಮ ಅವರು ಸ್ವತಃ ತಮ್ಮ ಕಾಯ ತೊರೆದ ಬಳಿಕವೂ ತಮ್ಮ ಶಿಷ್ಯೆಗೆ ಕಾಣಿಸಿಕೊಂಡು ಆಶೀರ್ವಾದ ಮಾಡುತ್ತಾರೆ. ಋಷಿ ದುರ್ವಾಸರು ಕಾಣಿಸಿಕೊಂಡು ಶಿಷ್ಯರ ಕಾಯಿಲೆಯನ್ನು ಇಲ್ಲವಾಗಿಸುತ್ತಾರೆ. ಮುನಿ ಅಗಸ್ತ್ಯರು ಎದುರಾಗಿ ಆಧ್ಯಾತ್ಮಿಕ ಸಾಧನೆಯ ಹೊಸದೊಂದು ದೀಕ್ಷಾಪಥವನ್ನು ಕಾಣಿಸಿಕೊಡುತ್ತಾರೆ. ಶೃಂಗೇರಿಯ ಶಾರದಾಪೀಠದ ಗುರುಗಳ ದಿವ್ಯಾನುಗ್ರಹವೂ ಈ ಸಕಲಮಾ ಅವರ ಗುರುಪರಂಪರೆಯ ಹಿನ್ನೆಲೆಯಲ್ಲಿ ಇದೆ. ಕಾಶಿಯಲ್ಲಿ ಕಾಲಭೈರವನ ದರ್ಶನವಾಗುತ್ತದೆ. ರೇಣುಕಾಂಬಾ ದೇವಿ ಸ್ವತಃ ಮಾತಿಗೆ ಕೂರುತ್ತಾಳೆ.  

Tap to resize

Latest Videos

undefined

ಗುರು ಸಕಲಮಾ ಅವರು ಮೈಸೂರು ಗುರುಗಳು ಎಂದೇ ಹೆಸರಾದ ರಾ. ಸತ್ಯನಾರಾಯಣ ಅವರ ಶಿಷ್ಯರೂ ಹೌದು. ವಿಜಯನಗರ ಸಾಮ್ರಾಜ್ಯ ರಚನೆಗೆ ಕಾರಣಕರ್ತರಾದ ಮಹರ್ಷಿ ವಿದ್ಯಾರಣ್ಯರು ಪ್ರತಿಪಾದಿಸಿ ಶ್ರೀವಿದ್ಯಾ ಪರಂಪರೆಯ ವಾರಸುದಾರರಾಗಿದ್ದ ರಾ. ಸತ್ಯನಾರಾಯಣ ಅವರು ಸಂಗೀತ ವಿದ್ವಾಂಸ ಕೂಡ. ಇವರಲ್ಲಿ ಶ್ರೀವಿದ್ಯಾ ಶಿಷ್ಯತ್ವ ಮಾಡಿ ನಾನಾ ಬಗೆಯ ಅಲೌಕಿಕ ಅನುಭವಗಳನ್ನು ಸಕಲಮಾ ತಮ್ಮದಾಗಿಸಿಕೊಂಡವರು.

ಮೂಲತಃ ಜ್ಯೋತಿ ಎಂಬ ಹೆಸರಿನ ಗುರು ಸಕಲಮಾ, ಶಿವಮೊಗ್ಗ ಜಿಲ್ಲೆಯಲ್ಲಿ ಜನಿಸಿದವರು. ಭರತನಾಟ್ಯ ವಿದುಷಿಯಾಗಿ, ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಇಂಗ್ಲಿಷ್‌ ಸಾಹಿತ್ಯದ ಬೋಧಕರಾಗಿ ಸಾವಿರಾರು ಮಕ್ಕಳಿಗೆ ಪಾಠ ಹೇಳಿದ ಜ್ಯೋತಿ, ಯೋಗಗುರು ಪಟ್ಟಾಭಿರಾಂ ಅವರನ್ನು ಮದುವೆಯಾಗಿ ಜ್ಯೋತಿ ಪಟ್ಟಾಭಿರಾಮ್‌ ಆದರು. ಬೆಂಗಳೂರಿಗೆ ಬಂದಿದ್ದ ಸ್ವಾಮಿ ರಾಮ ಅವರ ದಿವ್ಯತ್ವಕ್ಕೆ ಶರಣಾಗಿ ಅವರ ಶಿಷ್ಯರಾದರು- ಸಾಧನೆಯ ಮೂಲಕ ಗುರು ಸಕಲಮಾ ಆದರು. ಸತ್ಯಾನಂದನಾಥರ ಶಿಷ್ಯೆಯಾಗಿ ವಿದ್ಯಾರಣ್ಯ ಪರಂಪರೆಯ ʼಶ್ರೀ ಪೂರ್ಣಶಕ್ತ್ಯಂಬಾʼ ಎಂಬ ನಾಮಧೇಯವನ್ನೂ ಪಡೆದರು. ಇಂದು ಶ್ರೀವಿದ್ಯೆಯ ಗುರುವಾಗಿ ಸಾವಿರಾರು ಶಿಷ್ಯರನ್ನು ಅನುಗ್ರಹಿಸುತ್ತಿದ್ದಾರೆ. 

ಈ ಕೃತಿ ಗುರು ಸಕಲಮಾ ಅವರ ದಿವ್ಯ ಅಧ್ಯಾತ್ಮಿಕ ಅನುಭೂತಿಗಳನ್ನು ಓದುಗರ ಮುಂದೆ ಸಾಕ್ಷಾತ್ಕರಿಸುತ್ತದೆ. ಭಾರತದ ಭವ್ಯ ಅಲೌಕಿಕ ಹಿನ್ನೆಲೆ, ಹಿಮಾಲಯದ ಋಷಿ ಪರಂಪರೆ ಹಾಗೂ ಶ್ರೀ ವಿದ್ಯಾರಣ್ಯ ಗುರು ಪರಂಪರೆಗಳು ಈ ಕೃತಿಯಲ್ಲಿ ಹೆಣಿಗೆಯಾಗಿವೆ. ಜಾತಿ ಮತ ಧರ್ಮ ಎಲ್ಲವನ್ನೂ ಮೀರಿ, ಆಧ್ಯಾತ್ಮಿಕ ಹಸಿವನ್ನು ಹೊಂದಿರುವ ಎಲ್ಲರ ದಾಹವನ್ನು ಇಂಗಿಸುವ ಅಪೂರ್ವ ಒಳನೋಟಗಳು ಇಲ್ಲಿವೆ. 

ಗಣಪತಿ ಬಪ್ಪನ ನೋಡಲು ಬಂದ ನಾಗರ: ತಿರುಪತಿ ವೀಡಿಯೋ ಸಖತ್ ವೈರಲ್
 

ಯಾರು ಓದಬೇಕು? 

ಹಿಮಭರಿತ ಹಿಮಾಲಯ ಪರ್ವತದ ತಪ್ಪಲುಗಳಿಂದ ದಕ್ಷಿಣ ಭಾರತದ ದಟ್ಟ ಕಾಡುಗಳವರೆಗೆ ಇದ್ದು ಮೂರು ದಶಕಗಳಿಂದ ಅವರು ಮಾಡಿದ ಆಧ್ಯಾತ್ಮಿಕ ಸಾಧನೆಯ ಸಾರವನ್ನು, ಅವರು ಪಡೆದ ಸಂತರ ಸಕಾಲಿಕ ಸಂದೇಶಗಳ ಮೂಲಕ ಇಂದಿನ ಅತಿ ವೇಗದ ಜಗತ್ತಿಗೆ ಸೂಕ್ತ ರೀತಿಯಲ್ಲಿ ನೀಡುವಲ್ಲಿ ಅವರು ಈ ಕೃತಿಯಲ್ಲಿ ಯಶಸ್ವಿಯಾಗಿದ್ದಾರೆ. ಇಂದಿನ ಜನತೆಯ ಜೀವನಶೈಲಿಯನ್ನು ಹೆಚ್ಚು ಬದಲಾಯಿಸದೆಯೇ ಸಾಧನೆಯನ್ನು ಕೈಗೊಂಡು ಅದರ ಮೂಲಕ ನಮ್ಮ ಮಾನಸಿಕ ಮಿತಿಗಳನ್ನು ಮೀರುವ ಹಾದಿಯನ್ನು ಅವರಿಲ್ಲಿ ನೀಡಿದ್ದಾರೆ. ಆದ್ದರಿಂದ, ನಿತ್ಯ ಜೀವನದಲ್ಲಿ ನೆಮ್ಮದಿಯಲ್ಲಿ ಬಯಸುವವರು ಈ ಕೃತಿಯನ್ನು ಓದಬೇಕಿದೆ. 

ಸೆ.22ರಂದು ಕೃತಿ ಬಿಡುಗಡೆ

ಗುರು ಸಕಲಮಾ ಅವರ ಕೃತಿ ʼಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಸೆ.22 (ಭಾನುವಾರ) ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಗಾಯನ ಸಮಾಜದಲ್ಲಿ ಬೆಳಗ್ಗೆ 10.30ಕ್ಕೆ ಬಿಡುಗಡೆಯಾಗಲಿದೆ. ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಅಹಲ್ಯಾ ಶರ್ಮ, ಜನಪ್ರಿಯ ಚಿತ್ರನಟಿ ಪ್ರಿಯಾಂಕ ಉಪೇಂದ್ರ ಕಾರ್ಯಕ್ರಮದ ಅತಿಥಿಗಳಾಗಿರುತ್ತಾರೆ.   

ಸೆಪ್ಟೆಂಬರ್ 21 ರಿಂದ 5 ರಾಶಿ ಮೇಲೆ ಲಕ್ಷ್ಮಿ ಆಶೀರ್ವಾದ, ಬುಧ ನಿಂದ ಸಂಪತ್ತಿನ ಮಳೆ ಕೈ ತುಂಬಾ ಹಣ
 

click me!