Unique Temple: ಪ್ರತಿ ವರ್ಷ ಬೆಳೆಯುತ್ತಲೇ ಇದೆ ಜಗತ್ತಿನ ಅತಿ ದೊಡ್ಡ ಶಿವಲಿಂಗ !

By Suvarna News  |  First Published Jun 7, 2023, 5:37 PM IST

ಈ ಶಿವಲಿಂಗವು ತಾನಾಗೇ ಪ್ರಕಟವಾಗಿದ್ದಷ್ಟೇ ಅಲ್ಲ, ಪ್ರತಿ ವರ್ಷ ಗಾತ್ರದಲ್ಲಿ ಬೆಳೆಯುತ್ತಲೇ ಇದೆ. ಇದು ಈಗಾಗಲೇ ಜಗತ್ತಿನ ಅತಿ ದೊಡ್ಡ ಶಿವಲಿಂಗವೆಂಬ ಖ್ಯಾತಿ ಹೊಂದಿದ್ದು, ಇನ್ನೂ ಬೆಳೆಯುತ್ತಲೇ ಇರುವ ಲಿಂಗವು ಯಾವ ಗಾತ್ರ ಮುಟ್ಟಬಹುದು ಎಂಬ ಕುತೂಹಲ ಎಲ್ಲರಲ್ಲಿದೆ. 


ಇದೊಂದು ವಿಶೇಷ ಶಿವಲಿಂಗ. ಮಹಾದೇವನ ಪವಾಡಕ್ಕೊಂದು ಉದಾಹರಣೆ ಎಂದರೂ ತಪ್ಪಿಲ್ಲ. ಏಕೆಂದರೆ ಇದು ಪ್ರತಿ ವರ್ಷ ದೊಡ್ಡದಾಗಿ ಬೆಳೆಯುತ್ತಲೇ ಇದೆ. ಈಗಾಗಲೇ ಲಿಂಗವು ನೆಲದಿಂದ 18 ಅಡಿ ಎತ್ತರ ಮುಟ್ಟಿದೆ. ಬಹಳ ಅಗಲವೂ ಇದೆ. ಪ್ರತಿ ವರ್ಷ 6-8 ಇಂಚುಗಳಷ್ಟು ಎತ್ತರ ಹೆಚ್ಚುತ್ತಿದೆ. ಹೀಗಾಗಿ, ಶಿವನು ಈ ಲಿಂಗದಲ್ಲಿ ಆಸೀನನಾಗಿರುವ ಬಗ್ಗೆ ಈ ಭಾಗದಲ್ಲಿ ಯಾರಿಗೂ ಅನುಮಾನವೇ ಇಲ್ಲ. ಹಾಗಾಗಿ, ಶಿವನ ಭಕ್ತರಿಗೆ ಇದು ನೆಚ್ಚಿನ ದೇವಾಲಯವಾಗಿದೆ. ಇಷ್ಟಕ್ಕೂ ಎಲ್ಲಿದೆಯಪ್ಪಾ ಈ ದೇವಾಲಯ, ನಮ್ಗೂ ಹೇಳಿ, ಕಣ್ತುಂಬಿಕೊಳ್ತೀವಿ ಅಂತಿದೀರಾ? ಎಲ್ಲ ವಿವರ ಕೊಡ್ತೀವಿ ಓದಿ..

ಪ್ರಪಂಚದ ಅತಿದೊಡ್ಡ ನೈಸರ್ಗಿಕ ಶಿವಲಿಂಗ ಎನಿಸಿಕೊಂಡಿರುವ ಈ ಲಿಂಗವು ಸ್ವಯಂ ಪ್ರಕಟವಾಗಿದ್ದು,  ಛತ್ತೀಸ್‌ಗಢ ರಾಜ್ಯದ ಗರಿಯಾಬಂದ್ ಜಿಲ್ಲೆಯ ಮರೋಡಾ ಗ್ರಾಮದ ಕಾಡುಗಳ ನಡುವೆ ನೆಲೆಗೊಂಡಿದೆ. ಇದೇ ಭೂತೇಶ್ವರನಾಥ ದೇವಾಲಯ. ಇದು ತೆರೆದ ಅಂಗಳದಲ್ಲಿದ್ದು, ಎದುರಿಗೆ ಬಿಳಿಯ ಬಣ್ಣದ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ದೇವಸ್ಥಾನದಲ್ಲಿ ಮಾತಾ ಪಾರ್ವತಿ, ಗಣೇಶ, ಕಾರ್ತಿಕೇಯರ ಕೆಲವು ಸುಂದರವಾದ ಪ್ರತಿಮೆಗಳಿವೆ. ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಶಿವನನ್ನು ಪೂಜಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿಗೆ ವಿವಿಧ ಸ್ಥಳಗಳಿಂದ ಬರುತ್ತಾರೆ.

Tap to resize

Latest Videos

ಹೆಚ್ಚುವ ಉದ್ದ, ಅಗಲ
ಈ ಶಿವಲಿಂಗದ ಅತ್ಯಂತ ಆಶ್ಚರ್ಯಕರ ವೈಶಿಷ್ಟ್ಯವೆಂದರೆ ಅದು ತನ್ನದೇ ಆದ ಎತ್ತರ ಮತ್ತು ಅಗಲವನ್ನು ಹೆಚ್ಚಿಸಿಕೊಳ್ಳುತ್ತಲೇ ಇರುತ್ತದೆ. ಇದು ಸುಮಾರು 18 ಅಡಿ ಎತ್ತರ ಮತ್ತು ಶಿವಲಿಂಗದ ಗೋಳಾಕಾರದ ಮೇಲ್ಮೈ ಅಗಲ ಸುಮಾರು 20 ಅಡಿ. ಈ ಬೃಹದಾಕಾರದ ಲಿಂಗದ ಹಿಂದೆ ಮತ್ತೊಂದು ಲಿಂಗವಿದ್ದು, ಅದರಲ್ಲಿ ಶಿವನ ಪೂರ್ತಿ ಕುಟುಂಬವಿದೆ ಎಂದು ನಂಬಲಾಗಿದೆ. ಈ ಲಿಂಗವು ಒಡೆದಿದ್ದು, ಅದನ್ನು ಅರ್ಧನಾರೀಶ್ವರ ಎಂದು ಭಾವಿಸಲಾಗುತ್ತದೆ.

ತೃತೀಯ ಲಿಂಗಿಗಳು ಪೂಜಿಸುವ ಈ ಶಕ್ತಿ ಮಾತೆಗೆ ಹುಂಜವೇ ವಾಹನ!

ದಂತಕತೆ
ಗ್ರಾಮಸ್ಥರ ಪ್ರಕಾರ, ಈ ಶಿವಲಿಂಗದ ಹಿಂದಿನ ಕಥೆಯೆಂದರೆ, ಹಲವಾರು ವರ್ಷಗಳ ಹಿಂದೆ ಈ ಸ್ಥಳದಲ್ಲಿ ಜಮೀನ್ದಾರ ಹೊಲವನ್ನು ಹೊಂದಿದ್ದನು ಮತ್ತು ಅವನ ಹೊಲದಲ್ಲಿ ಒಂದು ದಿಬ್ಬವಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ಜನರು ಸಿಂಹದ ಘರ್ಜನೆಯನ್ನು ಪದೇ ಪದೇ ಕೇಳುತ್ತಾರೆ. ಆದರೆ, ಎಷ್ಟೇ ಹುಡುಕಿದರೂ ಯಾವುದೇ ಪ್ರಾಣಿಯು ಕಂಡು ಬರುವುದಿಲ್ಲ. ಈ ಬೆಳವಣಿಗೆಯನ್ನು ಅವರು ಇತರರಿಗೆ ತಿಳಿಸಿದಾಗ, ಅವರು ಕೂಡ ದಿಬ್ಬದ ಬಳಿಗೆ ಬಂದು ಘರ್ಜನೆಯನ್ನು ಕೇಳಿದರು. ಅಂದಿನಿಂದ ಜನರು ಈ ದಿಬ್ಬವನ್ನು ಪೂಜಿಸಲು ಪ್ರಾರಂಭಿಸಿದರು. ಗ್ರಾಮಸ್ಥರು ಹೇಳುವ ಪ್ರಕಾರ, ಈ ದಿಬ್ಬ ಮೊದಲು ಗಾತ್ರದಲ್ಲಿ ಚಿಕ್ಕದಾಗಿತ್ತು. ಆದರೆ ಕಾಲಾನಂತರದಲ್ಲಿ ಎತ್ತರ ಮತ್ತು ಅಗಲವನ್ನು ಹೆಚ್ಚಿಸಿತು ಮತ್ತು ಈಗ ಅದು ಹೆಚ್ಚಾಗುತ್ತಲೇ ಇದೆ. 

ಶ್ರಾವಣದಲ್ಲಿ ಜಾತ್ರೆ
ಶಿವನಿಗೆ ಪ್ರಿಯವಾದ ಶ್ರಾವಣ ಮಾಸದಲ್ಲಿ ಇಲ್ಲಿ ಭವ್ಯವಾದ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ದೂರದೂರಿನಿಂದ ಕನ್ವರಿಯರು ಇಲ್ಲಿಗೆ ನೀರು ಕೊಡಲು ಬರುತ್ತಾರೆ. ಭಕ್ತರಿಗೆ ವಸತಿ ಮತ್ತು ಊಟದ ಸಂಪೂರ್ಣ ವ್ಯವಸ್ಥೆ ಇರುತ್ತದೆ. ಆಗ ಜನರು ಇಲ್ಲಿ ಶಿವಲಿಂಗದ ದರ್ಶನ ಪಡೆಯಲು ಉದ್ದನೆಯ ಸರತಿ ಸಾಲಿನಲ್ಲಿ ಕಾಯುತ್ತಾರೆ. ಈ ಸ್ಥಳಕ್ಕೆ ಭೇಟಿ ನೀಡಿ ಭೂತೇಶ್ವರ ಶಿವಲಿಂಗಕ್ಕೆ ಕೇವಲ ಒಂದು ಲೋಟ ನೀರನ್ನು ಅರ್ಪಿಸಿದವರೂ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ.

ವಕ್ರಿ ಶನಿಯಿಂದ ಈ ರಾಶಿಗಳಿಗೆ ಧನಯೋಗ, ಶಶ ರಾಜಯೋಗದ ಬಲ

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!