
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಸಾಮಾನ್ಯವಾಗಿ ದೇವರಿಗೆ ಒಂದೋ, ಎರಡೋ ಅಬ್ಬಬ್ಬಾ ಅಂದ್ರೆ ಎಂಟ್ಹತ್ತು ಮಾದರಿಯ ಅಡುಗೆ ಮಾಡಿ ನೈವೇದ್ಯ ಅರ್ಪಿಸೋದು ಕಾಮನ್, ಆದ್ರೆ ಬಾಗಲಕೋಟೆಯಲ್ಲಿ ನವರಾತ್ರಿ ನಿಮಿತ್ತ ದೇವಿಗೆ ಈ ಬಾರಿ 150ಕ್ಕೂ ಹೆಚ್ಚು ಬಗೆಯ ಆಹಾರ ನೈವೇದ್ಯವಾಗಿದ್ದು ವಿಶೇಷ.
ಹೌದು, ಇದು ಚಪ್ಪನ್ ಭೋಗ್ ಆಚರಣೆಯ ಎಫೆಕ್ಟ್.
ಈ ದೇವಾಲಯಕ್ಕೆ ನೀವೇನಾದ್ರೂ ನವರಾತ್ರಿಯ ಅಷ್ಟಮಿಯಂದು ಭೇಟಿ ನೀಡಿದ್ದರೆ ಯಾವುದೋ ಆಹಾರ ಪದಾರ್ಥ ಮಳಿಗೆಗೆ ಬಂದೆವೇನೋ ಎಂದು ಗೊಂದಲಕ್ಕೊಳಗಾಗುತ್ತಿದ್ರಿ. ಏಕೆಂದ್ರೆ ದೇವಸ್ಥಾನದ ತುಂಬಾ ಎಲ್ಲಿ ನೋಡಿದ್ರೂ ದೇವಿಗಾಗಿ ಇರಿಸಿದ್ದ ನೂರಾರು ಬಗೆಯ ಸಿಹಿ ತಿನಿಸು ಖಾದ್ಯಗಳೇ ಕಾಣಿಸುತ್ತಿತ್ತು. ಅವುಗಳನ್ನು ಭಕ್ತರು ಪ್ರೀತಿಯಿಂದ ಅಂಬಾಭವಾನಿಗಾಗಿ ಮಾಡಿ ತಂದಿದ್ದರು.
ಮುಳುಗಡೆ ನಗರಿ ಬಾಗಲಕೋಟೆಯ ಅಂಬಾಭವಾನಿ ದೇಗುಲದಲ್ಲಿ ನವರಾತ್ರಿ ನಿಮಿತ್ಯ ಸಹಸ್ರಾರ್ಜುನ ಕ್ಷತ್ರೀಯ ಸಮಾಜದ ವತಿಯಿಂದ ಅಂಬಾಭವಾನಿ ದೇವಿಗೆ ಪ್ರತಿವರ್ಷ ಚಪ್ಪನ್ ಬೋಗ್ ಎಂಬ ವಿಶೇಷ ನೈವೇದ್ಯ ಅರ್ಪಿಸೋ ಪದ್ಧತಿ ಆಚರಣೆಯಲ್ಲಿದೆ. ಅಂದ್ರೆ ಬರೋಬ್ಬರಿ 56 ನಮೂನೆಯ ಅಡುಗೆ ಮಾಡಿ ದೇವಿಗೆ ಅರ್ಪಿಸೋ ಬಗೆ ಇದು. ಇದ್ರಿಂದ ತಾಯಿ ದುರ್ಗೆಯ ಪಾತ್ರರಾಗಲು ಭಕ್ತರು ಪಂಚಭಕ್ಷ ಭೋಜನ ಸಹಿತ ಹಣ್ಣು ಹಂಪಲ, ತಿಂಡಿ-ತಿನಿಸು , ಡ್ರೈ ಪುಡ್ಸ್ ಹೀಗೆ ವಿವಿಧ ರೀತಿಯ 56 ನಮೂನೆಯ ಅಡುಗೆಯನ್ನು ಮಾಡಿ ತರುತ್ತಾರೆ. ಭಕ್ತರು ತಮ್ಮ ತಮ್ಮ ಮನೆಯಿಂದ ಮಾಡಿದ ವಿಶೇಷ ಖಾದ್ಯಗಳನ್ನು ತಂದು ಏಕಕಾಲದಲ್ಲಿ ದೇವಿಯ ಮುಂದಿಟ್ಟು, ಮಂತ್ರಪಠಣ, ಭಜನೆಯ ಮೂಲಕ ದೇವಿಗೆ ಆರತಿ ಎತ್ತಿ ವಿಶೇಷ ಪೂಜೆ ಸಲ್ಲಿಸಿ ಕೃತಾರ್ಥರಾಗ್ತಾರೆ. ಬಳಿಕ ಎಲ್ಲರಿಂದ ತಂದ ನೈವೇದ್ಯವನ್ನೇ ಸಾಮೂಹಿಕವಾಗಿ ಪ್ರಸಾದವಾಗಿ ನೀಡಲಾಗುತ್ತದೆ.
ಎಂಥ ಅಂದ ಎಂಥ ಚೆಂದ ಬಂಧಮ್ಮ.. ನಿಮ್ಮ ನಿನ್ನ ನೋಡಲೆರಡು ಕಣ್ಣು ನಮಗೆ ಸಾಲದಮ್ಮಾ
ಈ ವರ್ಷ ಈ ಚಪ್ಪನ್ ಭೋಗ್ ಹೋಗಿ ಬರೋಬ್ಬರಿ 150 ನಮೂನೆಯ ಖಾದ್ಯಗಳು ದೇವಿಯ ನೈವೇದ್ಯಕ್ಕಾಗಿ ಬಂದಿದ್ದವು ಎಂಬುದು ವಿಶೇಷ. ಆಧುನಿಕ ಜೀವನದ ಭರಾಟೆಯ ನಡುವೆ ಅಂಬಾಭವಾನಿಗಾಗಿ ಈ ಭೋಗ ಸೇವೆ ಮಾಡುವ ಅವಕಾಶ ಖುಷಿ ಕೊಟ್ಟಿದೆ ಅಂತಾರೆ ಮಹಿಳೆಯರಾದ ಸುವರ್ಣ ಮತ್ತು ಸ್ಮಿತಾ.
ಅಮೇರಿಕಾದಲ್ಲಿದ್ದ ಭಕ್ತರಿಂದಲೂ ಖಾದ್ಯ ಸೇವೆ
ಇನ್ನು ಈ ಚಪ್ಪನ್ ಭೋಗ ಆಚರಣೆಗೆ ಬಾಗಲಕೋಟೆ, ಬೆಂಗಳೂರು, ಹುಬ್ಬಳ್ಳಿ ಧಾರವಾಡ ಸೇರಿದಂತೆ ದೂರದ ಅಮೇರಿಕಾದಿಂದಲೂ ಭಕ್ತರು ವಿಶೇಷ ತಿನಿಸುಗಳ ಸೇವೆಯನ್ನು ಮಾಡಿದ್ದು ಮತ್ತೊಂದು ವಿಶೇಷ. ಹೆಸರು ಹೇಳಲಿಚ್ಚಿಸದ ಅಮೇರಿಕಾದಲ್ಲಿರೋ ಭಕ್ತರು ಬಾಗಲಕೋಟೆಯಲ್ಲಿರೋ ತಮ್ಮ ಸಂಬಂಧಿಗಳ ಮೂಲಕ ದೇವಿಗೆ ಖಾದ್ಯವನ್ನ ನೀಡಿ ಸೇವೆ ಸಲ್ಲಿಸಿದ್ದಾರೆ.
ದೇವಿಯು ಮಹಿಷಾಸುರನನ್ನ ಮರ್ದನ ಮಾಡಿದ ಬಳಿಕ ಆಕೆಗೆ ತಮ್ಮ ಕೃಜ್ಞತೆ ಅರ್ಪಿಸುವ ಸಲುವಾಗಿ ಚಪ್ಪನ್ ಭೋಗ್ ಆಚರಣೆಯನ್ನ ಮಾಡಿಕೊಂಡು ಬರಲಾಗುತ್ತಿದೆ.
ಜಾತಿ, ಮತ ಭೇದ ಮರೆತು 9 ದಿನಗಳ ಕಾಲ ಪೂಜೆ
ಈ ಅಂಬಾಭವಾನಿ ದೇವಾಲಯದಲ್ಲಿ ದಸರಾ ಹಬ್ಬದ ಸಂಭ್ರಮದಲ್ಲಿ ಭಕ್ತರೆಲ್ಲಾ ಸೇರಿ ವಿಶೇಷ ಪೂಜೆಯೊಂದಿಗೆ ಜಾತಿ ಭೇದ ಮರೆತು ಭಾಗವಹಿಸಿ ಭಾವೈಕ್ಯತೆ ಮೆರೆಯುತ್ತಾರೆ. ನಿರಂತರ ಒಂಬತ್ತು ದಿನಗಳ ಕಾಲ ದೇವಿಗೆ ಒಂದೊಂದು ರೂಪದಲ್ಲಿ ಅಲಂಕಾರ ಮಾಡಿ ವಿಶೇಷ ಆರಾಧನೆ ಮಾಡಲಾಗುತ್ತದೆ. ಹೀಗಾಗಿ ನವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡುವುದರ ಜೊತೆಗೆ ಚಪ್ಪನ್ ಭೋಗ್ ಆಚರಣೆಗೆ ನಗರವಲ್ಲದೆ ಅಕ್ಕಪಕ್ಕದ ಹಳ್ಳಿಗಳಿಂದಲೂ ಜನರು ಆಗಮಿಸಿ, ದೇವಿ ದರ್ಶನ ಪಡೆದು ಕೃತಾರ್ಥರಾಗಿದ್ದಾರೆ ಅಂತಾರೆ ಯರ್ರಾಬಿರ್ರಿ ಖ್ಯಾತಿಯ ಆನಂದ ರಂಗರೇಜ್.
Dasara 2022: ರಾವಣನಿಗಿದ್ದ ಈ ಒಳ್ಳೆಯ ಗುಣಗಳ ಪರಿಚಯ ನಿಮಗಿದೆಯೇ?
ಒಟ್ಟಿನಲ್ಲಿ ನಾಡಿನೆಲ್ಲೆಡೆ ದೇವಿಗೆ ನವರಾತ್ರಿ ನಿಮಿತ್ತ ವಿಶೇಷ ಆಚರಣೆಗಳು ನಡೆಯುತ್ತಿರೋ ಬೆನ್ನಲ್ಲೆ ಬಾಗಲಕೋಟೆಯಲ್ಲಿ ಅಂಬಾಭವಾನಿ ದೇವಿಗಾಗಿ ಸಾಂಪ್ರದಾಯಿಕವಾಗಿ ನಡೆದ ವಿಶೇಷ ಚಪ್ಪನ್ ಭೋಗ್ ಆಚರಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವಂತಿತ್ತು.