ಪ್ರಾಚೀನ ವೈಭವ ಸಾರುವ ಶೃಂಗೇರಿಯ ದಸರಾ

By Kannadaprabha News  |  First Published Oct 4, 2022, 8:17 AM IST
  • ಗಮನಸೆಳೆಯುವ ಜಗದ್ಗುರುಗಳ ನವರಾತ್ರಿಯ ದರ್ಬಾರ್‌
  • ಧಾರ್ಮಿಕ, ಸಾಂಸ್ಕ್ರತಿಕ, ಅಡ್ಡಪಲ್ಲಕ್ಕಿ ಉತ್ಸವದಿಂದ ಮತ್ತಷ್ಟುಮೆರಗು

ನೆಮ್ಮಾರ್‌ ಅಬೂಬಕರ್‌

ಶೃಂಗೇರಿ (ಅ.4) : ಸಹ್ಯಾದ್ರಿ ಪರ್ವತಗಳ ಶ್ರೇಣಿ, ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ಹುಟ್ಟಿಹರಿಯುವ ಮಲೆನಾಡಿನ ಜೀವನದಿ ತುಂಗೆಯ ತಟದಲ್ಲಿರುವ ಶೃಂಗೇರಿ ಐತಿಹಾಸಿಕವಾಗಿ, ಪುರಾಣೇತಿಕವಾಗಿ,ಧಾರ್ಮಿಕವಾಗಿ, ಸಾಂಸ್ಕ್ರತಿಕವಾಗಿ ತನ್ನದೇ ಆದ ಪ್ರಾಚೀನತೆ, ಪರಂಪರೆ, ಇತಿಹಾಸ, ಹಿನ್ನೆಲೆ ಹೊಂದಿದೆ. ಮೈಸೂರು, ವಿಜಯನಗರ, ಕೆಳದಿ, ಇಕ್ಕೇರಿ ರಾಜಮನೆತನಗಳೊಡನೆ ನಿಕಟ ಸಂಬಂಧ ಹೊಂದಿದ್ದ ಶೃಂಗೇರಿ ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಪ್ರಸಿದ್ಧತೆ ಉಳಿಸಿಕೊಂಡು ಬಂದಿದೆ.

Tap to resize

Latest Videos

ಇಲ್ಲಿರುವ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಿದ ನಾಲ್ಕು ಆಮ್ನಾಯ ಪೀಠಗಳಲ್ಲಿ ಒಂದಾಗಿದೆ. ಸುಮಾರು 600 ವರ್ಷಗಳ ಯತಿ ಪರಂಪರೆಯಲ್ಲಿ ನಡೆದುಕೊಂಡು ಬರುತ್ತಿರುವ ಪೀಠದ ಸಂಪ್ರದಾಯ, ಧಾರ್ಮಿಕ, ಸಾಂಸ್ಕ್ರತಿಕ ಪದ್ಧತಿಗಳು, ಗುರುಪರಂಪರೆ, ಮೈಸೂರು, ವಿಜಯನಗರ ಕಾಲದ ವೈಭವ ನೆನಪಿಸುವ ದಸರೆಯ ರಾತ್ರಿ, ಹಗಲು ದರ್ಬಾರ್‌ಗಳು, ವಿಜಯ ದಶಮಿ, ವಿಜಯೋತ್ಸವ, ಶಮೀ ಪೂಜೆ, ರಾಜಬೀದಿ ಉತ್ಸವಗಳು, ಮಹಾ ರಥೋತ್ಸವ, ಅಡ್ಡಪಲ್ಲಕ್ಕಿ ಉತ್ಸವ ಸೇರಿದಂತೆ ಇಲ್ಲಿನ ಸಂಪ್ರಾಯಗಳು ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ.

ಪ್ರತೀ ವರ್ಷ ಇಲ್ಲಿನ ಪೀಠದಲ್ಲಿ ಸಂಪ್ರದಾಯದಂತೆ ನಡೆಯುವ ಉತ್ಸವಗಳಲ್ಲಿ ನವರಾತ್ರಿ ಉತ್ಸವಅತ್ಯಂತ ಪ್ರಮುಖವಾದದ್ದು. ಮೈಸೂರಿನ ನಾಡ ಹಬ್ಬ ದಸರಾದಂತೆ ಇಲ್ಲಿಯೂ 9 ದಿನಗಳ ಕಾಲ ಧಾರ್ಮಿಕ, ಸಾಂಸ್ಕ್ರತಿಕಕಾರ್ಯಕ್ರಮಗಳು ವೈಭವಯುತವಾಗಿ ನಡೆಯುತ್ತದೆ. ಪೀಠದ ಅಧಿ ದೇವತೆ ಶಾರದೆಗೆ ದಿನಕ್ಕೊಂದು ಅಲಂಕಾರದಂತೆ 9 ದಿನಗಳ ಕಾಲ ಹಂಸವಾಹಿನಿ, ಬ್ರಾಹ್ನಿ, ವೃಷಭ ವಾಹಿನಿ,ಮಯೂರ ವಾಹಿನಿ, ಗರುಡ ವಾಹಿನಿ, ಮೋಹಿನಿ, ವೀಣಾಪಾಣಿ, ಚಾಮುಂಡಿ, ರಾಜರಾಜೇಶ್ವರಿ, ಗಜಲಕ್ಷಮಿ ಅಲಂಕಾರಗಳಲ್ಲಿ ಅಲಂಕರಿಸಿ ಆರಾಧಿಸಲಾಗುತ್ತದೆ. ಸುಮಾರು 600 ವರ್ಷಗಳಿಂದ ಪೀಠಕ್ಕೆ ವಿವಿಧ ದೇಶ, ವಿದೇಶಗಳ, ಸಂಸ್ಥಾನಗಳ ರಾಜಮಹಾರಾಜರುಗಳು ನೀಡಿದ್ದ ವಿವಿಧ ಆಭರಣಗಳನ್ನು ಶಾರದೆಗೆ ಧರಿಸಿ ಅಲಂಕರಿಸಲಾಗುತ್ತದೆ.

ಕಾಫಿನಾಡಿನಲ್ಲಿ ನವರಾತ್ರಿ ಸಂಭ್ರಮ: ದುರ್ಗೆಯ ದರ್ಶನಕ್ಕೆ ಶೃಂಗೇರಿ, ಹೊರನಾಡಲ್ಲಿ ಭಕ್ತ ಸಾಗರ..!

ನವರಾತ್ರಿಯ ಕೊನೆಯ ದಿನದಂದು ರಥಬೀದಿಯಲ್ಲಿ ಶಾರದಾಂಬಾ ಮಹಾ ರಥೋತ್ಸವ, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯುತ್ತದೆ. ಮಹಾ ರಥೋತ್ಸವದೊಂದಿಗೆ ಮಲೆನಾಡಿನ ಜಾನಪದಕಲೆ, ಪರಂಪರೆ, ಸಾರುವ ವಿವಿಧ ಸ್ತಬ್ಧ ಚಿತ್ರಗಳು, ಹುಲಿ, ಕರಡಿ ಸೇರಿದಂತೆ ವಿವಿಧ ಸಾಂಪ್ರದಾಯಿಕ ವೇಷಗಳು, ಕರಗ, ಮರಗಾಲು ಕುಣಿತ, ಭಜನೆ ತಂಡಗಳು ಹೀಗೆ ಹತ್ತು ಹಲವು ರೀತಿಯಲ್ಲಿ ಹೊಸ ಮೆರಗನ್ನು ನೀಡುತ್ತವೆ.

ಶ್ರೀಮಠದಲ್ಲಿ ಪ್ರತಿದಿನ ವಿಶೇಷ ಪೂಜೆಗಳು, ಋುಗ್ವೇದ, ಯಜುರ್ವೇದ, ಸಾಮವೇದಗಳು ಸೇರಿದಂತೆ ವೇದಗಲ ಪಾರಾಯಣ, ದೇವಿ ಭಾಗವತ, ಶಂಕರವಿಜಯ, ಸೂತಸಂಹಿತೆ, ಲಲಿತೋಪಾಖ್ಯಾನ, ಪ್ರಸ್ಥನ್ನತ್ರಯ ಭಾಷ್ಯಪಾರಾಯಣ, ಶತಚಂಡೀಯಾಗ, ಆಯುಧಪೂಜೆ, ಗಜಾಶ್ವಪೂಜೆ, ವಿವಿಧ ಜಪಗಳು ಸೇರಿದಂತೆ ನವರಾತ್ರಿಯ 9 ದಿನಗಳ ಕಾಲ ಧಾರ್ಮಿಕ ಕಲರವ ಮೂಡಿಸುತ್ತದೆ.

ನವರಾತ್ರಿಯ 9 ದಿನಗಳ ಕಾಲ ಪ್ರತಿದಿನ ರಾತ್ರಿ ರಾಜಪೋಷಕು, ಕಿರೀಟತೊಟ್ಟು ಜಗದ್ಗುರುಗಳ ರಾತ್ರಿ ದರ್ಬಾರ್‌ ನಡೆಯುತ್ತದೆ. ನವರಾತ್ರಿಯ ಕೊನೆಯ ದಿನ ಜಗದ್ಗುರುಗಳ ಹಗಲು ದರ್ಬಾರ್‌ ನಡೆಯುತ್ತದೆ. ವಿಜಯ ದಶಮಿಯು ವಿಜೃಂಭಣೆಯಿಂದ ನಡೆಯುತ್ತದೆ. ವಿಜಯ ದಶಮಿಯಂದು ನಡೆಯುವ ಶಮೀಪೂಜೆ ವಿಜಯದ ಸಂಕೇತವಾಗಿದೆ. ಇದು ಮೈಸೂರು ಆರಂಭಿಕ ಒಡೆಯರ್‌ ವಂಶದ ಯದುವಂಶದ ಅರಸರಿಂದ ಬಂದ ಸಂಪ್ರದಾಯವಾಗಿದೆ. ವಿಜಯ ನಗರ ಸಾಮ್ರಾಜ್ಯ ಪ್ರತಿಷ್ಠಾಪನಾಚಾರ್ಯರಾದ ಶ್ರೀವಿದ್ಯಾರಣ್ಯರು ಶೃಂಗೇರಿ ಪೀಠವನ್ನು ಅಲಂಕರಿಸಿದಾಗ ವಿಜಯ ನಗರದ ಅರಸರುಗಳು ಈ ರಾಜ ಮರ್ಯಾದೆಗಳನ್ನೆಲ್ಲ ಇಲ್ಲಿಗೆ ಸಮರ್ಪಣೆ ಮಾಡಿದರು. ಕೇವಲ ಪೀಠವಾಗಿದ್ದ ಮಠವು ಶ್ರೀ ವಿದ್ಯಾರಣ್ಯರ ಕಾಲದಲ್ಲಿ ಮಹಾಸಂಸ್ತಾನವಾಯಿತು.

ಮೈಸೂರಿನ ದಸರೆಯ ದರ್ಬಾರಿಗೂ ಶೃಂಗೇರಿಯ ಜಗದ್ಗುರುಗಳ ದರ್ಬಾರಿಗೂ ಸಾಮ್ಯತೆಯಿದೆ. ವಿಜಯನಗರ ಆಳ್ವಿಕೆಯ ಕಾಲದಲ್ಲಿ ನವರಾತ್ರಿಯಲ್ಲಿ ನಡೆಯುತ್ತಿದ್ದ ಸಂಪ್ರದಾಯ, ಪರಂಪರೆಗಳು ಶೃಂಗೇರಿ ಪೀಠದಲ್ಲಿ ಇಂದಿಗೂ ಉಳಿದು ಮುಂದುವರೆದುಕೊಂಡು ಹೋಗುತ್ತಿದೆ. ವಿಜಯನಗರ, ಶೃಂಗೇರಿ ಪರಂಪರೆ ಮೈಸೂರು ದಸರೆಯಲ್ಲಿ ನಡೆಯುತ್ತಿದೆ. ಮೈಸೂರು ಮಹಾರಾಜ ಜಯಚಾಮರಾಜೇಂದ್ರಒಡೆಯರ್‌ 1885ರಲ್ಲಿ ಶೃಂಗೇರಿ ಪೀಠಕ್ಕೆ ಭೇಟಿ ನೀಡಿದ್ದ ವೇಳೆ ಪೀಠದ ಜಗದ್ಗುರು ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳು ಒಡೆಯರ್‌ಗೆ ಶ್ರೀ ಶಾರದಾಂಬೆ ಸನ್ನಿಧಿಯ ರತ್ನ ಖಚಿತ ಕಿರೀಟ ಸಮರ್ಪಿಸಿದ್ದರು. ಇದನ್ನು ಇಂದಿಗೂ ಮೈಸೂರು ಮಹಾರಾಜರ ಖಾಸಾ ದರ್ಬಾರ್‌ನ ಸಂದರ್ಭದಲ್ಲಿ ಮೈಸೂರು ರಾಜವಂಶಸ್ಥರು ಸಿಂಹಾಸನದ ಪಕ್ಕದಲ್ಲಿಟ್ಟು ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ.

Navratri day 4: ಜಗನ್ಮಾತೆ ಶಾರದೆಗೆ ಮಯೂರ ವಾಹನ ಅಲಂಕಾರ

ಶೃಂಗೇರಿಯ ವೈಭವದ ದಸರೆಯ ವೀಕ್ಷಣೆಗೆ ದೇಶದ ವಿವಿಧೆಡೆಗಳಿಂದ ಜನಸಾಗರವೇ ಹರಿದು ಬರುತ್ತದೆ. ಶ್ರೀ ಶಾರದಾಂಬೆಯ ದರ್ಶನ, ಜಗದ್ಗುರುಗಳ ದರ್ಶನ,ಧಾರ್ಮಿಕ, ಸಾಂಸ್ಕ್ರತಿಕ ವಿಶೇಷತೆ ನೋಡಿ ಸವಿಯುವ ಅವಕಾಶ ನವರಾತ್ರಿಯಲ್ಲಿ ಸಿಗುತ್ತದೆ.

click me!