ಗೋವಿಂದನ ನಾಮಸ್ಮರಣೆಯೊಂದಿಗೆ ಕರಗ ವೈಭವ: ಭಕ್ತರ ಸಮ್ಮುಖದಲ್ಲಿ ಶಕ್ತ್ಯುತ್ಸವ ಸಂಭ್ರಮ

By Kannadaprabha NewsFirst Published Apr 7, 2023, 8:38 AM IST
Highlights

ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವವನ್ನು ಗುರುವಾರ ಮಧ್ಯರಾತ್ರಿ ಗೋವಿಂದಾ... ಗೋವಿಂದಾ... ನಾಮಸ್ಮರಣೆಯೊಂದಿಗೆ ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡು ಪುನೀತರಾದರು. 

ಬೆಂಗಳೂರು (ಏ.07): ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವವನ್ನು ಗುರುವಾರ ಮಧ್ಯರಾತ್ರಿ ಗೋವಿಂದಾ... ಗೋವಿಂದಾ... ನಾಮಸ್ಮರಣೆಯೊಂದಿಗೆ ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡು ಪುನೀತರಾದರು. ಗುರುವಾರ ಬೆಳಗ್ಗೆಯಿಂದಲೇ ಭಕ್ತರಲ್ಲಿ ಸಡಗರ, ಸಂಭ್ರಮ ಮನೆ ಮಾಡಿತ್ತು. ದೇವಾಲಯದ ಆವರಣ ಮಲ್ಲಿಗೆ, ಕರ್ಪೂರದ ಪರಿಮಳದೊಂದಿಗೆ ಘಮಗುಡುತ್ತಿತ್ತು. ನಗರ್ತರಪೇಟೆಯಲ್ಲಿ ಇರುವ ಧರ್ಮರಾಯಸ್ವಾಮಿ ಮಹಾರಥೋತ್ಸವ ಹೊರಡುತ್ತಿದ್ದಂತೆ, ಅದರ ಹಿಂದೆಯೇ ಗರ್ಭಗುಡಿಯಿಂದ ದ್ರೌಪದಿದೇವಿ ಮಲ್ಲಿಗೆ ಹೂವಿನ ಕರಗ ಸಾಗಿತು.

ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ ತಿಗಳ ಸಮುದಾಯದ ಅರ್ಚಕ ವಿ.ಜ್ಞಾನೇಂದ್ರ ಅವರು ಕರಗವನ್ನು ಹೊತ್ತು ಹೆಜ್ಜೆ ಹಾಕಿದರು. ಕರಗದ ಅಕ್ಕಪಕ್ಕದಲ್ಲಿ ವೀರಕುಮರರು ಕರಗಕ್ಕೆ ಭದ್ರತೆ ಒದಗಿಸಿದರು. ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಶಕ್ತ್ಯುತ್ಸವ (ದ್ರೌಪದಿ ದೇವಿಯ ಕರಗ) ಗುರುವಾರ ಮಧ್ಯರಾತ್ರಿ ಆರಂಭವಾಗಿ, ಶುಕ್ರವಾರ ಬೆಳಗಿನ ಜಾವದವರೆಗೆ ನಗರದ ನಾನಾ ಭಾಗಗಳಲ್ಲಿ ಕರಗ ಸಾಗಿತು. ನಗರದ ಆಯ್ದ ರಸ್ತೆಗಳಲ್ಲಿ ಕರಗ ಸಂಚರಿಸಿದರೂ ಕೂಡ ಇಡೀ ಬೆಂಗಳೂರಿಗರು ಕರಗ ನಡೆಯುವ ಜಾಗಕ್ಕೇ ಬಂದು ರಸ್ತೆಗಳುದ್ದಕ್ಕೂ ನಿಂತು, ಕಟ್ಟಡ, ಕಾಂಪೌಂಡ್‌ಗಳ ಮೇಲೂ ನಿಂತು ದೇವರ ದರ್ಶನ ಪಡೆಯುತ್ತಾರೆ. ಹೀಗಾಗಿ ಇಡೀ ಬೆಂಗಳೂರಿಗೆ ಬೆಂಗಳೂರೇ ಕರಗಕ್ಕೆ ಸಾಕ್ಷಿಯಾಗಿತ್ತು. ನೆರೆ ಜಿಲ್ಲೆ ಹಾಗೂ ರಾಜ್ಯಗಳಿಂದಲೂ ಭಕ್ತರು ಕರಗ ವೀಕ್ಷಣೆಗೆ ಆಗಮಿಸಿದ್ದು ಕಂಡು ಬಂತು.

Bengaluru: ಇಂದು ಮಧ್ಯರಾತ್ರಿ ಐತಿಹಾಸಿಕ ಅದ್ಧೂರಿ ಕರಗ ಶಕ್ತ್ಯೋತ್ಸವ

40 ಕೆ.ಜಿ. ತೂಕದ ಕಿರೀಟ: ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ ತಿಗಳ ಸಮುದಾಯದ ಅರ್ಚಕ ವಿ.ಜ್ಞಾನೇಂದ್ರ ಕರಗವನ್ನು ಹೊತ್ತು ಹೆಜ್ಜೆ ಹಾಕಿದ್ದರು. ವಿಶೇಷವೆಂದರೆ ಮಲ್ಲಿಗೆ ಹೂವುಗಳಿಂದ ಅಲಂಕರಿಸಿದ ಸುಮಾರು 40 ಕೆ.ಜಿ. ತೂಕದ (ಬೆಳ್ಳಿ ಮಿಶ್ರಿತ ಲೋಹ) ಕಿರೀಟವನ್ನು ತಲೆಯ ಮೇಲೆ ಹೊತ್ತು ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಈ ವೇಳೆ ರಸ್ತೆ ಉದ್ದಕ್ಕೂ ಭಕ್ತರಿಗೆ ಕುಡಿಯುವ ನೀರು, ಮಜ್ಜಿಗೆ, ಪಾನಕ, ಫಲಾಹಾರ ವಿತರಣೆ ಮಾಡಲಾಯಿತು.

ದೇಗುಲ, ದರ್ಗಾದಲ್ಲಿ ಪೂಜೆ ಸ್ವೀಕಾರ: ಕರಗ ಹೊತ್ತು ದೈವಾಂಶ ಸಂಭೂತರು ದೇವಸ್ಥಾನದಿಂದ ಹೊರ ಬಂದ ನೆರೆದಿದ್ದ ಗಣ್ಯರಿಗೆ ದರ್ಶನ ಕೊಟ್ಟು, ನಿಂಬೆಹಣ್ಣಿನ ಪ್ರಸಾದ ನೀಡಿ, ದೇವಸ್ಥಾನದ ಮುಖ್ಯರಸ್ತೆಯಿಂದ ಹೊರಟ ಕರಗ ಸಮೀಪದ ಶ್ರೀಕೃಷ್ಣಸ್ವಾಮಿ ದೇವಸ್ಥಾನದಲ್ಲಿ, ಅಲಸೂರುಪೇಟೆಯ ಆಂಜನೇಯ ಸ್ವಾಮಿ, ಶ್ರೀರಾಮ ಮತ್ತು ಶ್ರೀ ಪ್ರಸನ್ನ ಗಂಗಾಧರೇಶ್ವರ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿತು. ನಗರ್ತರಪೇಟೆಯ ವೇಣುಗೋಪಾಲ ಸ್ವಾಮಿ ದೇವಾಲಯದಿಂದ ಸಿದ್ದಣ್ಣಗಲ್ಲಿಯ ಭೈರೇದೇವರ ದೇವಾಲಯ, ಮಕ್ಕಳ ಬಸವಣ್ಣನಗುಡಿ ಮಾರ್ಗವಾಗಿ ಬಳೇಪೇಟೆಯ ಅಣ್ಣಮ್ಮ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿತು. ಇದೇ ವೇಳೆ ಭಾವೈಕ್ಯತೆಯ ಸಂಗಮವಾದ ಅರಳೇಪೇಟೆಯ ‘ಮಸ್ತಾನ್‌ ಸಾಬ್‌ ದರ್ಗಾ’ಕ್ಕೆ ಭೇಟಿ ನೀಡಿ, ಪೂಜೆ ಸ್ವೀಕರಿಸಿ ನಂತರ ಕರಗ ಉತ್ಸವ ತೆರಳುವುದು ವಾಡಿಕೆ. ಅದರಂತೆ ಈ ಬಾರಿಯೂ ಶಾಸ್ತ್ರಬದ್ಧವಾಗಿಯೇ ನಡೆಯಿತು.

ಕರಗದಂದು ಮಳೆ ಕಡ್ಡಾಯ: ಅಂದ ಹಾಗೆ ಕರಗದ ದಿನ ಮಳೆ ಕಡ್ಡಾಯವಾಗಿ ಬರುತ್ತದೆ. ಜೋರು ಮಳೆಯಿಲ್ಲದಿದ್ದರೂ ಒಂದೆರಡು ಹನಿಯಾದರೂ ಸುರಿಸುತ್ತದೆ. ಅದೇ ರೀತಿ ಗುರುವಾರವೂ ನಗರದ ಹಲವೆಡೆ ಮಳೆಬಿದ್ದು, ಸಾಂಪ್ರದಾಯಿಕತೆಗೆ ಮಳೆ ಸಾಕ್ಷಿಯಾಯಿತು.

Bengaluru: ವಿಜೃಂಭಣೆಯ ಐತಿಹಾಸಿಕ ಧರ್ಮರಾಯ ಹಸಿ ಕರಗ ಮಹೋತ್ಸವಕ್ಕೆ ಸಕಲ ಸಿದ್ಧತೆ

ಕರಗ ಉತ್ಸವ ಸಾಗಿದ ಮಾರ್ಗ: ಮಧ್ಯರಾತ್ರಿ 2ರ ಸುಮಾರಿಗೆ ಹೂವಿನ ಕಗರ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರ ಬಂದು ದೇಗುಲ ಪ್ರದಕ್ಷಿಣೆ ನಡೆಯಿತು. ಬಳಿಕ ಕುಂಬಾರಪೇಟ್‌ ರೋಡ್‌, ರಾಜ ಮಾರ್ಕೆಟ್‌ ಸರ್ಕಲ್‌-ಸಿಟಿ ಮಾರ್ಕೆಟ್‌ ಸರ್ಕಲ್‌, ಕೋಟೆ ಆಂಜನೇಯ ಸ್ವಾಮಿ ದೇಗುಲ ತೆರಳಿತು. ಅಲ್ಲಿಂದ ಸಿಟಿ ಮಾರ್ಕೆಟ್‌ ಸರ್ಕಲ್‌-ಪೊಲೀಸ್‌ ರಸ್ತೆ, ಕಾಟನ್‌ ಪೇಟೆ ರಸ್ತೆ ಮೂಲಕ ಮಸ್ತಾನ್‌ ಸಾಬ್‌ ದರ್ಗಾಕ್ಕೆ ಭೇಟಿ ನೀಡಿತು. ಅಲ್ಲಿಂದ ಬಳೇಪೇಟೆ ಸರ್ಕಲ್‌ ಮೂಲಕ ಅಣ್ಣಮ್ಮ ದೇವಿಯ ದೇವಸ್ಥಾನ ಹೋಗಿ ಪೂಜೆ ಸಲ್ಲಿಸಿ ನಂತರ ಕಬ್ಬನ್‌ ಪೇಟೆ ಮುಖ್ಯ ರಸ್ತೆ ಮೂಲಕ ಶುಕ್ರವಾರ ಬೆಳಗ್ಗೆ ಮರಳಿ ಶ್ರೀಧರ್ಮರಾಯ ಸ್ವಾಮಿ ದೇವಸ್ಥಾನ ಪ್ರವೇಶಿಸಿತು.

click me!