ಈ ಹಿಂದೆ ಹಲವಾರು ಭವಿಷ್ಯವಾಣಿಗಳನ್ನು ಸರಿಯಾಗಿ ನುಡಿದಿದ್ದ ಜ್ಯೋತಿಷಿ ಅನಿರುದ್ಧ್ ಕುಮಾರ್ ಮಿಶ್ರಾ ಅವರ ಅಕ್ಟೋಬರ್ 19ನೇ ತಾರೀಖಿನ ಟ್ವೀಟ್ ಕುತೂಹಲ ಹುಟ್ಟಿಸುತ್ತಿದೆ. ಅವರು ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರವಧಿಯ ಬಗ್ಗೆ ಅಚ್ಚರಿಯ ಭವಿಷ್ಯವಾಣಿ ನುಡಿದಿದ್ದಾರೆ.
ಈ ಹಿಂದೆ ರಾಮಮಂದಿರ ನಿರ್ಮಾಣ ವರ್ಷದ ಬಗ್ಗೆ, ಮಹಾ ತೀರ್ಪಿನ ಬಗ್ಗೆ ಸರಿಯಾಗಿ ಭವಿಷ್ಯ ನುಡಿದಿದ್ದ ಜ್ಯೋತಿಷಿ ಅನಿರುದ್ ಕುಮಾರ್ ಮಿಶ್ರಾ(@Anirudh_Astro) ಈಗ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಭವಿಷ್ಯದ ಬಗ್ಗೆ ಸ್ಪೋಟಕ ಭವಿಷ್ಯವಾಣಿ ಟ್ವೀಟ್ ಮಾಡಿದ್ದಾರೆ.
'ಚುನಾವಣೆಗಳು ಮೇ 2023ರಲ್ಲಿ ಇರುವುದರಿಂದ ತಪ್ಪು ಜನನ ಸಮಯದ ಕಾರಣ ಈ ಹಿಂದೆ ಭವಿಷ್ಯ ನುಡಿದಿದ್ದರಲ್ಲಿ ಆಗಿದ್ದ ಪ್ರಮಾದವನ್ನು ನಾನು ಸರಿಪಡಿಸುತ್ತಿದ್ದೇನೆ. ಇದೀಗ ಅಕ್ಟೋಬರ್ 2022 ಆಗಿದೆ. ಇಂದಿನಿಂದ ಮಾರ್ಚ್ 2023ರೊಳಗೆ ಕರ್ನಾಟಕದ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಬದಲಾಯಿಸಲಾಗುತ್ತದೆ ಮತ್ತು ಬಿಜೆಪಿ ಪೂರ್ಣ ಬಹುಮತ ಪಡೆಯುತ್ತದೆ,' ಎಂದು ಮಿಶ್ರಾ ಬುಧವಾರ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ಚರ್ಚೆಗಳು ಗರಿಗೆದರಿರುವ ಈ ಸಮಯದಲ್ಲಿ ಮಿಶ್ರಾ ಟ್ವೀಟ್(Tweet) ಕುತೂಹಲ ಹೆಚ್ಚಿಸಿದೆ. ಜನಸಂಕಲ್ಪ ಯಾತ್ರೆಗೆಂದು ರಾಜ್ಯಕ್ಕೆ ಬಂದಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಸಚಿವ ಅರುಣ್ ಸಿಂಗ್, ಸಂಪುಟ ವಿಸ್ತರಣೆ ಸಿಎಂ ಅವರ ಪರಮಾಧಿಕಾರ. ಸಧ್ಯದಲ್ಲೇ ವಿಸ್ತರಣೆಯಾಗಲಿದೆ ಎಂದಿದ್ದರು. ಇದರ ಬೆನ್ನಲ್ಲೇ ಸಿಎಂ ಕೂಡಾ ಸಧ್ಯದಲ್ಲೇ ಸಂಪುಟ ವಿಸ್ತರಣೆ ಆಗಲಿದೆ ಎಂದಿದ್ದಾರೆ. ಇವುಗಳ ನಡುವೆ ಕರ್ನಾಟಕ ಸಿಎಂ ಹಾಗೂ ರಾಜಕೀಯ ಭವಿಷ್ಯದ ಬಗ್ಗೆ ಮಿಶ್ರಾ ಮಾಡಿರುವ ಟ್ವೀಟ್ ಗಮನ ಸೆಳೆಯುತ್ತಿದೆ.
ಇದಕ್ಕೂ ವಾರದ ಮುನ್ನ ಟ್ವೀಟ್ ಮಾಡಿದ್ದ ಅನಿರುಧ್ ಮಿಶ್ರಾ, 'ದೀಪಾವಳಿಯ ನಂತರದ ಒಂದು ದಿನದ ಸೂರ್ಯಗ್ರಹಣವು ಭಾರತಕ್ಕೆ, ವಿಶೇಷವಾಗಿ ಭಾರತೀಯ ನಾಯಕರಿಗೆ ಹಾನಿಕಾರಕವಾಗಿದೆ. ಇದರ ಪರಿಣಾಮವು 6 ತಿಂಗಳವರೆಗೆ ಇರುತ್ತದೆ,' ಎಂದಿದ್ದಾರೆ.
ಇವರು ನುಡಿಯುವ ಭವಿಷ್ಯ ಬಹುತೇಕ ನಿಜ ಆಗಿದೆ. ಅಯೋಧ್ಯೆ ವಿವಾದದ ವಿಚಾರದಲ್ಲಿ ಇವರು ಎರಡು ವರ್ಷಗಳ ಹಿಂದೆ ನುಡಿದ ಭವಿಷ್ಯ(predictions) ನಿಜವಾಗಿ ಅಚ್ಚರಿ ಮೂಡಿಸಿತ್ತು. ನವೆಂಬರ್ 15, 2017ರಲ್ಲೇ ರಾಮಮಂದಿರ ನಿರ್ಮಾಣದ ಬಗ್ಗೆ ಈ ಅನಿರುದ್ ಭವಿಷ್ಯ ನುಡಿದಿದ್ದರು. ರಾಮಮಂದಿರ ನಿರ್ಮಾಣ ಆರಂಭವಾಗಲು ಎರಡು ವರ್ಷ ಮೂರು ತಿಂಗಳು ಉಳಿದುಕೊಂಡಿದೆ ಎಂದಿದ್ದರು. ಆಗ ಪ್ರಕರಣವಿನ್ನೂ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿ ಇತ್ತು. ಹಾಗಿದ್ದೂ ಅದು ಸತ್ಯವಾಯಿತು. ಇದಕ್ಕೂ ಮುನ್ನ ಪ್ರಮುಖವಾಗಿ 2019ರಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದರು. ಅದೂ ಕೂಡಾ ನಿಜವಾಯಿತು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಅನಿರುದ್ಧ ಸ್ಪಷ್ಟವಾಗಿ ಹೇಳಿದ್ದರು. ಇವೆಲ್ಲವೂ ನಿಜವಾಗಿದ್ದರಿಂದ ಅನಿರುದ್ ಹೇಳುವ ಭವಿಷ್ಯದ ಮಾತುಗಳ ಬಗ್ಗೆ ಜನರಲ್ಲಿ ಕುತೂಹಲ ಕೆರಳಿದೆ.
'ನಾನು ನೋಡುವುದನ್ನು ನಾನು ಮಾತನಾಡುತ್ತೇನೆ, ನಾನು ಓದುವುದನ್ನು ನಾನು ಊಹಿಸುತ್ತೇನೆ, ಟ್ವೀಟ್‌ಗಳು ನನ್ನ ಭವಿಷ್ಯವಾಣಿಗಳಾಗಿವೆ' ಎಂದು ಅವರು ತಮ್ಮ ಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಭವಿಷ್ಯ ಸುಳ್ಳಾಗಿತ್ತು..
ಅನಿರುದ್ ಹೇಳಿದ್ದ ಸಾಕಷ್ಟು ಭವಿಷ್ಯಗಳು ನಿಜವಾಗಿದ್ದರೂ ಚಂದ್ರಯಾನದ ವಿಷಯದಲ್ಲಿ ಅವರು ಹೇಳಿದ್ದ ಭವಿಷ್ಯ ಮಾತ್ರ ಸುಳ್ಳಾಗಿತ್ತು. ಚಂದ್ರಯಾನ-2 ಯೋಜನೆಯ ಹಿನ್ನಡೆಯಿಂದಾಗಿ ಇಡೀ ದೇಶ ಬೇಜಾರಿನಲ್ಲದ್ದ ಸಂದರ್ಭ ಮಿಶ್ರಾ ಅವರು ವಿಕ್ರಂ ಮೂನ್ ಲ್ಯಾಂಡರ್ ಸೆ.20ಕ್ಕೆ ಮತ್ತೆ ಸಂಪರ್ಕಕ್ಕೆ ಸಿಗಲಿದೆ ಎಂದು ಹೇಳಿದ್ದರು, ಆದರೆ ಅದು ನಿಜವಾಗಲಿಲ್ಲ.