ಪ್ರತಿ ವರ್ಷ ಲಕ್ಷಗಟ್ಟಲೆ ಯಾತ್ರಿಕರು - ಸಾಧುಗಳು, ಸನ್ಯಾಸಿಗಳು, ಅಘೋರಿ ಬಾಬಾಗಳು ಮತ್ತು ಸಾಮಾನ್ಯರು - ದೇವಸ್ಥಾನದಲ್ಲಿ ಅಂಬುಬಾಚಿ ಮೇಳಕ್ಕೆ ಬರುತ್ತಾರೆ. ದೇವಿಯ ಮುಟ್ಟಿನ ದಿನಗಳೆಂದು ಪರಿಗಣಿಸುವ ಈ ದಿನಗಳು ದೇವಾಲಯದಲ್ಲಿ ಆಚರಣೆ ಹೇಗಿರುತ್ತೆ ಗೊತ್ತಾ?
ಋತುಚಕ್ರವು ಸಾಮಾನ್ಯ ಕ್ರಿಯೆಯಾದರೂ ಹಿಂದೂ ಧರ್ಮದಲ್ಲಿ ಆ ದಿನಗಳಲ್ಲಿ ಮಹಿಳೆಯರು ಹೊರಗೆ ಕೂರುತ್ತಾರೆ. ಮನೆಯ ಹೆಚ್ಚಿನ ಚಟುವಟಿಕೆಯಿಂದ ದೂರ ಉಳಿಯುತ್ತಾರೆ. ಮುಟ್ಟಿನ ದಿನಗಳಲ್ಲಿ ದೇವಾಲಯಗಳಿಗೆ ಹೋಗುವುದಂತೂ ಅಪಚಾರವೇ ಎಂದು ನಂಬಲಾಗಿದೆ. ಆದರೆ, ಈ ದೇವಾಲಯದಲ್ಲಿ ಮಾತ್ರ ಮುಖ್ಯ ದೇವತೆಯೇ ಮುಟ್ಟಾಗುತ್ತಾಳೆ. ಆಕೆ ವರ್ಷಕ್ಕೊಮ್ಮೆ ಮುಟ್ಟಾಗುತ್ತಾಳೆ ಹಾಗೂ ಈ ಸಂದರ್ಭದ 3 ದಿನಗಳು ದೇವಾಲಯದ ಆಚರಣೆಗಳು ವಿಭಿನ್ನವಾಗಿರುತ್ತವೆ. ಅಲ್ಲದೆ, ಇದನ್ನೊಂದು ವಿಶೇಷವೆಂಬಂತೆ ಆಚರಿಸಲಾಗುತ್ತದೆ. ಇದಕ್ಕಾಗಿ ದೂರದೂರುಗಳಿಂದ ಸಾಧುಸಂತರು, ಅಘೋರಿ ಬಾಬಾಗಳು ಈ ದೇವಾಲಯದತ್ತ ಹರಿದು ಬರುತ್ತಾರೆ. ಇದೇ ಅಂಬುಬಾಚಿ ಮೇಳ. ಇಷ್ಟಕ್ಕೂ ಇದು ಯಾವ ದೇವಾಲಯ? ಈ ವರ್ಷ ಯಾವಾಗ ಮೇಳ ನಡೆಯಲಿದೆ ವಿವರಗಳಿಗಾಗಿ ಕೆಳಗೆ ಸ್ಕ್ರಾಲ್ ಮಾಡಿ..
ಕಾಮಾಕ್ಯ ದೇವಾಲಯದ ವೈಶಿಷ್ಠ್ಯತೆ
ಇದು ಗುವಾಹಟಿಯ ಕಾಮಾಕ್ಯ ದೇವಸ್ಥಾನದಲ್ಲಿ ನಡೆಯುವ ಅಂಬುಬಾಚಿ ಮೇಳ. ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ 3 ದಿನಗಳ ಕಾಲ ಕಾಮಾಕ್ಯ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ಏಕೆಂದರೆ ಅಧಿದೇವತೆ - ದೇವಿ ಕಾಮಾಕ್ಯ - ಋತುಸ್ರಾವಕ್ಕೆ ಒಳಗಾಗುತ್ತಾಳೆ.
ಬೋಳು ತಲೆ ಸಮಸ್ಯೆಯೇ? ಈ ಗ್ರಹವನ್ನು ಶಾಂತಗೊಳಿಸಿ ನೋಡಿ, ಕೂದಲು ಉದುರೋದು ನಿಂತೀತು!
ಅಂಬು ಬಾಚಿ ಮೇಳ
'ಅಂಬು' ಪದದ ಅರ್ಥ ನೀರು ಮತ್ತು 'ವಾಸಿ' ಅಥವಾ 'ಬಾಚಿ' ಎಂದರೆ ಹರಿಯುವುದು. ಅಸ್ಸಾಮಿ/ಬಂಗಾಳಿ ಕ್ಯಾಲೆಂಡರ್‌ನ ಪ್ರಕಾರ 'ಆಶಾರಾ' ತಿಂಗಳಿನ ಮಾನ್ಸೂನ್ ಋತುವಿನಲ್ಲಿ ಅಂಬುಬಾಚಿ ಮೇಳವನ್ನು ಆಚರಿಸಲಾಗುತ್ತದೆ, ಇದು ಏಳನೇ ದಿನದಿಂದ ಪ್ರಾರಂಭವಾಗುತ್ತದೆ. ಇದು ಗ್ರೆಗೋರಿಯನ್ ಕ್ಯಾಲೆಂಡರ್ನ ಜೂನ್ 21 ಅಥವಾ 22ರಂದು ಬರುತ್ತದೆ. ಈ ವರ್ಷ ಅಂಬುಬಾಚಿ ಮೇಳವು ಜೂನ್ 22 ರಂದು ಪ್ರಾರಂಭವಾಗಲಿದೆ. ಬೆಳಿಗ್ಗೆ 2:30 ಕ್ಕೆ ಪ್ರಾರಂಭವಾಗುತ್ತದೆ. ದೇವಾಲಯದ ಮುಖ್ಯ ಬಾಗಿಲು ಜೂನ್ 23, 24 ಮತ್ತು 25 ರಂದು ಮುಚ್ಚಿರುತ್ತದೆ ಮತ್ತು ಜೂನ್ 26ರಂದು ತೆರೆಯಲಾಗುತ್ತದೆ. ಮೇಳದಲ್ಲಿ ಪಾಲ್ಗೊಳ್ಳಲು ಲಕ್ಷಗಟ್ಟಲೆ ಯಾತ್ರಿಕರು - ಸಾಧುಗಳು, ಸನ್ಯಾಸಿಗಳು, ಅಘೋರಿ ಬಾಬಾಗಳು ಮತ್ತು ಸಾಮಾನ್ಯರು - ಕಾಮಾಕಿಯ ದೇವಸ್ಥಾನಕ್ಕೆ ಬರುತ್ತಾರೆ.
ಸಾಮಾನ್ಯ ಮಹಿಳೆಯಂತೆ ಋತುಮತಿಯಾಗುವ ದೇವತೆ
ದೇವಿ ಕಾಮಾಕ್ಯ ಋತುಮತಿಯಾದಾಗ 3 ದಿನಗಳ ಕಾಲ ವಿಶ್ರಾಂತಿ ಪಡೆಯುತ್ತಾಳೆ - ಇದು ಕೆಲವು ಸಮಾಜಗಳಲ್ಲಿ ಇನ್ನೂ ಅನುಸರಿಸುತ್ತಿರುವ ಸಾಂಪ್ರದಾಯಿಕ 'ಮುಟ್ಟಿನ ಏಕಾಂತ' ಅವಧಿಯನ್ನು ಹೋಲುತ್ತದೆ. ಈ ದಿನಗಳಲ್ಲಿ ಭಕ್ತರು ಅಡುಗೆ ಮಾಡುವುದು, ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದು, ಪೂಜೆ ಮತ್ತು ಪವಿತ್ರ ಪುಸ್ತಕಗಳನ್ನು ಓದುವುದನ್ನು ನಿಷೇಧಿಸಲಾಗಿದೆ.
ರಹಸ್ಯಗಳನ್ನೇ ಒಡಲಲ್ಲಿಟ್ಟುಕೊಂಡಿರುವ ಈ ಕುಂಡ 5000 ವರ್ಷ ಕಳೆದರೂ ಬತ್ತಿಲ್ಲ!
3 ದಿನದ ಅವಧಿಯ ನಂತರ, ದೇವಿಗೆ ಸ್ನಾನ ಮಾಡಿಸಲಾಗುತ್ತದೆ ಮತ್ತು ಆಕೆಯು ತನ್ನ ಪರಿಶುದ್ಧತೆಯನ್ನು ಮರಳಿ ಪಡೆಯಲು ವಿವಿಧ ಆಚರಣೆಗಳನ್ನು ನಡೆಸಲಾಗುತ್ತದೆ. ಜನರು ಮನೆಯ ವಸ್ತುಗಳು, ಪಾತ್ರೆಗಳು ಮತ್ತು ಬಟ್ಟೆಗಳ ಮೇಲೆ ಪವಿತ್ರ ನೀರನ್ನು ಚಿಮುಕಿಸುವ ಮೂಲಕ ನಾಲ್ಕನೇ ದಿನದಲ್ಲಿ ತಮ್ಮ ಮನೆಗಳನ್ನು ಶುದ್ಧೀಕರಿಸುತ್ತಾರೆ.
ನಾಲ್ಕನೇ ದಿನದಂದು ದೇವಾಲಯದ ಬಾಗಿಲುಗಳನ್ನು ಮತ್ತೆ ತೆರೆಯಲಾಗುತ್ತದೆ ಮತ್ತು ಭಕ್ತರು ಪ್ರಾರ್ಥನೆ ಸಲ್ಲಿಸಲು ದೊಡ್ಡ ಸಂಖ್ಯೆಯಲ್ಲಿ ಹರಿದು ಬರುತ್ತಾರೆ. ಪ್ರಸಾದವನ್ನು ಎರಡು ರೂಪಗಳಲ್ಲಿ ವಿತರಿಸಲಾಗುತ್ತದೆ, ಅವುಗಳೆಂದರೆ ಅಂಗೋಧಕ್ (ಅಕ್ಷರಶಃ ದೇಹದ ದ್ರವ ಭಾಗ) ಅಥವಾ ಚಿಲುಮೆಯ ನೀರು, ಮತ್ತು ಅಂಗಬಾಸ್ತ್ರ (ಅಕ್ಷರಶಃ ದೇಹವನ್ನು ಮುಚ್ಚುವ ಬಟ್ಟೆ), ಇದು ದೇವಿಯನ್ನು ಮುಚ್ಚಲು ಬಳಸುವ ಕೆಂಪು ಬಟ್ಟೆಯ ತುಂಡಾಗಿದೆ.
ಯೋನಿ ಆರಾಧನೆ
ಕಾಮಾಖ್ಯ ದೇವಸ್ಥಾನದಲ್ಲಿ, ದೇವಿಯನ್ನು ಸ್ವತಃ ಸಾಕಾರಗೊಳಿಸುವ ಯಾವುದೇ ವಿಗ್ರಹವಿಲ್ಲ. ಬದಲಾಗಿ, ದೇವಿಯ ಯೋನಿಯೇ ವಿಗ್ರಹವಾಗಿದ್ದು, ಆರಾಧನೆಯ ಕೇಂದ್ರವಾಗಿದೆ.
ಅದರ ಹಿಂದಿನ ಪೌರಾಣಿಕ ಕಥೆಯು ಸತಿ (ಅಥವಾ ಪಾರ್ವತಿ) ಮತ್ತು ಆಕೆಯ ತಂದೆ ದಕ್ಷರ ನಡುವಿನ ಉದ್ವಿಗ್ನತೆಗೆ ಸಂಬಂಧಿಸಿದೆ. ಶಿವನನ್ನು ವಿವಾಹವಾದ ಮಗಳ ಬಗ್ಗೆ ದಕ್ಷನಿಗೆ ಕೋಪವಿತ್ತು.
ಸತಿ ಮತ್ತು ಶಿವನನ್ನು ಆಹ್ವಾನಿಸದಿದ್ದರೂ ಸಹ ತನ್ನ ತಂದೆ ದಕ್ಷ ಮಾಡಿದ ಯಜ್ಞಕ್ಕೆ ಸತಿ ತೆರಳಿದ್ದಳು. ಆಗ ದಕ್ಷ ಶಿವನನ್ನು ಹಾಗೂ ಆತನನ್ನು ವರಿಸಿದ ಸತಿಯನ್ನು ಬಗೆಬಗೆಯಾಗಿ ಅವಮಾನಿಸಿದ್ದರಿಂದ ನೊಂದ ಸತಿಯು ಯಜ್ಞದ ಬೆಂಕಿಗೆ ಹಾರಿದಳು. ದುಃಖಿತನಾದ ಶಿವನು ಆಕೆಯ ಛಿದ್ರಗೊಂಡ ದೇಹವನ್ನು ಹಿಡಿದುಕೊಂಡು ದುಃಖದಿಂದ ಆಕಾಶದಲ್ಲಿ ಹಾರಿದನು. ಆಗ ಆಕೆಯ ದೇಹದ ಭಾಗಗಳು ವಿವಿಧ ಸ್ಥಳಗಳಲ್ಲಿ ಬಿದ್ದವು, ಅವೆಲ್ಲವೂ ಇಂದು ಶಕ್ತಿ ಪೀಠಗಳೆಂದು ಗುರುತಿಸಲ್ಪಟ್ಟಿವೆ.
ಕಾಮಾಖ್ಯ ದೇವಾಲಯವು ಸತಿಯ ಯೋನಿಯು ಇಳಿದ ಸ್ಥಳವಾಗಿದೆ- ಅದಕ್ಕಾಗಿಯೇ ಇಂದು ಯೋನಿಯು ದೇವಾಲಯದಲ್ಲಿ ಪೂಜಾ ಕೇಂದ್ರವಾಗಿದೆ.
ಸ್ತ್ರೀ ತತ್ವ
ಮೂಲಭೂತವಾಗಿ, ಕಾಮಾಖ್ಯ ದೇವಾಲಯವು ದೈವಿಕ ಸ್ತ್ರೀ ತತ್ವವನ್ನು ಪ್ರತಿನಿಧಿಸುತ್ತದೆ. ಸಂಘಟಿತ ಧರ್ಮಗಳಲ್ಲಿ ದೀರ್ಘಕಾಲ ಪ್ರಾಬಲ್ಯ ಹೊಂದಿರುವ ಪುಲ್ಲಿಂಗ ಆರಾಧನಾ ರಚನೆಗಳಿಗೆ ಸ್ತ್ರೀಲಿಂಗ ಪ್ರತಿರೂಪವಿದೆ ಎಂಬ ಆಧ್ಯಾತ್ಮಿಕ ಪರಿಕಲ್ಪನೆಯಾಗಿದೆ. ಶಕ್ತಿಧರ್ಮದಲ್ಲಿ, ದೇವಿಯನ್ನು ಅತ್ಯುನ್ನತ ದೈವತ್ವವೆಂದು ಪೂಜಿಸಲಾಗುತ್ತದೆ. ಇತರ ಎಲ್ಲಾ ರೀತಿಯ ದೈವತ್ವವನ್ನು ಅವಳ ವೈವಿಧ್ಯಮಯ ಅಭಿವ್ಯಕ್ತಿಗಳು ಎಂದು ಪರಿಗಣಿಸಲಾಗುತ್ತದೆ.