ಜೈನದೀಕ್ಷೆ ಪಡೆಯುತ್ತಿದ್ದಾಳೆ ನೂರಾರು ಕೋಟಿ ಒಡೆಯನ 8 ವರ್ಷದ ಪುಟಾಣಿ!

By Suvarna NewsFirst Published Jan 18, 2023, 10:31 AM IST
Highlights

ಆಕೆ ಮನಸ್ಸು ಮಾಡಿದ್ದರೆ ಮುಂದಿನ 10-15 ವರ್ಷಗಳಲ್ಲಿ ಜಗತ್ತಿನ ಪ್ರಮುಖ ನಗರಗಳಲ್ಲೆಲ್ಲ ಇರುವ ತಂದೆಯ ನೂರಾರು ಕೋಟಿಯ ವಜ್ರದ ಬಿಸ್ನೆಸ್‌ನ ಅಧಿಪತಿಯಾಗಿ ಮೆರೆಯಬಹುದಿತ್ತು. ಆದರೆ ಅದನ್ನೆಲ್ಲ ಬಿಟ್ಟು ಜೈನ ದೀಕ್ಷೆ ತೆಗೆದುಕೊಳ್ಳಲು ಸಜ್ಜಾಗಿದ್ದಾಳೆ ಕೇವಲ 8 ವರ್ಷದ ಪುಟಾಣಿ ದೇವಾಂಶಿ ಸಾಂಘ್ವಿ.

ಆಕೆ ವಜ್ರ ವ್ಯಾಪಾರ ಮಾಡುವ ಕೋಟ್ಯಧಿಪತಿಯ ಮುದ್ದು ಮಗಳು. ಆಟ ಆಡಿಕೊಂಡು, ಓದಿಕೊಂಡು, ಕುಣಿದುಕೊಂಡಿರಬೇಕಾದ ವಯಸ್ಸು ಅವಳದು. ಆದರೆ, ಇದುವರೆಗೂ ತಂದೆಯ ಐಶಾರಾಮಿ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದ ಆಕೆ ಇನ್ನು ಮುಂದೆ ಬರಿಗಾಲಿನಲ್ಲಿ ನಡೆದಾಟವನ್ನಷ್ಟೇ ಮಾಡಬಹುದು, ಬ್ರ್ಯಾಂಡೆಂಡ್ ಬಟ್ಟೆಗಳನ್ನು ಧರಿಸುತ್ತಿದ್ದ ಆಕೆ ಅವನ್ನೆಲ್ಲ ದೂರವಿರಿಸಿ, ಬಿಳಿಯ ನೂಲಿನ ವಸ್ತ್ರ ಮಾತ್ರ ಧರಿಸಬಹುದು. ಬೇಕು ಬೇಕಾದ್ದನ್ನೆಲ್ಲ ಬೇಕಾದ ರೆಸ್ಟೋರೆಂಟ್‌ನಲ್ಲಿ ಕೊಡಿಸಿಕೊಂಡು ತಿನ್ನುತ್ತಿದ್ದ ಆಕೆ ಇನ್ನು ಕೇವಲ ಭಿಕ್ಷೆ ಸಿಕ್ಕ ಆಹಾರವನ್ನು ಮಾತ್ರ ಸ್ವೀಕರಿಸಬೇಕು. ಇನ್ನೆಂದೂ ಆಕೆ ಆಧುನಿಕ ತಂತ್ರಜ್ಞಾನಗಳನ್ನು ಬಳಸುವಂತಿಲ್ಲ, ಎಷ್ಟೇ ಶೆಖೆಯಾದರೂ ಫ್ಯಾನ್ ಬಳಸುವಂಕಿಲ್ಲ, ವಾಹನ ಏರುವಂತಿಲ್ಲ, ಮೇಕಪ್ ಮಾಡಿಕೊಳ್ಳುವಂತಿಲ್ಲ, ಎಷ್ಟೇ ನೋವಾದರೂ ಅಪ್ಪಾ, ಅಮ್ಮಾ ಎಂದು ಅಳುವಂತಿಲ್ಲ!
ಆಕೆ ಮನಸ್ಸು ಮಾಡಿದ್ದರೆ ಮುಂದಿನ 10-15 ವರ್ಷಗಳಲ್ಲಿ ಜಗತ್ತಿನ ಪ್ರಮುಖ ನಗರಗಳಲ್ಲೆಲ್ಲ ಇರುವ ತಂದೆಯ ವಜ್ರದ ಬಿಸ್ನೆಸ್‌ನ ಅಧಿಪತಿಯಾಗಿ ಮೆರೆಯಬಹುದಿತ್ತು. ಆದರೆ ಅದನ್ನೆಲ್ಲ ಬಿಟ್ಟು, ಎಲ್ಲವನ್ನೂ ತೊರೆದು ಜೈನ ದೀಕ್ಷೆ ತೆಗೆದುಕೊಳ್ಳಲು ಸಜ್ಜಾಗಿದ್ದಾಳೆ.  ಇಷ್ಟಕ್ಕೂ ಆಕೆಯ ವಯಸ್ಸೆಷ್ಟು ಅಂತೀರಾ? ಕೇವಲ 8 ವರ್ಷಗಳು!

ಹೌದು, ಗುಜರಾತ್ ಮೂಲದ ವಜ್ರ ಸಾಮ್ರಾಜ್ಯದ ವ್ಯಾಪಾರಿಯ ಎಂಟು ವರ್ಷದ ಪುತ್ರಿ ದೇವಾಂಶಿ ಸಾಂಘ್ವಿ ಬುಧವಾರ ಸನ್ಯಾಸತ್ವವನ್ನು ಸ್ವೀಕರಿಸಲು ಸಜ್ಜಾಗಿದ್ದಾಳೆ. ಹಾಡು, ನೃತ್ಯ, ಸೊಗಸು, ಅಲಂಕೃತ ಆನೆಗಳು, ಕುದುರೆಗಳನ್ನು ಒಳಗೊಂಡ ಭವ್ಯ ಸಮಾರಂಭದಲ್ಲಿ ಈ ಎಲ್ಲ ಐಶಾರಾಮಿತನವನ್ನು ತೊರೆದು ಸನ್ಯಾಸಿನಿಯಾಗಲಿದ್ದಾಳೆ. 

Bad luck Remedies: ದುರದೃಷ್ಟ ಓಡಿಸ್ಬೇಕಾ? ಇಲ್ಲಿವೆ ಪರಿಹಾರ ಮಾರ್ಗಗಳು

ವ್ಯಾಪಾರಿಯ ಇಬ್ಬರು ಹೆಣ್ಣುಮಕ್ಕಳಲ್ಲಿ ಹಿರಿಯಳಾದ ದೇವಾಂಶಿ ಸಾಂಘ್ವಿ ಇದುವರೆಗೂ 367 ದೀಕ್ಷಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಸನ್ಯಾಸಿಯಾಗಿ ಪರಿವರ್ತನೆಯಾಗಲು ಇದೇ ಕಾರಣವಾಯಿತು ಎಂದು ಮಂಗಳವಾರದ ಆಚರಣೆಯ ಸಂದರ್ಭದಲ್ಲಿ ಕುಟುಂಬದ ಸ್ನೇಹಿತರೊಬ್ಬರು ತಿಳಿಸಿದ್ದಾರೆ. 

ಬಹುಕೋಟಿ ಕಂಪನಿಯ ಒಡತಿಯಾಗುವ ಆಯ್ಕೆ ಇತ್ತು!
ಮಗು ಮತ್ತು ಅವರ ಕುಟುಂಬದವರು ಆಯ್ಕೆ ಮಾಡಿಕೊಂಡ ದಾರಿಗೆ ದೇವಾಂಶಿ ದೊಡ್ಡವಳಾದ ಮೇಲೆ ಬಹುಕೋಟಿ ವಜ್ರದ ಕಂಪನಿಯ ಮಾಲೀಕಳಾಗುತ್ತಿದ್ದಳು. ಆಕೆಯ ತಂದೆ ಧನೇಶ್ ಸಾಂಘ್ವಿ 'ಸಾಂಘ್ವಿ ಅಂಡ್ ಸನ್ಸ್‌'ನ ಕುಲಪತಿಯಾದ ಮೋಹನ್ ಸಾಂಘ್ವಿಯವರ ಏಕೈಕ ಪುತ್ರರಾಗಿದ್ದಾರೆ. ಇದು ವಿಶ್ವದಾದ್ಯಂತ ಶಾಖೆಗಳನ್ನು ಹೊಂದಿರುವ ರಾಜ್ಯದ ಅತ್ಯಂತ ಹಳೆಯ ವಜ್ರ-ತಯಾರಿಸುವ ಕಂಪನಿಗಳಲ್ಲಿ ಒಂದಾಗಿದೆ ಮತ್ತು ಬಹುಶಃ ನೂರಾರು ಕೋಟಿಗಳಷ್ಟು ವಾರ್ಷಿಕ ವಹಿವಾಟು ನಡೆಸುತ್ತದೆ. ದೇವಾಂಶಿ ಅವರ ಒಡಹುಟ್ಟಿದ ಕಾವ್ಯಳಿಗೆ ಈಗ ಐದು ವರ್ಷ.

ಧನೇಶ್, ಅವರ ಪತ್ನಿ ಅಮಿ ಮತ್ತು ಇಬ್ಬರು ಹೆಣ್ಣುಮಕ್ಕಳು ಶ್ರೀಮಂತಿಕೆಯಲ್ಲಿ ಜನಿಸಿದರೂ ಸರಳ, ಧಾರ್ಮಿಕ ಜೀವನಶೈಲಿಯನ್ನು ಅನುಸರಿಸುತ್ತಾರೆ. ದೇವಾಂಶಿ ತನ್ನ ಬಾಲ್ಯದಿಂದಲೂ ದಿನಕ್ಕೆ ಮೂರು ಬಾರಿ ಪ್ರಾರ್ಥನೆಯ ಕಟ್ಟುನಿಟ್ಟಾದ ದಿನಚರಿಯನ್ನು ಅನುಸರಿಸಿದ್ದಾಳೆ ಎಂದು ಕುಟುಂಬದ ಸ್ನೇಹಿತರು ಹೇಳಿದ್ದಾರೆ.

ಜೈನ ಸನ್ಯಾಸ ದೀಕ್ಷೆ ಪಡೆದ ಯುವತಿ: ಇಪ್ಪತ್ತರ ಹರೆಯದಲ್ಲೇ ಆಧ್ಯಾತ್ಮದತ್ತ ಒಲವು

ಕನಿಷ್ಠ ವಯಸ್ಸು
ದೀಕ್ಷೆಯು ಲೌಕಿಕ ಜೀವನವನ್ನು ತ್ಯಜಿಸಲು ನಡೆಸುವ ಧಾರ್ಮಿಕ ಸಮಾರಂಭಕ್ಕೆ ಸಿದ್ಧತೆಯಾಗಿದೆ ಅಥವಾ ಪವಿತ್ರೀಕರಣವಾಗಿದೆ. ದೀಕ್ಷೆಗೆ ಕನಿಷ್ಠ ವಯಸ್ಸು ಎಂಟು ವರ್ಷಗಳು. ಆದರೆ ಅಸಾಧಾರಣ ಸಂದರ್ಭಗಳಲ್ಲಿ, ನಾಲ್ಕು ಅಥವಾ ಆರನೇ ವಯಸ್ಸಿನಲ್ಲಿಯೂ ದೀಕ್ಷೆ ನೀಡಲಾಗುತ್ತದೆ. ಭಾರತದಲ್ಲಿ ವಿವಿಧ ಜೈನ ಪಂಥಗಳಲ್ಲಿ ಸರಿಸುಮಾರು 600 ಬಾಲ ಸನ್ಯಾಸಿಗಳಿದ್ದಾರೆ ಎಂದು ತಿಳಿಸುತ್ತದೆ ಗೂಗಲ್ ಅಂಕಿಅಂಶ.

ಜೈನ ದೀಕ್ಷೆ ಪಡೆದವರು ಸನ್ಯಾಸಿಗಳ ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿ ತಮ್ಮ ಧರ್ಮದ ತತ್ವಗಳನ್ನು ಅನುಸರಿಸುತ್ತಾರೆ. ಇವುಗಳು ದೈನಂದಿನ ಜೀವನಕ್ಕೆ ವಿವರವಾದ ಪ್ರಿಸ್ಕ್ರಿಪ್ಷನ್ಗಳನ್ನು ಒಳಗೊಂಡಿರುತ್ತವೆ, ವಿಶೇಷವಾಗಿ ಏನು ತಿನ್ನಬೇಕು, ಏನು ತಿನ್ನಬಾರದು ಮತ್ತು ಯಾವಾಗ ತಿನ್ನಬೇಕು ಎಲ್ಲಕ್ಕೂ ನಿಯಮಗಳಿರುತ್ತವೆ.
 ಸುಮಾರು 10 ವರ್ಷದ ಹಿಂದೆ ವರ್ಷಕ್ಕೆ ಹತ್ತೋ ಇಪ್ಪತ್ತೋ ಮಕ್ಕಳು ದೀಕ್ಷೆ ಪಡೆಯುತ್ತಿದ್ದರೆ, ಇತ್ತೀಚಿನ ವರ್ಷಗಳಲ್ಲಿ ಈ ಸಂಖ್ಯೆ 400 ದಾಟಿರುವುದು ವಿಪರ್ಯಾಸ. ಇದಕ್ಕೆ ಆಧುನಿಕ ಜಗತ್ತಿನ ಒತ್ತಡಗಳೇ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ. 

click me!