ಈ ದೇವಸ್ಥಾನದಲ್ಲಿ ಈಗ ಪ್ರತಿಷ್ಠಾಪನೆಯಾಗಿರುವ ದೇವಿಯು 200 ವರ್ಷಗಳ ಹಿಂದೆ ಇಲ್ಲಿ ಕಣ್ಮರೆಯಾಗಿದ್ದ ದೇವರ ವಿಗ್ರಹವನ್ನು ಹುಡುಕಿಕೊಟ್ಟಿದ್ದಾಳೆ. ಏನಿದು ಪವಾಡ?
ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು ಹೊರವಲಯದ ರಾಮೋಹಳ್ಳಿ(Ramohalli)ಯ ಪುರಾತನ ದೇವಾಲಯವೊಂದರಲ್ಲಿ ಪವಾಡವೊಂದು ನಡೆದಿದೆ. ಅದು ಕೆಂಗೇರಿ ರಾಮೊಹಳ್ಳಿಯ ಪುಟ್ಟ ಗ್ರಾಮ ಲಕ್ಕಯ್ಯನಪಾಳ್ಯ. ಅಲ್ಲೊಂದು ದೇವಸ್ಥಾನ. ಆ ದೇವಸ್ಥಾನ(Temple) ಇತ್ತು ಅನ್ನೋದು ಎಲ್ಲರಿಗೂ ಗೊತ್ತಿತ್ತು. ಆದ್ರೆ 200 ವರ್ಷದ ಹಿಂದೆ ದೇವಸ್ಥಾನ ಪಾಳು ಬಿದ್ದು ನಾಶವಾಗಿತ್ತು. ಕಳೆದ ವರ್ಷ ಗ್ರಾಮದಲ್ಲಿ ಕಾಲಭೈರವ ಅರ್ಚಕರ ಕುಟುಂಬ ದೇವರ ಮೂಲ ವಿಗ್ರಹವಿಲ್ಲದೇ ದೇವಸ್ಥಾನವನ್ನು ಕಟ್ಟಿದ್ರು. ಆದ್ರೆ ಮೂಲವಿಗ್ರಹ ಎಲ್ಲಿದೆ ? ಏನಾಗಿರಬಹುದು? ಮೂಲ ವಿಗ್ರಹವಿಲ್ಲದೆ ಇಲ್ಲಿ ಪೂಜೆ ಮಾಡಿದ್ರೆ ದೇವ್ರಿಗೆ ಸಲ್ಲುತ್ತಾ? ಎಂಬಿತ್ಯಾದಿ ಪ್ರಶ್ನೆಗಳು ಗ್ರಾಮಸ್ಥರಿಗೆ ಕಾಡಿತ್ತು. ಹೀಗಾಗಿ ಮೂಲ ವಿಗ್ರಹ ಹುಡುಕಲೇಬೇಕು ಅಂತಾ ಪಟ್ಟು ಹಿಡಿದ ಗ್ರಾಮಸ್ಥರು ಈಗ ಪೂಜಿಸುತ್ತಿದ್ದ ದೇವರನ್ನೇ ಕಟ್ಟಿ ಹಾಕಿ ಪಲ್ಲಕ್ಕಿಯಲ್ಲಿ ಹೊತ್ತು ಮೂಲ ವಿಗ್ರಹ ಹುಡುಕಿಕೊಡು ಅಂತಾ ದೇವರಿಗೆ ಪ್ರಶ್ನೆ ಹಾಕಿದ್ರು. ಮುಂದೆ ನಡೆದಿದ್ದು ಎಲ್ಲವೂ ಕೂಡ ಅಚ್ಚರಿ ವಿಸ್ಮಯ.
ಗುರುವಾಯೂರು ದೇವಾಲಯದ ಕುರಿತ ಆಸಕ್ತಿಕರ ಸಂಗತಿಗಳಿವು..
ಯೆಸ್, 200 ವರ್ಷದ ಹಿಂದೆ ರಾಮೋಹಳ್ಳಿಯಲ್ಲಿ ಇದ್ದ ದೇವಸ್ಥಾನ ಕಾಲಕ್ರಮೇಣ ಪಾಳು ಬಿದ್ದು ನೆಲಸಮವಾಗಿತ್ತು. ಅಲ್ಲಿದ್ದ ವಿಗ್ರಹವನ್ನು ಅನೇಕರು ಕದ್ದೊಯ್ಯಲು ಪ್ರಯತ್ನ ಮಾಡಿದ್ರು ಅಂತಾ ಕೆಲವರು ಹೇಳ್ತಾರೆ. ಆದ್ರೆ ದೇವರ ಮೂರ್ತಿ ಎಲ್ಲಿ ಹೋಯ್ತು ಅನ್ನೋದು ಜನ್ರಿಗೆ ಗೊತ್ತಾಗಲಿಲ್ಲ. ಅದಾದ ಬಳಿಕ ಕಳೆದ ವರ್ಷ ಇಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಜೊತೆಗೆ ಮೂಲ ವಿಗ್ರಹಕ್ಕಾಗಿ ದೇವಿಯ ಮುಂದೆ ಕವಡೆ ಹಾಕಿ ಪ್ರಶ್ನೆ ಇಟ್ಟಿದ್ದಾರೆ. ಪ್ರಶ್ನೆಯಲ್ಲಿ ದೇವಿ ವಿಗ್ರಹ ಪತ್ತೆಯಾಗುತ್ತೆ ಎಂಬುದು ತಿಳಿದುಬಂದಿತ್ತು. ಹೀಗಾಗಿ ಗ್ರಾಮಸ್ಥರು ಜೂನ್ 8ರಂದು ದೇವಿಯ ಪಲ್ಲಕ್ಕಿ ಹೊತ್ತು ವಿಗ್ರಹಕ್ಕೆ ಹುಡುಕಾಟ ನಡೆಸಿದ್ದಾರೆ. ಆಗ ಎರಡು ದೇವಿಯ ವಿಗ್ರಹ ಸಿಕ್ಕಿತ್ತು. ಇನ್ನೊಂದು ಮೂರ್ತಿ ಇರುವ ಬಗ್ಗೆಯೂ ಪ್ರಶ್ನೆಯಲ್ಲಿ ಗೊತ್ತಾಯ್ತು. ಅದಕ್ಕಾಗಿ ಇಂದು ಮತ್ತೆ ದೇವಿಯನ್ನು ಜಾಗ ತೋರಿಸುವಂತೆ ಪ್ರಶ್ನೆ ಇಟ್ಟು ಪಲ್ಲಕ್ಕಿ ಹೊತ್ತು ಸಾಗಿದ್ದಾರೆ. ಹುತ್ತದ ಬಳಿ ದೇವಿ ಪಲ್ಲಕ್ಕಿ ಬಂದು ನಿಂತಿದೆ. ಅದಾದ ಬಳಿಕ ಹುತ್ತವನ್ನೇ ಕೆಡವಿದ್ದಾರೆ..ಆಗ ಹಳೆಯ ಕಾಲ ಮಣ್ಣಿನಡಿಯಲ್ಲಿ ಹೂತು ಹೋದ ಲಿಂಗಸ್ವರೂಪಿ ವಿಗ್ರಹ ಹಾಗೂ ಕಮಂಡಲ ಪತ್ತೆ ಯಾಗಿದೆ. ಇದು ಸ್ಥಳೀಯ ಗ್ರಾಮಸ್ಥರಿಗೆ ಪವಾಡ ಅನ್ಸಿದ್ರೂ ಖುಷಿಯಿಂದ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ವೃಷಭ ರಾಶಿ ಮಾಸಿಕ ಭವಿಷ್ಯ: ಹೊಸ ಉದ್ಯೋಗ, ಭಾರಿ ಧನಲಾಭ!
ಹುತ್ತದಲ್ಲಿ ಸಿಕ್ಕಿದ ಲಿಂಗಸ್ವರೂಪಿ ವಿಗ್ರಹವನ್ನು ತೆರೆದು ನೋಡಿದಾಗ ಪುರಾತನ ಗಣೇಶನ ಮೂರ್ತಿ ಪತ್ತೆಯಾಗಿದೆ. ಮೂರು ಕೆಜಿ ಇರುವ ವಿಗ್ರಹಕ್ಕೆ ಪೂಜೆ ಸಲ್ಲಿಸಿದ್ದಾರೆ. ಪುರಾತನ ಲಿಪಿ, ಸರ್ಪದ ಕೆತ್ತನೆ, ಸೂರ್ಯನ ಕೆತ್ತನೆಯ ವಿಗ್ರಹ ಬಲು ಅಪರೂಪವಾಗಿದೆ. ಇದು ದೇವರ ಮಹಿಮೆಯಾಗಿದ್ದು ಇದನ್ನು ಪೂಜೆ ಮಾಡಿ ಪ್ರತಿಷ್ಠಾಪನೆ ಮಾಡಲು ಗ್ರಾಮಸ್ಥರು ಹಾಗೂ ಪುರೋಹಿತರು ನಿರ್ಧರಿಸಿದ್ದಾರೆ. ಇದು ಪವಾಡವೋ ವಿಸ್ಮಯವೋ ಅನ್ನೋದು ಜನ್ರ ನಂಬಿಕೆಗೆ ಬಿಟ್ಟಿರೋ ವಿಚಾರ. ಆದ್ರೆ 200 ವರ್ಷ ಹಿಂದೆ ಕಳೆದುಹೋದ ವಿಗ್ರಹ ಮತ್ತೆ ಸಿಕ್ಕಿದ್ದು ಗ್ರಾಮಸ್ಥರಲ್ಲಿ ಸಂತಸ ತಂದಿದೆ. ಹೀಗಾಗಿ ಮುಂದಿನ ವರ್ಷ ವಿಜೃಂಭಣೆಯಿಂದ ದೇವಿ ಮೆರವಣಿಗೆ ಮೂಲಕ ಜಾತ್ರೋತ್ಸವ ಆಚರಿಸಲು ಮುಂದಾಗಿದ್ದಾರೆ.