ನಮ್ಮ ಪ್ರೀತಿಪಾತ್ರರಿಗೆ ನೀಡುವ ಗಿಫ್ಟ್ ಹೇಗಿರಬೇಕೆಂದರೆ ಗಿಫ್ಟ್ ಬಾಕ್ಸ್ ತೆರೆದ ತಕ್ಷಣ ಅವರ ಮುಖದಲ್ಲಿ ಅಚ್ಚರಿ ಜೊತೆಗೆ ಖುಷಿಯೂ ಕಾಣಿಸಿಕೊಳ್ಳಬೇಕು. ಎಂಬ ಬಯಕೆ ಎಲ್ಲರಲ್ಲೂ ಇರುತ್ತದೆ. ಆದರೆ, ಅಂಥ ಗಿಫ್ಟ್ ಯಾವುದು? ಎನ್ನುವುದೇ ಕೆಲವರಿಗೆ ದೊಡ್ಡ ತಲೆನೋವಾಗಿ ಕಾಡುತ್ತದೆ. ನೀವು ಕೂಡ ಈ ಕ್ರಿಸ್‍ಮಸ್‍ಗೆ ಏನು ಗಿಫ್ಟ್ ನೀಡಬೇಕು ಎಂಬ ಗೊಂದಲದಲ್ಲಿದ್ದೀರಾ? ಇದನ್ನೊಮ್ಮೆ ಓದಿ.
ಕ್ರಿಸ್‍ಮಸ್ ಎಂದ ತಕ್ಷಣ ನೆನಪಿಗೆ ಬರುವುದು ಸಾಂತಾ ಕ್ಲಾಸ್ ಹಾಗೂ ಆತ ನೀಡುವ ಗಿಫ್ಟ್‍ಗಳು. ಇತ್ತೀಚಿನ ದಿನಗಳಲ್ಲಿ ಸ್ನೇಹಿತರಿಗೆ, ಬಂಧುಗಳಿಗೆ ಕ್ರಿಸ್‍ಮಸ್‍ಗೆ ಸಪ್ರ್ರೈಸ್ ಗಿಫ್ಟ್‍ಗಳನ್ನು ನೀಡುವುದು ಟ್ರೆಂಡ್ ಆಗಿದೆ. ಆಫೀಸ್‍ಗಳಲ್ಲಿ ಕೂಡ ಸಹೋದ್ಯೋಗಿಗಳು ಪರಸ್ಪರ ಗಿಫ್ಟ್‍ಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಕ್ರಿಸ್‍ಮಸ್ ಸಂಭ್ರಮಕ್ಕೆ ಮತ್ತಷ್ಟು ರಂಗು ತುಂಬುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಹಾಗಾದ್ರೆ ಈ ಬಾರಿಯ ಕ್ರಿಸ್‍ಮಸ್‍ಗೆ ಏನೆಲ್ಲ ಗಿಫ್ಟ್ ನೀಡಬಹುದು? ನೋಡೋಣ ಬನ್ನಿ.
ಚಾಕಲೇಟ್ಸ್: ಇದು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ಇಷ್ಟವಾಗುವ ಗಿಫ್ಟ್. ದೊಡ್ಡ ಬಾರ್ ಚಾಕಲೇಟ್‍ಗಳು, ನಾನಾ ವಿನ್ಯಾಸದ ಚಾಕಲೇಟ್‍ಗಳನ್ನೊಳಗೊಂಡಿರುವ ಗಿಫ್ಟ್ ಪ್ಯಾಕ್‍ಗಳನ್ನು ಕ್ರಿಸ್‍ಮಸ್ ಉಡುಗೊರೆಯಾಗಿ ನೀಡಬಹುದು. ಚಾಕಲೇಟ್ ಬಾಕ್ಸ್ ನೋಡಿದ ತಕ್ಷಣ ಗಿಫ್ಟ್ ಪಡೆದವರ ಮುಖದಲ್ಲಿ ಮಂದಹಾಸ ಮೂಡದಿದ್ರೆ ಹೇಳಿ.
ಪುಸ್ತಕ ಮತ್ತು ಪೆನ್: ಕೆಲವರಿಗೆ ಪುಸ್ತಕಗಳೆಂದರೆ ಪಂಚಪ್ರಾಣ. ಓದು ಹವ್ಯಾಸವುಳ್ಳವರಿಗೆ ಕ್ರಿಸ್‍ಮಸ್‍ಗೆ ಪುಸ್ತಕಕ್ಕಿಂತ ಉತ್ತಮ ಗಿಫ್ಟ್ ಬೇರೊಂದಿಲ್ಲ. ಕಥೆಗಳು, ಜೀವನಚರಿತ್ರೆ, ವ್ಯಕ್ತಿತ್ವ ವಿಕಾಸನ, ಇತಿಹಾಸ ಸಂಬಂಧಿ ಬರಹಗಳು ಸೇರಿದಂತೆ ನೀವು ಗಿಫ್ಟ್ ನೀಡಬಯಸುವ ವ್ಯಕ್ತಿಯ ಅಭಿರುಚಿಗೆ ತಕ್ಕುದಾದ ಪುಸ್ತಕ ಆರಿಸಿಕೊಳ್ಳಬಹುದು. ಪುಸ್ತಕದ ಜೊತೆಗೊಂದು ಚೆಂದದ ಪೆನ್‍ಯಿಟ್ಟು ಉಡುಗೊರೆ ನೀಡಿದರೆ ಸದಾ ಕಾಲ ಇದನ್ನು ಅವರು ತಮ್ಮ ಬಳಿ ಜೋಪಾನವಾಗಿಟ್ಟುಕೊಳ್ಳುವುದಂತೂ ಗ್ಯಾರಂಟಿ.
ಕಾಫಿ ಮಗ್: ಈ ಚುಮು ಚುಮು ಚಳಿಗೆ ಕೈಯಲ್ಲೊಂದು ಮಗ್ ಹಿಡಿದು ಒಂದೊಂದೇ ಗುಟುಕು ಕಾಫಿಯನ್ನು ಗಂಟಲಿಗೆ ಇಳಿಸುತ್ತಿದ್ದರೆ ಮೈ ಮನವೆಲ್ಲ ಬೆಚ್ಚಗಾಗಿ ಹೊಸ ಉತ್ಸಾಹ ಮೂಡುತ್ತದೆ. ಕಾಫಿ ಜೊತೆಗೆ ಮಗ್ ಮೇಲೆಯೂ ಲವ್ ಹುಟ್ಟುತ್ತದೆ. ಹೀಗಿರುವಾಗ ನೀವೇಕೆ ಆಕರ್ಷಕವಾದ ಕಾಫಿ ಮಗ್‍ನ್ನು ಕ್ರಿಸ್‍ಮಸ್ ಗಿಫ್ಟ್ ಆಗಿ ನೀಡಬಾರದು?
ಜಾಕೆಟ್ ಅಥವಾ ಪುಲ್‍ಓವರ್: ಚಳಿಗಾಲದಲ್ಲಿ ಮನೆಯಿಂದ ಹೊರಹೋಗುವಾಗ ಜಾಕೆಟ್ ಅಥವಾ ಪುಲ್ ಓವರ್ ಬೇಕೇಬೇಕು. ಹೀಗಾಗಿ ಜಾಕೆಟ್ ಅಥವಾ ಪುಲ್‍ಓವರ್ ಈ ಸಮಯದಲ್ಲಿ ಅತ್ಯಂತ ಉಪಯೋಗಕ್ಕೆ ಬರುವ ವಸ್ತುವಾಗಿದೆ. ನಿಮ್ಮ ಈ ಗಿಫ್ಟ್ ಅನ್ನು ಸ್ವೀಕರಿಸಿದ ವ್ಯಕ್ತಿ ಪ್ರತಿದಿನ ಮನೆಯಿಂದ ಹೊರಗೆ ಕಾಲಿಡುವಾಗ ನಿಮ್ಮನ್ನು ಪ್ರೀತಿಯಿಂದ ಸ್ಮರಿಸಿಕೊಳ್ಳುವುದಂತೂ ಗ್ಯಾರಂಟಿ.
ರೂಮ್ ಹೀಟರ್: ಚಳಿಗಾಲದಲ್ಲಿ ಮನೆಯೊಳಗೆ ಬೆಚ್ಚನೆ ಕೂರಲು ಹಾಗೂ ಸುಖವಾಗಿ ನಿದ್ರಿಸಲು ರೂಮ್ ಹೀಟರ್ ನೆರವು ನೀಡುತ್ತದೆ. ಆದಕಾರಣ ರೂಮ್ ಹೀಟರ್ ಅನ್ನು ಗಿಫ್ಟ್ ಆಗಿ ನೀಡುವ ಕುರಿತು ಯೋಚಿಸಬಹುದು.
ಸೌಂದರ್ಯ ಪ್ರಸಾಧನಗಳು: ನೀವು ಮಹಿಳೆಗೆ ಗಿಫ್ಟ್ ನೀಡುತ್ತಿರುವುದಾದರೆ ಲಿಪ್‍ಸ್ಟಿಕ್, ನೇಲ್ ಪಾಲಿಷ್, ಫೌಂಡೇಷನ್ ಕ್ರೀಮ್, ಕಾಜಲ್, ಐ ಶ್ಯಾಡೋ ಸೇರಿದಂತೆ ಯಾವುದಾದರೂ ಸೌಂದರ್ಯ ಪ್ರಸಾಧನ ನೀಡುವ ಕುರಿತು ಯೋಚಿಸಬಹುದು.
ಸಿಂಪಲ್, ಟೇಸ್ಟಿ ಕೇಕ್ ರೆಸಿಪಿ ಇಲ್ಲಿದೆ
ಬ್ಯಾಗ್: ಪುರುಷರಿಗೆ ಲ್ಯಾಪ್‍ಟಾಪ್ ಬ್ಯಾಗ್, ಮಹಿಳೆಯಾಗಿದ್ದರೆ ಸ್ಟೈಲಿಷ್ ಆಗಿರುವ ಹ್ಯಾಂಡ್‍ಬ್ಯಾಗ್ ನೀಡಬಹುದು. ಬಹುತೇಕರಿಗೆ ಇದು ಖುಷಿ ನೀಡುವ ಗಿಫ್ಟೇ ಆಗಿರುತ್ತದೆ.
ವಾಟರ್ ಬಾಟಲ್ಸ್: ಆಫೀಸ್‍ಗೆ ತೆರಳುವವರಿಗೆ ಮನೆಯಿಂದ ಶುದ್ಧ ನೀರು ಕೊಂಡು ಹೋಗಲು ಥರ್ಮೋಸ್ಟೀಲ್ ಅಥವಾ ಕಾಪರ್ ಕೋಟೆಡ್ ಬಾಟಲ್‍ಗಳನ್ನು ನೀಡಬಹುದು. ಇದು ಗಿಫ್ಟ್ ಪಡೆವರಿಗೆ ಖಂಡಿತಾ ಉಪಯೋಗಕ್ಕೆ ಬರುತ್ತದೆ.
ಲಂಚ್ ಬಾಕ್ಸ್: ನಾನಾ ವಿನ್ಯಾಸದ, ಬಣ್ಣದ ಲಂಚ್ ಬಾಕ್ಸ್‍ಗಳು ಮಾರ್ಕೆಟ್‍ನಲ್ಲಿ ಲಭ್ಯವಿವೆ. ನಿಮಗೆ ಇಷ್ಟವಾದ ಲಂಚ್ ಬಾಕ್ಸ್‍ವೊಂದನ್ನು ಆರಿಸಿ ನಿಮ್ಮ ಪ್ರೀತಿಪಾತ್ರರಿಗೆ ಗಿಫ್ಟ್ ಮಾಡಿ. ಆಫೀಸ್‍ನಲ್ಲಿ ಲಂಚ್ ಬಾಕ್ಸ್ ತೆರೆದು ಬಿಸಿ ಬಿಸಿಯಾದ ಊಟವನ್ನು ತಿನ್ನುವಾಗ ನೀವು ಅವರಿಗೆ ನೆನಪಾಗುತ್ತೀರಿ.
ಬಳೆ ಮತ್ತು ಕಿವಿಯೋಲೆಗಳು: ಹೆಣ್ಣುಮಕ್ಕಳಿಗೆ ಬಳೆಗಳು ಮತ್ತು ಕಿವಿಯೋಲೆಗಳನ್ನು ಕಂಡರೆ ಅಕ್ಕರೆ ಹೆಚ್ಚು. ಅವರ ಬಳಿ ಬಳೆ ಮತ್ತು ಕಿವಿಯೋಲೆಗಳ ದೊಡ್ಡ ಸಂಗ್ರಹವೇ ಇರುತ್ತದೆ. ಹೀಗಾಗಿ ಹುಡುಗಿಯರಿಗೆ ಬಳೆ ಮತ್ತು ಕಿವಿಯೋಲೆಗಳನ್ನು ಗಿಫ್ಟ್ ನೀಡಿದರೆ ಅವರಿಗೆ ನಿಮ್ಮ ಮೇಲಿನ ಪ್ರೀತಿ, ಅಭಿಮಾನ ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ.
ವಾಚ್: ಸ್ವಲ್ಪ ದುಬಾರಿ ಗಿಫ್ಟ್ ನೀಡಬೇಕೆಂಬ ಬಯಕೆ ಹೊಂದಿರುವವರು ನಾನಾ ಕಂಪನಿಗಳ ನಾನಾ ವಿನ್ಯಾಸಗಳ ವಾಚ್‍ಗಳಿವೆ. ಅವುಗಳಲ್ಲಿ ಇಷ್ಟವಾದ ವಾಚ್‍ವೊಂದನ್ನು ಆಯ್ಕೆ ಮಾಡಿ ಗಿಫ್ಟ್ ಮಾಡಬಹುದು.
ಸೆಂಟೆಡ್ ಕ್ಯಾಂಡಲ್ಸ್: ಕ್ರಿಸ್‍ಮಸ್ ಎಂದ ಮೇಲೆ ಅಲ್ಲಿ ಕ್ಯಾಂಡಲ್ಸ್ ಇರಲೇಬೇಕು. ಹೀಗಿರುವಾಗ ನಾನಾ ವಿನ್ಯಾಸದ, ಸುವಾಸನೆಗಳನ್ನು ಹೊಂದಿರುವ ಕ್ಯಾಂಡಲ್‍ಗಳು ಕ್ರಿಸ್‍ಮಸ್‍ಗೆ ಅತ್ಯಂತ ಸೂಕ್ತವಾದ ಕ್ಯಾಂಡಲ್ಸ್.