Fact Check: ಆಸ್ಪತ್ರೆಗೆ ದಾಖಲಾಗಿದ್ದ ಪಂಜಾಬ್ ಸಿಎಂ ಭಗವಂತ್ ಮಾನ್ ಹಳೆಯ ಚಿತ್ರ ಮತ್ತೆ ವೈರಲ್

By Manjunath NayakFirst Published Jul 25, 2022, 5:07 PM IST
Highlights

Bhagwant Mann Fact Check: ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದ್ದು ಚಿತ್ರದಲ್ಲಿ ಭಗವಂತ್ ಮಾನ್ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾರೆ 

ನವದೆಹಲಿ (ಜು. 25): ಕೆಲವು ದಿನಗಳ ಹಿಂದೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅವರ ಆರೋಗ್ಯ ಹಠಾತ್ ಹದಗೆಟ್ಟಿದ್ದು ಅವರನ್ನು ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವೊಂದು ವೈರಲಾಗಿದ್ದು ಚಿತ್ರದಲ್ಲಿ ಭಗವಂತ್ ಮಾನ್ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾರೆ. ಈ ಚಿತ್ರವನ್ನು ಹಂಚಿಕೊಳ್ಳುವ ಮೂಲಕ, ಇದು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿರುವ ಭಗವಂತ್ ಮಾನ್ ಅವರ ಚಿತ್ರ ಎಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. 

ಆದರೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಈ ವೈರಲ್ ಪೋಸ್ಟನ್ನು (Viral Post) ಪರಿಶೀಲಿಸಿದಾಗ ವೈರಲ್ ಚಿತ್ರವು 2018 ರದ್ದ ಎಂದು ಕಂಡುಬಂದಿದೆ. ಕಿಡ್ನಿ ಸ್ಟೋನ್ ಚಿಕಿತ್ಸೆಗಾಗಿ ಭಗವಂತ್ ಮಾನ್ ಅವರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ (RML) ದಾಖಲಿಸಿದಾಗಿನ ಚಿತ್ರ ಇದಾಗಿದೆ. 

Claim:‌ ಫೇಸ್‌ಬುಕ್ ಬಳಕೆದಾರರೊಬ್ಬರು ಜುಲೈ 21 ರಂದು ಈ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. “ಸಿಎಂ ಭಗವಂತ್ ಮಾನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೊಟ್ಟೆಯ ಸೋಂಕಿನಿಂದ ಅವರನ್ನು ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಗವಂತ ಮಾನ್‌ಗಾಗಿ ಎರಡು ಪದಗಳನ್ನು ಬರೆಯಿರಿ" ಎಂದು ಪಂಜಾಬಿ ಭಾಷೆಯಲ್ಲಿ ಶೀರ್ಷಿಕೆಯಲ್ಲಿ ಬರೆಯಲಾಗಿದೆ. 

Fact Check: ವೈರಲ್ ಕ್ಲೈಮ್‌ನ ಸತ್ಯವನ್ನು ತಿಳಿಯಲು, ನಾವು ಗೂಗಲ್ ರಿವರ್ಸ್ ಇಮೇಜ್ ಮೂಲಕ ಫೋಟೋವನ್ನು ಹುಡುಕಿದಾಗ ಅದೇ ಫೋಟೋದೊಂದಿಗೆ ಈ ಸುದ್ದಿ ಲಿಂಕ್ (Link) ನಾವು ಕಂಡುಕೊಂಡಿದ್ದೇವೆ. ಈ ವರದಿಯಲ್ಲಿ "ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ಸಂಸದ ಭಗವಂತ್ ಮಾನ್ ಅವರು ಹೊಟ್ಟೆಯ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಹೇಳಲಾಗಿದೆ. 

ಇನ್ನು 01 ಆಗಸ್ಟ್ 2018 ರಂದು ಪಂಜಾಬಿ ಲೋಕ್ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವೈರಲ್ ಚಿತ್ರದ ವೀಡಿಯೊ ವರದಿಯನ್ನೂ ನಾವು ಕಂಡುಕೊಂಡಿದ್ದೇವೆ.  "ಭಗವಂತ್ ಮಾನ್ ಅವರನ್ನು ಕಿಡ್ನಿ ಸ್ಟೋನ್ ಚಿಕಿತ್ಸೆಗಾಗಿ ಎಂದು  ಆರ್‌ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ನಂತರ ಕೇಜ್ರಿವಾಲ್, ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಭಗವಂತ್ ಮಾನ್ ಅವರ ಭೇಟಿಯಾಗಲು ಆಸ್ಪತ್ರೆಗೆ ಬಂದರು" ಎಂದು ವೀಡಿಯೋದಲ್ಲಿ ಮಾಹಿತಿಯ ನೀಡಲಾಗಿದೆ. 

ಇನ್ನು ಅನೇಕ ಇತರ ಸುದ್ದಿ ವೆಬ್‌ಸೈಟ್‌ಗಳಲ್ಲಿ ವೈರಲ್ ಚಿತ್ರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಸಹ ನಾವು ಕಂಡುಕೊಂಡಿದ್ದೇವೆ. ಆಜ್ ತಕ್ (Aaj Tak) ವೆಬ್‌ಸೈಟ್‌ನಲ್ಲಿ ಪ್ರಕಟವಾದ ವೈರಲ್ ಕ್ಲೈಮ್‌ಗೆ ಸಂಬಂಧಿಸಿದ ಸುದ್ದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ. 

ಪಂಜಾಬ್‌ ಜನರಿಗೆ ಪವಿತ್ರವಾದ ‘ಕಾಲಿ ಬೇನ್‌’ ಜಲಾಶಯದ 22ನೇ ವಾರ್ಷಿಕೋತ್ಸವದ ಕಾರ್ಯಕ್ರಮಕ್ಕೆ ಸುಲ್ತಾನ್‌ಪುರದ ಲೋಧಿಗೆ ನಗರಕ್ಕೆ ಭೇಟಿ ನೀಡಿದ್ದ ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಅಲ್ಲಿನಿ ನೀರು ಕುಡಿದಿದ್ದರು. ಬಳಿಕ ತೀವ್ರ ಹೊಟ್ಟೆನೋವಿನಿಂದ ಮಾನ್‌ ಬಳಲುತ್ತಿದ್ದ ಮಾನ್‌ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಜಲಾಶಯದ ನೀರು ಕಲುಷಿತವಾಗಿದ್ದರಿಂದ ಹೊಟ್ಟೆನೋವು ಸಂಭವಿಸಿರಬಹುದು ಎನ್ನಲಾಗಿದೆ. ಈ ಬಗ್ಗೆ 22 ಜುಲೈ 2022ರಂದು ಪ್ರಕಟವಾದ ಕನ್ನಡ ಪ್ರಭ (Kannada Prabha) ವರದಿ ಇಲ್ಲಿದೆ.

Conclusion: ಏಷ್ಯಾನೆಟ್‌ ಸುವರ್ಣ ನ್ಯೂಸ್ ತನ್ನ ತನಿಖೆಯಲ್ಲಿ ಭಗವಂತ್ ಮಾನ್ ಆಸ್ಪತ್ರೆಯಲ್ಲಿ ದಾಖಲಾಗಿರುವ ವೈರಲ್ ಚಿತ್ರದ ಬಗ್ಗೆ ಮಾಡಲಾಗುತ್ತಿರುವ ಹೇಳಿಕೆ ಸುಳ್ಳು ಎಂದು ಕಂಡುಹಿಡಿದಿದೆ. ವೈರಲ್ ಆಗಿರುವ ಚಿತ್ರ 2018ರದ್ದು. ಕಿಡ್ನಿ ಸ್ಟೋನ್ ಚಿಕಿತ್ಸೆಗಾಗಿ ಭಗವಂತ್ ಮಾನ್ ಅವರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದಾಗಿನ ಚಿತ್ರವಾಗಿದೆ. 

click me!