ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಫೋಟೋ ಹೊಂದಿರುವ ಅಂಚೆ ಚೀಟಿಯನ್ನು ಶ್ರೀಲಂಕಾ ಸರ್ಕಾರ ಬಿಡುಗಡೆ ಮಾಡಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಸಂದೇಶದ ಜೊತೆಗಿರುವ ಫೋಟೋದಲ್ಲಿ ಕೊಲಂಬೋ ಎಂಬ ಸೀಲ್ ಇರುವ 10 ರು. ಮೌಲ್ಯದ ಅಂಚೆ ಚೀಟಿಯಿದೆ. ಅದರಲ್ಲಿ ವಿಜಯನ್ ಅವರ ಫೋಟೋವಿದೆ. ‘2017ರ ಅಂಚೆ ಚೀಟಿಯನ್ನು ಈಗ ಮರು ಬಿಡುಗಡೆ ಮಾಡಲಾಗಿದೆ. ಕೇರಳದ ಮುಖ್ಯಮಂತ್ರಿಗಳ ಗೌರವಾರ್ಥವಾಗಿ ಅವರ ಫೋಟೋ ಇರುವ ಅಂಚೆ ಚೀಟಿಯನ್ನು ಶ್ರೀಲಂಕಾ ಬಿಡುಗಡೆ ಮಾಡಿದೆ. ಅಭಿನಂದನೆಗಳು’ ಎಂದು ಒಕ್ಕಣೆ ಬರೆದು ನೆಟ್ಟಿಗರು ಶೇರ್ ಮಾಡುತ್ತಿದ್ದಾರೆ.
ಆದರೆ ಈ ಸುದ್ದಿ ನಿಜವೇ ಎಂದು ಬೂಮ್‌ಲೈವ್ ಸುದ್ದಿಸಂಸ್ಥೆ ಶ್ರೀಲಂಕಾ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟಿನಲ್ಲಿ ಪರಿಶೀಲಿಸಿದಾಗ ಇಂತಹ ಯಾವುದೇ ಅಂಚೆ ಚೀಟಿ ಲಭ್ಯವಾಗಿಲ್ಲ. ಆದರೆ ಹಕ್ಕಿಯ ಹೆಸರು ಬರೆದಿರುವ ಅಂಚೆ ಚೀಟಿಯೊಂದು ಲಭ್ಯವಾಗಿದ್ದು, ವೈರಲ್ ಆಗಿರುವ ಅಂಚೆ ಚೀಟಿಯಲ್ಲೂ ಅದೇ ಹಕ್ಕಿಯ ಹೆಸರಿರುವುದು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ಅಲ್ಲದೆ ಕೇರಳ ಸರ್ಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೂಡ ಈ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದೆ. ಮೇಲಾಗಿ ಯಾವುದೇ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಈ ಕುರಿತ ಸುದ್ದಿ ವರದಿಯಾಗಿಲ್ಲ. ಈ ನಕಲಿ ಸ್ಟ್ಯಾಂಪ್ 2018ರಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
- ವೈರಲ್ ಸುದ್ದಿ