
ಭಾರತದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಜುಲೈ 26ರಂದು ನಡೆಸಲು ಉದ್ದೇಶಿಸಿದ್ದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್)ಗಳನ್ನು ಮುಂದೂಡಲಾಗಿದೆ. ಆದಷ್ಟು ಬೇಗ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ ಎಂಬ ಆಶಾಭಾವದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ 2020ರ ಆಗಸ್ಟ್ ಕೊನೆಯವಾರದಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಆಗಸ್ಟ್ 15ರ ನಂತರ ಪ್ರವೇಶ ಪತ್ರಗಳನ್ನು ನೀಡಲಾಗುವುದು’ ಎಂದು ಬರೆದಿರುವ ಪ್ರಕಟಣಾ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಎನ್‌ಎಟಿ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ಈ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ ಎಂದು ಹೇಳಲಾಗಿದೆ. ಜೊತೆಗೆ ಪರೀಕ್ಷೆ ಎಷ್ಟುಮುಖ್ಯವೋ ಜನರ ಅಥವಾ ವಿದ್ಯಾರ್ಥಿಗಳ ಆರೋಗ್ಯವೂ ಅಷ್ಟೇ ಮುಖ್ಯ. ಆದ್ದರಿಂದ ಪರೀಕ್ಷೆ ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಆದರೆ ನಿಜಕ್ಕೂ ಎನ್‌ಎಟಿ ನೀಟ್ ಪರೀಕ್ಷೆಯನ್ನು ಮುಂದೂಡಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರದ ನೋಡಲ್ ಸಂಸ್ಥೆ ಆಗಿರುವ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ)ಈ ಬಗ್ಗೆ ಸ್ಪಷ್ಟನೆ ನೀಡಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಎಟಿ) ನೀಟ್ ಪರೀಕ್ಷೆ ಮುಂದೂಡಿರುವ ಬಗ್ಗೆ ಯಾವುದೇ ಪ್ರಕಟಣೆಯನ್ನೂ ಬಿಡುಗಡೆ ಮಾಡಿಲ್ಲ. ವೈರಲ್ ಸುದ್ದಿ ಸುಳ್ಳು ಎಂದು ಹೇಳಿದೆ. ಅಲ್ಲದೆ ನೀಟ್ ಪರೀಕ್ಷೆಯನ್ನು ಮುಂದೂಡುವ ಬಗ್ಗೆ ಸಚಿವಾಲಯ ಯಾವುದೇ ಸಲಹೆಯನ್ನೂ ನೀಡಿಲ್ಲ ಎಂದು ಪಿಐಬಿ ಸ್ಪಷ್ಟೀಕರಣ ನೀಡಿದೆ.