ಇದು ನಿಜಕ್ಕೂ ಕೇಂದ್ರದ ವಿರುದ್ಧ ರೈತರು ಪ್ರಸ್ತುತ ನಡೆಸುತ್ತಿರುವ ಆಂದೋಲನದ ಚಿತ್ರವಾ? ಇಲ್ಲಿದೆ ನೋಡಿ ಸತ್ಯಾ ಸತ್ಯತೆ
ನವದೆಹಲಿ(ಸೆ. 21): ಸದನದಲ್ಲಿ ವಿಪಕ್ಷ ನಾಯಕರ ಕೋಲಾಹಲದ ನಡುವೆಯೇ ರಾಜ್ಯಸಭೆಯಲ್ಲಿ ಕೃಷಿಗೆ ಸಂಬಂಧಿಸಿದ ಎರಡು ಮಸೂದೆಗಳು ಧ್ವನಿ ಮತದಿಂದ ಪಾಸ್ ಆಗಿವೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ ವಿಧೇಯಕಗಳನ್ನು ಪಂಜಾಬ್ ಹಾಗೂ ಹರ್ಯಾಣ ಸೇರಿ ಅನೇಕ ರಾಜ್ಯದ ರೈತರು ವಿರೋಧಿಸುತ್ತಿದ್ದಾರೆ. ಈ ಮಸೂದೆಯಿಂದ ರೈತರಿಗೆ ಲಾಭವಾಗುತ್ತದೆ ಎನ್ನುವುದು ಸರ್ಕಾರದ ಹೇಳಿಕೆಯಾಗಿದೆ. ಆದರೆ ಇದರಿಂದ ಬಂಡವಾಳಶಾಹಿಗಳಿಂದ ಕೃಷಿ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಬೀರಬಹುದೆನ್ನುವುದು ರೈತರ ಭಯವಾಗಿದೆ. ಇಷ್ಟೇ ಅಲ್ಲದೇ ರೈತರಿಗೆ ಕನಿಷ್ಟ ಬೆಂಬಲ ಬೆಲೆಯೂ ಸಿಗದಿರಬಹುದೆಂಬ ಭಯ ಆವರಿಸಿದೆ.
ಕೆಲ ದಿನಗಳ ಹಿಂದೆ ಈ ಮಸೂದೆ ವಿರೋಧ ಹಿನ್ನೆಲೆ ಹರ್ಯಾಣದಲ್ಲಿ ರೈತರ ಮೇಲೆ ಲಾಠಿ ಚಾರ್ಜ್ ಕೂಡಾ ನಡೆದಿತ್ತು. ಇದನ್ನೇ ಮುಂದಿಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದು ವೈರಲ್ ಆಗಿದೆ. ಇದು ಸದ್ಯ ಈಗ ನಡೆಯುತ್ತಿರುವ ಆಂದೋಲನದ ಫೋಟೋ ಎಂಬ ಸಂದೇಶದೊಂದಿಗೆ ಹರಿದಾಡುತ್ತಿದೆ. ಈ ಫೋಟೋದಲ್ಲಿ ವೃದ್ಧ ರೈತನೊಬ್ಬ ಭದ್ರತಾ ಪಡೆಯ ಜವಾನನಿಗೆ ಇಟ್ಟಿಗೆಯಂತಹ ಕಲ್ಲು ತೋರಿಸುತ್ತಿದ್ದರೆ, ಅತ್ತ ಯೋಧನ ಕೈಯ್ಯಲ್ಲಿ ಬಂದೂಕು ಇರುವ ದೃಶ್ಯವಿದೆ. ಇಷ್ಟೇ ಅಲ್ಲದೇ ಇಬ್ಬರ ಕೈಯ್ಯಲ್ಲೂ ಲಾಠಿ ಇದೆ.
ಇನ್ನು ವೈರಲ್ ಆಗುತ್ತಿರುವ ಫೋಟೋದಲ್ಲಿ 'ಗುಂಡಿನಿಂದ ಹೊಡೆಯಬೇಡಿ. ನಾನೊಬ್ಬ ನೊಂದ ವ್ಯಕ್ತಿ ವೃತ್ತಿಯಲ್ಲಿ ನಾನೊಬ್ಬ ರೈತನಾಗಿರುವುದೇ ನನ್ನ ಸಾವಿಗೆ ಕಾರಣ #kishanVirodhiNarendraModi'ಎಂಬ ಸಂದೇಶವೂ ಹರಿದಾಡಲಾರಂಭಿಸಿದೆ. ದೆಹಲಿ ಹಾಗೂ ಮುಂಬೈನ ಕಾಂಗ್ರೆಸ್ ಟ್ವಿಟರ್ ಖಾತೆಯಲ್ಲಿ ಮೋದಯನ್ನು ಟೀಕಿಸಿ ಟ್ವೀಟ್ ಮಾಡಲಾಗಿದೆ.
ಆದರೆ ಇದು ಈಗ ನಡೆಯುತ್ತಿರುವ ರೈತ ಆಂದೋಲನದ ಚಿತ್ರವೇ ಎಂದು ಪರಿಶೀಲಿಸಿದಾಗ ಬೇರೆಯೇ ವಿಚಾರ ಬೆಳಕಿಗೆ ಬಂದಿದೆ. ಈ ಫೋಟೋ ಸುಮಾರು ಒಂದು ವರ್ಷ ಹಳೆಯದ್ದಾಗಿದೆ. ಹೀಗಾಗಿ ಸದ್ಯ ಈಗ ನಡೆಯುತ್ತಿರುವ ರೈತ ಆಂದೋಲನಕ್ಕೂ ಈ ಫೊಟೋಗೂ ಯಾವುದೇ ಸಂಬಂಧವಿಲ್ಲ.
ಇನ್ನು ಗೂಗಲ್‌ನಲ್ಲಿ ರಿವರ್ಸ್ ಸರ್ಚ್ ಮಾಡಿದಾಗ ಈ ಫೋಟೋಗೆ ಸಂಬಂಧಿಸಿದ ಕೆಲ ವಿಚಾರಗಳು ಬೆಳಕಿಗೆ ಬಂದಿವೆ. ಈ ಫೋಟೋ ಸೆಪ್ಟೆಂಬರ್ 2013ರದ್ದಾಗಿದೆ. ಉತ್ತರ ಪ್ರದೇಶದ ಮೀರತ್‌ನ ಖೇರಾ ಎಂಬ ಹಳ್ಳಿಯಲ್ಲಿ ಕಂಡು ಬಂದ ದೃಶ್ಯ ಇದಾಗಿದೆ. ಅಂದು ಶಾಸಕ ಸಂಗೀತ್ ಸೋಮ್ ಮುಜಫ್ಫರ್‌ನಗರ ಧಂಗೆ ಸಂಬಂಧ ಬಂಧಿಸಲಾಗಿತ್ತು.
ಸಂಗೀತ್ ಸೋಮ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾನೂನು ಕೂಡಾ ವಿಧಿಸಲಾಗಿತ್ತು. ಬಂಧನ ವಿರೋಧಿಸಿ ಖೇರಾ ಹಳ್ಳಿಯಲ್ಲಿ ಬೃಹತ್ ಸಂಖ್ಯೆಯಲ್ಲಿ ಜನ ಸೇರಿದ್ದು, ಪೊಲೀಸರೊಂದಿಗೆ ಘರ್ಷಣೆ ನಡೆದಿತ್ತು. ಅಲ್ಲದೇ ಜನರು ಪೊಲೀಸರ ಮೇಲೆ ಕಲ್ಲು ತೂರಾಟವನ್ನೂ ನಡೆಸಿದ್ದರು. ಈ ಹಿಂಸಾಚಾರದಲ್ಲಿ ಪೊಲೀಸರು ಸೇರಿ ಅನೇಕ ಮಂದಿ ಗಾಯಗೊಂಡಿದ್ದರು. ಅದೇ ವೇಳೆ ಈ ಫೋಟೋ ಕ್ಲಿಕ್ಕಿಸಲಾಗಿತ್ತು.