Fact Check: ಅಮೀರ್ ಖಾನ್ ಹಳೆಯ ಸಂದರ್ಶನದ ವಿಡಿಯೋ ತಪ್ಪು ಉಲ್ಲೇಖದೊಂದಿಗೆ ವೈರಲ್

By Manjunath Nayak  |  First Published Aug 10, 2022, 4:12 PM IST

Aamir Khan Video Fact Check: ವೈರಲ್‌ ವಿಡಿಯೋದಲ್ಲಿ "ಇದು ಪ್ರಜಾಪ್ರಭುತ್ವ ಮತ್ತು ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕಿದೆ" ಎಂದು ಅಮೀರ್ ಹೇಳಿದ್ದಾರೆ


ನವದೆಹಲಿ (ಆ. 10): ಬಾಲಿವುಡ್‌ ನಟ ಅಮೀರ್‌ ಖಾನ್‌ (Aamir Khan) ಅವರ ಲಾಲ್‌ ಸಿಂಗ್‌ ಚಡ್ಡಾ ಚಿತ್ರ ಬಿಡುಗಡೆಯಾಗುವ  ಮುನ್ನ ಟ್ವೀಟರ್‌ನಲ್ಲಿ ಬಾಯ್ಕಾಟ್‌ ಲಾಲ್‌ಸಿಂಗ್‌ ಚಡ್ಢಾ ಅಭಿಯಾನ ಆರಂಭವಾಗಿದೆ. ಈ ಬಗ್ಗೆ ಅಮೀರ್‌ ಖಾನ್‌ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.  ಅಮೀರ್ ಖಾನ್ ಸಿನಿಮಾಗಳಲ್ಲೇ ದೊಡ್ಡ ಹೈಪ್ ಪಡೆದುಕೊಂಡಿರುವ 'ಲಾಲ್ ಸಿಂಗ್ ಚಡ್ಡಾ' ಆಗಸ್ಟ್ 11ಕ್ಕೆ ಬಿಡುಗಡೆಯಾಗುತ್ತಿದೆ.  ಈ ನಡುವೆ ಅಮಿರ್‌ ಖಾನ್‌ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ 10 ಸೆಕೆಂಡ್  ವೀಡಿಯೊ ಕ್ಲಿಪ್‌ನಲ್ಲಿ, ಇದು ಪ್ರಜಾಪ್ರಭುತ್ವ ಮತ್ತು ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕಿದೆ ಎಂದು ಅಮೀರ್ ಹೇಳುತ್ತಿರುವುದನ್ನು ಕಾಣಬಹುದು. 

ಅಲ್ಲದೇ ಯಾರಾದರೂ ಚಿತ್ರವನ್ನು ಇಷ್ಟಪಡದಿದ್ದರೆ, ಅವರು ಅದನ್ನು ನೋಡಬಾರದು ಎಂದು ಅಮೀರ್‌ ಖಾನ್‌ ಈ ವಿಡಿಯೋದಲ್ಲಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋವನ್ನು 'ಲಾಲ್ ಸಿಂಗ್ ಚಡ್ಡಾ'ಗೆ ಲಿಂಕ್ ಮಾಡಿದ್ದು, ತಪ್ಪುದಾರಿಗೆಳೆಯುವ ಉಲ್ಲೇಖಗಳೊಂದಿಗೆ  ವೈರಲ್ ಮಾಡುತ್ತಿದ್ದಾರೆ. 2014ರಲ್ಲಿ ಪಿಕೆ (PK) ಚಿತ್ರದ ವೇಳೆ ಕೇಳಿದ ಪ್ರಶ್ನೆಗೆ ಉತ್ತರವಾಗಿ ಅಮೀರ್ ಖಾನ್ ಈ ಉತ್ತರ ನೀಡಿದ್ದರು ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ತನಿಖೆಯಲ್ಲಿ  ತಿಳಿದುಬಂದಿದೆ. ಈ ವಿಡಿಯೋಗೂ ಅಮೀರ್ ಖಾನ್ ಅವರ ಪ್ರಸ್ತುತ ಚಿತ್ರಕ್ಕೂ ಮತ್ತು ಇತ್ತೀಚೆಗಿನ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ.

Tap to resize

Latest Videos

undefined

Claim: ಸಾಮಾಜಿಕ ಜಾಲತಾಣಗಳಲ್ಲಿ ಅಮೀರ್ ಖಾನ್ ಅವರ 10 ಸೆಕೆಂಡುಗಳ ವೀಡಿಯೊ ಕ್ಲಿಪ್ಪನ್ನು ಹಲವು ಬಳಕೆದಾರರು ಹಂಚಿಕೊಂಡಿದ್ದು  ಹೀಗೆ ಬರೆದಿದ್ದಾರೆ: "#BoycottLalSinghChaddha, आमिर खुद कह रहा है मत देखो, लालसिंहचड्डाका_बहिष्कार" 

ಅನುವಾದ: #BoycottLalSinghChaddha, ಅಮೀರ್ ಅವರೇ ಹೇಳುತ್ತಿದ್ದಾರೆ ನೋಡಬೇಡಿ, ಲಾಲ್‌ಸಿನ್‌ಚಡ್ಡಾ_ಬಹಿಷ್ಕಾರ " ಇದೆ ಮಾದರಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪೋಸ್ಟ್‌ಗಳು ವೈರಲ್‌ ಆಗಿವೆ. 

Fact Check: ವೈರಲ್ ಕ್ಲಿಪ್ ಆಧರಿಸಿ ಸಂಬಂಧಿತ ಕೀವರ್ಡ್ ಬಳಸಿ ಗೂಗಲ್ ಸರ್ಚ್ ಪ್ರಾರಂಭಿಸಿದಾಗ  ನಾವು ಕೆಲವು ಸ್ಥಳಗಳಲ್ಲಿ ವೈರಲ್ ಕ್ಲಿಪ್‌ನ ಉಲ್ಲೇಖಗಳನ್ನು ಕಂಡುಕೊಂಡಿದ್ದೇವೆ. ಪಿಕೆ ಚಿತ್ರದ ವೇಳೆ ಸಂದರ್ಶನವೊಂದರಲ್ಲಿ ಅಮೀರ್ ಖಾನ್ ಈ ಹೇಳಿಕೆ ನೀಡಿದ್ದಾರೆ ಎಂದು ಇಲ್ಲಿ ಹೇಳಲಾಗಿದೆ.ಈ ಆಧಾರದ ಮೇಲೆ ವೈರಲ್ ಕ್ಲಿಪ್ ಹಡುಕಿದಾಗ ಝೂಮ್‌ನ (Zoom) ಯುಟ್ಯೂಬ್ ಚಾನಲ್‌ನಲ್ಲಿ ನಾವು ಈ ಸುದ್ದಿಯನ್ನು ಕಂಡುಕೊಂಡಿದ್ದೇವೆ.‌

ಇದನ್ನು 31ನೇ ಡಿಸೆಂಬರ್ 2014 ರಂದು ಅಪ್‌ಲೋಡ್ ಮಾಡಲಾಗಿದೆ. ಇದರಲ್ಲಿ ಅಮೀರ್ ಖಾನ್ ಮತ್ತು ರಾಜ್ ಕುಮಾರ್ ಹಿರಾನಿಯನ್ನು ಕಾಣಬಹುದು. ವೀಡಿಯೊದಲ್ಲಿ 9:57 ನಿಮಿಷಕ್ಕೆ ವೈರಲ್ ಕ್ಲಿಪ್ಪನ್ನು ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ಅಮೀರ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಪಿಕೆ ಬಹಿಷ್ಕಾರದ ಅಭಿಯಾನದ ಕುರಿತು ಮಾತನಾಡುತ್ತಿದ್ದರು. ಅಮೀರ್‌ ಖಾನ್‌ ಸಂದರ್ಶನವನ್ನು ಇಲ್ಲಿ ವೀಕ್ಷಿಸಬಹುದು 

ಇನ್ನು 'ಲಾಲ್ ಸಿಂಗ್ ಚಡ್ಡಾ' ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಬಹಿಷ್ಕಾರದ ಪ್ರಚಾರದ ಬಗ್ಗೆ ಅಮೀರ್‌ ಬೇಸರ ವ್ಯಕ್ತಪಡಿಸಿದ್ದು ‘ಹಲವರು ನಾನು ಭಾರತವನ್ನು ಇಷ್ಟಪಡುವುದಿಲ್ಲ ಎಂದು ಕೊಂಡಿದ್ದಾರೆ. ಆದರೆ ಇದು ನಿಜವಲ್ಲ. ಜನರು ಈ ರೀತಿ ಯೋಚಿಸುತ್ತಿರುವುದು ದುರದೃಷ್ಟಕರ’ ಎಂದು ಹೇಳಿದ್ದಾರೆ. ಅಲ್ಲದೇ, ‘ಚಿತ್ರವನ್ನು ಬಾಯ್ಕಾಟ್‌ ಮಾಡದೇ ವೀಕ್ಷಿಸಿ’ ಎಂದು ತಮ್ಮ ಎಲ್ಲ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ. ಮತ್ತೊಂದೆಡೆ, ಕರೀನಾ ಕಪೂರ್ ಅವರ ಹಳೆಯ ಸಂದರ್ಶನದ ಕೆಲವು ವಿಡಿಯೋಗಳು ಸಾಮಾಜಿಕ ಮಾಧ್ಯಮಹಳಲ್ಲಿ ವೈರಲ್ ಆಗುತ್ತಿವೆ.

Conclusion: ಏಷ್ಯಾನೆಟ್‌ ಸುವರ್ಣ ನ್ಯೂಸ್‌ ತನಿಖೆಯಲ್ಲಿ ಅಮೀರ್ ಖಾನ್ ಬೈಟ್ ವೈರಲ್ ಮಾಡಿದ ಪೋಸ್ಟ್ ತಪ್ಪುದಾರಿಗೆಳೆಯುವಂತಿದೆ. ಹೀಗಾಗಿ ಕೆಲ ಬಳಕೆದಾರರು  2014ರ ಈ ಕ್ಲಿಪ್ಪನ್ನು 'ಲಾಲ್ ಸಿಂಗ್ ಚಡ್ಡಾ' ಗೆ ಲಿಂಕ್ ಮಾಡಿರುವುದು ಸಾಬೀತಾಗಿದೆ.

click me!