
ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ‘ಕನ್ನಡದ ಕೋಟ್ಯಾಧಿಪತಿ’ ರಿಯಾಲಿಟಿ ಶೋಗೆ ಯಶ್ ನಿರೂಪಕರಾಗುತ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು. ಈ ಹಿಂದೆ ಈ ಸೂಪರ್‌ಹಿಟ್ ಕಾರ್ಯಕ್ರಮವನ್ನು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಡೆಸಿಕೊಡುತ್ತಿದ್ದರು. ಹಾಗಾಗಿ ಮನೆಮಂದಿಗೆಲ್ಲಾ ಈ ಕಾರ್ಯಕ್ರಮ ಇಷ್ಟವಾಗಿತ್ತು. ಆದರೆ ಸದ್ಯ ಪುನೀತ್ ರಾಜ್ ಕುಮಾರ್ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಫ್ಯಾಮಿಲಿ ಪವರ್ ಎಂಬ ರಿಯಾಲಿಟಿ ಶೋ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಸಂದರ್ಭ ಹೀಗಿರುವಾಗ ‘ಕನ್ನಡದ ಕೋಟ್ಯಾಧಿಪತಿ’ಗೆ ಮನೆ ಮಂದಿ ಮೆಚ್ಚುವ ಒಬ್ಬ ಸ್ಟಾರ್ ಬೇಕಾಗಿತ್ತು.
ಆ ಜಾಗಕ್ಕೆ ರಾಕಿಂಗ್ ಸ್ಟಾರ್ ಯಶ್ ಬರಲಿದ್ದಾರೆ ಅನ್ನುವ ಸುದ್ದಿ ಭಾರಿ ಮಹತ್ವ ಪಡೆದುಕೊಂಡಿತ್ತು. ಈ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಅವರನ್ನು ಕೇಳಿದರೆ ಅವರು ಈ ಸುದ್ದಿಯನ್ನು ನಿರಾಕರಿಸಿದ್ದಾರೆ. ‘ಆ ಕಾರ್ಯಕ್ರಮ ನಿರ್ವಹಿಸಲು ಆಫರ್ ಇರುವುದು ನಿಜ. ಆದರೆ ನಾನಿನ್ನೂ ಒಪ್ಪಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಅನ್ನುವುದು ಗೊತ್ತಿಲ್ಲ’ ಎಂದಿದ್ದಾರೆ. ಅಲ್ಲಿಗೆ ಸುವರ್ಣ ವಾಹಿನಿಯವರು ‘ಕನ್ನಡದ ಕೋಟ್ಯಾಧಿಪತಿ’ ರಿಯಾಲಿಟಿ ಶೋ ನಡೆಸಿಕೊಡಲು ಯಶ್ ಅವರನ್ನು ಕೇಳಿಕೊಂಡಿದ್ದು ನಿಜ. ಈಗ ಬಾಲ್ ಯಶ್ ಅವರ ಕೋರ್ಟಲ್ಲಿದೆ. ಒಂದು ವೇಳೆ ಅವರು ಒಪ್ಪಿಕೊಂಡರೆ ಈ ರಿಯಾಲಿಟಿ ಶೋ ಮೂಲಕ ಮನೆಮನೆಗೂ ಬರಲಿದ್ದಾರೆ. ಹಾಗೆ ನೋಡುವುದಾದರೆ ಯಶ್ ಕಿರುತೆರೆ ಮೂಲಕವೇ ಕನ್ನಡಿಗರಿಗೆ ಪರಿಚಯವಾದವರು. ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಅಂದರೆ ಪ್ರೇಕ್ಷಕರಿಗೆ ಅದು ಹರ್ಷದಾಯಕವೇ. ಯಶ್ ಏನು ನಿರ್ಧರಿಸುತ್ತಾರೋ ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.