
ಮುಂಬೈ (ನ. 16): ಬಾಲಿವುಡ್ ಸ್ಟಾರ್‌ಗಳಾದ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಇಟಲಿಯಲ್ಲಿ ಮದುವೆಯಾಗಿದ್ದಾರೆ. ಹೀಗೆ ವಿದೇಶಕ್ಕೆ ಹೋಗಿ ಮದುವೆಯಾದ ಸೆಲೆಬ್ರಿಟಿಗಳಲ್ಲಿ ಇವರೇನೂ ಮೊದಲಿಗರಲ್ಲ.
ಕಳೆದ ವರ್ಷದ ಅಂತ್ಯದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಕೂಡ ಇಟಲಿಗೆ ಹೋಗಿ ಮದುವೆಯಾಗಿದ್ದರು. ಇತ್ತೀಚೆಗೆ ಮುಕೇಶ್ ಅಂಬಾನಿ ಪುತ್ರಿಯ ಎಂಗೇಜ್‌ಮೆಂಟ್ ಕೂಡ ಒಂದು ವಾರದ ಕಾಲ ಇಟಲಿಯಲ್ಲಿ ನಡೆದಿತ್ತು.
ಡೆಸ್ಟಿನೇಶನ್ ವೆಡ್ಡಿಂಗ್ ಎಂಬ ಆಕರ್ಷಣೆ ತಮ್ಮೂರಿನಿಂದ ಹೊರಗೆ ಐಷಾರಾಮಿ ಸ್ಥಳಗಳಲ್ಲಿ ಮದುವೆಯಾಗುವುದನ್ನು ಡೆಸ್ಟಿನೇಶನ್ ವೆಡ್ಡಿಂಗ್ ಎನ್ನುತ್ತಾರೆ. ಇದು ಶ್ರೀಮಂತರ ವಲಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಹಳ ಜನಪ್ರಿಯತೆ ಪಡೆದ ಟ್ರೆಂಡ್. ಕೇವಲ ಭಾರತೀಯರು ವಿದೇಶಕ್ಕೆ ಹೋಗಿ ಮದುವೆಯಾಗುವುದಷ್ಟೇ ಅಲ್ಲ, ವಿದೇಶೀಯರು ಕೂಡ ಭಾರತಕ್ಕೆ ಬಂದು ಹೀಗೆ ಮದುವೆಯಾಗುತ್ತಾರೆ. ರಾಜಸ್ಥಾನದ ಅರಮನೆಗಳು ಇಂತಹ ಮದುವೆಗೆ ಪ್ರಸಿದ್ಧಿ ಪಡೆದಿವೆ. ಭಾರತೀಯರು ಹೆಚ್ಚಾಗಿ ಡೊಮಿನಿಕ್ ರಿಪಬ್ಲಿಕ್, ಮೆಕ್ಸಿಕೋ, ಹವಾಯಿ, ವರ್ಜಿನ್ ಐಲ್ಯಾಂಡ್ಸ್, ಸೀಶೆಲ್ಸ್, ಇಟಲಿ, ದುಬೈ, ಥಾಯ್ಲೆಂಡ್‌ಗೆ ಹೋಗಿ ಅಲ್ಲಿನ ರೆಸಾರ್ಟ್ ಅಥವಾ ದ್ವೀಪಗಳಲ್ಲಿ ಮದುವೆಯಾಗುತ್ತಾರೆ. ಈವೆಂಟ್ ಮ್ಯಾನೇಜ್‌ಮೆಂಟ್
ಕಂಪನಿಗಳು ಇಂತಹ ಮದುವೆಗಳ ಉಸ್ತುವಾರಿ ನೋಡಿಕೊಳ್ಳುತ್ತವೆ.
ಇವು ಬರೀ ಕಲ್ಯಾಣ ಮಂಟಪಗಳಲ್ಲ!
ಡೆಸ್ಟಿನೇಶನ್ ವೆಡ್ಡಿಂಗ್‌ಗೆ ಪ್ರಸಿದ್ಧವಾಗಿರುವ ಸ್ಥಳಗಳು ಕೇವಲ ಕಲ್ಯಾಣ ಮಂಟಪಗಳಂತೆ ಬಳಕೆಯಾಗುವುದಿಲ್ಲ. ಅವು ಸಾಮಾನ್ಯವಾಗಿ ಅರಮನೆ, ರೆಸಾರ್ಟ್ ಅಥವಾ ಸ್ಟಾರ್ ಹೋಟೆಲ್‌ಗಳಾಗಿರುತ್ತವೆ. ಮದುವೆಗೆ ಬರುವ ಅತಿಥಿಗಳಿಗೆ ಆತಿಥೇಯರೇ ವಿಮಾನದ ಟಿಕೆಟ್ ಬುಕ್ ಮಾಡಿ, ಪಿಕಪ್-ಡ್ರಾಪ್ ವ್ಯವಸ್ಥೆ ಮಾಡಿರುತ್ತಾರೆ. ನಂತರ ಅವರಿಗೆ ಪ್ರತ್ಯೇಕ ಐಷಾರಾಮಿ ಕೋಣೆಗಳನ್ನು ಅಲ್ಲಿ ಕಾದಿರಿಸಿರುತ್ತಾರೆ. ಸಾಮಾನ್ಯವಾಗಿ ಇಂತಹ ಮದುವೆಗಳು ಮೂರ‌್ನಾಲ್ಕು ದಿನ ನಡೆಯುವುದರಿಂದ ಅಷ್ಟೂ ದಿನಗಳ ಕಾಲ ಅವರ ಊಟ, ತಿಂಡಿ, ಡ್ರಿಂಕ್ಸ್, ಓಡಾಟ, ಮನರಂಜನೆಯ ಜವಾಬ್ದಾರಿಯನ್ನು ಆತಿಥೇಯರೇ ವಹಿಸಿಕೊಂಡಿರುತ್ತಾರೆ.
ಏನು ಕಾರಣ?
ಖಾಸಗಿತನ ಬಹಳ ಮುಖ್ಯ ಕಾರಣ. ಸೆಲೆಬ್ರಿಟಿಗಳಿಗೆ ಇಲ್ಲಿ ಮಾಧ್ಯಮಗಳ ಕಿರಿಕಿರಿ ಇರುವುದಿಲ್ಲ.
ಮದುವೆಗೆ ಬಂದ ಗಣ್ಯ ಅತಿಥಿಗಳಿಗೆ ಬಹುಕಾಲ ಈ ಮದುವೆ ನೆನಪಿನಲ್ಲುಳಿಯುತ್ತದೆ.
ಸ್ವಂತ ಸ್ಥಳದಲ್ಲಿ ಮಾಡಲಾಗದಷ್ಟು ಅದ್ಧೂರಿಯಾಗಿ ಇಲ್ಲಿ ಏರ್ಪಾಟುಗಳನ್ನು ಮಾಡಬಹುದು.
ಹೊಸ ರೀತಿಯ ಆಹಾರ, ಹೊಸ ಸ್ಥಳ, ಹೊಸ ಹೊಸ ಮದ್ಯ, ಮೋಜು ಪ್ರಮುಖ ಆಕರ್ಷಣೆ.
ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿಗಳು ಇಂತಹ ಸ್ಥಳಗಳನ್ನೇ ಹೆಚ್ಚಾಗಿ ಸೂಚಿಸುತ್ತವೆ.
ನನ್ನ ಮದುವೆ ಪ್ರಸಿದ್ಧ ಸ್ಥಳದಲ್ಲಿ ನಡೆದಿತ್ತು ಎಂಬುದು ಮದುಮಕ್ಕಳಿಗೆ ಜೀವನಪೂರ್ತಿ ಸವಿನೆನಪು.
ಸುಂದರ ಹಾಗೂ ಸ್ವಚ್ಛ ಪರಿಸರ. ಐಷಾರಾಮಿತನಕ್ಕೆ ಕೊರತೆಯಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.