ಅಮೆರಿಕದ ಕೆಲಸ ಬಿಟ್ಟು ಚಿತ್ರರಂಗಕ್ಕೆ ಎಂಟ್ರಿ: ಕರ್ನಾಟಕ ಸಂಗೀತ, ಭರತನಾಟ್ಯದಲ್ಲೂ ಪರಿಣತಿಯಿರುವ ಈ ನಟಿ ಯಾರು?

Published : Nov 15, 2026, 07:26 PM IST
Satvika Veeravalli

ಸಾರಾಂಶ

ಅಮೆರಿಕದಲ್ಲಿ ಎರಡು ವರ್ಷ ಐಟಿ ಉದ್ಯೋಗ ಮಾಡಿದ ಸಾತ್ವಿಕಾ ವೀರವಲ್ಲಿ, ನಟನೆಯ ಕನಸಿಗಾಗಿ ಕೆಲಸ ತೊರೆದು ಭಾರತಕ್ಕೆ ಬಂದಿದ್ದಾರೆ. ದುಲ್ಕರ್ ಸಲ್ಮಾನ್ ಅಭಿನಯದ 'ಆಕಾಶಮ್ಲೋ ಒಕ ತಾರ' ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಅಮೆರಿಕದಲ್ಲಿ ಕೈತುಂಬ ಸಂಬಳ ತರುತ್ತಿದ್ದ ಐಟಿ ಉದ್ಯೋಗ... ಆರಾಮದಾಯಕ ಜೀವನ... ಆದರೆ ಮನಸ್ಸಿನಲ್ಲಿದ್ದದ್ದು ಮಾತ್ರ ಬಣ್ಣದ ಲೋಕದಲ್ಲಿ ಮಿಂಚುವ ಕನಸು! ಕೊನೆಗೂ ಆ ಕನಸಿಗಾಗಿಯೇ ಸಾಫ್ಟ್‌ವೇರ್ ಉದ್ಯೋಗಕ್ಕೆ ಗುಡ್‌ಬೈ ಹೇಳಿ ಭಾರತಕ್ಕೆ ಬಂದ ಯುವತಿ ಈಗ ಚಿತ್ರರಂಗದಲ್ಲಿ ಹೊಸ ಪಯಣ ಆರಂಭಿಸಿದ್ದಾರೆ. ಹೌದು, ಮಲಯಾಳಂ ನಟ ದುಲ್ಕರ್ ಸಲ್ಮಾನ್ ಅಭಿನಯದ 'ಆಕಾಶಮ್ಲೋ ಒಕ ತಾರ' ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿರುವ ಕನ್ನಡಿಗರಿಗೂ ಪರಿಚಯವಾಗಬಹುದಾದ ತೆಲುಗು ಮೂಲದ ಯುವತಿ ಸಾತ್ವಿಕಾ ವೀರವಲ್ಲಿ ಅವರ ಕಥೆಯಿದು.

ಪವನ್ ಸಾಧಿನೇನಿ ನಿರ್ದೇಶನದ 'ಆಕಾಶಮ್ಲೋ ಒಕ ತಾರ' ಸಿನಿಮಾ ನವೆಂಬರ್ 20ರಂದು ತೆರೆಕಾಣಲು ಸಿದ್ಧವಾಗಿದೆ. ಈ ಚಿತ್ರದ ಮೂಲಕ ನಾಯಕಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಸಾತ್ವಿಕಾ, ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ತಮ್ಮ ಸಿನಿ ಪಯಣದ ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅಮೆರಿಕದ ಐಟಿ ಉದ್ಯೋಗ ತೊರೆದು ನಟನೆಯನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದೇಕೆ? ದುಲ್ಕರ್ ಸಲ್ಮಾನ್ ಜೊತೆಗಿನ ಅನುಭವ ಹೇಗಿತ್ತು? ಸಿನಿಮಾದಲ್ಲಿ ಅವರ ಪಾತ್ರ ಎಂಥದ್ದು? ಎಂಬುದನ್ನು ವಿವರಿಸಿದ್ದಾರೆ.

ಐಟಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ನಟನೆಯತ್ತ ಹೆಜ್ಜೆ!

ಅಮೆರಿಕದಲ್ಲಿ ಹುಟ್ಟಿ ಬೆಳೆದ ಸಾತ್ವಿಕಾ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಬಳಿಕ ಅಲ್ಲಿನ ಪ್ರತಿಷ್ಠಿತ ಐಟಿ ಕಂಪನಿಯೊಂದರಲ್ಲಿ ಸುಮಾರು ಎರಡು ವರ್ಷ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಆದರೆ ಬಾಲ್ಯದಿಂದಲೂ ಕಲೆ, ನಟನೆ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರಿಗೆ ಸಿನಿಮಾದಲ್ಲಿ ನಟಿಸಬೇಕೆಂಬ ಕನಸಿತ್ತು. ಹೀಗಾಗಿ ಕೈಯಲ್ಲಿದ್ದ ಉದ್ಯೋಗವನ್ನು ಬಿಟ್ಟು ನಟನೆಯತ್ತ ಮುಖ ಮಾಡಿದರು.

ಸಾತ್ವಿಕಾ ತಂದೆ ಮಾಧವ್ ತೆಲುಗು ಮೂಲದವರಾಗಿದ್ದು, ತಾಯಿ ಕೋಲ್ಕತ್ತಾದವರು. ಕುಟುಂಬ ಚೆನ್ನೈನಲ್ಲಿ ನೆಲೆಸಿದ್ದರಿಂದ ಅವರಿಗೆ ದಕ್ಷಿಣ ಭಾರತದ ಭಾಷೆ ಮತ್ತು ಸಂಸ್ಕೃತಿಯ ನಂಟು ಮೊದಲಿನಿಂದಲೂ ಇತ್ತು. ಆರಂಭದಲ್ಲಿ 'ಕಾಂತ' ಸಿನಿಮಾಕ್ಕಾಗಿ ಆಡಿಷನ್ ನೀಡಿದ್ದರೂ ಅವಕಾಶ ಸಿಕ್ಕಿರಲಿಲ್ಲ. ಬಳಿಕ ಅದೇ ನಿರ್ಮಾಣ ಸಂಸ್ಥೆಯ ಮತ್ತೊಂದು ತಮಿಳು ಚಿತ್ರಕ್ಕೆ ಆಯ್ಕೆಯಾದರು.

ಇದೇ ಸಂದರ್ಭದಲ್ಲಿ 'ಆಕಾಶಮ್ಲೋ ಒಕ ತಾರ' ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶವೂ ಒಲಿದುಬಂತು. ಇದರಿಂದ ಅಮೆರಿಕದ ಕೆಲಸಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಮರಳಿದರು. ಆರಂಭದಲ್ಲಿ ಒಂದೇ ಒಂದು ಸಿನಿಮಾ ಮಾಡಿ ಮತ್ತೆ ಅಮೆರಿಕಕ್ಕೆ ಹಿಂದಿರುಗುವ ಆಲೋಚನೆಯಲ್ಲಿದ್ದ ಸಾತ್ವಿಕಾ, ಈಗ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಹೊಸ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಬಾಹ್ಯಾಕಾಶದ ಕನಸು ಕಾಣುವ ಹಳ್ಳಿಯ ಹುಡುಗಿ 'ಕಲ್ಪನಾ'

'ಆಕಾಶಮ್ಲೋ ಒಕ ತಾರ' ಸಿನಿಮಾದಲ್ಲಿ ಸಾತ್ವಿಕಾ 'ಕಲ್ಪನಾ' ಎಂಬ ಹಳ್ಳಿಯ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸರಳ ಸ್ವಭಾವದ ಈ ಹುಡುಗಿಗೆ ಆಕಾಶದಲ್ಲಿ ಹಾರಬೇಕು, ಬಾಹ್ಯಾಕಾಶಕ್ಕೆ ಹೋಗಬೇಕು ಎಂಬ ದೊಡ್ಡ ಕನಸಿರುತ್ತದೆ. ಸುತ್ತಮುತ್ತಲಿನವರು ಎಷ್ಟೇ ಅಡ್ಡಿಪಡಿಸಿದರೂ, ನಿರುತ್ಸಾಹಗೊಳಿಸಿದರೂ ತನ್ನ ಗುರಿಯನ್ನು ತಲುಪಲೇಬೇಕೆಂಬ ಛಲ ಆಕೆಯದ್ದು.

ಈ ಪಾತ್ರದ ಬಗ್ಗೆ ಮಾತನಾಡಿರುವ ಸಾತ್ವಿಕಾ, ಅಮೆರಿಕದ ವಾತಾವರಣದಲ್ಲಿ ಬೆಳೆದ ತಮಗೆ ಹಳ್ಳಿಯ ಹುಡುಗಿಯ ಪಾತ್ರದಲ್ಲಿ ನಟಿಸುವುದು ಸವಾಲಾಗಿತ್ತು ಎಂದು ಹೇಳಿದ್ದಾರೆ. ಪಾತ್ರಕ್ಕೆ ಬೇಕಾದ ಭಾಷೆ ಮತ್ತು ಆಡುಭಾಷೆಯ ಹಿಡಿತಕ್ಕಾಗಿ ವಿಶೇಷವಾಗಿ ತೆಲುಗು ಕಲಿತಿದ್ದಾರಂತೆ. ಅಷ್ಟೇ ಅಲ್ಲ, ಸಾತ್ವಿಕಾ ಅವರಿಗೆ ಕರ್ನಾಟಕ ಸಂಗೀತ ಹಾಗೂ ಭರತನಾಟ್ಯದಲ್ಲೂ ಪರಿಣತಿ ಇದೆ. ಕಲ್ಪನಾ ಪಾತ್ರದ ಮೂಲಕ ಪ್ರತಿಯೊಬ್ಬರಿಗೂ ತಮ್ಮ ಕನಸುಗಳನ್ನು ಬೆನ್ನಟ್ಟುವ ಧೈರ್ಯ ಸಿಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಮೊದಲ ದಿನವೇ ಧೈರ್ಯ ತುಂಬಿದ ದುಲ್ಕರ್ ಸಲ್ಮಾನ್!

ಚಿತ್ರದ ಚಿತ್ರೀಕರಣದ ವೇಳೆ ನಾಯಕ ದುಲ್ಕರ್ ಸಲ್ಮಾನ್ ನೀಡಿದ ಪ್ರೋತ್ಸಾಹವನ್ನು ಸಾತ್ವಿಕಾ ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ದುಲ್ಕರ್ 'ಕೃಷ್ಣ' ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಬ್ಬ ಹುಡುಗಿಯ ಕನಸು ನನಸಾಗುವ ಹಾದಿಯಲ್ಲಿ ಒಳ್ಳೆಯ ಮನಸ್ಸಿನ ಯುವಕ ಹೇಗೆ ಬೆಂಬಲವಾಗಿ ನಿಲ್ಲುತ್ತಾನೆ ಎಂಬುದನ್ನು ಈ ಸಿನಿಮಾ ಮನಮುಟ್ಟುವಂತೆ ತೋರಿಸಲಿದೆ ಎಂದು ಸಾತ್ವಿಕಾ ಹೇಳಿದ್ದಾರೆ.

ಚಿತ್ರೀಕರಣದ ಮೊದಲ ದಿನವೇ ಜಾತ್ರೆಯ ದೃಶ್ಯವೊಂದರಲ್ಲಿ ನಟಿಸುವಾಗ ತಮಗೆ ಸ್ವಲ್ಪ ಆತಂಕವಾಗಿತ್ತಂತೆ. ಆಗ ದುಲ್ಕರ್ ಸಲ್ಮಾನ್ ನೀಡಿದ ಪ್ರೋತ್ಸಾಹ ಮತ್ತು ಸಹಕಾರ ತಮ್ಮ ಭಯವನ್ನು ದೂರ ಮಾಡಿತು ಎಂದು ಅವರು ನೆನಪಿಸಿಕೊಂಡಿದ್ದಾರೆ. ಸೆಟ್‌ನಲ್ಲಿ ದುಲ್ಕರ್ ಅವರ ಬೆಂಬಲ ಹೊಸಬಳಾದ ತಮಗೆ ಸಾಕಷ್ಟು ಆತ್ಮವಿಶ್ವಾಸ ನೀಡಿತು ಎಂದಿದ್ದಾರೆ. ಇನ್ನು ಶ್ರುತಿ ಹಾಸನ್ ಅವರ ಉತ್ಸಾಹಭರಿತ ವ್ಯಕ್ತಿತ್ವ ಹಾಗೂ ರುಹಾನಿ ಶರ್ಮಾ ಅವರ ಸಹಕಾರವೂ ಉತ್ತಮ ಅನುಭವ ನೀಡಿದೆ ಎಂದು ಸಾತ್ವಿಕಾ ಹೇಳಿದ್ದಾರೆ.

ಹಾಡುಗಳ ಸಾಹಿತ್ಯ ಅರ್ಥಮಾಡಿಕೊಳ್ಳಲು ವಿಶೇಷ ಪ್ರಯತ್ನ!

ಈ ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡುಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾಡುಗಳ ಸಾಹಿತ್ಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಗೀತರಚನೆಕಾರ ಗಂಗರಾಜು ಅವರೊಂದಿಗೆ ವಿಶೇಷವಾಗಿ ಚರ್ಚಿಸುತ್ತಿದ್ದೆ ಎಂದು ಸಾತ್ವಿಕಾ ತಿಳಿಸಿದ್ದಾರೆ. ಗೀತಾ ಆರ್ಟ್ಸ್, ಸ್ವಪ್ನ ಸಿನಿಮಾ ಹಾಗೂ ಲೈಟ್‌ಬಾಕ್ಸ್ ಮೀಡಿಯಾ ಸಂಸ್ಥೆಗಳ ಸಹಯೋಗದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಸಂದೀಪ್ ಗುಣ್ಣಂ ಮತ್ತು ರಮ್ಯಾ ಗುಣ್ಣಂ ನಿರ್ಮಾಪಕರಾಗಿದ್ದಾರೆ.

ಇನ್ನು ದುಲ್ಕರ್ ಸಲ್ಮಾನ್, ಸಾತ್ವಿಕಾ ವೀರವಲ್ಲಿ ಜೊತೆಗೆ ಶ್ರುತಿ ಹಾಸನ್ ಮತ್ತು ರುಹಾನಿ ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನವೆಂಬರ್ 20ರಂದು 'ಆಕಾಶಮ್ಲೋ ಒಕ ತಾರ' ಸಿನಿಮಾ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಐಟಿ ಉದ್ಯೋಗ ಬಿಟ್ಟು ಚಿತ್ರರಂಗಕ್ಕೆ ಬಂದಿರುವ ಸಾತ್ವಿಕಾ, ಮೊದಲ ಸಿನಿಮಾದಲ್ಲೇ ದುಲ್ಕರ್ ಸಲ್ಮಾನ್ ಅವರಂತಹ ಸ್ಟಾರ್ ನಟನಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅವರ ಸಿನಿ ಪಯಣಕ್ಕೆ ಈ ಸಿನಿಮಾ ಎಷ್ಟು ದೊಡ್ಡ ತಿರುವು ನೀಡಲಿದೆ ಎಂಬುದನ್ನು ಕಾದು ನೋಡಬೇಕು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಂಬಾನಿ, ತೆಂಡೂಲ್ಕರ್, ಶಾರೂಖ್ ಮಕ್ಕಳಿಗೆ ಪಾಠ ಮಾಡಿದ ಟೀಚರ್ ಈಗ ಕನ್ನಡ ದಾರವಾಹಿಯ ಸ್ಟಾರ್ ನಟಿ
ನಟ ಉಪೇಂದ್ರ ಮನೆಯಲ್ಲಿ ಮದುವೆ ಸಂಭ್ರಮ: ಕ್ಯೂಟ್​ ಫೋಟೋಸ್​​ ಶೇರ್​ ಮಾಡಿಕೊಂಡ ನಟಿ ಪ್ರಿಯಾಂಕಾ