
ಮುಂಬೈ (ಅ.1): ಸಿನಿಮಾ ರಂಗದಲ್ಲಿ ಕೆಲವೊಂದು ಘಟನೆಗಳು ಚಲನಚಿತ್ರಗಳ ಕಥೆಗಿಂತಲೂ ಹೆಚ್ಚು ನಿಗೂಢವಾಗಿರುತ್ತವೆ. ಅಂಥದ್ದೇ ಒಂದು ನಿಗೂಢ ಘಟನೆ ಎಂದರೆ 2000ರ ದಶಕಾರಂಭದಲ್ಲಿ ಬಾಲಿವುಡ್‌ನ ಜನಪ್ರಿಯ ಚಿತ್ರಗಳಲ್ಲಿ ಅಭಿನಯಿಸಿದ್ದ ನಟ ವಿಶಾಲ್ ಠಕ್ಕರ್ ಅವರ ಹಠಾತ್ ನಾಪತ್ತೆ. ನಟ ವಿಶಾಲ್ ಠಕ್ಕರ್ ನಾಪತ್ತೆಯಾಗಿ ಇಂದಿಗೆ ಬರೋಬ್ಬರಿ ಒಂದು ದಶಕ (10 ವರ್ಷಗಳು) ಕಳೆದರೂ ಅವರ ಬಗ್ಗೆ ಯಾವುದೇ ಸುಳಿವು ಸಿಗದಿರುವುದು ಇಡೀ ಚಿತ್ರರಂಗ ಹಾಗೂ ತನಿಖಾ ಸಂಸ್ಥೆಗಳನ್ನು ದಿಗ್ಭ್ರಮೆಗೊಳಿಸಿದೆ.
ಸಂಜಯ್ ದತ್ ಮತ್ತು ಅರ್ಷದ್ ವಾರ್ಸಿ ಅಭಿನಯದ ಐತಿಹಾಸಿಕ ಸೂಪರ್ ಹಿಟ್ ಚಿತ್ರ 'ಮುನ್ನಾಭಾಯ್ ಎಂಬಿಬಿಎಸ್'ನಲ್ಲಿ ಜೀವನ ಅಂತ್ಯ ಮಾಡಿಕೊಳ್ಳಲು ಯತ್ನಿಸುವ ಯುವಕನ, ಸಣ್ಣ ಆದರೆ ಅತ್ಯಂತ ನೆನಪಿನಲ್ಲಿ ಉಳಿಯುವ ಪಾತ್ರದಲ್ಲಿ ವಿಶಾಲ್ ಠಕ್ಕರ್ ಅಭಿನಯಿಸಿದ್ದರು. ಇದಲ್ಲದೆ, ಟಬು ಅಭಿನಯದ 'ಚಾಂದಿನಿ ಬಾರ್', 'ಟ್ಯಾಂಗೋ ಚಾರ್ಲಿ' ಸಿನಿಮಾಗಳು ಹಾಗೂ ಕಿರುತೆರೆಯ ಸೂಪರ್ ಹಿಟ್ ಧಾರಾವಾಹಿ 'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ'ನಲ್ಲೂ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈ ಉದಯೋನ್ಮುಖ ನಟನ ಜೀವನದಲ್ಲಿ ಸಂಭವಿಸಿದ ಆ ಒಂದು ಘಟನೆ ಅವರ ಇಡೀ ಅಸ್ತಿತ್ವವನ್ನೇ ಪ್ರಶ್ನಾರ್ಥಕ ಚಿಹ್ನೆಯನ್ನಾಗಿಸಿದೆ.
2015ರ ಡಿಸೆಂಬರ್ 31ರಂದು ಅಂತಿಮವಾಗಿ ಕಾಣಿಸಿಕೊಂಡ ವಿಶಾಲ್ ಠಕ್ಕರ್, ಆ ರಾತ್ರಿ 'ಸ್ಟಾರ್ ವಾರ್ಸ್: ದಿ ಫೋರ್ಸ್ ಅವೇಕನ್ಸ್' ಚಲನಚಿತ್ರ ವೀಕ್ಷಿಸಲು ಥಿಯೇಟರ್‌ಗೆ ತೆರಳಿದ್ದರು. 'ಇಂಡಿಯನ್ ಎಕ್ಸ್‌ಪ್ರೆಸ್' ವರದಿಯ ಪ್ರಕಾರ, ಡಿಸೆಂಬರ್ 31ರ ರಾತ್ರಿ ಸುಮಾರು 10:30ಕ್ಕೆ ವಿಶಾಲ್ ತಮ್ಮ ಮುಲುಂಡ್‌ನಲ್ಲಿರುವ ನಿವಾಸದಲ್ಲಿ ತಾಯಿಯಿಂದ 500 ರೂಪಾಯಿ ಹಣವನ್ನು ಪಡೆದು ಹೊರಟಿದ್ದರು. ನಂತರ ಜನವರಿ 1, 2016ರ ಮುಂಜಾನೆ 1:00 ಗಂಟೆಯ ಸುಮಾರಿಗೆ ತಮ್ಮ ತಂದೆಗೆ ಮೆಸೇಜ್ (ಸಂದೇಶ) ಕಳುಹಿಸಿದ್ದ ವಿಶಾಲ್, "ನಾನು ಪಾರ್ಟಿಗೆ ಹೋಗುತ್ತಿದ್ದೇನೆ, ಬೆಳಿಗ್ಗೆ ಮನೆಗೆ ಹಿಂತಿರುಗುತ್ತೇನೆ" ಎಂದು ತಿಳಿಸಿದ್ದರು. ಆದರೆ ಆ ಮೆಸೇಜ್ ಅವರ ಕುಟುಂಬ ಸದಸ್ಯರಿಗೆ ಬಂದ ಕೊನೆಯ ಸಂಪರ್ಕವಾಗಿತ್ತು.
ಪೋಲಿಸರ ತನಿಖೆಯ ಪ್ರಕಾರ, ಜನವರಿ 1ರ ಬೆಳಿಗ್ಗೆ 11:45ಕ್ಕೆ ಘೋಡ್‌ಬಂದರ್ ರಸ್ತೆಯಲ್ಲಿ ವಿಶಾಲ್ ತಮ್ಮ ಗೆಳತಿಯೊಂದಿಗೆ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಅಲ್ಲಿಂದ ಶೂಟಿಂಗ್‌ಗಾಗಿ ಅಂಧೇರಿಗೆ ಹೋಗಲು ಅವರು ಆಟೋರಿಕ್ಷಾ ಹತ್ತಿದ್ದರು. ಅದರ ನಂತರ ಅವರ ಮೊಬೈಲ್ ಫೋನ್ ಸಂಪೂರ್ಣವಾಗಿ ಸ್ವಿಚ್ ಆಫ್ ಆಗಿದೆ.
ವಿಶಾಲ್ ಅವರ ಚಹರೆಗೆ ಹೋಲುವ ಯಾವುದೇ ವ್ಯಕ್ತಿಯ ಮೃತದೇಹವಾಗಲಿ ಅಥವಾ ಆಸ್ಪತ್ರೆ ದಾಖಲೆಗಳಾಗಲಿ ಮುಂಬೈನ ಯಾವುದೇ ಭಾಗದಲ್ಲೂ ಪತ್ತೆಯಾಗಲಿಲ್ಲ. ಅಷ್ಟೇ ಅಲ್ಲ, ಅಂದಿನಿಂದ ಇಂದಿನವರೆಗೆ ಅವರ ಬ್ಯಾಂಕ್ ಖಾತೆಯಿಂದಲೂ ಯಾವುದೇ ರೀತಿಯ ಹಣಕಾಸಿನ ವಹಿವಾಟು ನಡೆದಿಲ್ಲ.
ಕುಟುಂಬಸ್ಥರು ತಕ್ಷಣವೇ ನಾಪತ್ತೆ ದೂರು (Missing Complaint) ದಾಖಲಿಸಿದರೂ, ಆ ಸಮಯದಲ್ಲಿ ಈ ಪ್ರಕರಣಕ್ಕೆ ಹೆಚ್ಚಿನ ಮಾಧ್ಯಮ ಪ್ರಚಾರ ಸಿಗಲಿಲ್ಲ. ಕಾಲಕ್ರಮೇಣ ಸೋಶಿಯಲ್ ಮೀಡಿಯಾ ಮತ್ತು ರೆಡ್ಡಿಟ್ (Reddit) ಚರ್ಚೆಗಳಲ್ಲಿ ಈ ವಿಷಯ ಮುನ್ನೆಲೆಗೆ ಬಂದರೂ, ಯಾವುದೇ ಬಲವಾದ ಸುಳಿವು ಸಿಗಲಿಲ್ಲ.
ಈ ನಿಗೂಢ ನಾಪತ್ತೆ ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದ್ದು ವಿಶಾಲ್ ಅವರ ವೈಯಕ್ತಿಕ ಜೀವನದ ಘಟನೆಗಳು. ವಿಶಾಲ್ ನಾಪತ್ತೆಯಾಗುವುದಕ್ಕೆ ಸರಿಯಾಗಿ ಮೂರು ತಿಂಗಳ ಮುಂಚೆ, ಅವರ ಗೆಳತಿಯೇ ಅವರ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದರು. ಆದರೆ, ತದನಂತರ ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಶಮನಗೊಂಡು ಆ ದೂರನ್ನು ಹಿಂಪಡೆಯಲಾಗಿತ್ತು.
2021ರ ರೆಡ್ಡಿಟ್ ಪೋಸ್ಟ್ ಒಂದರ ಪ್ರಕಾರ, ಅಂದಿನ ತನಿಖಾಧಿಕಾರಿ ಮಹೇಂದ್ರ ಪುರಿ, "ಆರಂಭದಲ್ಲಿ ನಾವು ಅವರ ಗೆಳತಿಯ ಮೇಲೆ ಅನುಮಾನ ಪಟ್ಟಿದ್ದೆವು. ಆದರೆ ಆಕೆಯ ಹೇಳಿಕೆಯಲ್ಲಿ ಯಾವುದೇ ವ್ಯತ್ಯಾಸಗಳು ಕಂಡುಬರಲಿಲ್ಲ" ಎಂದು ತಿಳಿಸಿದ್ದರು. ಜೊತೆಗೆ, ಇದು ಕೊ*ಯೋ, ಅಪಹರಣವೋ ಅಥವಾ ಸ್ವಇಚ್ಛೆಯಿಂದ ಮನೆ ತೊರೆದು ಹೋದದ್ದೋ ಎಂಬುದನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಪ್ರಕರಣಕ್ಕೆ ಮತ್ತಷ್ಟು ನಿಗೂಢತೆ ಸೇರ್ಪಡೆಯಾಗಿದ್ದು ಎಂದರೆ, ವಿಶಾಲ್ ನಾಪತ್ತೆಯಾದ ಕೆಲವು ತಿಂಗಳುಗಳ ನಂತರ ಅವರ ಗೆಳತಿ ಕೂಡ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಹೃದಯಾಘಾತದಿಂದ ಅನುಮಾನಾಸ್ಪದವಾಗಿ ಮೃತಪಟ್ಟರು!
ಅತ್ತ ದೂರು ನೀಡಿದ್ದ ಗೆಳತಿಯೂ ಮೃತಪಟ್ಟು, ಇತ್ತ ಪ್ರಮುಖ ಸಾಕ್ಷ್ಯಗಳೂ ಇಲ್ಲದೆ ನಟ ವಿಶಾಲ್ ಠಕ್ಕರ್ ಸುಳಿವು ಸಿಗದಂತೆ ಮಾಯವಾಗಿದ್ದಾರೆ. 10 ವರ್ಷಗಳು ಕಳೆದರೂ ಈ ಪ್ರಕರಣವು ಬಾಲಿವುಡ್‌ನ ಅತ್ಯಂತ ಗಂಭೀರ ಹಾಗೂ ರಹಸ್ಯಮಯ 'ಮಿಸ್ಸಿಂಗ್ ಕೇಸ್'ಗಳಲ್ಲಿ ಒಂದಾಗಿ ಉಳಿದುಕೊಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.