28 ವರ್ಷಗಳ ಹಿಂದಿನ ‘ಅನ್ಯಾಯಕಾರಿ ಬ್ರಹ್ಮ ಸುಂದರನ ಸನ್ಯಾಸಿ ಮಾಡಬಹುದೇ’ ಜಾನಪದ ಶೈಲಿಯ ಹಾಡು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಮಂಡ್ಯ ಮಂಜುನಾಥ/ಸಿ.ಸಿದ್ದರಾಜು ಮಾದಹಳ್ಳಿ
ಮಂಡ್ಯ/ಮಳವಳ್ಳಿ (ಜೂ.18): 28 ವರ್ಷಗಳ ಹಿಂದಿನ ‘ಅನ್ಯಾಯಕಾರಿ ಬ್ರಹ್ಮ ಸುಂದರನ ಸನ್ಯಾಸಿ ಮಾಡಬಹುದೇ’ ಜಾನಪದ ಶೈಲಿಯ ಹಾಡು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಕೆಲವರು ಈ ಹಾಡನ್ನು ಶಾರ್ಟ್ ವಿಡಿಯೋ ಮಾಡಿ ಹರಿಬಿಟ್ಟರೆ, ಇನ್ನು ಕೆಲವರು ನೃತ್ಯಮಾಡಿ ಖುಷಿಪಡುತ್ತಿದ್ದಾರೆ. ಹಾಡಿನ ಮೂಲ ಗಾಯಕರೂ ಆಗಿರುವ ಅಂತಾರಾಷ್ಟ್ರೀಯ ಜಾನಪದ ಹಿರಿಯ ಕಲಾವಿದ ಮಳವಳ್ಳಿಯ ಡಾ.ಎಂ.ಮಹದೇವಸ್ವಾಮಿ ಅವರು ಸ್ವತಃ ಹಾಡಿದ ಈ ಗೀತೆಯ ಸಾಲುಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.
ಅರ್ಜುನ ತನ್ನ ಪತ್ನಿ ದ್ರೌಪದಿ ಜೊತೆಗೆ ಪಗಡೆಯಾಟದಲ್ಲಿ ಸೋತ ನಂತರ ಜೋಗಿ ಸನ್ಯಾಸಿಯಾಗುವ ಪ್ರಸಂಗವನ್ನು ಮುಂದಿಟ್ಟುಕೊಂಡು ರಚನೆಯಾದ ಹಾಡು ಇದಾಗಿದೆ. ಆಟದ ಸಂದರ್ಭದಲ್ಲಿ ನಾನು ಸೋತರೆ ನಿಮ್ಮ ಉಳಿದ ಪತ್ನಿಯರ ಸೇವೆ ಮಾಡುತ್ತೇನೆಂದು ದ್ರೌಪದಿ ಹೇಳಿದರೆ, ತಾನು ಸೋತರೆ ಜೋಗಿ ಸನ್ಯಾಸಿಯಾಗುವುದಾಗಿ ಅರ್ಜುನ ಪಂಥ ಕಟ್ಟುತ್ತಾನೆ. ಅರ್ಜುನ ಪಂದ್ಯದಲ್ಲಿ ಇನ್ನೇನು ಗೆದ್ದೇ ಬಿಡುತ್ತಾನೆ ಎನ್ನುವಾಗ ದ್ರೌಪದಿ ತನ್ನ ಅಣ್ಣ ಕೃಷ್ಣನ ಮೊರೆ ಹೋಗುತ್ತಾಳೆ. ಆಗ ಶ್ರೀಕೃಷ್ಣ ಆಟದ ಮಧ್ಯಸ್ಥಿಕೆಗೆ ಬರುತ್ತಾನೆ. ಜತೆಗೆ, ತನ್ನ ಮಾಯಾವಿ ಶಕ್ತಿಯಿಂದ ಚಿತ್ರೆ, ಕಸುಮಾಲೆಯರ ರೂಪ ತೋರಿಸುತ್ತಾನೆ.
ನಾಳೆ ಪಂಚನಹಳ್ಳಿಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ 2ನೇ ಪುಣ್ಯಸ್ಮರಣೆ!
ಸ್ತ್ರೀಯರ ರೂಪಕ್ಕೆ ಮನಸೋತ ಅರ್ಜುನ ಆಟದಲ್ಲಿ ಸೋಲುತ್ತಾನೆ. ಕೊಟ್ಟ ಮಾತಿನಂತೆ ಜೋಗಿ ಸನ್ಯಾಸಿಯಾಗಬೇಕಾಗುತ್ತದೆ. ಸ್ಫುರದ್ರೂಪಿಯಾದ ಅರ್ಜುನ ವೇಶ್ಯೆ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಮಹಿಳೆಯರು ಅರ್ಜುನನ ಕುರಿತು ‘ಅನ್ಯಾಯಕಾರಿ ಬ್ರಹ್ಮ ಆ ಸುಂದರನ ಸನ್ಯಾಸಿ ಮಾಡಬಹುದೇ’ ಎಂದು ಹಾಡುವ ಹಾಡೇ ಇಂದು ಸಖತ್ತಾಗಿ ವೈರಲ್ ಆಗುತ್ತಿದೆ ಎಂದು ಮಳವಳ್ಳಿ ಮಹದೇವಸ್ವಾಮಿ ಅವರು ಹೇಳುತ್ತಾರೆ. ನನ್ನ ಹಾಡನ್ನು ಮೆಚ್ಚಿಕೊಂಡು ಹೆಸರಾಂತ ಗಾಯಕ-ಗಾಯಕಿಯರು ನಿತ್ಯ ಕರೆ ಮಾಡಿ ಅಭಿನಂದನೆ ಹೇಳುತ್ತಿದ್ದಾರೆ. ಬಿ.ಆರ್.ಛಾಯಾ, ಮಂಜುಳಾ ಗುರುರಾಜ್, ಪಿ.ಸುಶೀಲಾ, ಸಂಗೀತಾ ಕಟ್ಟಿ ಸೇರಿ ಹಲವು ಗಾಯಕಿಯರೊಂದಿಗೆ ನಾನು ಹಾಡು ಹಾಡಿದ್ದೇನೆ. ಎಲ್ಲರಿಂದಲೂ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ ಎಂದು ಹೇಳಿದರು.
ಹಲವು ಗೌರವ ಪುರಸ್ಕೃತ: ಡಾ.ಎಂ.ಮಹದೇವಸ್ವಾಮಿ ಅವರು ಮಹದೇಶ್ವರ ದಯ ಬಾರದೇ, ತಾಳಿ ತಾಳಿ ಚಿನ್ನದ ತಾಳಿ, ಸಿದ್ದಯ್ಯ ಸ್ವಾಮಿ ಬನ್ನಿ ಸೇರಿ ಮಂಟೆಸ್ವಾಮಿ, ಸಿದ್ದಪ್ಪಾಜಿ, ಮಹದೇಶ್ವರ, ನಂಜುಂಡೇಶ್ವರ, ಚಾಮುಂಡೇಶ್ವರಿ, ಕಾಲ ಭೈರವ ಸೇರಿ ಹಲವು ದೇವತೆಗಳ ಸಾವಿರಾರು ಜಾನಪದ ಗೀತೆ ಹಾಡಿದ್ದಾರೆ. ಜೊತೆಗೆ ಹಲವು ಕಥೆಗಳನ್ನು ಧ್ವನಿ ಮುದ್ರಣ ಮಾಡಿಸುವ ಜೊತೆಗೆ ಚಿತ್ರೀಕರಣವನ್ನೂ ಮಾಡಿದ್ದಾರೆ. ಇವರ ಸಾಧನೆಗೆ ರಾಜ್ಯದ ಕರ್ನಾಟಕ ರಾಜೋತ್ಸವ ಪ್ರಶಸ್ತಿ, ಮೈಸೂರು ವಿವಿಯಿಂದ ಡಾಕ್ಟರೆಟ್ ಸೇರಿ ಹಲವು ಪ್ರಶಸ್ತಿ, ಗೌರವಗಳು ಸಂದಿವೆ.
ಆಲ್ಬಂ ಕೂಡ ಬಿಡುಗಡೆ ಮಾಡಿದ್ದರು: ಮಳವಳ್ಳಿ ಮಹದೇವಸ್ವಾಮಿ 28 ವರ್ಷಗಳ ಹಿಂದೆ ಅರ್ಜುನನ ಜೋಗಿ ಹಾಡು ಎಂಬ ಆಲ್ಬಂನಲ್ಲಿ ಜಾನಪದ ಶೈಲಿಯ ತಂಬೂರಿ ಕಥೆಯಲ್ಲಿ ಅನ್ಯಾಯಕಾರಿ ಬ್ರಹ್ಮ ಸುಂದರನ ಸನ್ಯಾಸಿ ಮಾಡಬಹುದೇ ಎಂಬ ಹಾಡು ರಚಿಸಿದ್ದರು. ತಮ್ಮದೇ ಶ್ರೀ ಮಹದೇಶ್ವರ ಆಡಿಯೋ ಕಂಪನಿ ತೆರೆದು ಅದರ ಮೂಲಕ ಕ್ಯಾಸೆಟ್ ಮಾಡಿ ಮಾರುಕಟ್ಟೆಗೆ ಬಿಟ್ಟಿದ್ದರು. ಆಗ ಈ ಕ್ಯಾಸೆಟ್ ಅಷ್ಟೊಂದು ಸದ್ದು ಮಾಡಿರಲಿಲ್ಲ. ಈಗ ಯಾರೋ ಈ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅದು ಇಷ್ಟೊಂದು ವೈರಲ್ ಆಗುತ್ತದೆ ಎಂಬುದನ್ನು ಯಾರೂ ಊಹಿಸಿರಲಿಲ್ಲ.
ಯೂ-ಟ್ಯೂಬ್ ಚಾನಲ್ ತೆರೆಯುವೆ: ಈಗೆಲ್ಲಾ ಆಡಿಯೋ ಕ್ಯಾಸೆಟ್‌ಗಳ ಕಾಲವಲ್ಲ. ಅದಕ್ಕಾಗಿ ನನ್ನದೇ ಸ್ವಂತ ಯೂ-ಟ್ಯೂಬ್ ಚಾನಲ್ ತೆರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಅದರ ಮೂಲಕವೇ ಎಲ್ಲಾ ಕತೆಗಳನ್ನು ಹಾಡಿನ ರೂಪಕ್ಕಿಳಿಸಿ ಬಿಡುಗಡೆ ಮಾಡುತ್ತೇನೆ. ಜಾನಪದ ಎಲ್ಲ ವರ್ಗದ ಜನರನ್ನು ತಲುಪಬೇಕು ಮತ್ತು ಆಕರ್ಷಿಸಬೇಕು. ಆಗ ಕಲೆ ಉಳಿಯಲು ಸಾಧ್ಯವಾಗುತ್ತದೆ ಎಂಬುದು ಅವರ ಅನಿಸಿಕೆ.
20 ಕತೆಗಳು ರೆಡಿ: 28 ವರ್ಷಗಳ ಹಿಂದೆ ರಚಿಸಿ ಹಾಡಿದ ಹಾಡು ಈಗ ಭಾರೀ ಸದ್ದು ಮಾಡುತ್ತಿದೆ. ಜಾನಪದ ಹಾಡನ್ನು ಇಂದಿನ ಯುವಕ-ಯುವತಿಯರು ಮೆಚ್ಚಿಕೊಂಡಿರುವುದೇ ದೊಡ್ಡ ಸಂತೋಷ. ಇದರಿಂದ ಇನ್ನಷ್ಟುಕತೆಗಳನ್ನು ಹಾಡಿನ ರೂಪಕ್ಕಿಳಿಸಲು ನಿರ್ಧರಿಸಿದ್ದೇನೆ. ಪಿರಿಯಾಪಟ್ಟಣ ಕಾಳಗ, ಚೋಳರಾಮನ ಕಥೆ, ನೀಲವೇಣಿ ಕತೆ, ಸತಿ ಸರಗೂರಪ್ಪನ ಕತೆ ಸೇರಿ 20 ಕತೆಗಳನ್ನು ಸಿದ್ಧ ಮಾಡಿಟ್ಟುಕೊಂಡಿದ್ದೇನೆ ಎಂದು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಬಿಜೆಪಿ ಮುಖಂಡರಿಂದಲೇ ಪಕ್ಷಕ್ಕೆ ಸೋಲು: ಸಂಸದ ಮುನಿಸ್ವಾಮಿ ಬೇಸರ
ಜಾನಪದ ಕಲೆಯನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳಬೇಕು. ಜಾನಪದ ನಮ್ಮ ಸಂಸ್ಕೃತಿಯ ಮೂಲ ಬೇರು. ಜಾನಪದವು ಬಾಯಿಂದ ಬಾಯಿಗೆ ಬಂದ ಕಲೆಯಾಗಿದ್ದು, ಇಂದಿನ ತಲೆಮಾರಿನ ಯುವಕರು ಜಾನಪದ ಕಲೆಯನ್ನು ಕಲಿತು ಮುಂದಿಗೆ ಪೀಳಿಗೆಗೆ ಮುಂದುವರೆಸಬೇಕಿದೆ.
-ಡಾ.ಎಂ.ಮಹದೇವಸ್ವಾಮಿ, ಜಾನಪದ ಕಲಾವಿದರು ಮಳವಳ್ಳಿ