BREAKING: ತಮಿಳಿನ ಗಜನಿ, ಕನ್ನಡದ ಗಜ, ಬಚ್ಛನ್‌ ಸಿನಿಮಾಗಳ ಫೇಮಸ್‌ ವಿಲನ್‌ ಪ್ರದೀಪ್ ರಾವತ್‌ ಇನ್ನಿಲ್ಲ

Published : Aug 04, 2026, 10:09 PM IST
pradeep rawat

ಸಾರಾಂಶ

'ಲಗಾನ್', 'ಗಜನಿ' ಹಾಗೂ ಕನ್ನಡದ 'ಗಜ' ಚಿತ್ರಗಳ ಖ್ಯಾತ ಖಳನಟ ಪ್ರದೀಪ್ ರಾವತ್ (74) ಅವರು ನಿಧನರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದು, ಅವರ ಅಗಲಿಕೆಗೆ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ.

ಮುಂಬೈ (ಆ.4): 'ಲಗಾನ್', 'ಗಜನಿ' ಹಾಗೂ 'ಮಹಾಭಾರತ'ದಂತಹ ಜನಪ್ರಿಯ ಚಿತ್ರಗಳು, ಕನ್ನಡದಲ್ಲಿ ಗಜ ಚಿತ್ರದ ಸೂರಪ್ಪ, ಬಚ್ಚನ್‌ ಸಿನಿಮಾದ ಮಿನಿಸ್ಟರ್‌ ಮಧುಸೂಧನ್‌ನಂಥ ಪ್ರಮುಖ ವಿಲನ್‌ ಪಾತ್ರಗಳಲ್ಲಿ ನಟಿಸಿ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಹಿರಿಯ ನಟ ಪ್ರದೀಪ್ ರಾವತ್ (74) ಅವರು ಮಂಗಳವಾರ ಸಂಜೆ ನಿಧನರಾಗಿದ್ದಾರೆ. ಅವರ ಅಗಲಿಕೆಯ ಸುದ್ದಿ ಇಡೀ ಭಾರತೀಯ ಚಿತ್ರರಂಗವನ್ನು ತೀವ್ರ ಶೋಕದಲ್ಲಿ ಮುಳುಗಿಸಿದೆ. 'ಲಗಾನ್' ಚಿತ್ರದ ಸಹನಟ ಯಶ್‌ಪಾಲ್ ಶರ್ಮಾ ಅವರು ಸೋಶಿಯಲ್‌ ಮೀಡಿಯಾದಲ್ಲಿ ಈ ದುಃಖದ ಸುದ್ದಿಯನ್ನು ಹಂಚಿಕೊಂಡಿದ್ದು, ಬಾಲಿವುಡ್, ಕಾಲಿವುಡ್ ಹಾಗೂ ಟಾಲಿವುಡ್ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.

ಚಿತ್ರರಂಗದ ಆಪ್ತ ಮೂಲಗಳ ಪ್ರಕಾರ, ಪ್ರದೀಪ್ ರಾವತ್ ಅವರು ಕಳೆದ ಕೆಲವು ಸಮಯದಿಂದ ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅನಾರೋಗ್ಯದ ವಿರುದ್ಧ ಸತತ ಹೋರಾಟ ನಡೆಸುತ್ತಿದ್ದ ಅವರ ಆರೋಗ್ಯ ಸ್ಥಿತಿ ಇದ್ದಕ್ಕಿದ್ದಂತೆ ತೀವ್ರವಾಗಿ ಕ್ಷೀಣಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅಂತಿಮ ಸಂಸ್ಕಾರದ ಕುರಿತು ಅವರ ಕುಟುಂಬಸ್ಥರಿಂದ ಅಧಿಕೃತ ಮಾಹಿತಿ ಹೊರಬರಬೇಕಿದೆ.

ಚಿತ್ರರಂಗದಲ್ಲಿ ಅಪಾರ ಛಾಪು ಮೂಡಿಸಿದ್ದ ಖಳನಟ

ತಮ್ಮ ಪ್ರಭಾವಿ ಅಭಿನಯದ ಮೂಲಕ ಸೈ ಎನಿಸಿಕೊಂಡಿದ್ದ ಪ್ರದೀಪ್ ಸಿಂಗ್ ರಾವತ್, ಬಹುಭಾಷಾ ನಟನಾಗಿ ಭಾರತೀಯ ಸಿನಿಮಾರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. 1988ರಲ್ಲಿ ಬಿ.ಆರ್. ಚೋಪ್ರಾ ಅವರ ಬ್ಲಾಕ್‌ಬಸ್ಟರ್ 'ಮಹಾಭಾರತ' ಧಾರಾವಾಹಿಯಲ್ಲಿ 'ಅಶ್ವತ್ಥಾಮ'ನ ಪಾತ್ರ ಮಾಡುವ ಮೂಲಕ ಅವರು ದೇಶಾದ್ಯಂತ ಮನೆಮಾತಾಗಿದ್ದರು.

ಆದರೆ, ತಮಿಳಿನಲ್ಲಿ ಸೂರ್ಯ ನಟನೆಯ 'ಗಜನಿ' ಹಾಗೂ 2008ರಲ್ಲಿ ಆಮೀರ್ ಖಾನ್ ನಟನೆಯ ಹಿಂದಿಯ 'ಗಜನಿ' ರಿಮೇಕ್ ಚಿತ್ರದಲ್ಲಿ 'ಗಜನಿ ಧರ್ಮಾತ್ಮ' ಎಂಬ ಕ್ರೂರ ಖಳನಾಯಕನ ಪಾತ್ರದಲ್ಲಿ ದೊಡ್ಡ ಪ್ರಮಾಣದ ಅಭಿಮಾನಿಗಳನ್ನು ಅವರು ಗಿಟ್ಟಿಸಿದ್ದರು. ಅದಕ್ಕೂ ಮುನ್ನ ಆಮೀರ್ ಖಾನ್ ಅವರ ಆಸ್ಕರ್ ನಾಮನಿರ್ದೇಶಿತ 'ಲಗಾನ್' (2001) ಸಿನಿಮಾದಲ್ಲಿ ಸಿಖ್ ಯೋಧ 'ದೇವ್' ಎಂಬ ವಿಭಿನ್ನ ಹಾಗೂ ಸಕಾರಾತ್ಮಕ ಪಾತ್ರದ ಮೂಲಕ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದರು. ಎಸ್.ಎಸ್. ರಾಜಮೌಳಿ ನಿರ್ದೇಶನದ ತೆಲುಗಿನ ಸೂಪರ್ ಹಿಟ್ 'ಸೈ' (2004) ಸಿನಿಮಾದಲ್ಲಿ 'ಭಿಕ್ಷು ಯಾದವ್' ಪಾತ್ರದಲ್ಲಿನ ವಿಲನ್‌ ಅಭಿನಯಕ್ಕಾಗಿ ಅವರು 'ಫಿಲ್ಮ್‌ಫೇರ್ ಅತ್ಯುತ್ತಮ ಖಳನಟ' ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ದರ್ಶನ್‌, ಸುದೀಪ್‌ ಜೊತೆ ನಟನೆ

ಕನ್ನಡದಲ್ಲಿ ಉಪೇಂದ್ರ ಅಭಿನಯದ ಪರೋಡಿ ಸಿನಿಮಾದ ಮೂಲಕ ಮಿಂಚಿದ್ದ ಪ್ರದೀಪ್‌ ರಾವತ್‌ ಆ ಬಳಿಕ ದರ್ಶನ್‌ ಅಭಿನಯದ ಗಜ ಸಿನಿಮಾದಲ್ಲಿ ಸೂರಪ್ಪ, ಅಭಯ್‌ ಸಿನಿಮಾದಲ್ಲಿ ಎಂಎಲ್‌ಎ ನರಸಿಂಹಮೂರ್ತಿ, ಸುದೀಪ್‌ ಅಭಿನಯದ ಬಚ್ಛನ್‌ ಸಿನಿಮಾದಲ್ಲಿ ಮಿನಿಸ್ಟರ್‌ ಮಧುಸೂಧನ್‌, ಎಲೆಕ್ಷನ್‌ ಸಿನಿಮಾದಲ್ಲಿ ನರಸಿಂಹ, ಶಿವರಾಜ್‌ಕುಮಾರ್‌ ಅಭಿನಯದ ಶಿವಲಿಂಗ, ಲಕ್ಷ್ಮಣ ಹಾಗೂ 2022ರಲ್ಲಿ ರಿಲೀಸ್‌ ಆದ ಚಾಂಪಿಯನ್‌ ಸಿನಿಮಾದಲ್ಲಿ ನಟಿಸಿದ್ದರು.

ತೆರೆಯ ಮೇಲೆ ಕಠೋರ ಹಾಗೂ ರಗಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾವತ್, ನಿಜ ಜೀವನದಲ್ಲಿ ಅತ್ಯಂತ ಸರಳ ಹಾಗೂ ಮೃದು ಸ್ವಭಾವದ ವ್ಯಕ್ತಿಯಾಗಿದ್ದರು. ಅವರ ಅಗಲಿಕೆಗೆ ಚಲನಚಿತ್ರ ರಂಗದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ ಮಂದಣ್ಣರಂತೆ ಗ್ಲಾಮರಸ್ ಆಗಿ ಕಾಣಬೇಕಾ? ಹಬ್ಬಕ್ಕೆ ಈ ದೇಸಿ ಔಟ್‌ಫಿಟ್‌ಗಳನ್ನು ಟ್ರೈ ಮಾಡಿ
ಸೀರಿಯಲ್‌ನಲ್ಲಿ ಹೋಮ್ಲಿ ಲುಕ್, ಹೊರಗೆ ಗ್ಲಾಮರಸ್ ಅವತಾರ: ಜ್ಯೋತಿ ಪೂರ್ವಜ್ ಫೋಟೋಸ್ ವೈರಲ್