ಪುನೀತ್ ರಾಜ್'ಕುಮಾರ್ ಅವರ ‘ರಾಜಕುಮಾರ’ ಹಾಗೂ ರಕ್ಷಿತ್ ಶೆಟ್ಟಿ ಅವರ ‘ಕಿರಿಕ್ ಪಾರ್ಟಿ’ ಚಿತ್ರಗಳು ಈ ವರ್ಷದ ಯಶಸ್ವೀ ಚಿತ್ರಗಳಾಗಿ ನಿಂತಿವೆ. ಕನ್ನಡಕ್ಕೆ ಅಂಥ ಯಶಸ್ಸನ್ನು ದಾಖಲಿಸುವ ಶಕ್ತಿ ಮುಂದೆ ಯಾವ ಚಿತ್ರಗಳಿಗಿದೆ? ಅಂಥ 5 ಚಿತ್ರಗಳ ಪಟ್ಟಿ ಇಲ್ಲಿವೆ.
ಮುಗುಳು ನಗೆ
'ಪಟಾಕಿ’ಯ ಗೆಲುವಿನ ಖುಷಿಯಲ್ಲಿರುವ ಗಣೇಶ್ ಅವರ ಪಾಲಿಗೆ ‘ಮುಗುಳು ನಗೆ’ ಅದೃಷ್ಟದ ಚಿತ್ರ. ಕಾರಣ ‘ಮುಂಗಾರು ಮಳೆ’ ಹಾಗೂ ‘ಗಾಳಿಪಟ’ ಚಿತ್ರಗಳ ಯಶಸ್ಸು. ಆ ಎರಡೂ ಚಿತ್ರಗಳ ನಂತರ ಯೋಗರಾಜ್ ಭಟ್ ಹಾಗೂ ಗಣೇಶ್ ಒಂದಾಗಿದ್ದಾರೆ.ಈ ಕಾಂಬಿನೇಶನ್ ಬಗ್ಗೆ ಕುತೂಹಲ, ನಾಲ್ವರು ನಾಯಕಿಯರು, ಚಿತ್ರದ ಮೊದಲ ಲುಕ್- ಹೀಗೆ ಹಲವು ಕಾರಣಕ್ಕೆ ಗಮನ ಸೆಳೆದಿರುವ ಈ ಚಿತ್ರ ಇದು. ಮತ್ತೆ ‘ಮುಂಗಾರು ಮಳೆ’ಯ ಮೋಡಿ ಮಾಡುತ್ತದಾ ಅನ್ನುವ ಕುತೂಹಲ ಎಲ್ಲರಲ್ಲೂ ಇದೆ.
ಅಪರೇಷನ್ ಅಲಮೇಲಮ್ಮ
ನಿರ್ದೇಶಕ ಸುನಿ ಅಂದರೆ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ನೆನಪಾಗುತ್ತದೆ. ತಮ್ಮ ನಾಮಬಲದಿಂದಲೇ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಸುನಿ, ‘ಅಪರೇಷನ್ ಅಲಮೇಲಮ್ಮ’ ಮೂಲಕ ಮತ್ತೆ ಕ್ರೇಜ್ ಹುಟ್ಟಿಸಿದ್ದಾರೆ. ಪಾತ್ರವರ್ಗ, ಒಂದುಕಾಮಿಡಿ ಥ್ರಿಲ್ಲರ್, ಪಂಚಿಂಗ್ ಡೈಲಾಗ್ಗಳು- ಮೂಲಕ ಸೋಷಿಯಲ್ ಮೀಡಿಯಾಗಳಲ್ಲಿ ಆಗಲೇ ಸದ್ದು ಹೆಚ್ಚಿದೆ. ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಚಿತ್ರದ ಗೆಲುವಿನ ಟ್ರೆಂಡ್ ಮತ್ತೆ ಈ ಚಿತ್ರದಲ್ಲೂ ಮುಂದುವರಿಯುತ್ತಾ ಎನ್ನುವುದೇ ಈ ಚಿತ್ರದಕುತೂಹಲ. ರಿಷಿ ಹಾಗೂ ಶ್ರದ್ಧಾ ಶ್ರೀನಾಥ್ ಈ ಚಿತ್ರದ ಜೋಡಿ.
ಒಂದು ಮೊಟ್ಟೆಯ ಕತೆ
ಕೇವಲ ಪೋಸ್ಟರ್ನಿಂದ ಶುರುವಾದ ಈ ಚಿತ್ರದ ಹವಾ, ಟ್ರೈಲರ್ ಬಿಡುಗಡೆಯ ಹೊತ್ತಿಗೆ ಎಲ್ಲರೂ ಇದನ್ನೇ ಮಾತಾಡುವ ಮಟ್ಟಕ್ಕೆ ಏರಿತು. ಸ್ಟಾರು, ಗ್ಲಾಮರ್, ಹೆಸರಾಂತ ನಿರ್ದೇಶಕ, ಅದ್ದೂರಿ ನಿರ್ಮಾಣ ಯಾವುದೂ ಇಲ್ಲದ ಮೊಟ್ಟೆ ಇದು. ‘ಒಂದುಮೊಟ್ಟೆಯ ಕತೆ’ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಮೆಚ್ಚುಗೆ ಸಂಪಾದಿಸಿದೆ. ಈ ವಾರ ತೆರೆ ಕಾಣುತ್ತಿದೆ. ಪವನ್ ಕುಮಾರ್ ಸ್ಟುಡಿಯೋ ನಿರ್ಮಾಣದ ಈ ಚಿತ್ರದ ನಾಯಕ, ನಿರ್ದೇಶಕ ರಾಜ್ ಬಿ ಶೆಟ್ಟಿ. ಬೋಳು ತಲೆಯ ಕತೆ, ಮಂಗಳೂರು ಭಾಷೆ,ವಿನೂತನ ಪ್ರಯೋಗ ಎನ್ನುವ ಕಾರಣಕ್ಕೆ ಈ ಸಿನಿಮಾ ಮೇಲೆ ನಿರೀಕ್ಷೆ ಇದೆ.
ಭರ್ಜರಿ
ಎರಡು ಸಿನಿಮಾಗಳ ಹಿಟ್ ಕೊಟ್ಟ ನಾಯಕ ಧ್ರುವ ಸರ್ಜಾ ಅವರ ಮೂರನೇ ಚಿತ್ರವಿದು. ನಿರ್ದೇಶಕ ಚೇತನ್ ಕುಮಾರ್ ನಿರ್ದೇಶನದ ೨ನೇ ಚಿತ್ರವಾದ ಇದು ಧ್ರುವ ಸರ್ಜಾರ ಸ್ಟೈಲಿಶ್ ಲುಕ್ಗಳಿಂದ ಗಮನ ಸೆಳೆದಿದೆ. ಬೇರೆ ಬೇರೆ ಶೇಡ್ಸ್ನ ಪಾತ್ರದಲ್ಲಿಧ್ರುವ ಕಾಣಿಸಿಕೊಳ್ಳಲಿದ್ದಾರಂತೆ. ಧ್ರುವ ಸರ್ಜಾಗೆ ಅವರದೇ ಆದ ತರುಣ ಅಭಿಮಾನಿಗಳೂ ಇದ್ದಾರೆ. ಅವರೆಲ್ಲರೂ ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.
ಟಗರು
ಸೂರಿ ಸಿನಿಮಾ ಎಂದರೆ ಹೆಚ್ಚು ಹೇಳಬೇಕಾಗಿಲ್ಲ. ಜೊತೆಗೆ ಇಂಥ ನಿರ್ದೇಶಕನ ಚಿತ್ರಕ್ಕೆ ಶಿವರಾಜ್ಕುಮಾರ್ ನಾಯಕ. ಅಲ್ಲಿಗೆ ನಿರೀಕ್ಷೆ ಡಬಲ್. ‘ಕಡ್ಡಿಪುಡಿ’ ಚಿತ್ರದ ನಂತರ ಮತ್ತೆ ‘ಟಗರು’ ಚಿತ್ರದಲ್ಲಿ ಈ ಕಾಂಬಿನೇಷನ್ ಒಂದಾಗಿದೆ. ಚಿತ್ರದ ಹೆಸರು,ಶಿವಣ್ಣ ಲುಕ್, ಹೀರೋ ಧನಂಜಯ್ ಇಲ್ಲಿ ವಿಲನ್ ಆಗಿರುವುದು- ಇತ್ಯಾದಿ ಕಾರಣಕ್ಕೂ ‘ಟಗರು’ ನಿರೀಕ್ಷೆ ಹೆಚ್ಚಿಸಿದೆ. ಶಿವರಾಜ್ಕುಮಾರ್ ಜೊತೆ ಭಾವನಾ, ಮಾನ್ವಿತಾ ಕೂಡ ಇದ್ದಾರೆ.
(ಕನ್ನಡಪ್ರಭ ವಾರ್ತೆ)