'3 ಗಂಟೆ' ಚಿತ್ರಕ್ಕೆ ಅದ್ದೂರಿ ರಿಯಾಲಿಟಿ ಶೋ

By Suvarna Web DeskFirst Published Jul 5, 2017, 5:27 PM IST
Highlights

ನಿರ್ಮಾಪಕ ಚಂದ್ರಶೇಖರ್ ಹಾಗೂ ನಿರ್ದೇಶಕ ಮಧುಸೂಧನ್ ಅವರ ತಂಡ ಈಗಾಗಲೇ ಕುರಿಬಾಂಡ್, ಚಾಕ್ಪಾಟ್, ಬಿಂದಾಸ್ ಚಾಲೆಂಜ್ ಹೀಗೆ ಹಲವು ಶೋಗಳನ್ನು ಖಾಸಗಿ ವಾಹಿನಿಗಳಿಗಾಗಿ ರೂಪಿಸಿ ಯಶಸ್ವಿಯಾಗಿದೆ. ಈ ಅನುಭವದ ಆಧಾರದಲ್ಲಿ ಚಿತ್ರದ ಪ್ರಚಾರಕ್ಕಾಗಿ 40 ಲಕ್ಷ ಜನರನ್ನು ಸೇರಿಸಿ ರಿಯಾಲಿಟಿ ಶೋ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ.

ಬೆಂಗಳೂರು(ಕು.05): ಜಾಹೀರಾತು ಕ್ಷೇತ್ರದಲ್ಲಿ ತೊಡಗಿಸಿಕೊಂಡು ಹತ್ತಾರು ಕಿರು ಚಿತ್ರಗಳನ್ನು ಮಾಡಿಕೊಂಡಿದ್ದ ಮಧುಸೂಧನ್ ಅವರು ‘3 ಗಂಟೆ 30 ದಿನ 30 ಸೆಕೆಂಡ್’ ಹೆಸರಿನಲ್ಲಿ ಸಿನಿಮಾ ಶುರು ಮಾಡಿದ್ದು ಗೊತ್ತೇ ಇದೆ. ಈಗ ಚಿತ್ರೀಕರಣ ಮುಗಿಸಿ ನಿರ್ದೇಶಕ ಮಧುಸೂಧನ್ ಅವರು ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರಲು ಹೊರಟಿದ್ದಾರೆ. ಆರು ಗೌಡ ನಾಯಕ, ಕಾವ್ಯ ಶೆಟ್ಟಿ ನಾಯಕಿ. ಈ ಚಿತ್ರ ತುಂಬಾ ಅದ್ಧೂರಿಯಾಗಿ ಮೂಡಿಬಂದಿದೆ ಎಂಬುದು ನಿರ್ದೇಶಕರ ಭರವಸೆ. ಹೆಸರಿನಿಂದಲೇ ಗಮನಸೆಳೆಯುತ್ತಿರುವ ಈ ‘3 ಗಂಟೆ 30 ದಿನ 30 ಸೆಕೆಂಡು’.

ಈ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸಲಿಕ್ಕಾಗಿ ವಿಶೇಷ ಪ್ರಚಾರ ಕಾರ್ಯ ರೂಸಿದ್ದಾರೆ ನಿರ್ದೇಶಕರು. ಚಂದ್ರಶೇಖರ್ ಪದ್ಮಸಾಲಿ ಅವರ ನಿರ್ಮಾಣದ ಈ ಚಿತ್ರದ ಪ್ರಮೋಷನ್ಗಾಗಿ ಒಂದುರಿಯಾಲಿಟಿ ಶೋ ಮಾಡಲು ಹೊರಟಿದ್ದಾರೆ. ಹೌದು, ಕನಿಷ್ಠ 40 ಲಕ್ಷ ಜನ ಸೇರುವಂಥ ಒಂದು ರಿಯಾಲಿಟಿ ಶೋ ನಡೆಸಲಾಗುತ್ತಿದೆ. ಇದೊಂದು ವಿಭಿನ್ನ ಯೋಚನೆ, ಪರಿಕಲ್ಪನೆ.

ನಿರ್ಮಾಪಕ ಚಂದ್ರಶೇಖರ್ ಹಾಗೂ ನಿರ್ದೇಶಕ ಮಧುಸೂಧನ್ ಅವರ ತಂಡ ಈಗಾಗಲೇ ಕುರಿಬಾಂಡ್, ಚಾಕ್ಪಾಟ್, ಬಿಂದಾಸ್ ಚಾಲೆಂಜ್ ಹೀಗೆ ಹಲವು ಶೋಗಳನ್ನು ಖಾಸಗಿ ವಾಹಿನಿಗಳಿಗಾಗಿ ರೂಪಿಸಿ ಯಶಸ್ವಿಯಾಗಿದೆ. ಈ ಅನುಭವದ ಆಧಾರದಲ್ಲಿ ಚಿತ್ರದ ಪ್ರಚಾರಕ್ಕಾಗಿ 40 ಲಕ್ಷ ಜನರನ್ನು ಸೇರಿಸಿ ರಿಯಾಲಿಟಿ ಶೋ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ.

‘ಕಳೆದ ಹಲವು ವರ್ಷಗಳಿಂದ ನಾನು ಪ್ರೇಕ್ಷಕನಾಗಿ ಕನ್ನಡ ಸಿನಿಮಾ ನೋಡಿಕೊಂಡು ಬಂದವನು. ಈಗ ನಿರ್ದೇಶಕನಾಗಿದ್ದೇನೆ. ಜಾಹೀರಾತು, ಕಿರುತೆರೆಯಲ್ಲಿ ಗುರುತಿಸಿಕೊಂಡ ನನಗೆ ಒಂದು ಚಿತ್ರವನ್ನು ಪ್ರೇಕ್ಷಕರಿಗೆ ಹೇಗೆ ತಲುಪಿಸಬೇಕು ಮತ್ತು ಒಂದು ಚಿತ್ರಕ್ಕೆ ಪ್ರಮೋಷನ್ ಎಷ್ಟು ಅಗತ್ಯ ಎಂಬುದು ಗೊತ್ತು. ನಿರ್ಮಾಪಕರ ಜತೆ ಸೇರಿ ಮಾತಾಡಿದಾಗ ಯಾಕೆ ಒಂದು ರಿಯಾಲಿಟಿ ಶೋ ಮಾಡಬಾರದು ಎಂಬ ಯೋಚನೆ ಬಂತು. ಸಾಮಾನ್ಯವಾಗಿ ಸಿನಿಮಾ ಪ್ರಚಾರಕ್ಕಾಗಿ ರಿಯಾಲಿಟಿ ಶೋಗಳ ವೇದಿಕೆ ಬಳಸಿಕೊಳ್ಳಲಾಗುತ್ತದೆ. ಆದರೆ ಒಂದು ಚಿತ್ರಕ್ಕೆ ಹೊಸದಾಗಿ ರಿಯಾಲಿಟಿ ಶೋ ಯಾರೂ ಮಾಡಿಲ್ಲ. ಆ ಪ್ರಯತ್ನದಲ್ಲಿದ್ದೇವೆ’ಎನ್ನುತ್ತಾರೆ ನಿರ್ದೇಶಕರು.

ವಿಶೇಷ ಅಂದರೆ ಚಿತ್ರದಲ್ಲಿ ದೊಡ್ಡ ಕಲಾವಿದರ ದಂಡೇ ಇದೆ. ‘ಎಡಕಲ್ಲು ಗುಡ್ಡದ ಮೇಲೆ’ ಚಂದ್ರಶೇಖರ್, ಸುಧಾರಾಣಿ, ದೇವರಾಜ್ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾವ್ಯ ಶೆಟ್ಟಿ ಅವರು ಪತ್ರಕರ್ತೆ ಪಾತ್ರ ಮಾಡಿದ್ದರೆ, ಆರು ಗೌಡ ಅವರು ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ.

(ಕನ್ನಡಪ್ರಭ ವಾರ್ತೆ)

click me!