
ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದ 'ಬಾಹುಬಲಿ' ಸಿನಿಮಾದ ಬಗ್ಗೆ ಯಾರಿಗೆ ಗೊತ್ತಿಲ್ಲ. ನಿರ್ದೇಶಕ ಎಸ್‌ಎಸ್ ರಾಜಮೌಳಿಯವರು (SS Rajamouli) 'ಈಗ' ಸಿನಿಮಾ ಸೇರಿದಂತೆ, ಅಲ್ಲಿಯವರೆಗೂ ಸೂಪರ್ ಹಿಟ್ ಚಿತ್ರಗಳನ್ನೇ ನೀಡಿದ್ದರೂ ಬಾಹುಬಲಿ (Bahubali) ಚಿತ್ರದ ಸಕ್ಸಸ್ ಅದೆಲ್ಲವನ್ನೂ ಮೀರಿದ್ದು. ಬಾಹುಬಲಿ ಸಿನಿಮಾದಲ್ಲಿ ನಾಯಕರಾಗಿ ತೆಲುಗಿನ ಸ್ಟಾರ್ ನಟ ಪ್ರಭಾಸ್ (Prabhas) ನಟಿಸಿದ್ದರೆ ನಾಯಕಿಯರಾಗಿ ಅನುಷ್ಕಾ ಶೆಟ್ಟಿ ಹಾಗೂ ತಮನ್ನಾ ಭಾಟಿಯಾ ನಟಿಸಿದ್ದಾರೆ. ಮುಖ್ಯ ವಿಲನ್ ಅಗಿ ರಾಣಾ ದಗ್ಗುಬಾಟಿ ಅಬ್ಬರಿಸಿದ್ದರೆ ಪೋಷಕಪಾತ್ರಗಳಲ್ಲಿ ರಮ್ಯಾ ಕೃಷ್ಣನ್ ಹಾಗೂ ಸತ್ಯರಾಜ್ ಗಮನಸೆಳೆದಿದ್ದಾರೆ. ಈ ಎಲ್ಲಾ ಸಂಗತಿಗಳು ಬಹುತೇಕ ಎಲ್ಲರಿಗೂ ಗೊತ್ತಿದೆ.
ಆದರೆ, ನಟ ಪ್ರಭಾಸ್ ಇತ್ತೀಚೆಗೆ ಹಂಚಿಕೊಂಡಿರುವ ಸಂಗತಿ ಹಲವರಿಗೆ ಖಂಡಿತ ಗೊತ್ತಿಲ್ಲ. ಬಾಹುಬಲಿ ಸಿನಿಮಾ ಪ್ರಭಾಸ್ ಅವರಿಗೆ ಭರ್ಜರಿ ಯಶಸ್ಸು ತಂದುಕೊಟ್ಟಿದ್ದು ನಿಜ. ಆದರೆ, ಅಷ್ಟೇ ಮಾನಸಿಕ ಒತ್ತಡವನ್ನು ತಂದಿಟ್ಟಿದ್ದೂ ಅಷ್ಟೇ ನಿಜ. ಈ ಬಗ್ಗೆ ನಟ ಪ್ರಭಾಸ್ 'ಹೌದು, ಬಾಹುಬಲಿ ಸಿನಿಮಾ ನನ್ನ ಇಡೀ ಲೈಫನ್ನೇ ಬದಲಾಯಿಸಿದೆ. ಆದರೆ, ಜಾಗತಿಕ ಮಟ್ಟದಲ್ಲಿ ಸಿಕ್ಕ ಈ ಭರ್ಜರಿ ಯಶಸ್ಸು ನನಗೆ ಅಪಾರ ಒತ್ತಡವನ್ನು ತಂದಿಟ್ಟಿದೆ. 'ಬಾಹುಬಲಿ' ರಿಲೀಸ್ ಬಳಿಕ ನನಗೆ ಬರೋಬ್ಬರಿ 2 ರಿಂದ 3 ವರ್ಷಗಳ ಕಾಲ ಸರಿಯಾಗಿ ನಿದ್ದೆ ಮಾಡಲೂ ಕೂಡ ಸಾಧ್ಯವಾಗುತ್ತಿರಲಿಲ್ಲ' ಎಂದಿದ್ದಾರೆ. ಇದನ್ನು ಒಂಥರಾ 'ಆಘಾತಕಾರಿ ಸತ್ಯ' ಎಂದೂ ಹೇಳಬಹುದು. ಈ ಸತ್ಯವನ್ನು ನಟ ಪ್ರಭಾಸ್ ಇತ್ತೀಚೆಗೆ ಬಿಚ್ಚಿಟ್ಟಿದ್ದಾರೆ.
ಸಾವಿರ ಪಟ್ಟು ಜವಾಬ್ದಾರಿ, ನಿದ್ದೆಯಿಲ್ಲದ ಆ ರಾತ್ರಿಗಳು!
ಇತ್ತೀಚೆಗೆ ಬಿಡುಗಡೆಯಾಗಿರುವ 'ಬಾಹುಬಲಿ: ದಿ ಟಾರ್ಚ್‌ಬೇರರ್' ತೆರೆಹಿಂದಿನ ಸಾಕ್ಷ್ಯಚಿತ್ರದಲ್ಲಿ (ಡಾಕ್ಯುಮೆಂಟರಿ) ಮಾತನಾಡುತ್ತಾ ನಟ ಡಾರ್ಲಿಂಗ್ ಪ್ರಭಾಸ್ ತಮ್ಮ ವೃತ್ತಿಜೀವನದ ಅತ್ಯಂತ ಒತ್ತಡದ ದಿನಗಳ ಬಗ್ಗೆ ಮನಬಿಚ್ಚಿ ಹೇಳಿಕೊಂಡಿದ್ದಾರೆ. "ಬಾಹುಬಲಿ ಚಿತ್ರದ ಭಾರಿ ಯಶಸ್ಸಿನ ನಂತರದ 2-3 ವರ್ಷಗಳು ನನ್ನ ಜೀವನದ ಅತ್ಯಂತ ಒತ್ತಡದ ದಿನಗಳಾಗಿದ್ದವು. ಆ ಚಿತ್ರದ ಬಳಿಕ ಪ್ರತಿ ದಿನ, ಪ್ರತಿ ಸಿನಿಮಾದಲ್ಲೂ ನನ್ನ ಮೇಲಿದ್ದ ಜವಾಬ್ದಾರಿಯ ಮಟ್ಟ ಇದ್ದಕ್ಕಿದ್ದಂತೆ ಸಾವಿರ ಪಟ್ಟು ಹೆಚ್ಚಾಯಿತು. ಹೀಗಾಗಿ ಆ ಸಮಯದಲ್ಲಿ ನನಗೆ ಸರಿಯಾಗಿ ನಿದ್ದೆ ಮಾಡಲು ಸಹ ಸಾಧ್ಯವಾಗುತ್ತಿರಲಿಲ್ಲ" ಎಂದು ಪ್ರಭಾಸ್ ತಮ್ಮ ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.
40 ಕೋಟಿಯಿಂದ ನೂರಾರು ಕೋಟಿಗೆ ಜಿಗಿದ ಬಜೆಟ್
"ಬಾಹುಬಲಿ ಚಿತ್ರಕ್ಕೂ ಮೊಲದು ನನ್ನ ಸಿನಿಮಾಗಳು ಸಾಮಾನ್ಯವಾಗಿ 20 ರಿಂದ 40 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದ್ದವು. ಆದರೆ 'ಬಾಹುಬಲಿ' ತೆಲುಗು ಚಿತ್ರರಂಗದಲ್ಲಿ ಸಿನಿಮಾದ ನಿರ್ಮಾಣದ ವ್ಯಾಪ್ತಿಯನ್ನೇ ಬದಲಾಯಿಸಿತು. ಅಲ್ಲಿಂದ ಮುಂದಕ್ಕೆ ನನ್ನ ಚಿತ್ರಗಳನ್ನು ನಿರ್ಮಿಸುವ ಮತ್ತು ಪ್ರೇಕ್ಷಕರು ಸ್ವೀಕರಿಸುವ ರೀತಿಯೇ ಬದಲಾಯಿತು. ಈ ಚಿತ್ರ ತಂದುಕೊಟ್ಟ ಯಶಸ್ಸಿನಿಂದಾಗಿಯೇ 'ಸಾಹೋ'ನಂತಹ ದೊಡ್ಡ ಸಿನಿಮಾದ ನಿರ್ಮಾಣ ಹಾಗೂ 'ರಾಧೆ ಶ್ಯಾಮ್' ಚಿತ್ರದ ಹಡಗಿನ ಅದ್ಧೂರಿ ಸನ್ನಿವೇಶಗಳನ್ನು ಕಲ್ಪಿಸಿಕೊಂಡು ಮಾಡಲು ಸಾಧ್ಯವಾಯಿತು" ಎಂದು ಪ್ರಭಾಸ್ ತಿಳಿಸಿದ್ದಾರೆ.
ಉತ್ತರ ಭಾರತದ ಕಲೆಕ್ಷನ್ ನೋಡಿ ಶಾಕ್!
"ಸಾಹೋ ಚಿತ್ರಕ್ಕೆ ಉತ್ತರ ಭಾರತದಲ್ಲಿ ಸಿಕ್ಕ ಪ್ರತಿಕ್ರಿಯೆ ಹಾಗೂ ಮೊದಲ ದಿನದ ಕಲೆಕ್ಷನ್ ನನಗೆ ನಿಜಕ್ಕೂ ಅಚ್ಚರಿ ಹುಟ್ಟಿಸಿತ್ತು. ಏಕೆಂದರೆ, ಅಲ್ಲಿ ಮೊದಲ ದಿನವೇ ಸುಮಾರು 26 ಕೋಟಿ ರೂಪಾಯಿ ಗಳಿಕೆಯಾಗಿತ್ತು. ಉತ್ತರ ಭಾರತದಲ್ಲಿ ಇಂಥದ್ದೊಂದು ಸಾಧನೆ ತಲುಪಲು ಬಾಹುಬಲಿ ಸಿನಿಮಾ ಹಾಕಿಕೊಟ್ಟ ಬಲವಾದ ಅಡಿಪಾಯವೇ ಕಾರಣ" ಎಂದಿದ್ದಾರೆ ನಟ ಪ್ರಭಾಸ್.
"ಬಾಹುಬಲಿ ತಾಯಿ ಇದ್ದಂತೆ!
"ನನ್ನ ಜೀವನದಲ್ಲಿ ಬಾಹಬಲಿ ಸಿನಿಮಾ ತಾಯಿ ಇದ್ದಂತೆ.. ಈ ಸಿನಿಮಾದ ಮೂಲಕವೇ ನಾನು ಮುಂದೆ ಧೈರ್ಯವಾಗಿ ಹೋಗಿ 'ಕಲ್ಕಿ 2898 ಎಡಿ' ಮತ್ತು 'ಸಲಾರ್'ನಂತಹ ಬೃಹತ್ ಚಿತ್ರಗಳನ್ನು ಮಾಡಲು ಸಾಧ್ಯವಾಯಿತು. ʻಬಾಹುಬಲಿʼ ಬಂದು ಹಾದಿ ಸುಗಮ ಮಾಡಿಕೊಟ್ಟಿದ್ದರಿಂದಲೇ ಮುಂದೆ ನನ್ನಿಂದ ಇವೆಲ್ಲವೂ ಸಾಧ್ಯವಾಯಿತು" ಎಂದು ಪ್ರಭಾಸ್ ತಮ್ಮ 'ಬಾಹುಬಲಿ' ಚಿತ್ರಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.