ಟೈಗರ್ ವಿಮರ್ಶೆ: ಸಾಹಸಪ್ರಿಯರಿಗೆ ಸಂಪೂರ್ಣ ಮನರಂಜನೆ

By Suvarna Web DeskFirst Published Jun 18, 2017, 8:53 PM IST
Highlights

ಅದ್ಧೂರಿ ಮೇಕಿಂಗ್‌, ಸಾಹಸ, ಕಾಮಿಡಿ, ಸೆಂಟಿಮೆಂಟ್‌, ಪೊಲೀಸ್‌ ಅಧಿಕಾರಿಯ ಗತ್ತು, ವಿರೋಧಿಗಳ ಮಿಲಾಕತ್ತು, ಎಲ್ಲವೂ ಅಲ್ಲಿ ಹದವಾಗಿ ಬೆರೆತಿವೆ. ನಾಯಕಿ ನೈರಾ ಬ್ಯಾನರ್ಜಿ, ನಟನೆಯಲ್ಲಿ ಇನ್ನು ಪಳಗಬೇಕಿದೆ. ಎಯ್ಟ್'ಪ್ಯಾಕ್‌ ಮೂಲಕ ನಟನಾಗಿ ರೀ ಎಂಟ್ರಿ ಪಡೆದ ಪ್ರದೀಪ್‌, ಸಾಹಸ, ಸೆಂಟಿಮೆಂಟ್‌ ಜತೆಗೆ ನೃತ್ಯದಲ್ಲೂ ಪಳಗಿದ್ದಾರೆ. ಮಾವ, ಅಳಿಯ ನಡುವೆ ವಿಲನ್‌ ಆಗಿ ನಟ ರವಿಶಂಕರ್‌ ಅವರದ್ದು ಎಂತಹವರನ್ನೂ ನುಂಗಿ ಹಾಕುವ ನಟನೆ.

ಚಿತ್ರ : ಟೈಗರ್‌
ತಾರಾಗಣ : ಪ್ರದೀಪ್‌, ಕೆ. ಶಿವರಾಂ, ನೈರಾ ಬ್ಯಾನರ್ಜಿ, ರವಿಶಂಕರ್‌, ಧರ್ಮ, ಓಂ ಪುರಿ, ಸೋನಿಯಾ ಅಗರವಾಲ್‌, ಅವಿನಾಶ್‌, ವೀಣಾ ಸುಂದರ್‌, ಸಾಧು ಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ಕೀರ್ತಿರಾಜ್‌
ನಿರ್ದೇಶನ: ನಂದ್‌ ಕಿಶೋರ್‌ ಸುಧೀರ್‌
ಸಂಗೀತ: ಅರ್ಜುನ್‌ ಜನ್ಯಾ
ಛಾಯಾಗ್ರಹಣ: ಸುಧಾಕರ್‌ ಎಸ್‌ ರಾಜ್‌
ನಿರ್ಮಾಣ: ಶ್ರೀಮತಿ ಚಿಕ್ಕ ಬೋರಮ್ಮ

ರೇಟಿಂಗ್‌: *** 

ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ನಟ ಪ್ರದೀಪ್‌, ಪೂರ್ಣ ಪ್ರಮಾಣದಲ್ಲಿ ಹೀರೋ ಆಗಿ ಲಾಂಚ್‌ ಆಗಲು ಸಾಧ್ಯವಾಗದ್ದನ್ನು ಈ ಚಿತ್ರ ಸಾಧ್ಯವಾಗಿಸಿದೆ. ಆ ಮಟ್ಟಿಗೆ ಪ್ರದೀಪ್‌ ಆ ದಿನ ಆಡಿದ ಮಾತು ಇಲ್ಲಿ ನಿಜವಾಗಿದೆ. ಹಾಗಂತ ಇದು ಪೂರ್ಣ ಪ್ರಮಾಣದಲ್ಲಿ ಪ್ರದೀಪ್‌ ಸಿನಿಮಾವೇ? ನಿವೃತ್ತ ಅಧಿಕಾರಿ ಶಿವರಾಂ ಅವರಿಗೂ ಬಣ್ಣದ ಲೋಕಕ್ಕೊಂದು ಮರು ಎಂಟ್ರಿ ಬೇಕಿತ್ತು. ಅದಕ್ಕೂ ಈ ಚಿತ್ರ ಫ್ಲಾಟ್‌ಫಾಮ್‌ರ್‍ ಆಗಿದೆ. ಆ ಮಟ್ಟಿಗೆ ಅಳಿಯ ಅರ್ಧ ಸಿನಿಮಾ, ಮಾವ ಇನ್ನರ್ಧ ಸಿನಿಮಾಕ್ಕೆ ಹೀರೋ ಆಗಿದ್ದು ವಿಶೇಷ. ಆ ಮಟ್ಟಿಗೆ ಟೈಗರ್‌ ಮೇಲೆ ಮಾವ, ಅಳಿಯನ ಸವಾರಿ ನಡೆದಿದೆ. 

ಅಳಿಯನನ್ನು ಭರ್ಜರಿಯಾಗಿ ತೆರೆಗೆ ತರುವ ಧಾವಂತದಲ್ಲಿ ಕೆ. ಶಿವರಾಂ ಹೂಡಿರುವ ಬಂಡವಾಳ ತೆರೆ ಮೇಲೆ ಕಾಣುತ್ತದೆ. ಇಷ್ಟು ದಿನ ಸ್ಟಾರ್‌ ಎನಿಸಿಕೊಂಡ ನಟರಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದ ಮತ್ತು ಬಹುಪಾಲು ರಿಮೇಕ್‌ ಸಿನಿಮಾಗಳಿಗೆ ಮೊರೆ ಹೋಗಿದ್ದ ನಂದ ಕಿಶೋರ್‌ ಈ ಚಿತ್ರವನ್ನು ಪ್ರದೀಪ್‌ ಮೇಲೆ ಹೆಚ್ಚು ಗಮನ ಹರಿಸಿಯೇ ತೆರೆಗೆ ತಂದಿದ್ದಾರೆ. ತಾನೊಬ್ಬ ಪೊಲೀಸ್‌ ಅಧಿಕಾರಿಯಾಗಲೇಬೇಕೆಂದು ಪಣತೊಟ್ಟಮಗ, ಆದರೆ ತನ್ನ ಮಗ ಪೋಲೀಸ್‌ ಅಧಿಕಾರಿಯಾಗುವುದು ಬೇಡ, ಬ್ಯಾಂಕ್‌ ಮ್ಯಾನೇಜರ್‌ ಆಗಬೇಕೆಂದು ಹಠ ತೊಟ್ಟಅಪ್ಪ, ಇವರಿಬ್ಬರ ನಡುವೆ ಕ್ರೂರ ಎಂಎಲ್‌ಎ ಕಾಕದೃಷ್ಟಿಗೆ ಬಿದ್ದ ಹುಡುಗಿ... ಚಿತ್ರದ ಮೊದಲರ್ಧದಲ್ಲಿ ಇವರೇ ಕತೆಯ ಕೇಂದ್ರ ಬಿಂದು. ಇದಿಷ್ಟೇ ಆಗಿದ್ದರೆ ಕತೆ ಮಾಮೂಲು ಆಗಿಬಿಡುತಿತ್ತೇನೋ, ಆದರೆ ಅದಕ್ಕೆ ಇನ್ನೊಂದು ಟ್ವಿಸ್ಟ್‌ ಸಿಗುವುದು ಮುಂಬೈ ಲಿಂಕ್‌ ಮೂಲಕ. ಎನ್‌'ಕೌಂಟರ್‌ ಸ್ಪೆಷಲಿಸ್ಟ್‌ ಅಂದಾಗ ತಕ್ಷಣ ನೆನಪಾಗುವ ಹೆಸರು ಕನ್ನಡದವರೇ ಆದ ದಯಾನಾಯಕ್‌. ಅವರನ್ನೇ ನೆನಪಿಸುವಂತೆ ಇಲ್ಲಿ ಕಾಣಿಸಿಕೊಂಡವರು ಶಿವರಾಂ ನಾಯಕ್‌. ನಿಷ್ಟಾವಂತ ಪೊಲೀಸ್‌ ಅಧಿಕಾರಿ. ಟೈಗರ್‌ ಅಂತಲೇ ಫೇಮಸ್‌. ಜತೆಗೆ ಏನ್‌'ಕೌಂಟರ್‌ ಸ್ಪೆಷಲಿಸ್ಟ್‌. ಡಾನ್‌ ಶಂಕರ್‌ ಭಾಯ್‌ ಮತ್ತವನ ಗ್ಯಾಂಗ್‌ ಮುಗಿಸಲು ಹೋಗಿ, ಹೆಂಡತಿ ಕಳೆದುಕೊಂಡ ನಂತರ ಬೆಂಗಳೂರಿಗೆ ಬಂದು ನೆಲೆಸುತ್ತಾರೆ ಶಿವರಾಂ ನಾಯಕ್‌. ಆಗಲೂ ವಿರೋಧಿಗಳ ಕಣ್ಣು ಟೈಗರ್‌ ಬೀಳುತ್ತದೆ. ಆ ಹೊತ್ತಿಗೆ ಮರಿ ಟೈಗರ್‌ ಬೆಂಗಳೂರಿನ ಗಲ್ಲಿಯಲ್ಲಿ ಘರ್ಜಿಸುತ್ತದೆ. ವಿರೋಧಿಗಳ ಪಡೆ ಮುಗಿಬಿದ್ದಾಗ ಅಪ್ಪ, ಮಗ ಇಬ್ಬರು ಹೇಗೆ ಮಟ್ಟಹಾಕುತ್ತಾರೆನ್ನುವುದು ಕತೆಯ ತಿರುಳು. 

ಅದ್ಧೂರಿ ಮೇಕಿಂಗ್‌, ಸಾಹಸ, ಕಾಮಿಡಿ, ಸೆಂಟಿಮೆಂಟ್‌, ಪೊಲೀಸ್‌ ಅಧಿಕಾರಿಯ ಗತ್ತು, ವಿರೋಧಿಗಳ ಮಿಲಾಕತ್ತು, ಎಲ್ಲವೂ ಅಲ್ಲಿ ಹದವಾಗಿ ಬೆರೆತಿವೆ. ಹಾಗೆ ನೋಡಿದರೆ, ಈ ಚಿತ್ರದ ಮೈನಸ್‌ ಪಾಯಿಂಟ್‌ ಶಿವರಾಂ ಮತ್ತು ನಾಯಕಿ ನೈರಾ. ಮುಂಬೈನ ಎನ್‌'ಕೌಂಟರ್‌ ಸ್ಪೆಷಲಿಸ್ಟ್‌ ಆಗಿ ಅಭಿನಯಿಸಿದ್ದು ಶಿವರಾಂ. ಆ ಪಾತ್ರದಲ್ಲಿ ಅವರನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಇನ್ನು ನಾಯಕಿ ನೈರಾ ಬ್ಯಾನರ್ಜಿ, ನಟನೆಯಲ್ಲಿ ಇನ್ನು ಪಳಗಬೇಕಿದೆ. ಗಮನ ಸೆಳೆಯುವಂತೆ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಎಯ್ಟ್'ಪ್ಯಾಕ್‌ ಮೂಲಕ ನಟನಾಗಿ ರೀ ಎಂಟ್ರಿ ಪಡೆದ ಪ್ರದೀಪ್‌, ಸಾಹಸ, ಸೆಂಟಿಮೆಂಟ್‌ ಜತೆಗೆ ನೃತ್ಯದಲ್ಲೂ ಪಳಗಿದ್ದಾರೆ. ಆ್ಯಕ್ಷನ್‌ ಹೀರೋ ಎನ್ನುವುದನ್ನು ಪ್ರೂವ್‌ ಮಾಡಿದ್ದಾರೆ. ಮುಖದ ಹಾವಭಾವದಲ್ಲಿ ಇನ್ನಷ್ಟು ತರಬೇತಿ ಬೇಕಿದೆ. ಮಾವ, ಅಳಿಯ ನಡುವೆ ವಿಲನ್‌ ಆಗಿ ನಟ ರವಿಶಂಕರ್‌ ಅವರದ್ದು ಎಂತಹವರನ್ನೂ ನುಂಗಿ ಹಾಕುವ ನಟನೆ. ಸಾಧು ಕೋಕಿಲ, ಚಿಕ್ಕಣ್ಣ ಹಾಗೂ ರಂಗಾಯಣ ರಘು ಹಾಸ್ಯ ನಗಿಸುತ್ತದೆ. ಧರ್ಮ, ಚೇತನ್‌, ತಬಲ ನಾಣಿ, ಅವಿನಾಶ್‌, ಮೀಣಾ ಸುಂದರ್‌, ಸೋನಿಯಾ ಅಗರವಾಲ್‌ ಜತೆಗೆ ಸ್ಪೆಷಲ್‌ ಸಾಂಗ್‌ನಲ್ಲಿ ರಾಗಿಣಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಮೇಕಿಂಗ್‌ನಲ್ಲಿ ಕಿರೀಟವಿಟ್ಟಂತೆ ಕಾಣಿಸಿದ್ದು ಸುಧಾಕರ್‌ ಎಸ್‌ ರಾಜ್‌ ಛಾಯಾಗ್ರಹಣ. ಅರ್ಜುನ್‌ ಜನ್ಯಾ ಸಂಗೀತ ಸಣ್ಣ ಪುಟ್ಟಲೋಪ ದೋಷಗಳಲ್ಲೂ ಮನಸ್ಸಿಗೆ ಹಿಡಿಸುತ್ತದೆ. ಹೊಡಿ ,ಬಡಿ ಭೋರ್ಗೆರೆತದ ನಡುವೆಯೂ ಹಾಡುಗಳು ಹಿತ ಎನಿಸುತ್ತವೆ. ಕೆ.ಎಂ ಪ್ರಕಾಶ್‌ ಅವರ ಕತ್ತರಿಗೂ ಬೇಷ್‌ ಎನ್ನಬಹುದು. ಯೋಗಾನಂದ್‌ ಮುದ್ದಾನ್‌ ಸಂಭಾಷಣೆ ಮಾಸ್‌ ಪ್ರೇಕ್ಷಕರ ಮನ ತಣಿಸುತ್ತದೆ. 

- ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ

click me!