
ಎರಡು ಸಿನಿಮಾಗಳಾದ ಮೇಲೆ ಮತ್ತೆ ಒಟ್ಟಿಗೆ ಸೇರಿ ಸಿನಿಮಾ ಮಾಡುವುದಕ್ಕೆ ವೈಯಕ್ತಿಕವಾಗಿ ನಮಗೇ ಭಯ ಆಗುತ್ತಿತ್ತು. ಈ ಹೆದರಿಕೆಯೇ ನಮ್ಮನ್ನೂ ಇಷ್ಟುವರ್ಷ ಹತ್ತಿರಕ್ಕೆ ಸೇರಿದಂತೆ ಮಾಡಿತು.
-ಹೀಗೆ ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಟ ಗಣೇಶ್ ಹೇಳಿಕೊಂಡಿದ್ದು ‘ಮುಗುಳು ನಗೆ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ. ಮಾತು ಮುಂದುವರಿಯಿತು. ‘ನಾವು ಒಟ್ಟಿಗೆ ಸೇರಿ ಹತ್ತು ವರ್ಷ ಆಯಿತು. ಒಂದು ಸಿನಿಮಾದ ದೊಡ್ಡ ಮಟ್ಟದ ಗೆಲುವು ನಮ್ಮನ್ನು ಹೆದರಿಸಿದ್ದು ನಿಜ. ಆದರೂ ಧೈರ್ಯ ಮಾಡಿ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡು ಒಟ್ಟಿಗೆ ನಿಮ್ಮ ಮುಂದೆ ಬಂದಿದ್ದೇವೆ.' ಹಾಗೆಂದು ಇಬ್ಬರು ಮುಖಮುಖ ನೋಡಿಕೊಂಡರು.
ಅಂದಹಾಗೆ ಈ ಇಬ್ಬರನ್ನೂ ಹೆದರಿಸಿದ್ದು ‘ಮುಂಗಾರು ಮಳೆ'. ಆ ಭಾರೀ ಯಶಸ್ಸಿನ ನಂತರ ‘ಗಾಳಿಪಟ'ವೊಂದರಲ್ಲೇ ಅವರಿಬ್ಬರೂ ಒಂದಾಗಿದ್ದು. ಯೋಗರಾಜ್ ಭಟ್ ಹಾಗೂ ಗಣೇಶ್ ಅವರನ್ನು ಮತ್ತೆ ಒಂದು ಮಾಡಿದ್ದು ‘ಮುಗುಳು ನಗೆ'. ಅಂದಹಾಗೆ ತಡವಾಗಿ ಸೇರಿದ್ದರೂ ಒಳ್ಳೆಯ ಸಿನಿಮಾಕ್ಕೋಸ್ಕರವೇ ಸೇರುತ್ತಿದ್ದೇವೆ ಎಂಬ ಸಂತೋಷ ಭಟ್ಟರಿಗಿದೆ. ಚಿತ್ರೀಕರಣ ಮುಗಿದು, ಕೆಲವು ತಾಂತ್ರಿಕ ಕೆಲಸಗಳು ನಡೆಯುತ್ತಿವೆ. ನಾಲ್ವರು ನಾಯಕಿಯರು- ಅಮೂಲ್ಯ, ಅಶಿಕಾ, ನಿಖಿತಾ ನಾರಾಯಣ್, ಅಪೂರ್ವ. ‘ಲೈಫು ಇಷ್ಟೇನೇ' ನಿರ್ಮಿಸಿದ್ದ ಸೈಯದ್ ಸಲಾಂ ಈ ಚಿತ್ರದ ನಿರ್ಮಾಪಕರು. ಜ್ಞಾನಮೂರ್ತಿ ಕ್ಯಾಮೆರಾ, ವಿ ಹರಿಕೃಷ್ಣ ಸಂಗೀತ. ಜಾಕ್ ಮಂಜು ಚಿತ್ರತಂಡದ ಬೆನ್ನೆಲುಬು.
ಭಟ್ಟರ ಖುಷಿ
‘ಎಲ್ಲ ಮುಗಿಸಿದ್ದೇನೆ. ಆಪ್ತ ವಲಯಕ್ಕೆ ಸಿನಿಮಾ ತೋರಿಸಿದ್ದೇನೆ. ಅದರಲ್ಲೂ ನಿರ್ದೇಶಕ ಸೂರಿ ಚಿತ್ರ ನೋಡಿ ತುಂಬಾ ಮೆಚ್ಚಿಕೊಂಡರು. ಅವನು ಹೊಗಳುವುದೇ ಕಮ್ಮಿ. ಸೂರಿ ನನ್ನ ಕೈ ಕುಲುಕಿದ. ಅಬ್ಬಾ ಗೆದ್ದೆ ಎಂದುಕೊಂಡೆ. ಸಹಜವಾಗಿ ನಟಿಸಿರುವ, ಸಹಜವಾಗಿ ರೂಪಿಸಿರುವ ಕತೆ ಇದು. ಎಂದೂ ಅಳದೇ ಇರುವ ಹುಡುಗನ ಕಣ್ಣಿನಿಂದ ಯಾವುದೋ ಒಂದು ಕ್ಷಣ ಹನಿ ಕಣ್ಣಿಂದ ಜಾರುತ್ತದೆ. ಅದೇ ಮುಗುಳು ನಗೆ. ಅದು ಆನಂದಬಾಷ್ಪ. ಇಂಥ ಹುಡುಗನ ಸುತ್ತ ನಾಲ್ಕಾರು ಕತೆಗಳು ಬೇರೆ ಬೇರೆ ದಾರಿಗಳಲ್ಲಿ ಸಾಗಿ ಬಂದು ಆತನ ಕಣ್ಣಲ್ಲಿ ಹನಿ ಬರುವಂತೆ ಮಾಡುತ್ತವೆ. ಚಿಕ್ಕ ವಯಸ್ಸಿನಿಂದಲೇ ಅಳೋದಕ್ಕೆ ಬಾರದಿರುವ ಸಮಸ್ಯೆ ಇರುವ ಹುಡುಗನ ಕೇಸು ಇದು' ಎಂದರು ಯೋಗರಾಜ್ ಭಟ್.
ಗಣೇಶ ಸಂತೋಷ
ನಟ ಗಣೇಶ್ ಅವರಿಗೆ ಈ ಕತೆ ಕೇಳಿದ ಮೇಲೆ ಭಯ ದೂರವಾಗಿ ಸಿನಿಮಾ ಮಾಡೋಣ ಭಟ್ರೆ ಅಂದ್ರಂತೆ. ‘ಇದು ಒಳ್ಳೆಯ ಕತೆ. ತುಂಬಾ ಅದ್ಭುತವಾಗಿದೆ. ತುಂಬಾ ಸಿಂಪಲ್ ಆಗಿರುವ, ನನ್ನಿಂದ ಹೆಚ್ಚು ಕೆಲಸ ತೆಗೆಸಿದ ಕತೆ ಇದು. ಸಾಕಷ್ಟುತಯಾರಿ ಮಾಡಿಕೊಂಡು ಮಾಡಿದ ಸಿನಿಮಾ. ಒಬ್ಬ ಕಲಾವಿದನಿಗೆ ಇಂಥ ಕತೆಗಳು ಸಿಗುವುದು ತುಂಬಾ ಅಪರೂಪ. ತುಂಬಾ ಸಿಂಪಲ್ ಸ್ಕಿ್ರಪ್ಟ್. ಚಿತ್ರದ ಹಾಡುಗಳಂತೂ ಸೂಪರ್. ನನ್ನ ಕರಿಯರ್‌ನಲ್ಲಿ ದಿ ಬೆಸ್ಟ್ ಆಲ್ಬಂ. ಟೈಟಲ್ ಸಾಂಗ್ ಸೂಪರ್...' ಅಂತೆಲ್ಲಾ ಸಂತೋಷಪಟ್ಟು ಹೇಳಿಕೊಂಡಿದ್ದು ಗಣೇಶ್.
ಉಳಿದಂತೆ... ಭಟ್ಟರ ಸಾರ್ವಕಾಲಿಕ ಆಪ್ತರಾಗಿರುವ ವಿ ಹರಿಕೃಷ್ಣ ಅವರ ಸಂಗೀತದಲ್ಲಿ 8 ಹಾಡುಗಳು ಬಂದಿದ್ದು, ಎಲ್ಲ ಹಾಡುಗಳು ಕತೆಯ ಜತೆ ಟ್ರಾವಲ್ ಮಾಡುತ್ತವೆ. ಬದುಕಿನ ಬೇರೆ ಬೇರೆ ತಿರುವುಗಳನ್ನು ಹೇಳುವ ಹಾಡುಗಳನ್ನು ಮಾಡಿರುವುದಾಗಿ ವಿ ಹರಿಕೃಷ್ಣ ಹೇಳುತ್ತಾರೆ. ಚಿತ್ರದ ನಾಯಕಿಯರ ಪೈಕಿ ನಿಖಿತಾ ಹಾಗೂ ಅಶಿಕಾ ಬಂದಿದ್ದರು. ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಸೈಯಾದ್ ಸಲಾಂ ಅವರು ಗಣೇಶ್ ಅವರನ್ನು ಗೋಲ್ಡನ್ ಹಾರ್ಟ್ ನಟ ಅಂದರು. ತುಂಬಾ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದು, ಆಗಸ್ಟ್‌ನಲ್ಲಿ ತೆರೆಗೆ ತರುವ ಯೋಚನೆ ಅವರದ್ದು.
ಆದರೆ, ಭಟ್ಟರಿಗೆ ಈ ಸಿನಿಮಾ ಸೆಟ್ಟೇರಿದ್ದೇ ಒಂದು ಕಾಮಿಡಿಯಾಗಿ ಕಂಡಿತಂತೆ. ಯಾಕೆಂದರೆ ಯಾರೋ ಹೈದಾರಬಾದ್ ವ್ಯಕ್ತಿಯೊಬ್ಬರು ಮೊದಲು ಈ ಚಿತ್ರ ನಿರ್ಮಿಸುವುದಾಗಿ ಬಂದರಂತೆ. ಕತೆ ಕೇಳಿ ಆ ಮೇಲೆ ಆ ವ್ಯಕ್ತಿಯದ್ದು ಸುದ್ದಿನೇ ಇಲ್ಲ. ಸರಿ, ತಾವೇ ಮಾಡೋಣ ಅಂದುಕೊಂಡಾಗ ಸೈಯದ್ ಸಲಾಂ ಬಂದರಂತೆ. ಇಡೀ ದೇಶ ಎಟಿಎಂ ಮುಂದೆ ಕ್ಯೂ ನಿಂತಿರುವಾಗ ಈಯಪ್ಪ ಹೇಗೆ ಹಣ ಹೊಂದಿಸುತ್ತಾರೆ ಅಂತ ಯೋಚಿಸಿದ ಭಟ್ಟರಿಗೆ ‘ಗಣಪ ಯಾಕೋ ನಮ್ ಸಿನಿಮಾ ಫುಲ್ ಕಾಮಿಡಿ ತರಾ ಕಾಣ್ತಾ ಇದೆ' ಅಂತ ಗಣೇಶ್ ಬಳಿ ಹೇಳಿಕೊಂಡಂತೆ. ಕೊನೆಗೂ ಪಟ್ಟು ಬಿಡದೆ ಸೈಯದ್ ಅವರು ಕತೆ ಕೇಳಿದ ದಿನವೇ ಯಾರಿಗೆ ಎಷ್ಟುಅಡ್ವಾನ್ಸ್ ಕೊಡಬೇಕು ಹೇಳಿ ಅಂತ ಭಟ್ಟರ ಮುಂದೆ ನಿರ್ಮಾಪಕರು ನಿಂತಾಗಲೇ ಭಟ್ಟರಿಗೂ ಧೈರ್ಯ ಬಂತಂತೆ.
-ಕನ್ನಡಪ್ರಭ, ಸಿನಿವಾರ್ತೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.