
ದೊಡ್ಡ ದೊಡ್ಡ ಮರಗಳು, ಯಾವ್ಯಾವುದೋ ಜಾತಿಯ ಗಿಡಗಳು, ಅವುಗಳ ತಂಪಿನಲ್ಲಿ ಕೆಂಪು ನೆಲದ ಹಳ್ಳಿಮನೆ. ಬೆಂಗಳೂರು ಮಹಾನಗರದ ಹೃದಯ ಭಾಗದಲ್ಲಿ ಅಂಥದ್ದೊಂದು ಮನೆ ಇರಬಹುದು ಅಂತ ಊಹಿಸಲೂ ಸಾಧ್ಯವಿಲ್ಲದ, ಪಕ್ಕಾ ಹಳ್ಳಿಮನೆಯ ಮಾಲೀಕ ಬಹುಭಾಷಾ ನಟ ಕಿಶೋರ್ ಮತ್ತವರ ಪತ್ನಿ. ಮನೆಯ ಎದುರಿಗೇ ‘ಬಫೆಲೋ ಬ್ಯಾಕ್' ಎಂಬ ಸಿರಿಧಾನ್ಯ ಪುಟ್ಟಶಾಪ್ ಮತ್ತು ಉಗ್ರಾಣ. ಪಟಾಪಟ್ಟೆಚಡ್ಡಿ, ಮೇಲೊಂದು ಬನಿಯನ್ ಸಿಕ್ಕಿಸಿಕೊಂಡು ಗಿಡಗಳಿಗೆ ಗೊಬ್ಬರ ಹಾಕುತ್ತಲೋ, ಹೊಸ ಗಿಡ ನೆಡುತ್ತಲೋ ಇರುತ್ತಾರೆ ಕಿಶೋರ್. ‘ಇದೆಲ್ಲ ಏನು?' ಅಂತ ಕೇಳಿದರೆ, ಅವರ ತೋಟದಲ್ಲೇ ಬೆಳೆದ ಹಲಸಿನ ಹಣ್ಣನ್ನು ನಮ್ಮೆದುರಿಟ್ಟು ‘ಬೇಸಿಕಲಿ ನಾನೊಬ್ಬ ಒಳ್ಳೆ ರೈತ ಆಗಲಿಕ್ಕೆ ಹೊರಟವನು, ಸಿನಿಮಾ ಹೊಟ್ಟೆಪಾಡಿಗೆ' ಅಂತ ನಿಷ್ಮಲ್ಮಶ ನಗೆ ಬೀರ್ತಾರೆ.
‘ಅದೇನು ಗ್ರಹಚಾರವೋ, ಈ ಬಿತ್ತನೆ ಟೈಂನಲ್ಲೇ ಒಳ್ಳೊಳ್ಳೆ ಸಿನಿಮಾ ಆಫರ್‌ಗಳು ಬರುತ್ತವೆ. ಆ ಕಡೆ ಬಿತ್ತನೆ ಕೆಲಸ ಮಾಡೋದೋ, ಸಿನಿಮಾ ಒಪ್ಕೊಳ್ಳೋದೇ ಅಂತ ತಿಳಿಯದೇ ಗೊಂದಲವಾಗುತ್ತೆ' ಅಂತ ಪಕ್ಕಾ ರೈತನ ಹಾಗೆ ಮಾತನಾಡುತ್ತಾರೆ. ಮದುವೆಯಾದ ಹೊಸತರಲ್ಲಿ ನಿರುದ್ಯೋಗಿಗಳಾಗಿದ್ದಾಗ, ಗಂಡ ಹೆಂಡತಿ ಇಬ್ಬರೂ ವಿಮರ್ಶಕ ಡಿ.ಆರ್ ನಾಗರಾಜ್ ಅವರ ಸಂಬಂಧಿಗಳ ತೋಟದಲ್ಲಿ ವರ್ಷಾನುಗಟ್ಟಲೆ ದುಡಿದಿದ್ದರಂತೆ.
ಹೆಂಡತಿಯಿಂದ ಬೈಸ್ಕೋತಾರೆ ಕಿಶೋರ್
ಈಗ ಬೆಂಗಳೂರು ಹೊರವಲಯದಲ್ಲಿ ಕಿಶೋರ್‌ಗೆ ತೋಟ ಇದೆ. ಶೂಟಿಂಗ್ ನಡುವೆ ಸ್ವಲ್ಪ ಸಮಯ ಸಿಕ್ಕರೂ ಜೀಪ್ ತಗೊಂಡು ಅಲ್ಲಿಗೆ ಹೋಗ್ತಾರೆ. ಅಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ಕೆಲಸಗಾರರ ಜೊತೆಗೆ ಕೆಲಸ ಮಾಡುತ್ತಾ ಕಳೆಯುತ್ತಾರೆ. ಹೆಂಡತಿ ವಿಶಾಲ ಅವರದೂ ಇದೇ ಮನಸ್ಥಿತಿ. ಆದರೆ ಅವರು ಮಾಡೋದೆಲ್ಲವನ್ನೂ ಸಿಸ್ಟಮ್ಯಾಟಿಕ್ ಆಗಿ ಮಾಡ್ತಾರಂತೆ. ಕಿಶೋರ್ ಮಾಡೋ ಕೆಲ್ಸಕ್ಕೆ ಯಾವತ್ತೂ ಪ್ಲಾನಿಂಗ್ ಇರುವುದಿಲ್ಲ. ಇದರಿಂದ ಆಗೋ ಕೆಲ್ಸಕ್ಕಿಂತ ಎಡವಟ್ಟಾಗೋದೋ ಹೆಚ್ಚು ಅನ್ನೋದು ಸಂಗಾತಿಯ ದೂರು. ಜಮೀನಿಗೆ ಹೋದಾಗ ಮೊಬೈಲ್ ಕರೆಗಳನ್ನೂ ಸ್ವೀಕರಿಸದೇ ಹೆಂಡತಿಯನ್ನು ಗಾಬರಿ ಬೀಳಿಸಿ ನಂತರ ಬೈಗುಳ ತಿನ್ನೋದು ಸಾಮಾನ್ಯ. ಮನೆಗೆ ಬೇಕಾದ ತರಕಾರಿ, ಧಾನ್ಯ, ಹಣ್ಣುಗಳು ಎಲ್ಲ ಬರೋದು ಇವರ ತೋಟದಿಂದಲೇ. ಉಳಿದದ್ದನ್ನು ‘ಬಫೆಲೋ ಬ್ಯಾಕ್' ಮಳಿಗೆಯಲ್ಲಿ ಮಾರಾಟ ಮಾಡುತ್ತಾರೆ. ಇದರಿಂದ ಬಂದ ಹಣವನ್ನು ಕೆಲಸಗಾರರಿಗೆ ಹಂಚುತ್ತಾರೆ.
ತೋಟ
ಇಂತಿಪ್ಪ ಕಿಶೋರ್ ಒಮ್ಮೆ ಶೂಟಿಂಗ್ ಮೇಲೆ ಹೊಸನಗರದ ಸಂಪೆಕಟ್ಟೆಕಡೆ ಹೋಗಿದ್ದಾರೆ. ಅಲ್ಲಿ ಇನ್ನೊಬ್ಬ ಕಲಾವಿದ ದಿನೇಶ್ ಮಂಗ್ಳೂರು ಇವರಿಗೆ ತೋಟವೊಂದನ್ನು ತೋರಿಸಿದ್ದಾರೆ. ಆ ತೋಟ ನೋಡಿದ್ದೇ ಕಿಶೋರ್‌ಗೆ ಭಯಂಕರ ಖುಷಿಯಾಗಿ ಅವರು, ‘ಇದನ್ನು ಮಾರಾಟ ಮಾಡ್ತೀರಾ?' ಅಂತ ಕೇಳಿದ್ದಾರೆ. ಒಳ್ಳೆಬೆಲೆ ಬಂದರೆ ಕೊಡೋದಾಗಿ ಆ ತೋಟದ ಮಾಲಿಕರು ಹೇಳಿದ್ದಾರೆ. ಕೂಡಲೇ ನಿರ್ಮಾಪಕರಲ್ಲಿ ತನ್ನ ಸಂಭಾವನೆ ಕೇಳಿ ಪಡೆದು ಅವರಿಗೆ ಕೊಟ್ಟು, ಉಳಿದದ್ದನ್ನು ಆಮೇಲೆ ಕೊಡ್ತೀನಿ ಅಂತ ಹೇಳಿ ಖರೀದಿ ಮಾಡಿಯೇ ಬಿಟ್ಟಿದ್ದಾರೆ. ಈ ವಿಷಯ ಹೆಂಡತಿಗೆ ಗೊತ್ತಾದದ್ದು ಕಿಶೋರ್ ಬೆಂಗಳೂರಿಗೆ ಬಂದಮೇಲೆಯೇ. ‘ಅಷ್ಟುದೂರಕ್ಕೆ ಹೋಗಿ ತೋಟ ನೋಡ್ಕೊಂಡು ಬರೋದು, ಕೆಲಸ ಮಾಡೋದು ಸಾಧ್ಯನಾ?' ಎಂಬ ಹೆಂಡತಿ ಪ್ರಶ್ನೆಗೆ ಇವರ ಬಳಿ ಉತ್ತರ ಇಲ್ಲ!
ಸ್ನೇಹಿತರ ಪಾಲಿಗೆ ಫ್ರೆಶ್ ತರಕಾರಿ ಅಂಗಡಿ
ಇವೆಲ್ಲದರ ನಡುವೆ ಬೆಂಗಳೂರು ಸಮೀಪದ ತೋಟದಲ್ಲಿ ಬೆಳೆದ ಹಣ್ಣುಗಳು ಪ್ರಾಣಿ, ಪಕ್ಷಿಗಳು, ಕಳ್ಳರ ಪಾಲಾಗೋದೇ ಹೆಚ್ಚು. ಉಳಿದದ್ದನ್ನು ತಂದು ಸ್ನೇಹಿತರಿಗೆಲ್ಲ ಹಂಚುತ್ತಾರೆ. ಅದರ ಬೀಜವನ್ನೂ ಬಿಸಾಕೋದಿಲ್ಲ. ಅದನ್ನು ಮಣ್ಣಲ್ಲಿ ಊರಿ ಗಿಡ ಮಾಡಿ ಗೆಳೆಯರಿಗೆ ಕೊಡುತ್ತಾರೆ. ಉಳಿದದ್ದನ್ನು ತಮ್ಮ ತೋಟದಲ್ಲಿ ನೆಡುತ್ತಾರೆ.
‘ಇಲ್ಲಿ ಬೀದಿಬದಿ ನೆಟ್ಟಮರಗಳೆಲ್ಲ ಒಂದು ಮಳೆಗೆ ಬಿದ್ದು ಹೋಗುತ್ತವೆ. ಅದರ ಬದಲು ಹಣ್ಣಿನ ಮರಗಳನ್ನು ನೆಟ್ಟಿದ್ದರೆ ಹಣ್ಣೂ ಸಿಕ್ತಿತ್ತು. ಹಕ್ಕಿಗಳಿಗೆ ಆಹಾರವೂ ಆಗ್ತಿತ್ತು' ಅನ್ನೋ ಕಿಶೋರ್ ಈ ಅಭಿಪ್ರಾಯವನ್ನು ಗಣ್ಯರೊಬ್ಬರ ಬಳಿ ಹಂಚಿಕೊಂಡರಂತೆ. ಆಗ ಆ ವ್ಯಕ್ತಿ, ‘ಮನುಷ್ಯನಷ್ಟುಸ್ವಾರ್ಥಿ ಯಾರಿಲ್ಲ ಬಿಡಿ, ತಾನು ಗಿಡ ನೆಟ್ಟು ಅದರ ಹಣ್ಣನ್ನು ಯಾರಾರಯರೋ ಯಾಕೆ ತಿನ್ನಬೇಕು ಅಂತ ಯೋಚಿಸಿರಬೇಕು. ಹಣ್ಣೇ ಬಿಡದ ಗಿಡ ನೆಟ್ಟಿರಬೇಕು' ಅಂದರಂತೆ.
(ಕನ್ನಡಪ್ರಭ ವಾರ್ತೆ)
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.