ಪ್ರಸ್ತುತ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿರುವ ನಾಟಕ ರಚನೆಕಾರ, ಕತೆಗಾರ, ನಟ ಹಾಗೂ ನಿರ್ದೇಶಕ ಎಸ್.ಎನ್ ಸೇತೂರಾಂ ಅವರು ಮತ್ತೊಂದು ಹೊಸ ನಾಟಕವನ್ನು ರಂಗಕ್ಕೆ ತಂದಿದ್ದಾರೆ. ‘ಅನನ್ಯ’ ತಂಡದ ಮೂಲಕ ಎರಡು ಹೊಸ ಪ್ರತಿಭೆಗಳೊಂದಿಗೆ ‘ಉಚ್ಛಿಷ್ಟ’ ಎಂಬ ನಾಟಕವನ್ನು ರಚಿಸಿ, ನಿರ್ದೇಶಿಸಿ ತಾವೂ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ನಾಟಕ ಸೆ. 26ರಂದು ಸಂಜೆ 7.30ಕ್ಕೆ ರಂಗಶಂಕರದಲ್ಲಿ ಮೊದಲ ಪ್ರದರ್ಶನ ಕಾಣಲಿದೆ. ಈ ಹೊಸ ನಾಟಕದ ಬಗೆಗಿನ ವಿವರಗಳನ್ನು ಸೇತುರಾಂ ಇಲ್ಲಿ ಹಂಚಿಕೊಂಡಿದ್ದಾರೆ.
ಸಂಕೇತ್ ಗುರುದತ್
ಏನಿದು ‘ಉಚ್ಛಿಷ್ಟ’?
undefined
‘ಉಚ್ಛಿಷ್ಟ’ ಎನ್ನುವುದಕ್ಕೆ ಎಂಜಲು ಎನ್ನುವ ಅರ್ಥವಿದೆ. ತ್ಯಾಜ್ಯವೂ ಉಚ್ಛಿಷ್ಟವೇ, ಪಿತೃಶೇಷವೂ ಉಚ್ಚಿಷ್ಟವೇ! ಗುರು ಮುಖೇನ ಶಿಷ್ಯ ಸ್ವೀಕರಿಸುವ ವಿದ್ಯೆಯೂ ಕೂಡ ಉಚ್ಛಿಷ್ಟವೇ ಆಗಿರುತ್ತದೆ. ಆದರೆ ಇತ್ತೀಚೆಗೆ ಸಾಮಾಜಿಕ ತಾಣದಲ್ಲಿ ಒಬ್ಬರು ‘ಉಚ್ಛಿಷ್ಟ’ ಎನ್ನುವುದಕ್ಕೆ ‘ವ್ಯಾಸೋಚ್ಛಿಷ್ಟ’ ಎಂದು ಬಳಸಿದ್ದಾರೆ. ಅದು ನಿಜವೂ ಹೌದು. ನಾವೀಗ ಬರೆಯುವ ಕತೆ, ಕಾದಂಬರಿ, ಕಾವ್ಯ ಎಲ್ಲದರಲ್ಲಿ ಬರುವ ಎಲ್ಲ ಪಾತ್ರಗಳೂ ಮಹಾಭಾರತದಲ್ಲಿ ಬಂದು ಹೋಗಿದೆ. ಹಾಗಾಗಿ ಅದನ್ನು ಮೀರಿ ಏನೂ ಬರೆಯುವಂತಿಲ್ಲ. ಹಾಗಾಗಿ ನಾವು ಏನೇ ಬರೆದರೂ ಅದು ‘ವ್ಯಾಸೋಚ್ಛಿಷ್ಟ’, ವ್ಯಾಸನ ಎಂಜಲು ಎನಿಸುವುದು. ಅದನ್ನು ಮೀರಿ ಯಾರೂ ಬರೆಯಲು ಸಾಧ್ಯವಿಲ್ಲ! ಹಾಗಾಗಿ ವ್ಯಾಸೋಚಿಷ್ಟಪದದ ಬಳಕೆ ಪ್ರಸ್ತುತ.
ರಂಗಕರ್ಮಿ ಸುರೇಂದ್ರನಾಥ್‌ಗೆ ನಾರ್ವೆಯ ಇಬ್ಸನ್ ಸ್ಕಾಲರ್‌ಶಿಪ್
ಆದರಿಲ್ಲಿ ನೀವು ‘ಉಚ್ಛಿಷ್ಟ’ ಪದವನ್ನು ಹೇಗೆ ವಿಸ್ತರಿಸಿದ್ದೀರಿ?
‘ಉಚ್ಛಿಷ್ಟ’ ಎನ್ನುವುದನ್ನು ಬಳಸುತ್ತಿರುವುದು ಬೇರೆ ಥರದಲ್ಲಿ. ಅಂದರೆ ಸಲ್ಲದ ಸಂಬಂಧಗಳನ್ನು ಮಾಡಿಕೊಂಡಿರುತ್ತಾರೆ. ಅಲ್ಲಿ ಕುಡಿಯೊಡೆದು ಬಿಟ್ಟಿರುತ್ತೆ. ಅದು ಈ ಸಮಾಜದಲ್ಲಿ ಉಳಿದು ಬಿಟ್ಟಿರುತ್ತೆ. ಅವುಗಳಿಗೊಂದು ಮುಕ್ತಾಯ ಹಾಡದೇ ಆ ಕಾರಣೀಕರ್ತರು ನಿರ್ಗಮಿಸಿಬಿಡ್ತಾರೆ. ಆಗ ಇಲ್ಲಿ ಉಳಿದುಕೊಂಡವರು ಉಚ್ಚಿಷ್ಟಆಗ್ತಾರೆ. ಅದೇ ಈ ನಾಟಕದಲ್ಲಿನ ‘ಉಚ್ಛಿಷ್ಟ’ದ ಅರ್ಥ!
ಯಾವ ಕತೆಯ ಮೂಲಕ ಇದನ್ನು ಇಲ್ಲಿ ಪ್ರಸ್ತುತಪಡಿಸಿದ್ದೀರಿ?
ನನಗೆ ಈ ಸಿಂಗಲ… ಪೇರೆಂಟಿಂಗ್ ಬಗ್ಗೆ ಆಲೋಚನೆ ಬಂತು. ಒಬ್ಬ ಪ್ರೊಫೆಸರ್‌ಗೆ ಒಂದು ಹೆಂಗಸಿನೊಂದಿಗೆ ಸ್ನೇಹ ಇರುತ್ತೆ, ಅವರಿಗೊಂದು ಮಗುವೂ ಇರುತ್ತೆ. ಆ ಮಗುವಿನ ಮದುವೆಯ ವಿಷಯದಿಂದ ಈ ನಾಟಕ ತೆರೆದುಕೊಳ್ಳುತ್ತದೆ. ‘ಬದುಕು ಉದಾಹರಣೆ ಆಗದಿದ್ದರೆ ಬರಹ ಭಗವದ್ಗೀತೆ ಆಗಲ್ಲ’ ಎಂಬಂತಹ ಸಂಭಾಷಣೆ ಇದೆ. 90 ನಿಮಿಷಗಳಲ್ಲಿ ನಾಟಕವನ್ನು ಕಟ್ಟಿಕೊಡಲಾಗಿದೆ.
ಇಂತಹ ಕತೆ ಕಟ್ಟಲು ಪೂರಕವಾಗಿದ್ದು ಹೇಗೆ?
ಈ ಪ್ರಕಾರವನ್ನು ಸಾಹಿತ್ಯ ಲೋಕದಲ್ಲಿ ಸಾಕಷ್ಟುಜನ ಮುಟ್ಟಿಲ್ಲ. ಹಾಗಾಗಿ ನಾನು ಈ ಸಾರಿ ಈ ಸಾರಸ್ವತ ಲೋಕದ ದಿಗ್ಗಜರ ಸ್ವಾರಸ್ಯಕರ ವ್ಯಕ್ತಿತ್ವಗಳನ್ನು ರಂಗಕ್ಕೆ ತಂದಿದ್ದೇನೆ. ಡಾಕ್ಟರೇಟ್ ಹಾಗೂ ಗೋಲ್ಡ್‌ಮೆಡಲ…ಗಳ ಹಿಂದಿನ ಕತೆಗಳ ಪದರಗಳನ್ನು ಪರಿಚಯಿಸಿದ್ದೇನೆ. ಅಲ್ಲಿ ಎಲ್ಲವೂ ನೇರ. ಆದರೆ ಅದನ್ನು ಕಂಡರೂ ಕಾಣದಂತೆ ಇರುವವರೇ ಹೆಚ್ಚು. ಆ ಪರಿಸರದಲ್ಲಿನ ಹೆಣ್ಣು ಮಕ್ಕಳ ಸ್ಥಿತಿಗತಿಗಳು ದಾರುಣವಾಗಿರುತ್ತವೆ.
ನಿಮ್ಮ ಇನ್ನಿತರ ನಾಟಕ ಹಾಗೂ ಕತೆಗಳಂತೆಯೇ ಇಲ್ಲಿಯೂ ಹೆಣ್ಣಿನ ಒಳಮನಸ್ಸಿಗೆ ಮಾತು ಕೊಟ್ಟಿದ್ದೀರಾ?
ಖಂಡಿತವಾಗಿಯೂ, ಎಷ್ಟೋ ಕಡೆ ಹೆಣ್ಣನ್ನು ಮೊದಲ ಪಂಕ್ತಿಯಲ್ಲಿ ಕೂರಿಸೊಲ್ಲ. ಮೇನ್ ಸ್ಟ್ರೀಮ…ನಲ್ಲಿ ಇಟ್ಕೋಳೊಲ್ಲ. ಸನ್ಮಾನಗಳಾಗಬಹುದು, ಮರ್ಯಾದೆಗಳನ್ನು ಮಾಡಬಹುದು, ಮೆಡಲ…ಗಳನ್ನು ಕೊಡಬಹುದು. ಎಲ್ಲಾನೂ ಮಾಡ್ತಾರೆ. ಆದರೆ ಸಾಂಸಾರಿಕ ಸಂಬಂಧಗಳಲ್ಲಿ ಒಂದು ಪಟ್ಟಕೊಡಲ್ಲ. ಅದೆಲ್ಲವೂ ಸಮಾಜದಲ್ಲಿ ಎಲ್ಲರಿಗೂ ಗೊತ್ತಿದ್ದರೂ ಅದನ್ನು ಕಂಡೂ ಕಾಣದಂತೆ ಇರುತ್ತಾರೆ. ಬಹಿರಂಗವಾಗಿಯೇ ನಡೆದರೂ ಚಕಾರವೆತ್ತರು. ದನಿ ಇರದ ಮಾತು ಆದಾಗಿರುತ್ತೆ.
ಮುಸ್ಲಿಂ ರಂಗಕರ್ಮಿ ಮನೆಯಲ್ಲಿ ಕನ್ನಡಾಂಬೆಗೆ ಮೊದಲ ಪೂಜೆ!
ನಿಮ್ಮ ಹಿಂದಿನ ನಾಟಕಗಳಲ್ಲಿನ ನಟ-ನಟಿಯರೇ ಇದರಲ್ಲೂ ನಟಿಸ್ತಾರಾ?
ಹಾಗೇನಿಲ್ಲ. ಇಬ್ಬರು ಹೊಸ ನಟಿಯರಿದ್ದಾರೆ. ಇಲ್ಲಿ ಮೂರೇ ಪಾತ್ರಗಳಿವೆ. ಅಮ್ಮ-ಮಗಳಾಗಿ ಆ ಇಬ್ಬರು ಹಾಗೂ ಪ್ರೊಫೆಸರ್ ಪಾತ್ರದಲ್ಲಿ ನಾನಿದ್ದೇನೆ. ‘ಸುಬ್ಬಲಕ್ಷ್ಮೇ’ ಧಾರಾವಾಹಿಯಲ್ಲಿ ದೀಪಾ ಬ್ಯುಸಿ ಆಗಿರುವ ಕಾರಣ ಅವರು ಈ ನಾಟಕದಲ್ಲಿ ನಟಿಸುತ್ತಿಲ್ಲ. ಪ್ರಭಾತ್ ಫ್ಯಾಮಿಲಿಯ ವರ್ಷಿಣಿ ಹಾಗೂ ಸಮನ್ವಿತಾ ಪುಸ್ತಕ ಪ್ರಕಾಶನದ ಅಕ್ಷತಾ ಇಲ್ಲಿ ನಟಿಸುತ್ತಿದ್ದಾರೆ. ಈ ಇಬ್ಬರೂ ನಾಟಕ ಪ್ರೀತಿ ಉಳ್ಳವರು ಹಾಗೂ ನಟನೆಯನ್ನು ಪ್ರೀತಿಸಿ ನಟಿಸೋ ಮನಸ್ಥಿತಿಯನ್ನು ಉಳ್ಳವರು. ದಿನಕ್ಕೆ ಎರಡೆರಡು ಬಾರಿ ರಿಹರ್ಸಲ… ಮಾಡುವ ಮೂಲಕ ಕಡಿಮೆ ಅವಧಿಯಲ್ಲಿಯೇ ಇದನ್ನು ಪ್ರೇಕ್ಷಕರ ಮುಂದೆ ಬರುತ್ತಿವೆ.
‘ಉಚ್ಛಿಷ್ಟ’ ನಾಟಕ ಕೆ.ಎಚ್. ಕಲಾಸೌಧದಲ್ಲಿ ಅಕ್ಟೋಬರ್ 5 ಮತ್ತು 6 ಹಾಗೂ ರಂಗಶಂಕರದಲ್ಲಿ ಅಕ್ಟೋಬರ್ 29 ಮತ್ತು 31 ಮರು ಪ್ರದರ್ಶನವಿದೆ.