
ನಟಿ ಸಮಂತಾ ರುತ್ ಪ್ರಭು ಮತ್ತು ಚಲನಚಿತ್ರ ನಿರ್ಮಾಪಕ ರಾಜ್ ನಿಧಿಮೋರು ಸದ್ಯ ತಮ್ಮ ಜೀವನದ ಅತ್ಯಂತ ಖುಷಿಯ ಕ್ಷಣಗಳನ್ನು ಎದುರು ನೋಡುತ್ತಿದ್ದಾರೆ. ದಂಪತಿ ಶೀಘ್ರದಲ್ಲೇ ತಮ್ಮ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ. ಆದರೆ ವಿಶೇಷವೆಂದರೆ, ಈ ಪ್ರೆಗ್ನೆನ್ಸಿ ಇಬ್ಬರೂ ನಿರೀಕ್ಷಿಸಿದ್ದ ಸಂಗತಿಯೇ ಆಗಿರಲಿಲ್ಲವಂತೆ. ಮಗು ಆಗದಿದ್ದರೂ ಜೀವನವನ್ನು ಸಂತೋಷದಿಂದ ನಡೆಸಿಕೊಂಡು ಹೋಗಬಹುದು ಎಂದು ಇಬ್ಬರೂ ಮೊದಲೇ ನಿರ್ಧರಿಸಿಕೊಂಡಿದ್ದರಂತೆ.
ಹೀಗಾಗಿ ಮಕ್ಕಳ ವಿಚಾರದಲ್ಲಿ ಯಾವುದೇ ಒತ್ತಡ ಅಥವಾ ಆತುರ ಇರಲಿಲ್ಲ. ಆದರೆ ಇದೀಗ ಸಮಂತಾ ಜೀವನಕ್ಕೆ ಹೊಸ ಅತಿಥಿಯ ಆಗಮನದ ಸುದ್ದಿ ದೊಡ್ಡ ಸರ್ಪ್ರೈಸ್ ಆಗಿ ಪರಿಣಮಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದ ಸಮಂತಾ ಮತ್ತು ರಾಜ್, ಈ ವರ್ಷದ ಜೂನ್‌ನಲ್ಲಿ ತಾವು ಪೋಷಕರಾಗುತ್ತಿರುವುದನ್ನು ಘೋಷಿಸಿದ್ದರು.
ಮಕ್ಕಳ ಬಗ್ಗೆ ಮೊದಲೇ ಸ್ಪಷ್ಟವಾಗಿತ್ತು
ಸಮಂತಾ ಹೇಳಿಕೊಂಡಿರುವ ಪ್ರಕಾರ, ಮಕ್ಕಳಾಗಲೇಬೇಕು ಎಂಬ ನಿರ್ಧಾರ ಇಬ್ಬರಲ್ಲೂ ಇರಲಿಲ್ಲ. ಬಹುಶಃ ತಮಗೆ ಮಕ್ಕಳಾಗದೇ ಇರಬಹುದು ಎಂಬ ಸಾಧ್ಯತೆಯನ್ನೂ ಅವರು ಒಪ್ಪಿಕೊಂಡಿದ್ದರು. ಮಗು ಬೇಕೇ ಅಥವಾ ಬೇಡವೇ ಎಂಬ ವಿಚಾರದಲ್ಲಿ ಇಬ್ಬರೂ ತಮ್ಮದೇ ಆದ ಸ್ಪಷ್ಟತೆಯನ್ನು ಹೊಂದಿದ್ದರು. ಮಕ್ಕಳಿಲ್ಲದಿದ್ದರೂ ಬದುಕನ್ನು ಸಂತೋಷವಾಗಿ ನಡೆಸಲು ಸಿದ್ಧರಾಗಿದ್ದರು. ಇದೇ ಕಾರಣಕ್ಕೆ ಸಮಂತಾ ಈ ವಿಚಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.
ಆ ಒಂದು ದಿನ ಗೊತ್ತಾಯ್ತು ಬದುಕಿನ ದೊಡ್ಡ ಸುದ್ದಿ!
ಆದರೆ ವಿಧಿ ಬೇರೆಯದೇ ಪ್ಲಾನ್ ಮಾಡಿಕೊಂಡಿತ್ತು. ‘ಥಸ್ಸಾಡಿಯಾ’ ಹಾಡಿನ ಚಿತ್ರೀಕರಣದ ಮೊದಲ ದಿನವೇ ಸಮಂತಾಗೆ ತಾವು ಗರ್ಭಿಣಿ ಎಂಬ ವಿಚಾರ ತಿಳಿದುಬಂದಿತಂತೆ. ಆ ಸಂದರ್ಭದಲ್ಲಿ ಅವರಿಗೆ ಸ್ವಲ್ಪ ಅನಾರೋಗ್ಯ ಕಾಡುತ್ತಿತ್ತು. ತಪಾಸಣೆ ಮಾಡಿಸಿಕೊಂಡಾಗ ಗರ್ಭಧಾರಣೆಯಾಗಿರುವುದು ಗೊತ್ತಾಗಿದೆ.
ಈ ಸುದ್ದಿ ಸಮಂತಾ ಮತ್ತು ರಾಜ್ ಅವರಿಗೆ ಅಪಾರ ಸಂತೋಷ ತಂದಿದೆ. ಮಗುವಿನ ಆಗಮನ ತಮ್ಮ ಬದುಕಿನಲ್ಲೇ ದೊಡ್ಡ ಬದಲಾವಣೆ ತರಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಸಮಂತಾ. ಮಗು ಹುಟ್ಟಿದ ಬಳಿಕ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ ಎಂದು ಹಲವರು ಹೇಳಿರುವುದನ್ನೂ ಅವರು ಹಂಚಿಕೊಂಡಿದ್ದಾರೆ.
ಸಿನಿಮಾ ರಿಲೀಸ್ ಬಳಿಕ ಪ್ರೆಗ್ನೆನ್ಸಿ ಅನೌನ್ಸ್‌ಮೆಂಟ್
ಸಮಂತಾ ಅಭಿನಯದ ‘ಮಾ ಇಂಟಿ ಬಂಗಾರಂ’ ಸಿನಿಮಾ ಜೂನ್‌ನಲ್ಲಿ ಚಿತ್ರಮಂದಿರಗಳಿಗೆ ಬಂದಿತ್ತು. ಸಿನಿಮಾ ಬಿಡುಗಡೆಯಾದ ಮರುದಿನವೇ ಸಮಂತಾ ತಮ್ಮ ಪ್ರೆಗ್ನೆನ್ಸಿ ಸುದ್ದಿಯನ್ನು ಜಗತ್ತಿನ ಮುಂದೆ ಬಹಿರಂಗಪಡಿಸಿದ್ದರು. ಇದೀಗ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿರುವ ನಡುವೆಯೇ ಸಮಂತಾ ಅವರ ಸಿನಿಮಾ ಪಯಣವೂ ಮತ್ತೊಂದು ಹಂತಕ್ಕೆ ಕಾಲಿಟ್ಟಿದೆ.
ಒಂದು ಹಂತದಲ್ಲಿ ಚಿತ್ರರಂಗದಿಂದ ದೂರವಾಗಬೇಕು ಎಂದುಕೊಂಡಿದ್ದ ಸಮಂತಾ, ಇದೀಗ ಮತ್ತೆ ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೇಕ್ಷಕರ ಪ್ರೀತಿ ಹಾಗೂ ಬೆಂಬಲದಿಂದ ಮತ್ತೆ ಬಣ್ಣದ ಲೋಕದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿರುವ ಅವರು, ಇದೀಗ ವೈಯಕ್ತಿಕ ಜೀವನದಲ್ಲೂ ಹೊಸ ಜವಾಬ್ದಾರಿಯನ್ನು ಸ್ವೀಕರಿಸಲು ಸಜ್ಜಾಗಿದ್ದಾರೆ. ಇನ್ನು ಸಮಂತಾ-ರಾಜ್ ದಂಪತಿಯ ಈ ಹೊಸ ಪಯಣಕ್ಕೆ ಸಿನಿರಸಿಕರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.