
ಶುಕ್ರವಾರ ಸಂಜೆ ಪ್ರಭಾಸ್ ಅವರ 47ನೇ ಹುಟ್ಟುಹಬ್ಬದ ಪ್ರಯುಕ್ತ 'ಫೌಜಿ' ಚಿತ್ರತಂಡ ಸಿನಿಮಾದ ಮೊದಲ ಟೀಸರ್ ರಿಲೀಸ್ ಮಾಡಿದೆ. ಪ್ರಮೋಷನ್ ಭಾಗವಾಗಿ 'ಫೈಲ್ ನಂ. 25' ಹೆಸರಿನಲ್ಲಿ ಈ ಗ್ಲಿಂಪ್ಸ್ ಹೊರಬಂದಿದೆ. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ನಡೆಯುವ ಈ ಪಿರಿಯಡ್ ಆಕ್ಷನ್ ಡ್ರಾಮಾದಲ್ಲಿ ಪ್ರಭಾಸ್ ಲುಕ್ ಹೇಗಿರಲಿದೆ ಎಂಬುದನ್ನು ಇದು ತೋರಿಸಿದೆ.
ಎರಡನೇ ಮಹಾಯುದ್ಧದ ಸಮಯದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಭೇಟಿಯಾಗುವ ಕಾಲ್ಪನಿಕ ದೃಶ್ಯದೊಂದಿಗೆ ಟೀಸರ್ ಶುರುವಾಗುತ್ತದೆ. ಇತಿಹಾಸದಲ್ಲಿ ಇವರಿಬ್ಬರ ಭೇಟಿ ನಿಜಕ್ಕೂ ನಡೆದಿತ್ತು. ಆದರೆ, ಸಿನಿಮಾದಲ್ಲಿ ಈ ಮಾತುಕತೆಗೆ ಒಂದು ಕಾಲ್ಪನಿಕ ಟಚ್ ನೀಡಿದ್ದಾರೆ. ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾಗಿರುವ ನಿಗೂಢ ಭಾರತೀಯ ಸೂಪರ್‌ಸ್ಪೈ ಬಗ್ಗೆ ಬೋಸ್ ಇಲ್ಲಿ ಮಾತನಾಡುತ್ತಾರೆ.
ಆಮೇಲೆ ಕ್ಯಾಮೆರಾ ಪ್ರಭಾಸ್ ಕಡೆ ತಿರುಗುತ್ತದೆ. ಹೆವಿ ಮಷಿನ್ ಗನ್ ಹಿಡಿದು ದಾಳಿಗೆ ಸಜ್ಜಾಗಿರುವ ಬಂಡಾಯಗಾರನಾಗಿ ಅವರು ಎಂಟ್ರಿ ಕೊಟ್ಟಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿ, ಅವರು ಕಸಿದುಕೊಂಡಿರುವ ಸ್ವಾತಂತ್ರ್ಯವನ್ನು ಮರಳಿ ಪಡೆಯುವ ಬಗ್ಗೆ ಹಿನ್ನೆಲೆ ಧ್ವನಿಯಲ್ಲಿ ಡೈಲಾಗ್ ಕೇಳಿಸುತ್ತದೆ. ಭಗವದ್ಗೀತೆಯಿಂದ ಪ್ರೇರಿತವಾದ ಒಂದು ಕೋಡ್ ಕೂಡ ಟೀಸರ್‌ನಲ್ಲಿದ್ದು, ಪಾತ್ರದ ಮಿಷನ್‌ಗೆ ಇದು ಆಧ್ಯಾತ್ಮಿಕ ಟಚ್ ಕೊಟ್ಟಿದೆ.
ಪ್ರಭಾಸ್ ವಿಂಟೇಜ್ ಲುಕ್ ಸೂಪರ್, ಆದರೆ ಟೀಸರ್ ಬಗ್ಗೆ ಎದ್ದಿದೆ ಪ್ರಶ್ನೆ!
ಟೀಸರ್ ರಿಲೀಸ್ ಆದ ಬೆನ್ನಲ್ಲೇ ಪ್ರಭಾಸ್ ಅವರ ರಗಡ್ ಲುಕ್ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಬಗ್ಗೆ ಫ್ಯಾನ್ಸ್ ಸಖತ್ ಚರ್ಚೆ ಮಾಡುತ್ತಿದ್ದಾರೆ. ಪ್ರಭಾಸ್ ಮತ್ತೆ ತಮ್ಮ ಹಳೆಯ ವಿಂಟೇಜ್ ಆಕ್ಷನ್-ಹೀರೋ ಅವತಾರಕ್ಕೆ ಮರಳಿದ್ದಾರೆ ಎಂದು ಹಲವರು ಖುಷಿಪಟ್ಟಿದ್ದಾರೆ. ಯೂಟ್ಯೂಬ್‌ನಲ್ಲಿ ಅಭಿಮಾನಿಯೊಬ್ಬರು, "ಬಾಹುಬಲಿ ಯುಗ ಮತ್ತೆ ಬಂದಿದೆ, ಪ್ರಭಾಸ್ ವಿಂಟೇಜ್ ಎರಾ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಅವರನ್ನು "ಭಾರತದ ಅತಿದೊಡ್ಡ ಸೂಪರ್‌ಸ್ಟಾರ್" ಎಂದು ಕರೆದಿದ್ದಾರೆ.
ಆದರೆ, ಬೋಸ್ ಮತ್ತು ಹಿಟ್ಲರ್ ಇರುವ ದೃಶ್ಯದ ಬಗ್ಗೆ ಕೆಲವು ಪ್ರಶ್ನೆಗಳು ಕೂಡ ಎದ್ದಿವೆ. ಪ್ರಭಾಸ್ ಪಾತ್ರಕ್ಕೆ ಬಿಲ್ಡಪ್ ಕೊಡಲು ಮಾತ್ರ ಈ ಐತಿಹಾಸಿಕ ವ್ಯಕ್ತಿಗಳನ್ನು ಬಳಸಿಕೊಳ್ಳಲಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ದೃಶ್ಯದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಸಲಾಗಿದೆ ಎಂಬ ಚರ್ಚೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ವೀಕ್ಷಕರೊಬ್ಬರು ಇದನ್ನು "ಬೋಸ್ ಮತ್ತು ಹಿಟ್ಲರ್ ನಡುವಿನ ಎಐ ಸಂಭಾಷಣೆ" ಎಂದು ಕರೆದಿದ್ದಾರೆ. ಒಟ್ಟಿನಲ್ಲಿ ಪ್ರಭಾಸ್ ಲುಕ್ ಜೊತೆಗೆ, ಸಿನಿಮಾದಲ್ಲಿ ಇತಿಹಾಸವನ್ನು ಹೇಗೆ ತೋರಿಸಿದ್ದಾರೆ ಎಂಬುದು ಈಗ ಬಿಸಿಬಿಸಿ ಚರ್ಚೆಯ ವಿಷಯವಾಗಿದೆ.
ಹನು ರಾಘವಪುಡಿ ಈ ಪಿರಿಯಡ್ ಆಕ್ಷನ್ ಡ್ರಾಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ, ವೈ ರವಿಶಂಕರ್ ಮತ್ತು ಭೂಷಣ್ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಟಿ-ಸೀರೀಸ್ ಫಿಲ್ಮ್ಸ್ ಇದನ್ನು ಪ್ರಸ್ತುತಪಡಿಸುತ್ತಿದೆ. ಟೀಸರ್‌ನಲ್ಲಿ ಸಿನಿಮಾದ ಐತಿಹಾಸಿಕ ಹಿನ್ನೆಲೆ ಮತ್ತು ನಾಯಕನ ಪಾತ್ರದ ಬಗ್ಗೆ ಸುಳಿವು ಸಿಕ್ಕರೂ, ಚಿತ್ರತಂಡ ಪೂರ್ತಿ ಕಥೆಯನ್ನು ಬಿಟ್ಟುಕೊಟ್ಟಿಲ್ಲ.
ಇನ್ನು ಕಾಲ್ಪನಿಕ ಸೂಪರ್‌ಸ್ಪೈ, ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಭರ್ಜರಿ ಆಕ್ಷನ್ ದೃಶ್ಯಗಳು ಪ್ರಭಾಸ್ ಅವರ ಹೊಸ ಮುಖವನ್ನು ಪರಿಚಯಿಸಲಿವೆ. 'ಫೌಜಿ' ಸಿನಿಮಾ 2027ರ ಮಾರ್ಚ್ 19ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ. ಶತ್ರುಗಳ ಪಾಳಯದಲ್ಲಿ ನುಗ್ಗಿ ಹೊಡೆಯುವ ಯೋಧನಾಗಿ ಪ್ರಭಾಸ್ ಅವರನ್ನು ನೋಡಲು ಫ್ಯಾನ್ಸ್ ಈಗಿನಿಂದಲೇ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.