
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಇದೇ ತಂತ್ರಜ್ಞಾನವನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಮಹಿಳೆಯರ ಫೋಟೋ ಹಾಗೂ ವಿಡಿಯೋಗಳನ್ನು ಮಾರ್ಫ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಇದೀಗ ನಟ ಜೂ. ಎನ್‌ಟಿಆರ್ ಅಭಿನಯದ ‘ದೇವರ’ ಸಿನಿಮಾದ ‘ಚುಟ್ಟಮಲ್ಲೆ’ ಹಾಡಿಗೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಫೇಕ್ ವಿಡಿಯೋವೊಂದು ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೋ ಅಸಲಿ ಅಲ್ಲ. AI ತಂತ್ರಜ್ಞಾನ ಬಳಸಿ ಮಾರ್ಫ್ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ಯಾರೂ ಪ್ರೋತ್ಸಾಹ ನೀಡಬಾರದು
ಈ ವಿಚಾರಕ್ಕೆ ನಟ ಜೂ. ಎನ್‌ಟಿಆರ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಮಹಿಳೆಯರನ್ನು ಅವಮಾನಿಸುವ ರೀತಿಯಲ್ಲಿ ಸಿದ್ಧಪಡಿಸಿರುವ ಇಂತಹ ಕಂಟೆಂಟ್‌ಗೆ ಯಾರೂ ಪ್ರೋತ್ಸಾಹ ನೀಡಬಾರದು ಎಂದು ಅವರು ಮನವಿ ಮಾಡಿದ್ದಾರೆ. ಅಲ್ಲದೆ, ಈ ವಿಡಿಯೋವನ್ನು ವೀಕ್ಷಿಸುವುದು, ಡೌನ್‌ಲೋಡ್ ಮಾಡುವುದು, ಇತರರಿಗೆ ಕಳುಹಿಸುವುದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಮರುಹಂಚಿಕೆ ಮಾಡುವುದರಿಂದ ದೂರವಿರುವಂತೆ ತಾರಕ್ ಮನವಿ ಮಾಡಿದ್ದಾರೆ.
ಯಾರೊಬ್ಬರ ಫೋಟೋ ಅಥವಾ ವಿಡಿಯೋವನ್ನು ಅವರ ಅನುಮತಿಯಿಲ್ಲದೆ ಬದಲಾಯಿಸಿ, ಅಸಭ್ಯ ಅಥವಾ ಅವಮಾನಕರ ರೀತಿಯಲ್ಲಿ ತೋರಿಸುವುದನ್ನು ಕೇವಲ ಸೋಶಿಯಲ್ ಮೀಡಿಯಾ ಟ್ರೆಂಡ್ ಎಂದು ಪರಿಗಣಿಸಬಾರದು. ಇಂತಹ ಕೃತ್ಯಗಳಿಂದ ಸಂತ್ರಸ್ತರ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು ಎಂದು ಎನ್‌ಟಿಆರ್ ಹೇಳಿದ್ದಾರೆ.
ಇದೇ ವೇಳೆ, ಈ ಮಾರ್ಫಿಂಗ್ ವಿಡಿಯೋವನ್ನು ಸಿದ್ಧಪಡಿಸಿದವರು ಹಾಗೂ ಉದ್ದೇಶಪೂರ್ವಕವಾಗಿ ಅದನ್ನು ಪ್ರಚಾರ ಮಾಡುತ್ತಿರುವವರನ್ನು ಗುರುತಿಸಿ, ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಂದು ಸಂತ್ರಸ್ತೆ ಬೇರೊಬ್ಬರಾಗಿರಬಹುದು. ಆದರೆ ನಾಳೆ ನಮ್ಮ ಕುಟುಂಬದ ಮಹಿಳೆಯೊಬ್ಬರೂ ಇಂತಹ ದುರುಪಯೋಗಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂಬ ಸಂದೇಶವನ್ನು ಎನ್‌ಟಿಆರ್ ನೀಡಿದ್ದಾರೆ.
AI ಬಳಸಿ ಡೀಪ್‌ಫೇಕ್ ಹಾಗೂ ಮಾರ್ಫಿಂಗ್ ಕಂಟೆಂಟ್ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಪ್ರಕರಣಗಳಿಗೆ ಸಂಬಂಧಿಸಿದಂತೆ ದೇಶದಲ್ಲಿ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. 2026ರಲ್ಲಿ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ನಟಿ ರುಕ್ಮಿಣಿ ವಸಂತ್ ಅವರಿಗೆ ಸಂಬಂಧಿಸಿದಂತೆ AI ಬಳಸಿ ಆಕ್ಷೇಪಾರ್ಹ ಚಿತ್ರಗಳು ಮತ್ತು ವಿಡಿಯೋಗಳನ್ನು ಸೃಷ್ಟಿಸಿ ಹರಿಬಿಟ್ಟ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.