
ಚಿತ್ರ: ತರ್ಲೆ ವಿಲೇಜ್
ಭಾಷೆ: ಕನ್ನಡ
ತಾರಾಗಣ: ಗಡ್ಡಪ್ಪ, ಸೆಂಚುರಿ ಗೌಡ, ಅಭಿಷೇಕ್, ತಮ್ಮಣ್ಣ
ನಿರ್ದೇಶನ: ಕೆ ಎಂ ರಘು
ನಿರ್ಮಾಣ: ಎಸ್ ಬಿ ಶಿವ
ಛಾಯಾಗ್ರಹಣ: ರಾಮು ನರಹಳ್ಳಿ
ಸಂಗೀತ: ವೀರ್ ಸಮರ್ಥ್
ರೇಟಿಂಗ್: **
- ಆರ್. ಕೇಶವಮೂರ್ತಿ, ಕನ್ನಡಪ್ರಭ
ಇದನ್ನು ಸಿನಿಮಾ ಅಂದುಕೊಂಡು ಹೋದರೆ ನಿರಾಸೆ ಕಟ್ಟಿಟ್ಟಬುತ್ತಿ ಅಥವಾ ಮತ್ತೊಂದು ‘ತಿಥಿ' ಅಂದುಕೊಂಡು ಹೋದರೂ ಊಹೆಗಳೇ ತಿಥಿ ಆಗುವ ಅಪಾಯವಿದೆ! ನೀವು ಈಗಾಗಲೇ ನೋಡಿರುವ, ಕೇಳಿರುವ ಅಥವಾ ಆ ರೀತಿ ಇರಬಹುದು ಎಂದು ನಂಬಿರುವ ಹತ್ತಾರು ಪ್ರಸಂಗಗಳನ್ನು ಒಂದರ ನಂತರ ಒಂದನ್ನು ಜೋಡಿಸಿ ತೋರಿಸಿದ್ದಾರೆ. ಸಿನಿಮಾ ನೋಡುತ್ತಿದ್ದಾಗ ಬಿ ಚಂದ್ರೇಗೌಡರ ಕಟ್ಟೆಪುರಾಣ, ಬೆಸಗರಹಳ್ಳಿ ರಾಮಣ್ಣ ಅವರ ಗ್ರಾಮೀಣ ಕಥಾ ಲೋಕ, ಕೇಶವರೆಡ್ಡಿ ಹಂದ್ರಾಳರ ಕತೆಗಳು ಇಣುಕಿದಂತೆ ಕಾಣುತ್ತವೆ. ವಯಸ್ಸಾದವರ ರಂಜನೀಯ ದೃಶ್ಯಗಳನ್ನು ನೋಡಿದಾಗ ಕುಂ ವೀರಭದ್ರಪ್ಪ ಅವರ ಪದ ಸಂಪತ್ತು ಕೂಡ ಪ್ರೇಕ್ಷಕನ್ನು ಎಚ್ಚರಿಸುವಂತೆ ಭಾಸವಾಗುತ್ತದೆ. ಆದರೆ, ಈ ಎಲ್ಲ ಸಾಹಿತ್ಯಗಳ ಕಥಾ ಜಗತ್ತಿನಲ್ಲಿರುವ ಗಟ್ಟಿತನ ‘ತರ್ಲೆ ವಿಲೇಜ್'ನಲ್ಲಿ ಇಲ್ಲ. ಹೀಗಾಗಿ ಚಿತ್ರದ ಟ್ರ್ಯಾಕ್‌ಗಳು ಎಲ್ಲೆಲ್ಲಿಗೋ ಪಯಣಿಸುತ್ತ ನೋಡುಗನಿಗೆ ಆಕಳಿಕೆ ಬರಿಸುತ್ತವೆ. ಇದು ಸಿನಿಮಾ ಅಲ್ಲ, ಹಳ್ಳಿಯ ಕಟ್ಟೆಪುರಾಣದಲ್ಲಿ ಕಂಡ ಪ್ರಸಂಗಗಳಷ್ಟೆ!
ಹಳ್ಳಿ ಚಿತ್ರಣವಾದರೂ ನೈಜತೆಯಿಂದ ಕೊಂಚ ದೂರ ಸರಿದಂತೆ ಕಾಣುವ ಇಲ್ಲಿ ಹದಿಹರೆಯದ ಹುಡುಗ- ಹುಡುಗಿಯರ ಅಡ್ಡದಾರಿಗಳು, ವಯಸ್ಸಾದವರ ಅಕ್ರಮ ಸಂಬಂಧ, ಉದ್ಧಾರ ಆಗದಿರುವ ದೇಗುಲ, ಚುನಾವಣೆ ಇರದಿದ್ದರೂ ನಡೆಯುವ ಹಳ್ಳಿ ರಾಜಕೀಯ ಮತ್ತು ಗಿಮಿಕ್‌ಗಳು, ಊರ ತುಂಬಾ ಬಯ್ದುಕೊಂಡು ತಿರುಗಾಡುವ ಹಿರಿಯರಿಗೆ ಬೆಲೆ ಕೊಡದ ಊರಿನ ಜನ, ಹೆತ್ತವರನ್ನು ಕೊನೆಗಾಲದಲ್ಲಿ ಕಡೆಗಣಿಸುವ ಮಕ್ಕಳು, ಸಂತೆಯ ದಲ್ಲಾಳಿ ವ್ಯವಹಾರಗಳು, ಪೌರುಷ ತೋರುವ ಪೊಲೀಸ್ ಠಾಣೆ, ದೆವ್ವದ ಹೆಸರಿನಲ್ಲಿ ಸಂಭವಿಸುವ ಸಾವುಗಳು... ಇಷ್ಟುಅಂಶಗಳು ಗಟ್ಟಿಕೇಂದ್ರವಿಲ್ಲದೆ ಬಿಡಿ ಬಿಡಿಯಾಗಿ ತೆರೆದುಕೊಳ್ಳುತ್ತ ಸಾಗುತ್ತವೆ. ಹೀಗಾಗಿ ಕಥನಗಿಂತ ಚಿತ್ರಣಕ್ಕೆ ಹೆಚ್ಚು ಒತ್ತು ಕೊಟ್ಟಂತೆ ಕಾಣುವ ನಿರ್ದೇಶಕ ರಘು, ಸೆಂಚುರಿ ಗೌಡ ಹಾಗೂ ಗಡ್ಡಪ್ಪ ಅವರ ಮಾತಿನ ಮ್ಯಾನರಿಸಂ ಅನ್ನೇ ಆವಲಂಬಿಸಿದಂತೆ ಕಾಣುತ್ತಾರೆ. ಒಂದಿಷ್ಟುಬೇಸರದ ನಡುವೆ ಮನರಂಜನೆ ಮೂಡಿಸುವ ಈ ಚಿತ್ರದಲ್ಲಿ ಅಭಿಷೇಕ್ ಬಿಟ್ಟರೆ ಬೇರಾರೂ ನಟಿಸಿಲ್ಲ ಎನ್ನುವುದೇ ಚಿತ್ರದ ಮತ್ತೊಂದು ಹೈಲೈಟ್. ಇದರ ನಡುವೆ ಹಳ್ಳಿಗಳ ನ್ಯಾಯ, ಪಂಚಾಯಿತಿಗಳು ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲು ಹತ್ತಿರುವ ಈಗಿನ ಸ್ಥಿತಿಯನ್ನು ವಿರೋಧಿಸುವ ಚಿತ್ರದ ನಿಲುವು ಒಪ್ಪುವಂಥದ್ದು.
ಒಂದು ದೊಡ್ಡ ಗೆಲವಿನ ಮುಂದೆ ಅಷ್ಟೇ ದೊಡ್ಡ ನಿರೀಕ್ಷೆ ಇರುತ್ತದೆ. ಆದರೆ, ಬಹಳಷ್ಟುಸಂದರ್ಭಗಳಲ್ಲಿ ಆ ನಿರೀಕ್ಷೆಗಳೇ ಶಾಪವಾಗುವ ಸಾಧ್ಯತೆಗಳಿವೆ. ಅಂಥ ಶಾಪವನ್ನು ಹೊತ್ತುಕೊಂಡೇ ಬಂದ ‘ತಿಥಿ' ಕಲಾವಿದರ ಈ ‘ತರ್ಲೆ ವಿಲೇಜ್' ಅನ್ನು ಸಿನಿಮಾ ಎನ್ನುವ ಭಾವನೆಯ ಆಚೆಗೆ ನೋಡಬೇಕು. ರಾಮು ನರಹಳ್ಳಿ ಕ್ಯಾಮೆರಾ, ಕೆ ಎಂ ಪ್ರಕಾಶ್‌ರ ಸಂಕಲನ ಹಳ್ಳಿಯ ನೈಜತೆಗೆ ಭಂಗ ತಂದಿಲ್ಲ.
(epaper.kannadaprabha.in)
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.